ಬೆಂಗಳೂರು: ಖ್ಯಾತ ಚಿತ್ರನಟ ಮತ್ತು ರಂಗಕರ್ಮಿ ಸಿ.ಆರ್.ಸಿಂಹ ಅವರು ವಿಧಿವಶರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಸಿ.ಆರ್.ಸಿಂಹ ಅವರು ಬೆಂಗಳೂರಿನ ಜಯನಗರದಲ್ಲಿರುವ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.
ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸಿಂಹ ಅವರು ಕಳೆದ ಹತ್ತು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದರು. ನಾಲ್ಕು ದಿನಗಳ ಹಿಂದೆ ಅವರನ್ನು ಜಯನಗರದ ರಾಗಿಗುಡ್ಡದ ಸೇವಾಕ್ಷೇತ್ರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಖ್ಯಾತ ನಟ ಶ್ರೀನಾಥ್ ಅವರ ಸಹೋದರ ಕೂಡ ಆಗಿರುವ ಸಿಂಹ ಅವರು ಪತ್ನಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.
1942 ಜೂನ್ 16ರಂದು ಜನಿಸಿದ ಸಿಂಹ ಅವರು 1972ರಲ್ಲಿ ನಟರಂಗ ಎಂಬ ಕಲಾತಂಡವನ್ನು ಕಟ್ಟಿದ್ದರು. ಕಾಕನಕೋಟೆ, ತುಘಲಕ್ ಮತ್ತು ಸಂಕ್ರಾಂತಿಯಂತಹ ಹಲವು ಖ್ಯಾತ ನಾಟಕಗಳನ್ನು ನಿರ್ದೇಶಿಸಿದ್ದರು. ಸುಮಾರು 150ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದ ಸಿಂಹ ಅವರು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಇಂದಿನ ರಾಮಾಯಣ, ನೀ ಬರೆದ ಕಾದಂಬರಿ, ಪರಮೇಶಿ ಪ್ರೇಮ ಪ್ರಸಂಗ, ರಾಯರು ಬಂದರು ಮಾವನ ಮನೆಗೆ, ನೀ ತಂದ ಕಾಣಿಕೆಯಂತಹ ಹಲವು ಚಿತ್ರಗಳಲ್ಲಿ ಸಿಂಹ ಅವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಕೇವಲ ನಟನೆ ಮಾತ್ರವಲ್ಲದೆ ಸಿಂಹ ಅವರು ಕಾಕನಕೋಟೆ, ಶಿಕಾರಿ, ಸಿಂಹಾಸನ, ಅಶ್ವಮೇಧ ಮತ್ತು ಅಂಗೈಯಲ್ಲಿ ಅಪ್ಸರೆ ಎಂಬ ಐದು ಚಿತ್ರಗಳಿಗೆ ನಿರ್ದೇಶನ ಕೂಡ ಮಾಡಿದ್ದರು. ಇತ್ತೀಚೆಗೆ ಅವರ ಮಗ ರಿತ್ವಿಕ್ ಸಿಂಹ ಅವರ ನಿರ್ದೇಶನದ ‘ರಸಋಷಿ ಕುವೆಂಪು’ ಎಂಬ ಚಿತ್ರದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಪಾತ್ರವನ್ನು ಅಭಿನಯಿದ್ದರು.
Click this button or press Ctrl+G to toggle between Kannada and English