ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆಗೆ ಅವಕಾಶ ನೀಡುವ ಕುರಿತಂತೆ ಮೂವರು ಸ್ಪರ್ಧಾಕಾಂಕ್ಷಿಗಳು ಶುಕ್ರವಾರ ಮಧ್ಯಾಹ್ನ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದು, ಮೂರೂ ನಾಮಪತ್ರಗಳು ಸ್ವೀಕೃತವಾಗಿವೆ.
ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ, ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರ ಪುತ್ರ ಹರ್ಷ ಮೊಯಿಲಿ ಹಾಗೂ ಕಾಂಗ್ರೆಸ್ ಅಲ್ಪಸಂಖ್ಯಾಕ ಘಟಕದ ರಾಜ್ಯ ಉಪಾಧ್ಯಕ್ಷ ಕಣಚೂರು ಮೋನು ನಾಮಪತ್ರ ಸಲ್ಲಿಸಿದ್ದು, ಅಂತಿಮ ಕಣದಲ್ಲಿದ್ದಾರೆ.
ಶುಕ್ರವಾರ ಮಧ್ಯಾಹ್ನ 12ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ನಡೆದಿದ್ದು, ಸಂಜೆ 4 ಗಂಟೆಗೆ ಮುಕ್ತಾಯಗೊಂಡು ಪರಿಶೀಲನೆ ನಡೆಯಿತು. ಅಂತಿಮವಾಗಿ ಮೂವರು ಸ್ಪರ್ಧಾಕಣದಲ್ಲಿದ್ದಾರೆ ಎಂದು ಪ್ರಕಟಿಸಲಾಯಿತು. ಮಾ. 2ರಂದು ಅಭ್ಯರ್ಥಿಗಳಿಗೆ ಚಿಹ್ನೆ ನೀಡಲಾಗುತ್ತದೆ. ಅಂತಿಮ ಮತದಾರರ ಪಟ್ಟಿ ಕೂಡ ಅದೇ ದಿನ ಪ್ರಕಟಗೊಳ್ಳಲಿದೆ.
ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯ ಆಂತರಿಕ ಚುನಾವಣೆಗೆ ದ.ಕ. ಜಿಲ್ಲೆಗೆ ಎಐಸಿಸಿಯಿಂದ ನೇಮಕಗೊಂಡಿರುವ ಮಹಾರಾಷ್ಟ್ರದ ಪ್ರಣೀಲ್ ಹಾಗೂ ಕೇರಳದ ಪ್ರಮೋದ್ ಕುಮಾರ್ ಶುಕ್ರವಾರ ನಾಮಪತ್ರ ಪಡೆದು, ಪರಿಶೀಲನೆ ನಡೆಸಿದರು.
ಮೊದಲಿಗೆ ಕಾಂಗ್ರೆಸ್ ಅಲ್ಪಸಂಖ್ಯಾಕ ಘಟಕದ ರಾಜ್ಯ ಉಪಾಧ್ಯಕ್ಷ ಕಣಚೂರು ಮೋನು ಅವರು ನಾಮಪತ್ರ ಸಲ್ಲಿಸಿದರು. ಬಳಿಕ ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿ, ಅನಂತರ ಹರ್ಷ ಮೊಲಿ ಕಾಂಗ್ರೆಸ್ ಕಚೇರಿಯ ಒಳಗೆ ನಾಮಪತ್ರ ಸಲ್ಲಿಕೆ ಮಾಡಿದರು. ಈ ಸಂದರ್ಭ ಸ್ಪರ್ಧಾಕಾಂಕ್ಷಿಯ ಜತೆಗೆ ಒರ್ವನಿಗೆ ಮಾತ್ರ ಒಳಗೆ ಹೋಗಲು ಅವಕಾಶ ನೀಡಲಾಯಿತು. ಮಾಧ್ಯಮದವರು ಸೇರಿದಂತೆ ಸ್ಪರ್ಧಿಗಳ ಬೆಂಬಲಿಗರಿಗೂ ನಾಮಪತ್ರ ಸಲ್ಲಿಕೆಯ ಕೋಣೆಗೆ ಹೋಗಲು ಅವಕಾಶವಿರಲಿಲ್ಲ.
ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಕಾಂಗ್ರೆಸ್‌ನ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ, ದೇವರ, ಜನತೆಯ, ಕಾಂಗ್ರೆಸ್ ಕಾರ್ಯಕರ್ತರ, ಮಾಧ್ಯಮದ ಹೀಗೆ ಸರ್ವರ ಆಶೀರ್ವಾದ ಪಡೆದು ಇಂದು ಕಾಂಗ್ರೆಸ್ ಅಭ್ಯರ್ಥಿ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ಸರ್ವರ ಆಶೀರ್ವಾದದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.
ದ.ಕ. ಜಿಲ್ಲೆಯ 8 ವಿಧಾನಸಭೆಯ 16 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನನ್ನ ನಾಮಪತ್ರಕ್ಕೆ ಸಹಿ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದೇನೆ. ಜನರ ಆಕಾಂಕ್ಷೆಗಳಿಗೆ ಸ್ಪಂದಿಸಿದ್ದೇನೆ ಎಂದವರು ಹೇಳಿದರು.
ಆಂತರಿಕ ಚುನಾವಣೆ ಎಷ್ಟರಮಟ್ಟಿಗೆ ಫಲಪ್ರದ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪೂಜಾರಿ, ಇದೊಂದು ಹೊಸ ಪ್ರಯೋಗ. ಅಧಿಕಾರ ವಿಕೇಂದ್ರೀಕರಣ ಆಗಬೇಕು ಎಂಬ ಆಶಯದಲ್ಲಿ ಈ ಪ್ರಯೋಗವನ್ನು ಮಾಡಲಾಗಿದೆ. ತಮ್ಮ ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿ ಹಾಗೂ ಪಕ್ಷಕ್ಕಾಗಿ ದುಡಿದ ಒಟ್ಟು ಸಮಗ್ರತೆಯನ್ನು ಅರಿತುಕೊಂಡು, ಪಕ್ಷದ ಪ್ರಮುಖರೇ ಒಟ್ಟು ಸೇರಿ ಮತ ನೀಡುವ ಮೂಲಕ ಅಭ್ಯರ್ಥಿ ಆಯ್ಕೆ ನಡೆಸುವುದು ಉತ್ತಮ ಸಂಗತಿ ಎಂದರು.
ದ.ಕ. ಜಿಲ್ಲಾ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಪ್ರಮುಖರಾದ ಎ.ಸಿ. ಭಂಡಾರಿ, ಕಳ್ಳಿಗೆ ತಾರಾನಾಥ ಶೆಟ್ಟಿ, ಹರಿಕೃಷ್ಣ ಬಂಟ್ವಾಳ್, ಮಮತಾ ಗಟ್ಟಿ, ವಿಜಯ್‌ಕುಮಾರ್ ಶೆಟ್ಟಿ, ಮಹಮ್ಮದ್ ಮಸೂದ್ ಮುಂತಾದವರು ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಕೆಯ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ವೀರಪ್ಪ ಮೊಯಿಲಿ ಅವರ ಪುತ್ರ ಹರ್ಷ ಮೊಲಿ ಅವರು, ಆಂತರಿಕ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಸಂಪೂರ್ಣ ಇದೆ. ಈ ಚುನಾವಣೆಯಲ್ಲಿ ಭಾಗವಹಿಸುವ ಮತದಾರರನ್ನು ಈಗಾಗಲೇ ಭೇಟಿಯಾಗಲು ವ್ಯವಸ್ಥೆ ಮಾಡಿದ್ದೇವೆ. ಬಹುತೇಕ ಜನರೊಂದಿಗೆ ಈಗಾಗಲೇ ಚರ್ಚೆ ನಡೆಸಿದ್ದೇವೆ. ಸರ್ವರು ಕೂಡ ಹೊಸತನಕ್ಕೆ ಅವಕಾಶ ನೀಡಲು ಬೆಂಬಲ ನೀಡಲಿದ್ದಾರೆ ಎಂದರು.
ನಾನು ದ.ಕ. ಜಿಲ್ಲೆಗೆ ಹೊಸ ಮುಖವಲ್ಲ. ನನ್ನ ತಂದೆಯವರು ಕೇಂದ್ರದ ಸಚಿವರಾಗಿದ್ದು, ಕಾಂಗ್ರೆಸ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಜತೆಯಲ್ಲಿ ನಾನು ಕೂಡ ಪಕ್ಷದ ಬೆಳವಣಿಗೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಕಳೆದ ನಾಲ್ಕು ತಿಂಗಳಿನಿಂದ ಪಕ್ಷದ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು, ಕಾರ್ಯಕರ್ತರ ಜತೆಗೆ ಸಂಪರ್ಕ ಬೆಳೆಸಿಕೊಂಡಿದ್ದೇನೆ ಎಂದರು.
ಎತ್ತಿನ ಹೊಳೆ ಯೋಜನೆಯಿಂದ ದ.ಕ. ಜಿಲ್ಲೆಗೆ ಯಾವುದೇ ತೊಂದರೆ ಇಲ್ಲ. ಈ ವಿಷಯವನ್ನು ಭಾವನಾತ್ಮಕವಾಗಿ ಯಾರೂ ಕೂಡ ಪರಿಗಣಿಸುವುದು ಬೇಡ ಹಾಗೂ ಇದನ್ನು ಯಾರೂ ಕೂಡ ರಾಜಕೀಯಗೊಳಿಸುವುದು ಬೇಡ. ಯೋಜನೆ ಜಾರಿಯಿಂದ ತೊಂದರೆ ಆಗುತ್ತದೆ ಎಂದು ಹೇಳುವುದು ಸರಿಯಲ್ಲ. ಹೀಗಾಗಿ ಮಾ. 3ರ ಬಂದ್ ಕರೆಯಿಂದ ಯಾವುದೇ ಪ್ರಯೋಜನ ಆಗದು ಎಂದು ಹರ್ಷ ಮೊಲಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಪ್ರಮುಖರಾದ ತೇಜೋಮಯ, ಭಾಸ್ಕರ ಮೊಲಿ, ಅಮೃತ್ ಕದ್ರಿ, ಡಿ.ಕೆ. ಅಶೋಕ್, ದೀಪಕ್ ಜಲ್ಲಿಗುಡ್ಡೆ ಮುಂತಾದವರು ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಕಾಂಗ್ರೆಸ್ ಅಲ್ಪಸಂಖ್ಯಾಕ ಘಟಕದ ರಾಜ್ಯ ಉಪಾಧ್ಯಕ್ಷ ಕಣಚೂರು ಮೋನು, ಕಾಂಗ್ರೆಸ್ ಕಾರ್ಯಕರ್ತನಾಗಿ, ಕಳೆದ 40 ವರ್ಷಗಳಿಂದ ಪಕ್ಷಕ್ಕಾಗಿ ನಿರಂತರ ದುಡಿಯುತ್ತ ಬಂದಿದ್ದೇನೆ. ಪಕ್ಷದಲ್ಲಿ ಸಕ್ರೀಯನಾಗಿದ್ದೇನೆ. ಹೀಗಾಗಿ ಶೇ. 100ಕ್ಕೆ 100ರಷ್ಟು ನಾನು ಗೆಲುವು ಸಾಧಿಸುವುದು ಖಚಿತ ಎಂದರು.
ಆಂತರಿಕ ಚುನಾವಣೆ ನಡೆಸುವುದರಿಂದ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡುವುದಿಲ್ಲವೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಗೊಂದಲ ಮಾ. 9ರ ವರೆಗೆ ಮಾತ್ರ ಇರಲಿದೆ. ಆ ಬಳಿಕ ಯಾವುದೇ ಗೊಂದಲದ ಪ್ರಶ್ನೆಯೇ ಇಲ್ಲ. ಬಳಿಕ ಬಿಜೆಪಿ ಸೋಲಿಸುವುದೇ ನಮ್ಮ ಕಾರ್ಯ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು, ಒಂದಾಗಿ ದುಡಿಯಲಿದ್ದೇವೆ ಎಂದರು.
ಕಣಚೂರು ಮೋನು ಅವರು ನಾಮಪತ್ರ ಸಲ್ಲಿಸುತ್ತಿದ್ದ ಸಂದರ್ಭ ಜನಾರ್ದನ ಪೂಜಾರಿಯವರು ಕಾಂಗ್ರೆಸ್ ಕಚೇರಿಗೆ ಆಗಮಿಸಿದರು. ಮೋನು ಅವರ ನಾಪಮತ್ರ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡುತ್ತಿದ್ದಾಗ ಜನಾರ್ದನ ಪೂಜಾರಿ ಅವರು ನಾಮಪತ್ರ ಸಲ್ಲಿಸಿದರು. ಬಳಿಕ ಅವರು ಕಾಂಗ್ರೆಸ್ ಬೆಂಬಲಿಗರ ಜತೆಗೂಡಿ, ಕಚೇರಿಯ ಕೆಳಗಡೆ ಸುದ್ದಿಗಾರರ ಜತೆಗೆ ಮಾತನಾಡುತ್ತಿದ್ದಾಗ, ಹರ್ಷ ಮೊಲಿ ಅವರು ತನ್ನ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ತೆರಳಿದರು. ಪೂಜಾರಿ ಹಾಗೂ ಮೊಲಿ ಇಬ್ಬರು ಹತ್ತಿರದಲ್ಲೇ ಇದ್ದರು ಕೂಡ, ಪರಸ್ಪರ ಮಾತನಾಡುವ ಗೋಜಿಗೆ ಹೋಗಲಿಲ್ಲ. ಕಾರ್ಯಕರ್ತರ ಗುಂಪು ಸೇರಿದ್ದರಿಂದ ಇಬ್ಬರಿಗೂ ಮುಖ ನೋಡಲು ಕೂಡ ಅಲ್ಲಿ ಅವಕಾಶವೂ ಸಿಗದಾಯಿತು. ಎರಡೂ ನಾಯಕರ ಬೆಂಬಲಿಗರು ಮಾತ್ರ ನಗುವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಪೂಜಾರಿ ಬೆಂಬಲಿಗರು ‘ಜನಾರ್ದನ ಪೂಜಾರಿಯವರಿಗೆ ಜೈ’ ಎಂದು ಹರ್ಷ ಮೊಲಿ ಅವರ ಮುಂಭಾಗದಲ್ಲೇ ಎರಡು ಸಲ ಘೋಷಣೆ ಕೂಗಿದರು. ಈ ವೇಳೆ ಇತರ ಬೆಂಬಲಿಗರು ಸಮಾಧಾನದಿಂದಿರುವಂತೆ ಕಾರ್ಯಕರ್ತರಿಗೆ ಮನವರಿಕೆ ಮಾಡಿದರು.
ನಾಮಪತ್ರ ಸಲ್ಲಿಕೆಯ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English