ವಿವಾದದ ನಡುವೆ ಬಿತ್ತು ಎತ್ತಿನಹೊಳೆಗೆ ಅಡಿಗಲ್ಲು

11:36 AM, Tuesday, March 4th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Yettinaholegeಮಂಗಳೂರು: ಬಂದ್ ಹಾಗೂ ಪ್ರತಿಭಟನೆ ನಡುವೆಯೇ ವಿವಾದಿತ ಎತ್ತಿನಹೊಳೆ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಎತ್ತಿನಹೊಳೆ ಯೋಜನೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಬಂದ್ ಆಚರಿಸಿದರೆ, ಚಿಕ್ಕಬಳ್ಳಾಪುರದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಕಪ್ಪು ಪಟ್ಟಿ ಹಾಗೂ ಖಾಲಿ ಪೈಪುಗಳನ್ನು ಪ್ರದರ್ಶಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ವೇಳೆ 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ.

ಚಿಕ್ಕಬಳ್ಳಾಪುರ ನಗರದ ಹೊರ ವಲಯದ ಬಿ.ಬಿ. ರಸ್ತೆಯಲ್ಲಿರುವ (ಆದಿಚುಂಚನಗಿರಿ ಶಾಖಾ ಮಠದ ಸಮೀಪದ) ಬಿಜಿಎಸ್ ವರ್ಲ್ಡ್ ಸ್ಕೂಲ್ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿ, 3716.59 ಕೋಟಿ ವೆಚ್ಚದ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಬಳಿಕ ಮಾತನಾಡಿ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಹಾಸನ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸಲು ತರುತ್ತಿರುವ 12912.36 ಕೋಟಿ ವೆಚ್ಚದ ಈ ನೀರಾವರಿ ಯೋಜನೆಯ ಜಾರಿಯಿಂದ ಯಾವುದೇ ಭಾಗಕ್ಕೆ ಧಕ್ಕೆಯಾಗುವುದಿಲ್ಲ. ಅಲ್ಲದೇ ನೂರಕ್ಕೆ ನೂರು 24 ಟಿಎಂಸಿ ನೀರು ಸಿಕ್ಕೇ ಸಿಗುತ್ತದೆ. ಇದನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಜಲತಜ್ಞರಿಂದ ವೈಜ್ಞಾನಿಕವಾಗಿ ಖಾತ್ರಿ ಪಡಿಸಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮನೆಗೆ ಬಂದವರಿಗೆ ನೀರು, ಊಟ ಕೊಟ್ಟು ಉಪಚರಿಸುವುದು ನಮ್ಮ ಭಾರತೀಯ ಸಂಸ್ಕೃತಿ. ಹೀಗಿರುವಾಗ ಯೋಗ್ಯವಲ್ಲದ ನೀರನ್ನು ಕುಡಿದು ಸಂಕಷ್ಟಕ್ಕೆ ಸಿಲುಕಿರುವವರ ದಾಹವನ್ನು ನೀಗಿಸಲು ಮುಂದಾದಾಗ ವಿರೋಧಿಸುವುದು ಸರಿಯಲ್ಲ. ಕೆಲವರು ದಾರಿ ತಪ್ಪಿಸುವ ಸಲುವಾಗಿಯೇ ಎತ್ತಿನಹೊಳೆ ಯೋಜನೆ ಜಾರಿ ವಿರುದ್ಧ ಸುಳ್ಳು ಮಾತುಗಳನ್ನಾಡುತ್ತಿದ್ದಾರೆ. ಇದನ್ನು ಯಾರೂ ನಂಬುವ ಅವಶ್ಯಕತೆಯಿಲ್ಲ. ಜನರಿಗೆ ಸುಳ್ಳು ಭರವಸೆಯನ್ನು ನೀಡುವ ಸಲುವಾಗಿ 13 ಸಾವಿರ ಕೋಟಿ ಹುಣಸೇ ಹಣ್ಣು ತೊಳೆದಂತೆ ವ್ಯರ್ಥ ಮಾಡಲು ನಮಗೆ ತಲೆ ಕೆಟ್ಟಿಲ್ಲ ಎಂದರು.

ಬಯಲು ಸೀಮೆಯ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ತಲುಪಿದೆ. ಇಲ್ಲಿ ಸಿಗುತ್ತಿರುವ ಫ್ಲೋರೈಡ್ ನೀರಿನ ಸೇವನೆಯಿಂದ ಎದುರಾಗುತ್ತಿರುವ ಅನೇಕ ಸಮಸ್ಯೆಗಳಿಂದ ಜನರು ತತ್ತರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಶ್ವತ ನೀರಾವರಿ ಸೌಲಭ್ಯವನ್ನು ಕಲ್ಪಿಸಲು ಡಾ. ಪರಮಶಿವಯ್ಯನವರ ವರದಿಯಾಧಾರಿತ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದರು.

24 ಟಿಎಂಸಿ ನೀರಿನಲ್ಲಿ 15 ಟಿಎಂಸಿ ನೀರನ್ನು ಕುಡಿಯಲು ಒದಗಿಸಲಾಗುವುದು. 9 ಟಿಎಂಸಿ ನೀರನ್ನು ಸುಮಾರು 500 ಕೆರೆಗಳಿಗೆ ತುಂಬಿಸಲಾಗುವುದು. ಇದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ 198 ಕೆರೆಗಳು ಮತ್ತು ಕೋಲಾರ 139 ಕೆರೆಗಳು ಸೇರಿವೆ. ಪ್ರಮುಖವಾಗಿ ಪ್ರತಿ ಕೆರೆಯ ಸಾಮರ್ಥ್ಯದ ಅರ್ಧದಷ್ಟು ಪ್ರಮಾಣದಲ್ಲಿ ನೀರನ್ನು ತುಂಬಿಸಲಾಗುವುದು. ತಪ್ಪು ಮಾಹಿತಿಯಿಂದ ಎತ್ತಿನಹೊಳೆ ಯೋಜನೆಯನ್ನು ಬಯಲುಸೀಮೆ ಮತ್ತು ಕರಾವಳಿ ಭಾಗದ ಕೆಲವು ಜನರು ಗೊಂದಲದಿಂದ ನೋಡುತ್ತಿದ್ದಾರೆ. ಇದನ್ನು ದೂರ ಮಾಡಲು ಎರಡೂ ಭಾಗದ ಜನರ ಸಭೆಯನ್ನು ತ್ವರಿತವಾಗಿ ಕರೆದು ವೈಜ್ಞಾನಿಕವಾಗಿಯೇ ಚರ್ಚಿಸಲಾಗುವುದು. ಆಗ ಜನರೇ ಸರ್ಕಾರದ ಈ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದರು.

ಯಾರಿಗೂ ಧಕ್ಕೆ ಇಲ್ಲ: ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಡಿಪಿಆರ್ ವಿಸ್ತೃತ ವರದಿ ಪಡೆದುಕೊಂಡ ನಂತರವೇ ಎತ್ತಿನಹೊಳೆ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.ಇದು ನೇತ್ರಾವತಿ ತಿರುವಲ್ಲ, ಕರಾವಳಿ ಭಾಗದ ಪರಿಸರವನ್ನು ಹಾಳು ಮಾಡುವುದಿಲ್ಲ. ಇದರಿಂದ ಯಾರೂ ಆತಂಕಪಡುವ ಅವಶ್ಯಕತೆಯಿಲ್ಲ. ಪಶ್ಚಿಮಘಟ್ಟಗಳಲ್ಲಿ ಹರಿದು ವ್ಯರ್ಥವಾಗಿ ಸಮುದ್ರ ಸೇರುವ 2000 ಟಿಎಂಸಿ ನೀರಿನಲ್ಲಿ ಶೇ.1.2ರಷ್ಟು ಮತ್ತು ನೇತ್ರಾವತಿ ಸಮೀಪದ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿನ ವಿವಿಧ ನೀರಾವರಿ ಮೂಲಗಳಲ್ಲಿ ಸಿಗುವ 400 ಟಿಎಂಸಿ ನೀರಿನಲ್ಲಿ ಶೇ.6ರಷ್ಟು ನೀರನ್ನು ಬಯಲುಸೀಮೆ ಭಾಗಕ್ಕೆ ಹರಿಸಲಾಗುವುದು. ಎತ್ತಿನಹೊಳೆ ಯೋಜನೆಯ 2ನೇ ಹಂತದ ಕಾಮಗಾರಿಗೂ ಅತಿ ಶೀಘ್ರದಲ್ಲಿಯೇ ಅನುಮೋದನೆ ನೀಡಲಾಗುವುದು ಎಂದರು.

ಚಿಕ್ಕಬಳ್ಳಾಪುರ ಶಾಸಕ ಡಾ. ಕೆ.ಸುಧಾಕರ್, ಅದಿಚುಂಚನಗಿರಿ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವರಾದ ಎಂ.ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ, ಸಚಿವ ಡಿ.ಕೆ.ಶಿವಕುಮಾರ್, ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ, ಸಚಿವರಾದ ರೋಷನ್ ಬೇಗ್, ಟಿ.ಬಿ.ಜಯಚಂದ್ರ, ರಾಮಲಿಂಗಾರೆಡ್ಡಿ, ಕೃಷ್ಣ ಭೈರೇಗೌಡ ಸೇರಿದಂತೆ ಇತರರು ಇದ್ದರು.

ನೇತ್ರಾವತಿ ನದಿ ತಿರುಗಿಸುವ ಎತ್ತಿನಹೊಳೆ ಯೋಜನೆ ವಿರೋಧಿಸಿ ಸೋಮವಾರ ಕರೆ ನೀಡಲಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಬಂದ್ ಯಶಸ್ವಿಯಾಗಿದೆ. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ಸಂಚಾರ ಸ್ಥಗಿತವಾಗಿತ್ತು. ವಾಣಿಜ್ಯ ಮಳಿಗೆಗಳು, ಶಾಲೆ, ಕಾಲೇಜುಗಳನ್ನು ಬಂದ್ ಮಾಡಲಾಗಿತ್ತು. ಕರಾವಳಿ ಜೀವನದಿ ರಕ್ಷಣೆ ಸಮಿತಿ ಕರೆ ನೀಡಿದ ಬಂದ್‌ಗೆ ಕರವೇ, ತುಳು ರಕ್ಷಣಾ ವೇದಿಕೆ, ವಿವಿ ಉಪನ್ಯಾಸಕರ ಸಂಘ, ಮೀನುಗಾರರ ಸಂಘ, ಮಂಗಳೂರು ಖಾಜಿ ಸಹಿತ ಅನೇಕ ಸಂಘಟನೆಗಳು ಬೆಂಬಲ ಸೂಚಿಸಿದ್ದವು. ಜೆಡಿಎಸ್, ಬಿಜೆಪಿ ಬಂದ್‌ನಲ್ಲಿ ಪಾಲ್ಗೊಂಡಿದ್ದರೆ, ಜಿಲ್ಲಾ ಕಾಂಗ್ರೆಸ್ ಮಾತ್ರ ದೂರವುಳಿದಿತ್ತು. ಬಂಟ್ವಾಳ, ತೊಕ್ಕೊಟ್ಟು, ಉಳ್ಳಾಲ, ಕೊಟ್ಟಾರ, ನಂತೂರು, ಉರ್ವಸ್ಟೋರ್ ಸಹಿತ ನಗರದ ಅಲ್ಲಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಸಂಚಾರಕ್ಕೆ ತಡೆ ಒಡ್ಡಲಾಯಿತು. ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಲಾಯಿತು.  ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಯೋಜನೆಗೆ ಅನುಮತಿ ನೀಡಿದ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಪ್ರತಿಕೃತಿಗಳನ್ನು ದಹಿಸಿದರು. ಇಬ್ಬರ ಕಣ್ಣಿಗೆ ಕಪ್ಪು ಪಟ್ಟಿ ಹಾಕಿ, ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಕಾಲಿನಿಂದ ಒದ್ದು ಆಕ್ರೋಶ ವ್ಯಕ್ತಪಡಿಸಿದರು.

ಎತ್ತಿನಹೊಳೆ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಚಿಕ್ಕಬಳ್ಳಾಪುರದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಕಪ್ಪು ಪಟ್ಟಿ ಹಾಗೂ ಖಾಲಿ ಪೈಪು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದ 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು. ಶಿಡ್ಲಘಟ್ಟ ವೃತ್ತದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲು ತೂರಿ ಗಾಜುಗಳನ್ನು ಪುಡಿ ಪುಡಿ ಮಾಡಲಾಗಿದೆ.   ಶನಿಮಹಾತ್ಮ ಸ್ವಾಮಿ ದೇವಾಲಯದ ಮುಂಭಾಗ ಸೇರಿದಂತೆ ಇತರೆಡೆ ಕೆಲವು ಕಾಲ ಧರಣಿ ನಡೆಸಿದ್ದರಿಂದ ಸಂಚಾರಕ್ಕೆ ವ್ಯತ್ಯಯವಾಗಿತ್ತು.

ಎತ್ತಿನಹೊಳೆ ಯೋಜನೆ ಅವೈಜ್ಞಾನಿಕವಾಗಿದೆ. ಇದರಿಂದ 24 ಟಿಎಂಸಿ ನೀರು ಲಭ್ಯವಾಗುವುದಿಲ್ಲ. ಬದಲಿಗೆ ಕೇವಲ 6 ಟಿಎಂಸಿ ನೀರು ಮಾತ್ರ ಸಿಗುತ್ತದೆ. ಆದರೂ ಸರ್ಕಾರ ಜನರಿಗೆ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದೆ. ಇನ್ನೂ ಕೆಲವೇ ದಿನಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜಕಾರಣವನ್ನು ಮಾಡುತ್ತಿದೆ. ಇದು ಈ ಭಾಗಕ್ಕೆ ಮಾಡುತ್ತಿರುವ ಅನ್ಯಾಯ. ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿರುವ ಈ ದಿನ ನಮ್ಮ ಪಾಲಿಗೆ ಕರಾಳ ದಿನವಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ನಾನು ಸಾಯುವುದರೊಳಗಾಗಿ ಶಾಶ್ವತ ನೀರಾವರಿ ಯೋಜನೆಯ ಮೂಲಕ ಈ ಭಾಗಕ್ಕೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಬೇಕೆಂಬ ಬಯಕೆಯನ್ನು ಹೊಂದಿದ್ದೇನೆ. ಈ ಹಿನ್ನೆಲೆಯಲ್ಲಿ ಎತ್ತಿನಹೊಳೆ ಯೋಜನೆಗೆ ಎಷ್ಟೇ ಅಡ್ಡಿ ಆತಂಕಗಳು ಬಂದರೂ ಎದೆಗುಂದಿಲ್ಲ. ಎಷ್ಟೇ ವಿರೋಧ ವ್ಯಕ್ತವಾದರೂ ಹಿಂದೆ ಸರಿಯುವುದಿಲ್ಲ. ಎತ್ತಿನಹೊಳೆ ಯೋಜನೆಯಿಂದ ನಾನು ನೀರು ಕೊಟ್ಟೇ ಸಾಯುತ್ತೇನೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English