ಬೆಂಗಳೂರು: ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಯೋಜನೆಗಳ ಕಡತ ವಿಲೇವಾರಿ ತ್ವರಿತಗೊಳಿಸಿದ್ದು, ಮಂಗಳವಾರ ನಡೆದ ಉನ್ನತಮಟ್ಟದ ಸಭೆಯಲ್ಲಿ 13770 ಕೋಟಿ ಮೊತ್ತದ 18 ಕೈಗಾರಿಕಾ ಕಾಮಗಾರಿಗಳಿಗೆ ಒಪ್ಪಿಗೆ ನೀಡಿದ್ದಾರೆ.
ನೀತಿ ಸಂಹಿತೆ ಜಾರಿಯಾದ ನಂತರ ಯೋಜನೆ ಆರಂಭಕ್ಕೆ ಅಡ್ಡಿಯಾಗುವ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಸಿಎಂ ಸಿದ್ದರಾಮಯ್ಯ ಅಭಿವೃದ್ಧಿ ಕಾಮಗಾರಿಗಳ ಆರಂಭಕ್ಕೆ ವಿಶೇಷ ಒತ್ತು ನೀಡುತ್ತಿದ್ದಾರೆ. ಮಂಗಳವಾರ ಇದಕ್ಕೆ ಇನ್ನಷ್ಟು ವೇಗ ನೀಡಿದ ಅವರು, ಗೃಹ ಕಚೇರಿ ಕೃಷ್ಣಾದಲ್ಲಿ ಹಲವು ಸುತ್ತಿನ ಸಭೆ ನಡೆಸಿದರು.
ಉನ್ನತಮಟ್ಟದ ಸಮಿತಿ ಸಭೆಯಲ್ಲಿ ಒಟ್ಟು 18 ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದ್ದು, ರು. 13770 ಕೋಟಿ ಹೂಡಿಕೆ ನಿರೀಕ್ಷಿಸಲಾಗಿದೆ. ಒಟ್ಟು 44726 ಉದ್ಯೋಗ ಸೃಷ್ಟಿ ನಿರೀಕ್ಷಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದುವರೆಗೆ ಎರಡು ಸಭೆ ನಡೆದಿದೆ. ಈ ಹಿಂದೆ ರು. 36 ಸಾವಿರ ಕೋಟಿ ಮೌಲ್ಯದ 22 ಯೋಜನೆಗಳಿಗೆ ಅನುಮತಿ ನೀಡಲಾಗಿದೆ ಎಂದರು.
ಇಂದು ಅನುಮತಿ ನೀಡಿದ ಯೋಜನೆಗಳಿಗೆಲ್ಲ 2700 ಎಕರೆ ಭೂಮಿ ಸ್ವಾಧೀನ ಪಡೆದುಕೊಳ್ಳಬೇಕಾಗುತ್ತದೆ. ಇದಕ್ಕೂ ಚಾಲನೆ ನೀಡಲಾಗಿದೆ. ಉದ್ಯಮಿಗಳಿಗೆ 1 ಎಕರೆ ಜಾಗ ನೀಡಿದರೆ ಕನಿಷ್ಠ ರು. 8 ಕೋಟಿ ಹೂಡಿಕೆ ನಿರೀಕ್ಷೆ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಅಗತ್ಯಕ್ಕಿಂತ ಹೆಚ್ಚು ಭೂಮಿ ನೀಡುವುದಿಲ್ಲ. ಇದರ ಜತೆಗೆ ರೈತರ ಭೂಮಿ ಖರೀದಿ ಮಾಡುವಾಗ ಕೇಂದ್ರ ಸರ್ಕಾರ ಹೊಸತಾಗಿ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ಪ್ರಕಾರವೇ ಪರಿಹಾರ ನೀಡುತ್ತೇವೆ. ನಿಯಮ 109ರಲ್ಲಿ ಈಗಾಗಲೇ ಭೂ ಖರೀದಿ ಪ್ರಕ್ರಿಯೆ ಆರಂಭಿಸಿದ್ದರೂ ಅವರಿಗೆ ಹೊಸ ಪರಿಹಾರ ಸೂತ್ರ ಅನ್ವಯವಾಗುತ್ತದೆ ಎಂದು ಹೇಳಿದರು.
ಬೆಂಗಳೂರು ಗ್ರಾ.-3 ( 1273 ಕೋಟಿ), ಬೆಂ.ನಗರ-1 ( 414 ಕೋಟಿ), ಬಳ್ಳಾರಿ-2 (743 ಕೋಟಿ) ಚಿಕ್ಕಬಳ್ಳಾಪುರ-1(1917 ಕೋಟಿ), ದಾವಣಗೆರೆ-1(250 ಕೋಟಿ ), ಧಾರವಾಡ-1( 1450 ಕೋಟಿ), ಹಾಸನ-1( 140 ಕೋಟಿ), ಕೋಲಾರ-4 (1564 ಕೋಟಿ), ಕೊಪ್ಪಳ-1,(246 ಕೋಟಿ) ತುಮಕೂರು-2 ( 5123 ಕೋಟಿ) ಕೈಗಾರಿಕಾ ಯೋಜನೆ ಆರಂಭಿಸಲಾಗುತ್ತದೆ.
ಏರೋಸ್ಪೇಸ್, ಅಗ್ರಿ ಬೇಸ್ಡ್, ಅಟೋಮೊಬೈಲ್, ಕೆಮಿಕಲ್, ಎಂಜಿನಿಯರಿಂಗ್, ಆಹಾರ, ಮೂಲಸೌಕರ್ಯ, ಕಬ್ಬಿಣ ಮತ್ತು ಉಕ್ಕು, ಐಟಿ ಪಾರ್ಕ್, ಪೆಟ್ರೋಕೆಮಿಕಲ್ ಹಾಗೂ ಟೆಕ್ಸ್‌ಟೈಲ್ಸ್ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯಮಗಳು ಈ ಭಾಗದಲ್ಲಿ ತಲೆ ಎತ್ತಲಿವೆ ಎಂದರು.
ಅದೇ ರೀತಿ ಕೇಂದ್ರ ಸರ್ಕಾರ ತುಮಕೂರಿನಲ್ಲಿ ನ್ಯಾಶನಲ್ ಮ್ಯಾನುಫ್ಯಾಕ್ಚರರ್ ಇನ್ವೆಸ್ಟಮೆಂಟ್ ಝೋನ್ ಆರಂಭಿಸಲು ಅನುಮತಿ ನೀಡಿದೆ. ಇದರ ಜತೆಗೆ ಕೋಲಾರ, ಗುಲ್ಬರ್ಗ ಹಾಗೂ ಬೀದರ್‌ನಲ್ಲಿ ಮೂರು ಕೇಂದ್ರಗಳನ್ನು ಆರಂಭಿಸಲು ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಹೇಳಿದರು.
ಆದರೆ ಅನಾವಶ್ಯಕವಾಗಿ ರೈತರ ಕೃಷಿ ಭೂಮಿಯನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಔದ್ಯಮಿಕ ಉದ್ದೇಶಕ್ಕೆ ನೀಡುವುದಿಲ್ಲ. ಕಳೆದ ಸರ್ಕಾರದ ಅವಧಿಯಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಇಂಥದೇನಾದರೂ ನಡೆದಿದ್ದರೆ, ಭೂಮಿ ಪಡೆದು ಕೈಗಾರಿಕೆ ಆರಂಭಿಸದೇ ಇದ್ದವರಿಗೆ ನೋಟಿಸ್ ನೀಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕಡತ ಹಿಡಿದಿದ್ದು ನಿಂತಿದ್ದ ಅಧಿಕಾರಿಗಳು
ಉನ್ನತಮಟ್ಟದ ಸಮಿತಿ ಸಭೆ ಬಳಿಕವೂ ಸಿದ್ದರಾಮಯ್ಯನವರಿಗೆ ಕಡತ ವಿಲೇವಾರಿಗೆ ವಿಶೇಷ ಗಮನ ನೀಡುವುದು ಅನಿವಾರ್ಯವಾಗಿತ್ತು. ನೀತಿ ಸಂಹಿತೆ ಜಾರಿಯಾದರೆ ಕಡತ ಬಾಕಿಯಾಗುತ್ತದೆ ಎಂಬ ಭಯಕ್ಕೆ ಐಎಎಸ್ ಅಧಿಕಾರಿಗಳು ಒಬ್ಬರಾದ ಮೇಲೊಬ್ಬರು ಮುಖ್ಯಮಂತ್ರಿಗಳಿಂದ ಸಹಿ ಹಾಕಿಸಿಕೊಳ್ಳುವುದಕ್ಕೆ ಸರದಿಯಲ್ಲಿ ನಿಂತಿದ್ದರು.
Click this button or press Ctrl+G to toggle between Kannada and English