ಬೆಂಗಳೂರು: ರಜೆ ಬೇಕೆ, ಪ್ರಾಮಾಣಿಕವಾಗಿ ಕೆಲಸ ಮಾಡಿ!
ರಾಜ್ಯ ಸರ್ಕಾರ ಪ್ರಾರಂಭಿಸಿರುವ ನೂತನ ‘ರಜಾ ಭಾಗ್ಯ’ ಯೋಜನೆಯ ಪ್ರಥಮ ಷರತ್ತಿದು! ಕಾಂಗ್ರೆಸ್ ಪ್ರಣಾಳಿಕೆ ಅಥವಾ ಬಜೆಟ್‌ನಲ್ಲಿ ಘೋಷಿಸದೇ ಅನುಷ್ಠಾನಕ್ಕೆ ತಂದಿರುವ ವಿನೂತನ ಯೋಜನೆ!!
ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದ ಭ್ರಷ್ಟಾಚಾರ ನಿಗ್ರಹದ ರೀತಿಯಿದು!
ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಒಂದು ದಿನ ರಜೆ ಸಿಗುವುದೇ ದೊಡ್ಡ ಮಾತು. ಆದರೆ ಒಬ್ಬ ಹಿರಿಯ ಹಾಗೂ ಪ್ರಾಮಾಣಿಕ ಅಧಿಕಾರಿಗೆ ಬರೋಬ್ಬರಿ 120 ದಿನ ರಜೆ ಮಂಜೂರು ಮಾಡಲಾಗಿದೆ. ಇದಕ್ಕೂ ಮುಂಚೆ ಈ ರಾಜ್ಯದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರೇ ರಜೆ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ವೈದ್ಯ ಶಿಕ್ಷಣ ಇಲಾಖೆಯ ಲಾಬಿ ಧಿಕ್ಕರಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ವೈದ್ಯ ಶಿಕ್ಷಣ ಕಾರ್ಯದರ್ಶಿ ವಿ.ರಶ್ಮಿ ಅವರಿಗೆ ಪ್ರಾಮಾಣಿಕ ಕೆಲಸಕ್ಕೆ ಸರ್ಕಾರ ನೀಡಿರುವ ಪುರಸ್ಕಾರವಿದು. ಗಣಿ ಅಕ್ರಮದ ಕಳಂಕ ಎದುರಿಸುತ್ತಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ತನಿಖೆಗೆ ಅನುಮತಿ ಕೊಟ್ಟ ದಿನವೇ ರಶ್ಮಿ ಅವರಿಗೆ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು ದೀರ್ಘ ರಜೆಯನ್ನು ಕರುಣಿಸಿ, ದ್ವಿಮುಖನೀತಿ ಪ್ರದರ್ಶಿಸಿದ್ದಾರೆ.
ಅಲ್ಪಸಂಖ್ಯಾತ ಮಾನ್ಯತೆಗಾಗಿ ಖಡಕ್ ಅಧಿಕಾರಿಗೆ ರಜೆ: ಶರಣಪ್ರಕಾಶ್ ಪಾಟೀಲ್ ಅವರು ವೈದ್ಯ ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಬಜೆಟ್ ಅಧಿವೇಶನದಲ್ಲಿ ಜೆಡಿಎಸ್‌ನ ಎಂ.ಸಿ.ನಾಣಯ್ಯ ಅವರು ಅಲ್ಪಸಂಖ್ಯಾತ ಕಾಲೇಜುಗಳಿಗೆ ಸಂಬಂಧಿಸಿ ವಿಷಯ ಪ್ರಸ್ತಾಪಿಸಿದ್ದರು. ಆಗ ಸಚಿವ ಪಾಟೀಲ್, ಆವೇಶದಲ್ಲಿ ಎಲ್ಲ ಕಾಲೇಜುಗಳ ಮಾನ್ಯತೆ ರದ್ದು ಮಾಡುವ ಮಾತನ್ನು ಹೇಳಿದ್ದರು. ಇದೇ ಸಂದರ್ಭದಲ್ಲಿ ರಶ್ಮಿ ಅವರು ವೈದ್ಯ ಶಿಕ್ಷಣ ಇಲಾಖೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ವರ್ಗಾವಣೆಯಾಗಿ ಬಂದಿದ್ದರು.
ಕೂಡಲೇ ರಾಜ್ಯದ ಎಲ್ಲ ಅಲ್ಪಸಂಖ್ಯಾತ ವೈದ್ಯ ಕಾಲೇಜುಗಳ ಮಾನ್ಯತೆ ರದ್ದುಗೊಳಿಸಿದ್ದ ರಶ್ಮಿ, ನೋಟಿಸ್ ಜಾರಿ ಮಾಡಿದ್ದರು. ಇದಲ್ಲದೇ ತ್ರಿಸದಸ್ಯ ಸಮಿತಿ ರಚಿಸಿದರು. ಸಮಿತಿ ನೀಡಿದ ವರದಿ ಪ್ರಕಾರ ಬಹುತೇಕ ಎಲ್ಲ ಅಲ್ಪಸಂಖ್ಯಾತ ಕಾಲೇಜುಗಳಲ್ಲಿ ಅಕ್ರಮ ನಡೆದಿರುವುದು ಸಾಬೀತಾಯಿತು. ಈ ಕಾರಣಕ್ಕಾಗಿ ಅಲ್ಪಸಂಖ್ಯಾತ ಮಾನ್ಯತೆಯಿಲ್ಲದೇ ಈ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ನಡೆಸಬೇಕು ಎಂದು ರಶ್ಮಿ ತೀರ್ಮಾನಿಸಿದ್ದರು. ಇದರ ಜತೆಗೆ ಅಲ್ಪಸಂಖ್ಯಾತ ಕಾಲೇಜುಗಳು ಆ ಸಮುದಾಯಕ್ಕೆ ಮೀಸಲಿರುವ ಸೀಟುಗಳನ್ನು ಭರ್ತಿ ಮಾಡದಿದ್ದರೆ, ಅವುಗಳನ್ನು ಸರ್ಕಾರಕ್ಕೆ ಕಡ್ಡಾಯವಾಗಿ ಹಿಂತಿರುಗಿಸಬೇಕು ಎಂಬ ನಿಯಮ ಜಾರಿ ಮಾಡಲು ತೀರ್ಮಾನಿಸಿದ್ದರು.
ಮುಂದಿನ ವರ್ಷದ ಕೌನ್ಸೆಲಿಂಗ್‌ನ ಸಂಪೂರ್ಣ ನಿಯಮ ರಚನೆಯಾಗುವುದು ಇನ್ನೆರಡು ವಾರಗಳಲ್ಲಿ. ಈ ಸಂದರ್ಭದಲ್ಲಿ ರಶ್ಮಿ ಅವರು ಕಚೇರಿಯಲ್ಲಿರದ ಹಾಗೆ ನೋಡಿಕೊಂಡರೆ ತಮಗೆ ಬೇಕಾದ ರೀತಿಯಲ್ಲಿ ಅಲ್ಪಸಂಖ್ಯಾತ ಕಾಲೇಜುಗಳ ಹಿತ ಕಾಪಾಡಬಹುದು ಎನ್ನುವುದು ಸರ್ಕಾರದ ಲೆಕ್ಕಾಚಾರ. ಇದೇ ಕಾರಣದಿಂದ ಕಡ್ಡಾಯ ರಜೆ ಹೋಗುವಂತೆ ಖುದ್ದು ಮುಖ್ಯ ಕಾರ್ಯದರ್ಶಿ ಅವರೇ ಸೂಚಿಸಿದ್ದಾರೆ.
ಮತ್ತೊಂದೆಡೆ ವೈದ್ಯ ಶಿಕ್ಷಣ ಇಲಾಖೆಯಲ್ಲಿನ ಅಕ್ರಮಗಳ ಇನ್ನಿತರ ಭಾಗವಾದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ, ಕಿದ್ವಾಯಿ, ವಿಕ್ಟೋರಿಯಾ, ಸರ್ಕಾರಿ ವೈದ್ಯಕೀಯ ಕಾಲೇಜುಗಳ ಬಗ್ಗೆ ಅವರು ತಾಳಿದ್ದ ಕಠಿಣ ನಿಲುವು ಕೂಡ ಈ ಬೆಳವಣಿಗೆಗೆ ಕಾರಣವಾಗಿರಬಹುದು.
ಪ್ರಾಮಾಣಿಕ ಸಚಿವರುಗಳು ನೀಡಿದ ಮೂರು ಬಹುಮಾನ!: ಬಿಜೆಪಿ ಸರ್ಕಾರದ ಅವಧಿಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಖಾಸಗಿ ವೃತ್ತಿ ಕಾಲೇಜುಗಳ ವಿರುದ್ಧ ತಾಳಿದ್ದ ಕಠಿಣ ನಿಲುವು ಹಾಗೂ ಅನುದಾನಿತ ಕಾಲೇಜುಗಳ ಅಕ್ರಮದ ಬಗ್ಗೆ ತಲೆಹಾಕಿದ್ದರಿಂದ ಅಂತಿಮವಾಗಿ ವರ್ಗಾವಣೆ ಮಾಡಲಾಯಿತು. ಆಗ ವಿಶ್ವೇಶ್ವರ ಹೆಗಡೆ ಕಾಗೇರಿ ಸಚಿವರಾಗಿದ್ದರು. ಇದಾದ ಬಳಿಕ ಎಚ್.ಕೆ.ಪಾಟೀಲ್ ಅವರ ಗ್ರಾಮೀಣಾಭಿವೃದ್ಧಿ ಇಲಾಖೆಗೆ ವರ್ಗಾವಣೆಗೊಂಡರು. ಅಲ್ಲಿ ಭೂಮಿ ಯೋಜನೆಯ ಅನುಷ್ಠಾನಕ್ಕೆ ಮುಂದಾದಾಗ ರೀಯಲ್ ಎಸ್ಟೇಟ್ ಲಾಬಿಗೆ ಮಣಿದು ಅಲ್ಲಿಂದಲೂ ಓಡಿಸಲಾಯಿತು. ಈಗ ಶರಣಪ್ರಕಾಶ್ ಪಾಟೀಲ್ ಅವರ ಪ್ರಾಮಾಣಿಕತೆಯೂ ಬಯಲಾಗಿದೆ.
ಸಚಿವರೇ ರಾಜಿನಾಮೆ ನೀಡುವಿರಾ?
ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆಯನ್ನು ರದ್ದುಗೊಳಿಸಿ ಅಲ್ಲಿರುವ ಅಕ್ರಮಗಳನ್ನು ಬಯಲಿಗೆಳೆಯುತ್ತೇನೆ. ಈ ಕಾಲೇಜುಗಳನ್ನು ಕ್ರಮ ಬದ್ಧಗೊಳಿಸದಿದ್ದರೇ ಈ ಸಚಿವ ಸ್ಥಾನದಲ್ಲಿ ಕ್ಷಣ ಮಾತ್ರವೂ ಕೂರುವುದಿಲ್ಲ. ಈ ಸದನದಲ್ಲಿ ನಾನು ಮಾಡುತ್ತಿರುವ ಪ್ರಮಾಣವಿದು ಎಂದು ವಿಧಾನಪರಿಷತ್‌ನಲ್ಲಿ ವೈದ್ಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ನೀಡಿದ್ದ ವೀರಾವೇಶದ ಹೇಳಿಕೆಯಿದು. ಮಾನ್ಯ ಸಚಿವರೇ ಈ ಮಾತಿಗೆ ಇಂದು ತಾವು ಬದ್ಧರಾಗಿದ್ದೀರಾ? ನೀವು ನೀಡಿದ್ದ ಪ್ರಮಾಣದಂತೆ ಕಾರ್ಯನಿರ್ವಹಿಸಿದ ಅಧಿಕಾರಿಯನ್ನು ರಜೆ ಮೇಲೆ ಕಳುಹಿಸಿದ್ದರೂ ಕಣ್ಮುಚ್ಚಿ ಕುಳಿತಿರುವುದೇಕೆ?
17 ವರ್ಷದಲ್ಲಿ 19 ವರ್ಗಾವಣೆ!
ಸುಪ್ರೀಂ ಕೋರ್ಟ್ ನಿಯಮಗಳ ಪ್ರಕಾರ ಕಾರ್ಯದರ್ಶಿ ಮಟ್ಟದ ಅಧಿಕಾರಿ ಅಥವಾ ಐಎಎಸ್ ಅಧಿಕಾರಿಯನ್ನು ಯಾವುದೇ ಭ್ರಷ್ಟಾಚಾರ ಆರೋಪಗಳಿರದಿದ್ದರೆ ಎರಡು ವರ್ಷಗಳವರೆಗೆ ವರ್ಗಾವಣೆ ಮಾಡುವಂತಿಲ್ಲ. ಆದರೆ ಅಧಿಕಾರದ ಪ್ರಾರಂಭದಿಂದಲೂ ಖಡಕ್ ಅಧಿಕಾರಿ ಎಂದು ಹೆಸರು ಮಾಡಿರುವ ರಶ್ಮಿ, ಕಳೆದ 17 ವರ್ಷದ ಸೇವೆಯಲ್ಲಿ 19 ಬಾರಿ ವರ್ಗಾವಣೆಯಾಗಿದ್ದಾರೆ. ಮತ್ತೊಂದು ವಿಷಯವೆಂದರೆ ತಮ್ಮ ಸೇವಾ ಅವಧಿಯಲ್ಲಿ ಒಂದೇ ವರ್ಷದಲ್ಲಿ ನಾಲ್ಕು ಬಾರಿ ವರ್ಗಾವಣೆಯಾಗಿರುವುದು ಎರಡು ಸಲ!
Click this button or press Ctrl+G to toggle between Kannada and English