ಅಹಮದಾಬಾದ್: ಪದೇಪದೆ ಗುಜರಾತ್ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ ಎಂದು ಹೇಳಿಕೊಳ್ಳುತ್ತಿರುವ ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಗುಜರಾತ್ ಅಭಿವೃದ್ಧಿಯಾಗಿದೆ ಎಂದು ಮೋದಿ ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ವಾಸ್ಥವದಲ್ಲಿ ಗುಜರಾತ್‌ನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಅವರು ಹೇಳುತ್ತಿರುವುದೆಲ್ಲ ಸುಳ್ಳು ಎಂದು ಹೇಳಿರುವ ಆಮ್ ಆದ್ಮಿ ಪಕ್ಷದ ನಾಯಕ, ಗುಜರಾತ್ ಅಭಿವೃದ್ಧಿಗೆ ಸಂಬಂಧಿಸಿದ 16 ಪ್ರಶ್ನೆಗಳ ಪಟ್ಟಿಯೊಂದಿಗೆ ಗುಜರಾತ್ ಮುಖ್ಯಮಂತ್ರಿಯ ನಿವಾಸಕ್ಕೆ ಭೇಟಿ ನೀಡುವುದಾಗಿ ಕೇಜ್ರಿವಾಲ್ ತಿಳಿಸಿದ್ದಾರೆ.
ಇಂದು ಅಹಮದಾಬಾದ್‌ನಲ್ಲಿ ಬಹಿರಂಗ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಗುಜರಾತ್‌ನಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದು ಹೇಳಿಕೊಳ್ಳಲಾಗುತ್ತಿದೆ. ಆದರೆ ಕಳೆದ ಎರಡು ದಿನಗಳಿಂದ ನಾವು ಗಮನಿಸಿದಂತೆ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಇದನ್ನು ನೋಡಿ ನಮಗೆ ಶಾಕ್ ಆಯಿತು ಎಂದಿದ್ದಾರೆ.
‘ನಾವು ನರೇಂದ್ರ ಮೋದಿ ಅವರ ನಿವಾಸಕ್ಕೆ ತೆರಳಿ, 16 ಪ್ರಶ್ನೆಗಳನ್ನು ಕೇಳುತ್ತೇವೆ. ಅದಕ್ಕೆ ಅವರು ಉತ್ತರಿಸಲಿ’ ಎಂದು ಕೇಜ್ರಿವಾಲ್ ಸವಾಲು ಹಾಕಿದ್ದಾರೆ.
ಗುಜರಾತ್‌ನಲ್ಲಿ ಭ್ರಷ್ಟಾಚಾರ ಇಲ್ಲ ಎಂದು ಮೋದಿ ಹೇಳುತ್ತಿದ್ದಾರೆ. ಆದರೆ ರಾಜ್ಯಾದ್ಯಂತ ಜನ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಅಲ್ಲದೆ ಗುಜರಾತ್‌ನಲ್ಲಿ ಸಾಕಷ್ಟು ನಿರುದ್ಯೋಗದ ಸಮಸ್ಯೆ ಇದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಗ್ಯಾಸ್ ಬೆಲೆಯ ಬಗ್ಗೆ ಮೋದಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಮತ್ತು, ಸೋಲಾರ್ ವಿದ್ಯುತ್‌ಗೆ ಬೇರೆ ಕಡೆ ಪ್ರತಿ ಯೂನಿಟ್‌ಗೆ 8 ರುಪಾಯಿ ಇದೆ. ಆದರೆ ಗುಜರಾತ್ ಸರ್ಕಾರ ಏಕೆ 15 ರುಪಾಯಿ ನೀಡುತ್ತಿದೆ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಪ್ರವೇಶ ನಿರಾಕರಿಸಿದ ಪೊಲೀಸರು
16 ಪ್ರಶ್ನೆಗಳೊಂದಿಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಗಾಂಧಿನಗರದ ನಿವಾಸಕ್ಕೆ ತೆರಳಿದ್ದ ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ ಪೊಲೀಸರು ಪ್ರವೇಶ ನಿರಾಕರಿಸಿದ್ದಾರೆ. ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪೊಲೀಸರು, ಕೇಜ್ರಿವಾಲ್ ಹಾಗೂ ಅವರ ಬೆಂಬಲಿಗರನ್ನು ಮುಖ್ಯಮಂತ್ರಿಗಳ ಅಧಿಕೃತ ನಿವಾಸದಿಂದ ಸುಮಾರು 2 ಕಿ.ಮೀ.ದೂರದಲ್ಲಿಯೇ ತಡೆದಿದ್ದಾರೆ. ಅಲ್ಲದೆ ಪ್ರಧಾನಿ ಅಭ್ಯರ್ಥಿಯ ಭೇಟಿಗೆ ಅವಕಾಶ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.
ನಂತರ ಎಎಪಿ ನಾಯಕ ಮನಿಶ್ ಸಿಸೋಡಿಯಾ ಅವರು ಪೊಲೀಸರೊಂದಿಗೆ ನರೇಂದ್ರ ಮೋದಿಯ ಆಪ್ತ ಕಾರ್ಯದರ್ಶಿಯ ಕಚೇರಿಗೆ ತೆರಳಿ ಮೋದಿ ಭೇಟಿಗೆ ಸಮಯ ಕೇಳಿದ್ದಾರೆ. ಇದಾದ ಬಳಿಕ ಟ್ವಿಟ್ ಮಾಡಿರುವ ಸಿಸೋಡಿಯಾ, ಮೋದಿ ಆಪ್ತ ಕಾರ್ಯದರ್ಶಿಯನ್ನು ಭೇಟಿ ಮಾಡಿ, ಮೋದಿ ಭೇಟಿಗೆ ಸಮಯ ನೀಡುವಂತೆ ಮನವಿ ಮಾಡಿದ್ದೇನೆ. ಆದರೆ ಈ ಬಗ್ಗೆ ಮೋದಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಂತರ ನಾನು ನಿಮಗೆ ತಿಳಿಸುವುದಾಗಿ ಅವರ ಆಪ್ತ ಕಾರ್ಯದರ್ಶಿ ಹೇಳಿರುವುದಾಗಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English