ಇಂದು ಸಿಗಡಿ ವೈರಸ್ ಪತ್ತೆಹಚ್ಚುವ ಡಯಾಗ್ನಾಸ್ಟಿಕ್ ಕಿಟ್ ಬಿಡುಗಡೆ

12:57 PM, Saturday, March 8th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

MNC-Fishಮಂಗಳೂರು: ಮಂಗಳೂರು ಮೀನುಗಾರಿಕೆ ಕಾಲೇಜು ಹೈಬ್ರಿಡೋಮಾ ಟೆಕ್ನಾಲಜಿ ಬಳಸಿ ಅಭಿವೃದ್ಧಿಪಡಿಸಿದ ಸಿಗಡಿಯಲ್ಲಿನ ವೈರಸ್ ಪತ್ತೆಹಚ್ಚುವ ಡಯಾಗ್ನಾಸ್ಟಿಕ್ ಕಿಟ್ ಮಾ. 8 ರಂದು ಬಿಡುಗಡೆಗೊಳ್ಳಲಿದೆ.

ಮಧ್ಯಾಹ್ನ 2.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ದಿಲ್ಲಿ ಭಾರತ ಕೃಷಿ ಅನುಸಂದಾನ ಪರಿಷತ್ ಮಹಾನಿರ್ದೇಶಕ ಡಾ.ಎಸ್. ಅಯ್ಯಪ್ಪನ್ ಅವರು ಡಯಾಗ್ನಾಸ್ಟಿಕ್ ಕಿಟ್‌ನ್ನು ಮುಂಬೈನ ಫ್ರಾನ್ಸ್ ಅಂತಾರಾಷ್ಟ್ರೀಯ ವಿರ್ಬ್ಯಾಕ್ ಸಂಸ್ಥೆಗೆ ಹಸ್ತಾಂತರಿಸುವರು ಎಂದು ಮೀನುಗಾರಿಕೆ ಕಾಲೇಜಿನ ಡೀನ್ ಡಾ.ಕೆ.ಎಂ. ಶಂಕರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಕಿಟ್‌ನಿಂದ ರೈತರು ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಸಿಗಡಿಯಲ್ಲಿರುವ ಬಿಳಿಚುಕ್ಕೆ ವೈರಸನ್ನು 5 ನಿಮಿಷದಲ್ಲಿ ಪತ್ತೆ ಹಚ್ಚಬಹುದು. ದಿಲ್ಲಿಯ ಜೈವಿಕ ತಂತ್ರಜ್ಞಾನ ಇಲಾಖೆಯ ಧನ ಸಹಾಯದಿಂದ ಕಿಟ್‌ನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕಿಟ್‌ಗೆ ಸುಮಾರು ರು. 40 ರಿಂದ 50 ದರ ನಿಗದಿಯಾಗಿದ್ದು, ಫ್ರಿಜ್‌ನಲ್ಲಿ ಸಂರಕ್ಷಿಸಿದರೆ 4 ತಿಂಗಳು ಬಳಸಿಕೊಳ್ಳಬಹುದು ಎಂದರು.

ಸಿಗಡಿಯಲ್ಲಿರುವ ಬಿಳಿಚುಕ್ಕೆ ವೈರಸ್‌ನಿಂದ ದೇಶದಲ್ಲಿ ವರ್ಷಕ್ಕೆ ರು. 500 ಕೋಟಿ ನಷ್ಟ ಸಂಭವಿಸುತ್ತಿದೆ. ಇದು ಸಿಗಡಿ ಕೃಷಿಗೆ ಮಾರಕವಾಗಿ ಪರಿಣಮಿಸಿದ್ದು, ಈ ನಿಟ್ಟಿನಲ್ಲಿ ಕಿಟ್ ತಯಾರಿಸಲಾಗಿದೆ. ತಾಯಿ ಸಿಗಡಿಯ ರಕ್ತ ತೆಗೆದು ಕಿಟ್‌ನೊಳಗೆ ಹಾಕಿದಾಗ ಅದರಲ್ಲಿ ನೀಲಿ ಬಣ್ಣ ಕಂಡುಬಂದರೆ ವೈರಸ್ ಇದೆ ಎಂದು ಗುರುತಿಸಬಹುದು. ಸಿಗಡಿಗೆ ಪೂರಕ ಔಷಧಿ ನೀಡುವ ಮೂಲಕ ವೈರಸ್ ಹರಡದಂತೆ ತಡೆಗಟ್ಟಬಹುದು ಎಂದರು.

ಡಯಾಗಾಸ್ಟಿಕ್ ಕಿಟ್ ಕುರಿತಾಗಿ ಈಗಾಗಲೇ ದೇಶಾದ್ಯಂತ ಎಲ್ಲ ಕಡೆ ಪರೀಕ್ಷೆ ನಡೆಸಿದ್ದು, ಉತ್ತಮ ಫಲಿತಾಂಶ ಲಭ್ಯವಾಗಿದೆ. ಶ್ರೀಲಂಕಾ, ಇಂಡೊನೇಷ್ಯಾ, ಚೀನಾದಲ್ಲಿ ಉತ್ತಮ ಬೇಡಿಕೆಯಿದೆ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English