ಸಿದ್ದರಾಮಯ್ಯ ಸಮಾಜವನ್ನು ಅಚ್ಚುಕಟ್ಟಾಗಿ ಒಡೆಯುತ್ತಿದ್ದಾರೆ

2:09 PM, Tuesday, March 11th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

HD-Deve-Gowdaಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಜಾತಿ ಸಮಾವೇಶವನ್ನೂ ಬಾಕಿ ಉಳಿಸಿಲ್ಲ. ಸಮಾಜವನ್ನು ಒಡೆಯುವ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳಲ್ಲಿನ ಸಣ್ಣ ಸಮಾಜಗಳನ್ನೂ ಭಾಗ ಮಾಡಿದ್ದಾರೆ. ಮಠಗಳಿಗೆ ಸಮಾಜದ ಹೆಸರಿನಲ್ಲಿ 50 ಲಕ್ಷ, ಒಂದು ಕೋಟಿ ಹಣ ನೀಡಿ ಅವರನ್ನೂ ವಿಭಜನೆ ಮಾಡಿದ್ದಾರೆ. ಇವರ ಉದ್ದೇಶ ಒಂದೇ- ಸಮಾಜ ಒಡೆಯುವುದು. ಹಿಂದುಳಿದವರನ್ನು ಬಾಳುವುದಕ್ಕೂ ಬಿಡುತ್ತಿಲ್ಲ.

ಈ ಎಲ್ಲ ಸಮಾಜಗಳನ್ನು ಛಿದ್ರ ಛಿದ್ರ ಮಾಡಲು ಮುಂದಾಗಿದ್ದಾರೆ…

ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ಸರ್ವನಾಶ ಮಾಡುತ್ತೇನೆ ಎಂದಿದ್ದಾರೆ. ಅವರ ಬಳಿ ಅಧಿಕಾರ ಇದೆ, ರಾಜಕೀಯ ಶಕ್ತಿ ಇದೆ. ಹಣಬಲವೂ ಇದೆ. ಅದಕ್ಕೇ ಸಮಾಜವನ್ನು ನುಚ್ಚುನೂರು ಮಾಡಿಬಿಟ್ಟಿದ್ದಾರೆ…

ದೇವೇಗೌಡನನ್ನು ಕೊಲ್ಲಬೇಕು ಅಂದ್ರೆ, ಕೊಲ್ಲಿ. ಜೆಡಿಎಸ್ ಅನ್ನು ಮುಗಿಸಬೇಕು ಅಂದ್ರೆ ಮುಗಿಸಿ. ನಾನು ನನ್ನ ಜನರಿಗಾಗಿ ಕರ್ತವ್ಯ ಮಾಡುತ್ತೇನೆ. ನನಗೆ ವಯಸ್ಸು, ಆರೋಗ್ಯ ಮುಖ್ಯ ಅಲ್ಲ. ನಾನು ಹಣ ಬಲದ ಮೇಲೆ ಚುನಾವಣೆ ಮಾಡಕ್ಕಾಗಲ್ಲ. ಜನರ ಮುಂದೆ ಕೈ ಒಡ್ಡುತ್ತೇನೆ ಅಷ್ಟೇ. ಮತಭಿಕ್ಷೆ ಕೇಳುತ್ತೇನೆ. ತೀರ್ಪು ಕೊಡೋದು ಜನರಿಗೆ ಬಿಟ್ಟದ್ದು…

ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರ ನುಡಿಗಳಿವು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಮುಗಿಸಲು ಕಾಂಗ್ರೆಸ್ ಸಂಚು ರೂಪಿಸಿದೆ ಎಂದು ಅವರು ಆರೋಪಿಸಿದ್ದಾರೆ. ಅದನ್ನು ಮೆಟ್ಟಿನಿಂತು ಶಕ್ತಿ ಸಾಮರ್ಥ್ಯ ತೋರುವ ವಿಶ್ವಾಸದ ನುಡಿಗಳನ್ನಾಡಿದ್ದಾರೆ. ‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಲ್ಲ ಭಾಗ್ಯಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಾಜವನ್ನು ನುಚ್ಚುನೂರು ಮಾಡಿರುವ ಅವರು, ಕಳಂಕಿತರನ್ನೇ ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಪಾರದರ್ಶಕ ಮತ್ತು ಭ್ರಷ್ಟಾಚಾರರಹಿತ ಆಡಳಿತದ ಮಾತನಾಡುತ್ತಿದ್ದಾರೆ.

ಮಾತಿನಿಂದಲೇ ಎಲ್ಲ ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಿರಲಿ ಎಂದಿದ್ದಾರೆ. ಅಷ್ಟೇ ಅಲ್ಲ, ನರೇಂದ್ರ ಮೋದಿ ಕೇವಲ ಗುಜರಾತ್ ಮುಖ್ಯಮಂತ್ರಿ. ದೇಶದ ಬಗ್ಗೆ ಏನೂ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ. ರಾಹುಲ್‌ಗಾಂಧಿ ಉದ್ದೇಶದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ದೇವೇಗೌಡ, ಪ್ರಚಾರದಿಂದಲೇ ಎಲ್ಲ ಸಾಧನೆ ಸಾಧ್ಯವಾಗುವುದಿಲ್ಲ. ರಾಹುಲ್ ಪ್ರಯತ್ನ ಸಫಲವಾಗುವುದಿಲ್ಲ. ಕಾಂಗ್ರೆಸ್‌ನಲ್ಲಿನ ಹೊಂದಾಣಿಕೆ ಕೊರತೆ ರಾಹುಲ್‌ಗಾಂಧಿಯ ಎಲ್ಲ ಯೋಜನೆಗಳನ್ನೂ ತಳಕಚ್ಚಿಸುತ್ತದೆ ಎಂದುಅನುಕಂಪ ತೋರಿದ್ದಾರೆ.

ದೇವೇಗೌಡರ ಮಾತುಗಳು ಹೀಗಿವೆ-: ನಾವು ಪವರ್‌ಗೆ ಬಂದಾಗ ಸಾಕಷ್ಟು ಪ್ರಮುಖ ಹೆಜ್ಜೆಗಳನ್ನು ಇರಿಸಿದೆವು. ಅಧಿಕಾರ ವಿಕೇಂದ್ರೀಕರಣಗೊಳಿಸಿದೆವು. ತಿರಸ್ಕೃತ ಸಮುದಾಯಗಳಿಗೆ ರಾಜಕೀಯ, ಆರ್ಥಿಕ, ಸಾಮಾಜಿಕ ಸ್ಥಾನಮಾನ ಕಲ್ಪಿಸಿದೆವು. ಹಿಂದುಳಿದ ವರ್ಗ, ಎಸ್‌ಸಿ/ಎಸ್‌ಟಿ, ಮುಸ್ಲಿಮರು ಸೇರಿದಂತೆ ಎಲ್ಲರಿಗೂ ಅಧಿಕಾರ ನೀಡುವ ಸಮಗ್ರ ಯೋಜನೆ ರೂಪಿಸಿದ್ದೆವು. ಅದರಿಂದಲೇ ನಾವು 1995ರಲ್ಲಿ 16 ಲೋಕಸಭೆ ಕ್ಷೇತ್ರಗಳನ್ನು ಗೆದ್ದೆವು. ಆದರೆ, ಇಂದು ಕಾಂಗ್ರೆಸ್ ಸೇರಿರುವ ಸಿದ್ದರಾಮಯ್ಯ ನಾವು ಅಂದು ನೀಡಿದ ಯೋಜನೆಗಳನ್ನೇ ವಿಭಾಗಿಸಿದ್ದಾರೆ. ಸಮುದಾಯಗಳನ್ನು ಒಡೆಯುತ್ತಿದ್ದಾರೆ. ಹಿಂದುಳಿದವರು, ಪರಿಶಿಷ್ಟ ಜಾತಿ/ಪಂಗಡದವರನ್ನು ಅನುದಾನದ ಹೆಸರಿನಲ್ಲಿ ಮತ್ತಷ್ಟು ಒಡೆಯುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ, ಕ್ಷೀರಭಾಗ್ಯ ಎಂದು ಭಾಗ್ಯಗಳನ್ನು ನೀಡಲು ಮುಂದಾಗಿದ್ದಾರೆ. ಅವುಗಳ ಅನುಷ್ಠಾನವೇ ಆಗಿಲ್ಲ. ಆದರೆ, ‘ಲಕ್ಷ್ಮೀಭಾಗ್ಯ’ ಯಾರ ಬಳಿ ಇದೆ ಎಂಬುದನ್ನು ಹೇಳಿಲ್ಲ. ಸಿದ್ದರಾಮಯ್ಯ ಪಾರದರ್ಶಕ ಆಡಳಿತ ಹೇಳಿಕೆ ನೀಡುತ್ತಾರೆ. ಅವರು ಇತ್ತೀಚಿಗೆ ಸಚಿವ ಸಂಪುಟದ ವಿಸ್ತರಣೆ ಮಾಡಿದ್ದಾರೆ. ಅದರಲ್ಲಿ ಯಾರನ್ನು ಸೇರಿಸಿಕೊಂಡರು ಎಂಬ ಅರಿವು ಅವರಿಗೂ ಆಗಿದೆ. ಅಲ್ಲಿಗೇ ಪಾರದರ್ಶಕ ಆಡಳಿತ ಮರೀಚಿಕೆ ಆಗಿದೆ. ಬರೀ ಮಾತಿನಿಂದ ಪಾರದರ್ಶಕ ಆಡಳಿತ ಸಾಧ್ಯ ಇಲ್ಲ. ಮಾತಿನಿಂದ ಜನರನ್ನು ಮರಳು ಮಾಡುವ ಕಾಲ ಹೋಗಿದೆ.

ಲೋಕಸಭೆ ಎರಡು ಮರುಚುನಾವಣೆಗಳಲ್ಲಿ ಜೆಡಿಎಸ್ ಸೋಲಿನ ನಂತರ ಜೆಡಿಎಸ್ ‘ಶೂನ್ಯ’ವಾಯಿತು. ಇದನ್ನು ಇದು ಮೇಲೇಳುವುದಿಲ್ಲ ಎಂದೇ ಹೇಳಲಾಗಿತ್ತು. ರಾಜ್ಯದಲ್ಲಿ ಅಷ್ಟೇ ಅಲ್ಲ, ಹೊರಗೂ ಈ ಬಗ್ಗೆ ಸುದ್ದಿ ಹರಿಸಲಾಯಿತು. ಕಳೆದ ಎರಡು ತಿಂಗಳಲ್ಲಿ ಪಕ್ಷ ಸಾಕಷ್ಟು ಚೇತರಿಸಿಕೊಂಡಿದೆ. ನಾಲ್ಕಾರು ಸಮಾವೇಶಗಳನ್ನು ಮಾಡಿದ್ದು ಕಾರ್ಯಕರ್ತರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಿದ್ದೇವೆ. ಈಗ ಜನರು ಗಂಭೀರವಾಗಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳೂ ಜೆಡಿಎಸ್‌ಗೆ ನೆಲೆ ಇದೆ ಎಂದು ಹೇಳುತ್ತಿವೆ. ಪ್ರಮುಖ ಪಾತ್ರವನ್ನು ನಿರ್ವಹಿಸುವ ಸೂಚನೆಯನ್ನೂ ನೀಡಿವೆ. ಕಾಂಗ್ರೆಸ್, ಬಿಜೆಪಿಗೆ ಪರ್ಯಾಯವಾಗಿ ಜೆಡಿಎಸ್ ಹೋರಾಟ ನೀಡುತ್ತದೆ. ಇದು ಶತಸಿದ್ಧ.

ಬಿಜೆಪಿಯ ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿ. ಅವರಿಗೆ ಗುಜರಾತ್ ಮಾತ್ರ ಗೊತ್ತಿರುವುದು. ದೇಶದ ಬಗ್ಗೆ ಅವರಿಗೆ ಏನು ಗೊತ್ತು? ಕಾಂಗ್ರೆಸ್ ತನ್ನದೇ ತಪ್ಪಿನಿಂದ ಇಳಿಮುಖ ಕಂಡಿದೆ. ಮೋದಿ ಇದನ್ನು ಬಂಡವಾಳವಾಗಿಸಿಕೊಂಡಿದ್ದಾರೆ, ಮಾಧ್ಯಮಗಳೂ ಒತ್ತಾಸೆಯಾಗಿವೆ. ಮೋದಿ ಇರಲಿ, ಯಾರೇ ಇರಲಿ ಬಿಜೆಪಿ ಏಕ ಪಕ್ಷವಾಗಿ ಅಧಿಕಾರ ಹಿಡಿಯುವುದು ಸಾಧ್ಯವಿಲ್ಲ.

ರಾಹುಲ್‌ಗಾಂಧಿ ಯುವಶಕ್ತಿ ಹಿಡಿದು ಪ್ರಚಾರದಿಂದ ಎಲ್ಲ ಮಾಡಲು ಹೊರಟಿದ್ದಾರೆ. ಪ್ರಚಾರದಿಂದ ಏನೂ ಸಾಧ್ಯವಿಲ್ಲ. ರಾಹುಲ್‌ಗಾಂಧಿ ಪ್ರಯತ್ನವನ್ನು ನಾನು ಪ್ರಶಂಸಿಸುತ್ತೇನೆ. ಆದರೆ, ಆ ಪಕ್ಷದಲ್ಲಿ ಹೊಂದಾಣಿಕೆಯೇ ಇಲ್ಲ. 62 ಸಚಿವರು ಒಂದೊಂದು ದಿಕ್ಕು. ಹೇಳಿಕೆಗಳಲ್ಲೂ ವೈರುದ್ಧ. ರಾಹುಲ್ ಪ್ರಯತ್ನಕ್ಕೆ ಪ್ರಶಂಸೆ ಇದೆ. ಅದಾಗುವುದಿಲ್ಲವಲ್ಲ ಎಂಬ ಅನುಕಂಪವೂ ಇದೆ.

ರಾಷ್ಟ್ರೀಯ ಪಕ್ಷಗಳಿಂದ ಏನೂ ಆಗಿಲ್ಲ

ಬಿಜೆಪಿಯವರ ಎನ್‌ಡಿಎ, ಕಾಂಗ್ರೆಸ್‌ನವರ ಯುಪಿಎಯಿಂದ ರಾಜ್ಯಕ್ಕೆ ಯಾವ ಅನುಕೂಲವೂ ಆಗಿಲ್ಲ. ರಾಷ್ಟ್ರೀಯ ಪಕ್ಷಗಳಲ್ಲಿ ರಾಜ್ಯದ ಹಿತಾಸಕ್ತಿ ಇರುವುದಿಲ್ಲ. ಅದಕ್ಕೆ ತಮಿಳುನಾಡಿನ ಉದಾಹರಣೆಯೇ ಸರಿ. ಅಲ್ಲಿರುವ ಎರಡು ಪ್ರಾದೇಶಿಕ ಪಕ್ಷಗಳು ಏನೇ ಕಚ್ಚಾಡಿದರೂ ರಾಜ್ಯದ ಹಿತಾಸಕ್ತಿ ವಿಷಯ ಬಂದಾಗ ಒಂದಾಗುತ್ತವೆ. ಹೆದ್ದಾರಿ, ರೈಲು, ನೀರು ಸೇರಿದಂತೆ ಎಲ್ಲ ವಿಷಯಗಳಲ್ಲೂ ಒಂದಾಗಿ ಕಾರ್ಯಸಿದ್ಧಿ ಮಾಡಿಕೊಳ್ಳುತ್ತಾರೆ. ಇಂತಹದ್ದೇ ವ್ಯವಸ್ಥೆ ಅಥವಾ ಪರಿಸ್ಥಿತಿ ರಾಜ್ಯದಲ್ಲೂ ನಿರ್ಮಾಣವಾಗಬೇಕೆಂಬುದು ನನ್ನ ಉದ್ದೇಶ.

ತೃತೀಯ ರಂಗ ಹುಟ್ಟೋದ್ರಲ್ಲೇ ಸಾಯುತ್ತಿದೆ ಎಂಬ ಮಾತುಗಳಿವೆ. ಒಂದು ಮಾತು ಹೇಳ್ತೀನಿ ಕೇಳಿ. ಎಲ್ಲ ಪಕ್ಷಗಳಲ್ಲೂ ಪ್ರತಿನಿತ್ಯವೂ ಒಂದಲ್ಲ ಒಂದು ಚಟುವಟಿಕೆಗಳು ನಡೆಯುತ್ತಿವೆ. ಏನೇನೋ ಬದಲಾವಣೆ ನಡೆಯುತ್ತಿವೆ. ಅದೆಲ್ಲವನ್ನೂ ತಡೆಯಲು ಸಾಧ್ಯವೇ? ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ನ ಸಂಸದ ಟಿಕೆಟ್ ನೀಡಿದ ಮೇಲೆ ಅದನ್ನು ನಿರಾಕರಿಸಿ ಬಿಜೆಪಿ ಸೇರಿಕೊಂಡರು. ಬಿಜೆಪಿಯ ಮಾಜಿ ಸಚಿವ ಕಾಂಗ್ರೆಸ್ ಸೇರಿಕೊಂಡರು. ಎಲ್ಲ ಪಕ್ಷಗಳಲ್ಲೂ ‘ರಾಜಕೀಯ ಏರುಪೇರು’ ಇದ್ದೇ ಇದೆ. ಇದಕ್ಕೆ ಯಾವುದೇ ರಾಜ್ಯವೂ ಹೊರತಲ್ಲ. ತೃತೀಯ ರಂಗ ಎಂಬ ಶಕ್ತಿ ಜನಾದೇಶದ ನಂತರ ಸದೃಢಗೊಳ್ಳುತ್ತದೆ. ಆಗ ಹೊಂದಾಣಿಕೆಯ ಕಾಂಬಿನೇಷನ್ ಸೃಷ್ಟಿಯಾಗುತ್ತದೆ. ಕಾಂಗ್ರೆಸ್-ಬಿಜೆಪಿಗೆ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮುತ್ತದೆ. ಕಾದುನೋಡಿ.

ಯಾವುದೇ ಮುಚ್ಚುಮರೆ ಇಲ್ಲ. ಇದೇ ನನ್ನ ಕೊನೆಯ ಚುನಾವಣೆ. ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಹಾಸನದಿಂದ ಈ ಬಾರಿ ಲೋಕಸಭೆ ಚುನಾವಣೆಗೆ ನಿಲ್ಲುವುದೇ ನನ್ನ ಜೀವಮಾನದ ಅಂತಿಮ ಸ್ಪರ್ಧೆ. ಅಫ್‌ಕೋರ್ಸ್, ಇದಾದ ಮೇಲೆ ನಾನು ಸಕ್ರಿಯ ರಾಜಕಾರಣದಲ್ಲಿ ಇರುವುದಿಲ್ಲ ಎಂದೇನೂ ಅಲ್ಲ. ಮುಂದಿನ ವಿಧಾನಸಭೆ ಚುನಾವಣೆ ನನ್ನ ಗುರಿ. ಅದರಲ್ಲೂ ನಾನು ಸಕ್ರಿಯವಾಗಿ ತೊಡಗುತ್ತೇನೆ. ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬುದೇ ನನ್ನ ಲಕ್ಷ್ಯ. ಮುಂದಿನ ವಿಧಾನಸಭೆಯ ಚುನಾವಣೆಯ ಫಲಿತಾಂಶ ಏನೇ ಆಗಲಿ, ನಂತರ ನಾನು ಸ್ಪರ್ಧಾ ಚುನಾವಣೆ, ಸಕ್ರಿಯ ರಾಜಕಾರಣದಿಂದ ದೂರವಾಗುತ್ತೇನೆ. ಇದೇ ನನ್ನ ಅಂತಿಮ ನಿರ್ಧಾರ, ಇನ್ನಾವುದೇ ಬದಲಾವಣೆ ಇಲ್ಲ.

ಕಳೆದ 50 ವರ್ಷಗಳ ರಾಜಕಾರಣದಲ್ಲಿ ಹಾಸನ ಜನತೆ ನನ್ನನ್ನು ಬೆಳೆಸಿದ್ದಾರೆ. ಒಂದು ಸಾರಿ ಶಿಕ್ಷೆ ಕೊಟ್ಟಿದ್ದಾರೆ ನಿಜ. ಅದನ್ನು ನಾನು ಒಪ್ಪಿಕೊಂಡಿದ್ದೇನೆ. ನನ್ನನ್ನು ಜಾತಿವಾದಿ ಎಂದು ಬಿಂಬಿಸಿದ್ದಾರೆ. ಹಾಸನ ಜನತೆಗೆ ಸತ್ಯದ ಅರಿವಿದೆ. ಒಕ್ಕಲಿಗ, ಲಿಂಗಾಯತ, ಕುರುಬ, ಹಿಂದುಳಿದ ವರ್ಗ ಸೇರಿದಂತೆ ಎಲ್ಲರನ್ನೂ ಬೆಳೆಸಿದ್ದೇನೆ, ಅಧಿಕಾರ ನೀಡಿದ್ದೇನೆ. ಒಂದೇ ಜಾತಿಗೆ ಎಲ್ಲವನ್ನೂ ನಾನು ಎಂದೂ ಮಾಡಿಲ್ಲ. ಹಾಸನದಲ್ಲಿ ಜನತೆ ಯಾವುದೇ ಸಂದರ್ಭದಲ್ಲೂ ನನ್ನ ಕೈಬಿಡಲ್ಲ.

ಈ ದೇವೇಗೌಡನನ್ನು ಕೊಲ್ಲಬೇಕು ಅಂದ್ರೆ ಕೊಲ್ಲಿ. ಜೆಡಿಎಸ್ ಅನ್ನು ಮುಗಿಸಬೇಕು ಅಂದ್ರೆ ಮುಗಿಸಿ. ಆದರೆ ನಾನು ನನ್ನ ಜನರಿಗಾಗಿ ಕರ್ತವ್ಯ ಮಾಡುತ್ತೇನೆ. ಇದಕ್ಕೆ ವಯಸ್ಸು, ಆರೋಗ್ಯ ಅಡ್ಡಿಯಾಗುವುದಿಲ್ಲ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English