ದಕ್ಷಿಣಾರ್ಧ ಗೆಲವು ನಮ್ಮದೇ: ವೆಂಕಯ್ಯ ನಾಯ್ಡು

12:00 PM, Wednesday, March 12th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

M.-Venkaiah-Naiduಬೆಂಗಳೂರು: ರಾಷ್ಟ್ರ ಮಟ್ಟದಲ್ಲಿ 272ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಅಭಿಯಾನ ನಡೆಸುತ್ತಿರುವ ಬಿಜೆಪಿ, ದಕ್ಷಿಣ ಭಾರತದ ಲೋಕಸಭಾ ಕ್ಷೇತ್ರಗಳಲ್ಲಿ ಅರ್ಧದಷ್ಟು ಗೆಲ್ಲುವ ಗುರಿ ಹಾಕಿಕೊಂಡಿದೆ.

ದಕ್ಷಿಣ ಭಾರತದಲ್ಲಿರುವ 132 ಕ್ಷೇತ್ರಗಳಲ್ಲಿ 66ಕ್ಕೂ ಅಧಿಕ ಸೀಟುಗಳನ್ನು ಎನ್‌ಡಿಎ ಅಥವಾ ಬಿಜೆಪಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಇದಕ್ಕೆ ಪೂರಕವಾಗಿ ಕರ್ನಾಟಕ, ಕೇರಳ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಬಿಜೆಪಿಯ ಬಲವರ್ಧನೆಯಾಗುತ್ತಿದೆ. ಕೆಲ ರಾಜ್ಯಗಳಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಹೊಸ ಪಕ್ಷಗಳು ಬರುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಎಂಡಿಎಂಕೆ ಹಾಗೂ ಇನ್ನು ಕೆಲ ಸಣ್ಣ ಪಕ್ಷಗಳು ಎನ್‌ಡಿಎಗೆ ಸೇರುತ್ತಿವೆ. ಆಂಧ್ರದಲ್ಲಿ ಬಿಜೆಪಿ ಬಲವರ್ಧನೆಯಾಗಿದ್ದು, ಚುನಾವಣೆಯಲ್ಲಿ ಅಚ್ಚರಿ ಫಲಿತಾಂಶ ಬರಲಿದೆ. ಕೇರಳದಲ್ಲಿ ಬಿಜೆಪಿಗೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಹೆಚ್ಚಿನ ಸೀಟು ಗೆಲ್ಲುವ ವಿಶ್ವಾಸವಿದೆ. ಕರ್ನಾಟಕದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸೀಟುಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ದೇಶದಲ್ಲಿ ನರೇಂದ್ರ ಮೋದಿ ಪರವಾದ ಅಲೆ ಹೆಚ್ಚುತ್ತಿದೆ. ಇದೇ ಕಾರಣದಿಂದ ಎನ್‌ಡಿಎ ಕಡೆ ಪ್ರಾದೇಶಿಕ ಪಕ್ಷಗಳು ಒಲವು ತೋರಿಸುತ್ತಿವೆ. ಕಾಂಗ್ರೆಸ್ ಪಕ್ಷವು ಮತದಾರರಿಗೆ ಹಾಗೂ ಸ್ಥಳೀಯ ಪಕ್ಷಗಳಿಗೆ

ಅಸ್ಪ್ರಶ್ಯವಾಗುತ್ತಿದೆ. ಈ ಭಯದಿಂದ ಚುನಾವಣೆಗೆ ತನ್ನ ನಾಯಕನನ್ನು ಘೋಷಿಸಲು ಕಾಂಗ್ರೆಸ್ ಹೆದರುತ್ತಿದೆ. ನಾಯಕನಿಲ್ಲದೆ ಕ್ರಿಕೆಟ್ ಪಂದ್ಯವಾಡಲು ಕಾಂಗ್ರೆಸ್ ಮುಂದಾಗಿದೆ ಎಂದು ನಾಯ್ಡು ಲೇವಡಿ ಮಾಡಿದರು.

ಗಾಂಧಿ ಹೆಸರು ದುರ್ಬಳಕೆ: ಮಹಾತ್ಮಾ ಗಾಂಧಿ ಹೆಸರನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಜಕೀಯ ಉದ್ದೇಶಕ್ಕಾಗಿ ಗಾಂಧಿಯನ್ನು ಪ್ರತಿದಿನ ಸಾಯಿಸುವ ಕೆಲಸವನ್ನು ಕಾಂಗ್ರೆಸ್ ಮುಖಂಡರು ಮಾಡುತ್ತಿದ್ದಾರೆ. ತಮ್ಮ 60 ವರ್ಷದ ಆಡಳಿತದಲ್ಲಿ ಗಾಂಧಿ ತತ್ವವನ್ನು ಪಾಲಿಸದ ಪಕ್ಷ, ಈಗ ಗಾಂಧಿ ಹತ್ಯೆ ಕುರಿತಂತೆ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಈ ವಿಚಾರವನ್ನು ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಬಗ್ಗೆ ಗಾಂಧಿಯ ಮೊಮ್ಮಗನೇ ವಿರೋಧವ್ಯಕ್ತಪಡಿಸಿದ್ದಾರೆ. ಇನ್ನಾದರೂ ಕಾಂಗ್ರೆಸ್‌ಗೆ ಬುದ್ದಿ ಬರಲಿ ಎಂದು ಬಿಜೆಪಿ ಮಾಜಿ ಅಧ್ಯಕ್ಷ ವೆಂಕಯ್ಯ ನಾಯ್ಡು ಕಿಡಿಕಾರಿದರು.

ಮೋದಿ ಅಥವಾ ಬಿಜೆಪಿಯನ್ನು ಎದುರಿಸಲಾಗದೆ ಇಂತಹ ಹೇಳಿಕೆ ನೀಡಲಾಗುತ್ತಿದೆ. ಈಗ ಮೋದಿಯನ್ನು ಹಿಟ್ಲರ್‌ಗೆ ಹೋಲಿಸಲಾಗುತ್ತಿದೆ. ದೇಶದಲ್ಲಿ ಹಿಟ್ಲರ್ ತರಹ ಅಧಿಕಾರವನ್ನು ನಡೆಸಿದ್ದರೆ ಅದರ ಸಂಪೂರ್ಣ ಶ್ರೇಯ ಕಾಂಗ್ರೆಸ್‌ಗೆ ಸಲ್ಲುತ್ತದೆ. ಕಾಂಗ್ರೆಸ್‌ನ ಅಪ್ರಬುದ್ಧ ನಾಯಕ ರಾಹುಲ್ ಗಾಂಧಿ ಮಾತಿನ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳಬೇಕಿಲ್ಲ. ಏಕೆಂದರೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳಲು ಅವರ ಪಕ್ಷವೇ ಅಂಜುತ್ತಿದೆ ಎಂದು ವ್ಯಂಗ್ಯವಾಡಿದರು. ಸುಮಾರು 60 ವರ್ಷಗಳ ಕಾಲ ಒಂದು ಪಕ್ಷ, ಕುಟುಂಬ ಈ ದೇಶವನ್ನು ಆಳಿದೆ. ಆದರೆ ಮೋದಿಗೆ ಅಧಿಕಾರ ದಾಹ ಎನ್ನುತ್ತಿದೆ. 60 ವರ್ಷದ ಅಧಿಕಾರದ ದರ್ಪದಲ್ಲಿರುವ ಕಾಂಗ್ರೆಸ್‌ನ ಕುಟುಂಬ ರಾಜಕೀಯದಿಂದ ವಿಮುಕ್ತಿಗೊಳಿಸಿ ಈ ದೇಶಕ್ಕಾಗಿ ಮೋದಿಗೆ 60 ತಿಂಗಳುಗಳ ಕಾಲ ಅವಕಾಶ ನೀಡಿ ಎಂದು ಬಿಜೆಪಿ ಹೇಳುತ್ತಿದೆ ಎಂದು ಅವರು ಹೇಳಿದರು.

ಬಿಎಸ್‌ಆರ್ ಮುಖ್ಯಸ್ಥ ಬಿ.ಶ್ರೀರಾಮುಲು ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ಅಥವಾ ಎನ್‌ಡಿಎ ಮೈತ್ರಿಗೆ ಸೇರಿಸಿಕೊಳ್ಳುವ ಸಂಬಂಧ ಕೇಂದ್ರ ಚುನಾವಣೆ ಸಮಿತಿ ಮಾ.13ರಂದು ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಇದೇ ಸಂದರ್ಭದಲ್ಲಿ ರಾಜ್ಯದ ಉಳಿದ 8 ಸೀಟುಗಳ ಪಟ್ಟಿಯನ್ನು ಬಿಡುಗಡೆಮಾಡಲಾಗುವುದು ಎಂದು ವೆಂಕಯ್ಯ ನಾಯ್ಡು ಸ್ಪಷ್ಟಪಡಿಸಿದರು. ಬಿಜೆಪಿಯ ಆಂತರಿಕ ವಿಚಾರದಲ್ಲಿ ಆರ್‌ಎಸ್‌ಎಸ್ ಹಸ್ತಕ್ಷೇಪ ಮಾಡುವುದಿಲ್ಲ. ಕೆಲ ಸಂದರ್ಭದಲ್ಲಿ ಮಾರ್ಗದರ್ಶನ ಮಾಡುವುದು ನಿಜ. ಮೋದಿಯನ್ನು ಬಹಿರಂಗವಾಗಿ ಬೆಂಬಲಿಸುವುದಿಲ್ಲ ಎಂದು ಆರ್‌ಎಸ್‌ಎಸ್ ಹೇಳಿದ ಮಾತ್ರಕ್ಕೆ ವಿರೋಧವಿದೆ ಎಂದಾಗುವುದಿಲ್ಲ ಎಂದು ಅವರು ಹೇಳಿದರು.

ಭ್ರಷ್ಟಾಚಾರ ಪ್ರಕರಣಗಳಿಂದ ಶೀಲಾ ದೀಕ್ಷಿತ್ ಅವರನ್ನು ಬಚಾವ್ ಮಾಡಲು ಕೇರಳದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಇದೇ ರೀತಿ ಕೆಲ ಆಯೋಗಗಳ ಅಧ್ಯಕ್ಷರ ನೇಮಕವನ್ನು ಅಧಿಕಾರದ ಅಂತಿಮ ಅವಧಿಯಲ್ಲಿ ಯುಪಿಎ ಮಾಡಿದೆ. ಭ್ರಷ್ಟರನ್ನು ರಕ್ಷಿಸಲು ಸಂವಿಧಾನಾತ್ಮಕ ಹುದ್ದೆಗಳಿಗೆ ನೇಮಕ ಮಾಡುವುದು ಸೂಕ್ತವಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಇವೆಲ್ಲ ವಿಚಾರಗಳನ್ನು ಪರಿಶೀಲನೆ ಮಾಡಲಿದೆ ಎಂದು ವೆಂಕಯ್ಯ ನಾಯ್ಡು ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English