ಸಿಎಂ ಸಿದ್ದರಾಮಯ್ಯಗೆ ಬಿತ್ತು ಟಾರ್ಗೆಟ್ ಇಪ್ಪತ್ತು
3:07 PM, Wednesday, March 12th, 2014
Loading...
ಬೆಂಗಳೂರು: ಲೋಕಸಭಾ ಚುನಾವಣೆ ಇನ್ನೂ ಕಾವೇರದ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಪಿಂಗ್ ಮೂಡಿನಲ್ಲಿರುವಾಗ ಕಾಂಗ್ರೆಸ್ ಹೈಕಮಾಂಡ್ ಬಿಸಿ ಮುಟ್ಟಿಸಿದೆ. ಹಾಲಿ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಕನಿಷ್ಠ 20 ಸ್ಥಾನಗಳನ್ನು ಪಕ್ಷಕ್ಕಾಗಿ ಗೆಲ್ಲಿಸಿಕೊಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಸಿಎಂ ಸಿದ್ದುಗೆ ಸ್ಪಷ್ಟ ಟಾರ್ಗೆಟ್ ನೀಡಿದೆ ಎಂದು ತಿಳಿದುಬಂದಿದೆ.
ಸಿಎಂ ಸಿದ್ದರಾಮಯ್ಯಗೆ ಬಿತ್ತು ಟಾರ್ಗೆಟ್ ಇಪ್ಪತ್ತು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಅವರಿಗಿಂತಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರ ಫಲಶ್ರುತಿಯೆಂಬಂತೆ ಸಿಎಂ ಸಿದ್ದು ಎಷ್ಟು ಸೀಟು ಗೆಲ್ಲುತ್ತಾರೋ ಈಗಲೇ ಹೇಳುವುದು ಕಷ್ಟವಾದರೂ ಸಿಎಂ ಸಿದ್ದರಾಮಯ್ಯ ಎದ್ದು ಕುಳಿತಿದ್ದಾರೆ. ನಿನ್ನೆ ಮಂಗಳವಾರದಿಂದಲೇ ಕೆಲಸ ಶುರು ಹಚ್ಚಿಕೊಂಡಿದ್ದಾರೆ. ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಕ್ಷೇತ್ರವಾರು ಸಭೆ ನಡೆಸಿ, ಚುನಾವಣಾ ತಂತ್ರ ಹಣೆದಿದ್ದಾರೆ. ಟಿಕೆಟ್ ಹಂಚಿಕೆಯಲ್ಲೂ ಮುಖ್ಯಮಂತ್ರಿಯವರ ಶಿಫಾರಸ್ಸಿಗೆ ಹೆಚ್ಚಿನ ಮಾನ್ಯತೆ ನೀಡಲಾಗಿದೆ.
ಒಟ್ಟಿನಲ್ಲಿ ಮುಂದಿನ ಲೋಕಸಭೆ ಚುನಾವಣೆಯ ಸೋಲು ಗೆಲುವಿನ ಸಂಪೂರ್ಣ ಹೊಣೆಗಾರಿಕೆಯನ್ನು ಮುಖ್ಯಮಂತ್ರಿಯವರ ಹೆಗಲಿಗೆ ವಹಿಸಲಾಗಿದೆ, ಕೆಪಿಸಿಸಿ ಅಧ್ಯಕ್ಷರು ಮುಖ್ಯಮಂತ್ರಿಯವರಿಗೆ ಸಾರಥಿಯಾಗಿ ಕೆಲಸ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಮೊಯ್ಲಿ ಬದಲಿಗೆ ಹಿರಿಯ ಕಾಂಗ್ರೆಸ್ಸಿಗ, ಶಿಡ್ಲಘಟ್ಟದ ವಿ ಮುನಿಯಪ್ಪ ಅವರನ್ನು ಕಣಕ್ಕಿಳಿಸಲು ಸಿಎಂ ಸಿದ್ದರಾಮಯ್ಯ ಉತ್ಸುಕರಾಗಿದ್ದಾರೆ ಎಂದು ತಿಳಿದುಬಂದಿದೆ.