ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ ಬುಧವಾರದಿಂದ (ಮಾ.12) ರಾಜ್ಯಾದ್ಯಂತ ಆರಂಭವಾಗಲಿದೆ. ಮಾ. 27ರವರೆಗೆ ಪರೀಕ್ಷೆ ನಡೆಯಲಿದ್ದು, ಸಂಗೀತ ಮತ್ತು ಪ್ರಂಚ್ ವಿಷಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಿಷಯಗಳಿಗೆ ಪ್ರತೀ ದಿನ ಬೆಳಗ್ಗೆ 9ರಿಂದ 12.15ರವರೆಗೆ ಪರೀಕ್ಷೆ ನಡೆಯಲಿದೆ. ಈ ಬಾರಿ ಒಟ್ಟು 6,15,780 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದು, ಮೊದಲನೇ ದಿನವಾದ ಬುಧವಾರ ರಾಜ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ವಿಷಯದ ಪರೀಕ್ಷೆಗಳು ನಡೆಯಲಿವೆ.
ಯಾವುದೇ ಪರೀಕ್ಷಾ ಅಕ್ರಮ, ಪ್ರಶ್ನೆ ಪತ್ರಿಕೆ ಬಹಿರಂಗದಂತಹ ಅಚಾತುರ್ಯ ನಡೆಯದಂತೆ ಎಚ್ಚರ ವಹಿಸಲಾಗಿದ್ದು, ಈ ಸಂಬಂಧ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ರಾಮೇಗೌಡ ತಿಳಿಸಿದ್ದಾರೆ.
ರಾಜ್ಯದ ಒಟ್ಟು 984 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಇವುಗಳಲ್ಲಿ 188 ಸೂಕ್ಷ್ಮ ಮತ್ತು 70 ಅತಿಸೂಕ್ಷ್ಮ ಪರೀಕ್ಷಾ ಕೇಂದ್ರಗಳೆಂದು ಗುರುತಿಸಲಾಗಿದೆ. ಸುಗಮವಾಗಿ ಪರೀಕ್ಷೆ ನಡೆಸಲು ಅಧಿಕಾರಿಗಳ ನೇತೃತ್ವದ ವಿಶೇಷ ತನಿಖಾದಳ ರಚಿಸಲಾಗಿದೆ. ಈ ತಂಡಗಳಿಗೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ವಿಡಿಯೋ ಚಿತ್ರೀಕರಿಸುವ ಸೌಲಭ್ಯ ಒದಗಿಸಲಾಗಿದ್ದು, ವಾಹನಗಳೊಂದಿಗೆ ಗಸ್ತು ತಿರುಗುವ ಅಧಿಕಾರಿಗಳು ಪರೀಕ್ಷೆಗೆ ಸಂಬಂಧಿಸಿದಂತೆ ಕಾನೂನುಬಾಹಿರ ಚುಟುವಟಿಕೆ ಅಥವಾ ಸಂಶಯ ವ್ಯಕ್ತವಾದಲ್ಲಿ ಅಂತಹವರ ವಿರುದ್ಧ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಎಫ್ಐಆರ್ ದಾಖಲಿಸುವ ಅಧಿಕಾರ ನೀಡಲಾಗಿದೆ ಎಂದು ಹೇಳಿದ್ದಾರೆ.
ವದಂತಿಗೆ ಕಿವಿಗೊಡಬೇಡಿ-ಸಹಾಯವಾಣಿಗೆ ಕರೆ ಮಾಡಿ
ವಿದ್ಯಾರ್ಥಿಗಳು ವದಂತಿಗಳಿಗೆ ಕಿವಿಗೊಡಬಾರದು. ಗೊಂದಲ ಅಥವಾ ಅನುಮಾನಗಳಿದ್ದರೆ ವಿದ್ಯಾರ್ಥಿಗಳು ಹಾಗೂ ಪೋಷಕರು ಕೂಡ ಪಿಯು ಪರೀಕ್ಷಾ ಸಹಾಯವಾಣಿ ಸಂಖ್ಯೆ 080- 23468740/41ಗೆ ಕರೆ ಮಾಡಬಹುದು. ಯಾರಾದರೂ ಪರೀಕ್ಷೆಗೆ ಸಂಬಂಧಿಸಿದಂತೆ ವದಂತಿ ಹಬ್ಬಿಸಿ ವಾತಾವರಣ ಹಾಳು ಮಾಡಲು ಯತ್ನಿಸುತ್ತಿರುವುದು ಕಂಡುಬಂದಲ್ಲಿ ಅಂತಹವರ ಬಗ್ಗೆ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಬಹುದು ಅಥವಾ ಪಿಯು ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸುವಂತೆ ಇಲಾಖೆಯ ಜಂಟಿ ನಿರ್ದೇಶಕ(ಪರೀಕ್ಷೆ) ನರಸಿಂಹನಾಯಕ್ ತಿಳಿಸಿದ್ದಾರೆ.
ಪರೀಕ್ಷಾ ವೇಳಾಪಟ್ಟಿ
ಮಾ. 12- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮಾ. 13- ಜೀವವಿಜ್ಞಾನ , ಎಲೆಕ್ಟ್ರಾನಿಕ್ಸ್
ಮಾ. 14- ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ
ಮಾ.15- ಭೌತವಿಜ್ಞಾನ, ಮನಃಶಾಸ್ತ್ರ (ಬೆಳಗ್ಗೆ)ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ (ಮಧ್ಯಾಹ್ನ )
ಮಾ.17- ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ
ಮಾ.18- ಗಣಿತ, ಭೂಗೋಳ ಶಾಸ್ತ್ರ
ಮಾ. 19- ಐಚ್ಛಿಕ ಕನ್ನಡ, ಗೃಹ ವಿಜ್ಞಾನ, ಮೂಲಗಣಿತ
ಮಾ. 20- ರಸಾಯನ ವಿಜ್ಞಾನ, ವ್ಯವಹಾರ ಅಧ್ಯಯನ
ಮಾ. 21- ತರ್ಕಶಾಸ್ತ್ರ, ಶಿಕ್ಷಣ
ಮಾ. 22- ಇತಿಹಾಸ, ಕಂಪ್ಯೂಟರ್ ಸೈನ್ಸ್
ಮಾ. 24- ಕನ್ನಡ , ತಮಿಳು, ಮಲಯಾಳ ಹಾಗೂ ಅರೇಬಿಕ್ (ಬೆಳಗ್ಗೆ ) ಫ್ರೆಂಚ್(ಮಧ್ಯಾಹ್ನ )
ಮಾ. 25- ಮರಾಠಿ, ಉರ್ದು, ಸಂಸ್ಕೃತ
ಮಾ. 26- ಇಂಗ್ಲಿಷ್
ಮಾ. 27- ಹಿಂದಿ, ತೆಲಗು
Click this button or press Ctrl+G to toggle between Kannada and English