ನವದೆಹಲಿ: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಮುಂದಿಟ್ಟುಕೊಂಡು ದೆಹಲಿಯಲ್ಲಿ ರಾಜಕೀಯ ಮಾಡಲು ಹೊರಟ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯೋಜನೆ ವಿಫಲವಾಗಿದೆ. ರಾಮಲೀಲಾ ಮೈದಾನದಲ್ಲಿ ಬುಧವಾರ ಆಯೋಜಿಸಲಾಗಿದ್ದ ರ್ಯಾಲಿಗೆ ಅಣ್ಣಾ ಕೈಕೊಟ್ಟಿದ್ದಾರೆ. ಬೆರಳೆಣಿಕೆ ಸಂಖ್ಯೆಯ ಜನರಿಗೆ ಮಮತಾ ಅವರೊಬ್ಬರೇ ಭಾಷಣ ಮಾಡಿ ಹೋಗಿದ್ದಾರೆ. ಅಣ್ಣಾ ಗೈರು ಹಾಜರಾಗಲು ಅನಾರೋಗ್ಯದ ಕಾರಣ ನೀಡಲಾಗುತ್ತಿದೆ. ಆದರೆ, ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ಬೆಂಬಲಿಗ, ಭೂ ಸೇನೆ ನಿವೃತ್ತ ಮುಖ್ಯಸ್ಥ ಜ. ವಿ.ಕೆ. ಸಿಂಗ್ ಪ್ರಭಾವವೇ ರ್ಯಾಲಿಯಿಂದ ಅಣ್ಣಾ ದೂರ ಉಳಿಯಲು ಕಾರಣ ಎನ್ನಲಾಗಿದೆ. ಈ ಮೊದಲು ಮಮತಾ ಅವರಿಗೆ ಬೆಂಬಲ ಸೂಚಿಸಿ ರ್ಯಾಲಿಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದ ಅಣ್ಣಾ ಮಹಾರಾಷ್ಟ್ರದಿಂದ ದೆಹಲಿಗೆ ಆಗಮಿಸಿದ್ದರು. ಆದರೆ, ಕೊನೇ ಕ್ಷಣದಲ್ಲಿ ರ್ಯಾಲಿಯಿಂದ ದೂರ ಉಳಿದಿದರು.
ರಾಮಲೀಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಭೆ ಕುರಿತು ಈಗ ತೃಣಮೂಲ ಕಾಂಗ್ರೆಸ್ ಮತ್ತು ಅಣ್ಣಾ ಬೆಂಬಲಿಗರ ನಡುವೆ ಆರೋಪ ಪ್ರತ್ಯಾರೋಪ ಆರಂಭವಾಗಿದೆ. ಅಣ್ಣಾ ಹಜಾರೆ ಗೈರಿಗೆ ಮಮತಾ ಬ್ಯಾನರ್ಜಿ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಮ್ ಲೀಲಾ ಮೈದಾನದ ರ್ಯಾಲಿಯನ್ನು ಆಯೋಜಿಸಿದ್ದು ಅಣ್ಣಾ ಹಜಾರೆ ಬೆಂಬಲಿಗರೇ ಹೊರತು ನಾವಲ್ಲ. ನಾನು ಎಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ರ್ಯಾಲಿಯಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆ. ಅವರು ಯಾವ ಕಾರಣಕ್ಕೆ ಗೈರು ಹಾಜರಾಗಿದ್ದಾರೆ ಎಂಬುದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ ಮಮತಾ. ಮಮತಾ ಬ್ಯಾನರ್ಜಿ ವಾದವನ್ನು ಅಣ್ಣಾ ಬೆಂಬಲಿಗರು ತಿರಸ್ಕರಿಸಿದ್ದಾರೆ. ರಾಮಲೀಲಾ ಮೈದಾನದಲ್ಲಿ ಆಯೋಜಿಸಿದ್ದು ನಮ್ಮದಲ್ಲ ತೃಣಮೂಲ ಕಾಂಗ್ರೆಸ್ ರ್ಯಾಲಿ ಎಂದಿದ್ದಾರೆ.
Click this button or press Ctrl+G to toggle between Kannada and English