ಮೋದಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿದ್ದು ಬಿಜೆಪಿಯಲ್ಲ, ಆರೆಸ್ಸೆಸ್: ಸಿದ್ದು

3:25 PM, Thursday, March 13th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Siddaramaiahಬೆಂಗಳೂರು: ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದ್ದು ಬಿಜೆಪಿಯಲ್ಲ. ಬದಲಾಗಿ ಆರೆಸ್ಸೆಸ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದೆ. ಮೋದಿ ಆರೆಸ್ಸೆಸ್ ಮನುಷ್ಯ. ಆರೆಸ್ಸೆಸ್ ಹೇಳಿದಂತೆ ಕೇಳುತ್ತಾರೆ ಹೊರತು ಬಿಜೆಪಿ ಹೇಳಿದಂತಲ್ಲ. ಬಿಜೆಪಿಯಲ್ಲಿ ಸಾಕಷ್ಟು ಹಿರಿಯ ನಾಯಕರಿದ್ದರು. ಲಾಲ್‌ಕೃಷ್ಣ ಆಡ್ವಾಣಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಅವರನ್ನೆಲ್ಲ ಬಿಟ್ಟು ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಮಾಡಲು ಆರೆಸ್ಸೆಸ್ಸೇ ಕಾರಣ.

ಚುನಾವಣೆ ಸಿದ್ಥತೆಯ ನಡುವೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳಿಗೆ ಸಾಮೂಹಿಕ ಸಂದರ್ಶನ ನೀಡಿದರು. ಸಂದರ್ಶನದುದ್ದಕ್ಕೂ ದ್ವಂದ್ವ ನೀತಿಯ ಮಾತುಗಳಿಗೆ ಮೊರೆಹೋಗಿದ್ದು ವಿಶೇಷವಾಗಿತ್ತು. ಅತ್ತ ಕಾಂಗ್ರೆಸ್ಸನ್ನು ಸಮರ್ಥಿಸಿಕೊಳ್ಳಲಾರದೆ, ಇತ್ತ ಬಿಟ್ಟುಕೊಡಲೂ ಆಗದೇ ಚಡಪಡಿಸಿದರು. ಅದಕ್ಕಾಗಿಯೇ ಅವರು ಬಿಜೆಪಿಗಿಂತ ಮುಖ್ಯವಾಗಿ ಆರೆಸ್ಸೆಸ್ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಅತ್ಯಂತ ಕಠಿಣ ಶಬ್ದಗಳಿಂದ ಟೀಕಿಸಿದರು.

ಒಂದು ಹಂತದಲ್ಲಿ ದಕ್ಷಿಣ ಕನ್ನಡದಲ್ಲಿ ಆರೆಸ್ಸೆಸ್ ಗೂಂಡಾಗಿರಿ ಮಾಡುತ್ತಿದೆ ಎಂದು ಆರೋಪಿಸಿದರೆ, ದೇವೇಗೌಡರಿಗಿಂತ ದೊಡ್ಡ ಜಾತಿವಾದಿ ಬೇರೆ ಯಾರೂ ಇಲ್ಲ ಎಂದು ಟೀಕಿಸಿದರು.

ಸಂದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದ್ದರ ಕ್ರೋಡೀಕೃತ ವಿವರವಿಷ್ಟು…

ಮೋದಿ ಹಿಂದುಳಿದ ವರ್ಗದವರು ನಿಜ. ಆದರೆ ಅವರು ಆ ಸಿದ್ಧಾಂತ ಬೆಳೆಸಿಕೊಂಡವರಲ್ಲ. ಅವರು ಆರೆಸ್ಸೆಸ್ ಜತೆಗೇ ಬೆಳೆದು, ಅದೇ ಸಿದ್ಧಾಂತ ರೂಢಿಸಿಕೊಂಡವರು. ಅವರು ಆರೆಸ್ಸೆಸ್ ಸಿದ್ಧಾಂತವನ್ನು ದೇಶದಲ್ಲಿ ಜಾರಿ ಮಾಡಲು ಹೊರಟಿದ್ದಾರೆ. ಇಲ್ಲವಾದಲ್ಲಿ ಅಷ್ಟೆಲ್ಲ ಹಿರಿಯರ ನಾಯಕರನ್ನು ಬಿಟ್ಟು ಮೋದಿಯವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುತ್ತಿರಲಿಲ್ಲ.

ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಖಚಿತ ಅಭಿಪ್ರಾಯ. ಆದರೆ ಹಿರಿಯ ನಾಯಕರಿದ್ದೂ ರಾಹುಲ್ ಗಾಂಧಿಯನ್ನು ಪ್ರಧಾನಿಯಾಗಿ ಮಾಡಿದಲ್ಲಿ ‘ಹಿರಿಯ ನಾಯಕರಿದ್ದರು’ ಎಂಬ ವಾದ ಅನ್ವಯವಾಗುವುದಿಲ್ಲವೇ ಎಂಬ ಪ್ರಶ್ನೆಗೆ, ‘ಹಾಗಾದಲ್ಲಿ ಅದು ಎಲ್ಲ ಸಂಸದರ ಆಯ್ಕೆಯಾಗಿರುತ್ತದೆ’ ಎಂದು ಜಾರಿಕೊಂಡರು.

ಮೋದಿಯ ಗುಜರಾತ್ ಮಾದರಿ ದೇಶಕ್ಕೆ ಸೂಕ್ತವಾದುದಲ್ಲ. ಗುಜರಾತ್ ಮಾದರಿಯ ಅಭಿವೃದ್ಧಿ ಎಂಬುದು ಸರಿಯಾದ ಅಂಕಿ- ಅಂಶಗಳ ಮೇಲೆ ನಿಂತಿಲ್ಲ. ಜನರ ಕಣ್ಣು ಕಟ್ಟಲು ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗುಜರಾತ್ ಕರ್ನಾಟಕಕ್ಕಿಂತ ಹಿಂದಿದೆ.

ಯಡ್ಡಿ ಕಳಂಕಿತರು, ಡಿಕೆಶಿ ಅಲ್ಲ: ಮೋದಿ ರಾಜ್ಯಕ್ಕೆ ಬಂದಾಗ ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡುರನ್ನು ಪಕ್ಕದಲ್ಲಿ ಕೂರಿಸಿಕೊಂಡು ಮಾತನಾಡಿದರು.

ಅವರಿಬ್ಬರನ್ನು ಪಕ್ಕದಲ್ಲಿರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ. ಭ್ರಷ್ಟಾಚಾರ ಆರೋಪದಲ್ಲಿ ಜೈಲಿಗೆ ಹೋದವರ ಜತೆ ವೇದಿಕೆ ಹಂಚಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುವವರನ್ನು ಜನ ನಂಬುವುದಿಲ್ಸ. ಡಿ.ಕೆ. ಶಿವಕುಮಾರ್ ಮತ್ತು ರೋಶನ್ ಬೇಗ್ ಮೇಲೆ ಪ್ರಕರಣ ಇತ್ತು. ಡಿ.ಕೆ. ಶಿವಕುಮಾರ್ ಅವರ ಮೇಲಿನ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ಕೊಟ್ಟಿದೆ. ಅಲ್ಲದೇ ಯಾವುದೇ ಪ್ರಕರಣದಲ್ಲಿ ಜಾರ್ಜ್‌ಶೀಟ್ ಕೂಡ ಆಗಿಲ್ಲ. ಹೀಗಿರುವಾಗ ಅವರನ್ನು ಅಪರಾಧಿ ಎನ್ನಲಾಗದು. ಇದೇ ಮಾತು ಯಡಿಯೂರಪ್ಪ ಅವರಿಗೂ ಅನ್ವಯವಾಗುವುದಿಲ್ಲವೇ? ಅವರ ಪ್ರಕರಣಗಳನ್ನು ಹೈಕೋರ್ಟ್ ರದ್ದುಪಡಿಸಿದೆಯಲ್ಲಾ? ಎಂಬುದಕ್ಕೆ… ರೆಡ್ಡಿ ಜೈಲಿನಲ್ಲಿಲ್ವಾ? ಇವರೂ ಜೈಲಿಗೆ ಹೋಗಿರ್ಲಿಲ್ವಾ? ಸುಮ್ನೆ ಜೈಲಿಗೆ ಹಾಕ್ತಾರಾ? ಎಂದರು.

ಗೋಡ್ಸೆ ಆರೆಸ್ಸೆಸ್: ಗಾಂಧಿ ಹತ್ಯೆಯ ಹಿಂದೆ ಆರೆಸ್ಸೆಸ್ ಕೈವಾಡ ಇದೆ ರಾಹುಲ್ ಗಾಂಧಿ ಹೇಳಿದ್ದರಲ್ಲಿ ತಪ್ಪೇನಿದೆ? ಗೋಡ್ಸೆ ಆರೆಸ್ಸೆಸ್‌ನವನೇ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು. ಆದರೆ ಗಾಂಧಿ ಹತ್ಯೆ ತನಿಖೆಗೆ ನೇಮಕಗೊಂಡ ಯಾವುದೇ ಆಯೋಗ, ನ್ಯಾಯಾಲಯ ಅದನ್ನು ಒಪ್ಪಿಕೊಂಡಿಲ್ಲ. ಆದರೂ ಹಾಗೆ ಹೇಳುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಗೋಡ್ಸೆ ಆರೆಸ್ಸೆಸ್‌ನವನೇ. ಎಲ್ಲೂ ಅದು ಸಾಬೀತಾಗದೇ ಇರಬಹುದು. ಆದರೆ ದೇಶದ ಜನಕ್ಕೆಲ್ಲ ಗೊತ್ತು.

ಪ್ರಜಾಪ್ರಭುತ್ವವಿದ್ದೂ ಹೈಕಮಾಂಡ್ ತೀರ್ಮಾನ: ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಅವರನ್ನು ಆಯ್ಕೆಯಾಗುವ ಸಂಸದರ ಮೇಲೆ ಹೇರಲಾಗಿದೆ. ಆದರೆ ಕಾಂಗ್ರೆಸ್‌ನಲ್ಲಿ ಆಯ್ಕೆಯಾದ ಸಂಸದರು ಪ್ರಧಾನಿ ಯಾರು ಆಗಬೇಕೆಂದು ನಿರ್ಧರಿಸುತ್ತಾರೆ ಎಂದರು. ಹಾಗಾದರೆ ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಮಾಡ್ತೀರಾ ಅಥವಾ ಸಂಪುಟಕ್ಕೆ ಸೇರಿಸ್ತೀರಾ ಎಂಬ ಪ್ರಶ್ನೆಗೆ, ಹೈಕಮಾಂಡ್ ನಿರ್ಧರಿಸುತ್ತದೆ ಎಂದಷ್ಟೇ ಹೇಳಿದರು.

ಗೌಡರಷ್ಟು ಜಾತಿವಾದಿ ಬೇರಿಲ್ಲ: ದೇವೇಗೌಡರಿಗಿಂತ ದೊಡ್ಡ ಜಾತಿವಾದಿ ಯಾರೂ ಇಲ್ಲ. ಇದನ್ನು ನಾನು ಹೇಳಬೇಕೆಂದಿಲ್ಲ. ಜನರಿಗೇ ಗೊತ್ತಿದೆ. ನಾನು ಜಾತಿಪರ ಯೋಜನೆ, ಸಮಾವೇಷಗಳ ಮೂಲಕ ಸಮಾಜ ಒಡೆಯುತ್ತಿದ್ದೇನೆ ಎಂದು ಆರೋಪ ಮಾಡುವ ಅವರು, ಜಾತಿ ಸಮಾವೇಷಗಳನ್ನು ಮಾಡಿಲ್ಲವೇ? ಯಾದವರು ಒಬ್ಬರೂ ಶಾಸಕರಿಲ್ಲ. ಪ್ರಾತಿನಿಧ್ಯ ಕೊಡಿಸಿ ಎಂದು ಅವರು ಕೇಳುವುದು ತಪ್ಪಾ? ಹೆಚ್ಚು ಅನುದಾನ ಮತ್ತು ಪ್ರಾತಿನಿಧ್ಯ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಅದನ್ನು ಜಾತಿವಾದ ಎಂದು ಕರೆಯುವುದು ಸರಿಯಲ್ಲ. ದೇವೇಗೌಡರ ವಿರುದ್ಧ ಅಭ್ಯರ್ಥಿ ನಿಲ್ಲಿಸಬಾರದು ಎಂಬುದು ಜಾಫರ್ ಷರೀಫ್ ಅವರ ವೈಯಕ್ತಿಕ ಅಭಿಪ್ರಾಯ. ಪಕ್ಷ ಈಗಾಗಲೇ ಹಾಸನ ಅಭ್ಯರ್ಥಿಯನ್ನು ಘೋಷಿಸಿದೆ. ಪಕ್ಷ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ಇನ್ನು ಆಂಧ್ರದಲ್ಲಿ ಪಿ.ವಿ. ನರಸಿಂಹ ರಾವ್ ಅವರು ಪ್ರಧಾನಿ ಆದ ನಂತರ ಚುನಾವಣೆಗೆ ಸ್ಪರ್ಧಿಸಿದಾಗ ಅವರ ವಿರುದ್ಧ ಯಾವುದೇ ಅಭ್ಯರ್ಥಿ ಕಣಕ್ಕಿಳಿಸದಿರಲು ತೀರ್ಮಾನಿಸಲಾಗಿತ್ತು. ಆದರೆ ದೇವೇಗೌಡರು ಮಾಜಿ ಪ್ರಧಾನಿ. ಹೀಗಾಗಿ ಅವರ ವಿರುದ್ಧ ಅಭ್ಯರ್ಥಿ ನಿಲ್ಲಿಸದಿರುವ ಅಗತ್ಯವೂ ಇಲ್ಲ ಎಂದರು.

ಫಲಿತಾಂಶ ಆಡಳಿತದ ಮೌಲ್ಯಮಾಪನವಲ್ಲ

ಲೋಕಸಭೆ ಚುನಾವಣೆಯಲ್ಲಿ ನಾವು 18- 20 ಕ್ಷೇತ್ರಗಳಲ್ಲಿ ಗೆಲವು ಸಾಧಿಸುತ್ತೇವೆ. ಆದರೂ ಇದನ್ನು ರಾಜ್ಯ ಸರ್ಕಾರದ ಆಡಳಿತ ಬಗ್ಗೆ ಜನರ ತೀರ್ಪು ಎಂದು ಪರಿಗಣಿಸಲಾಗದು. ಸರ್ಕಾರ ಅಸ್ತಿತ್ವಕ್ಕೆ ಬಂದು 9 ತಿಂಗಳು ಮಾತ್ರವಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಸರ್ಕಾರವನ್ನು ಅಳೆಯಲು ಸಾಧ್ಯವಿಲ್ಲ. ಬಿಜೆಪಿ ಆಡಳಿತದ ಬಗ್ಗೆ ಜನರಲ್ಲಿ ಬೇಸರವಿದೆ. 6 ತಿಂಗಳ ಹಿಂದಷ್ಟೇ ನಡೆದ 2 ಉಪಚುನಾವಣೆಗಳಲ್ಲಿ ನಾವು ಗೆದ್ದಿದ್ದೇವೆ. ಇಷ್ಟು ಬೇಗ ಜನಾಭಿಪ್ರಾಯ ಬದಲಾಗಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಮತ್ತು ರಾಜ್ಯ ಸರ್ಕಾರದ ಉತ್ತಮ ಆಡಳಿತವನ್ನು ಮುಂದಿಟ್ಟುಕೊಂಡೇ ಚುನಾವಣೆ ಎದುರಿಸುತ್ತೇವೆ.

ಮೋದಿ ಹಿಂದುಳಿದ ವರ್ಗದವರು ನಿಜ. ಆದರೆ ಅವರು ಇಂಥ ಸಿದ್ಧಾಂತವನ್ನೇ ಬೆಳೆಸಿಕೊಂಡಿಲ್ಲ. ಅವರು ಆರ್‌ಎಸ್‌ಎಸ್ ಜೊತೆಗೇ ಬೆಳೆದು, ಅದೇ ಸಿದ್ಧಾಂತ

ಮೈಗೂಡಿಸಿಕೊಂಡಿದ್ದಾರೆ. ದೇವೇಗೌಡರ ವಿಚಾರಕ್ಕೆ ಬಂದರೆ ಇವರಷ್ಟು ಜಾತಿವಾದಿ ಬೇರೊಬ್ಬರಿಲ್ಲ. ಇದನ್ನು ನಾನು ಹೇಳಬೇಕಾಗಿಲ್ಲ, ಇದೆಲ್ಲ ಜನರಿಗೆ ಗೊತ್ತಿದೆ. ನಾನು ಜಾತಿ ಪರ ಸಮಾವೇಶ ನಡೆಸುತ್ತಿದ್ದೇನೆ ಎನ್ನುತ್ತಿದ್ದಾರೆ. ಅವರು ಮಾಡಲಿಲ್ಲವೇ?

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English