ಗೂಂಡಾಗಿರಿ ತಡೆಗಟ್ಟಲಾಗದ ಮೊದಿನ್ ಬಾವಾ ರಾಜೀನಾಮೆ ನೀಡಲಿ – ಮುನೀರ್ ಕಾಟಿಪಳ್ಳ

7:05 PM, Wednesday, April 2nd, 2014
Share
1 Star2 Stars3 Stars4 Stars5 Stars
(No Ratings Yet)
Loading...
Muneer Katipalla

ಮಂಗಳೂರು : ಕಾಂಗ್ರೆಸ್ ಪಕ್ಷದ ಮನಪಾ ಸದಸ್ಯೆ ಪ್ರತಿಭಾ ಕುಳಾಯಿ ಅವರಿಗೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೋಡಿಕೆರೆ ಪ್ರದೇಶದ ಬಿಜೆಪಿ ಬೆಂಬಲಿಗರು ಕಿರುಕುಳ ನೀಡಿ ದೌರ್ಜನ್ಯ ಎಸಗಿರುವುದನ್ನು DYFI ತೀವ್ರವಾಗಿ ಖಂಡಿಸುತ್ತದೆ. ಅದೇ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಖಾತರಿಪಡಿಸುವ ಜವಾಬ್ದಾರಿ ಹೊಂದಿರುವ ಸ್ಥಳೀಯ ಕಾಂಗ್ರೆಸ್ ಶಾಸಕ ಮೊದಿನ್ ಬಾವ ತಾವು ದೂರು ನೀಡಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ, ಮಾಜಿ ಶಾಸಕರ ಬೆಂಬಲದಿಂದ ಕೋಡಿಕೆರೆಯಲ್ಲಿ ಗೂಂಡಾಗಿರಿ ನಡೆಯುತ್ತಿದೆ ಎಂದು ಗೋಳು ತೋಡಿಕೊಂಡಿರುವುದು ಹಾಸ್ಯಾಸ್ಪದ ಎಂದು DYFIಮುಖಂಡ ಮುನೀರ್ ಕಾಟಿಪಳ್ಳ ಹೇಳಿದ್ದಾರೆ, ತನ್ನದೇ ಪಕ್ಷದ ಮಹಿಳಾ ಪ್ರತಿನಿಧಿಯ ಮೆಲೆ ದಾಳಿ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗದ, ಪೊಲೀಸ್ ಇಲಾಖೆಯ ಮೇಲೆ ನಿಯಂತ್ರಣವಿಲ್ಲದ ಮೊದಿನ್ ಬಾವಾ ಅಸಹಾಯಕತೆ ತೋಡಿಕೊಳ್ಳುವ ಬದಲು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲಿ ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ಅಪಾರ ನಿರೀಕ್ಷೆಗಳಿಂದ ಮತ ನೀಡಿ ಮೊದಿನ್ ಬಾವಾ ಅವರನ್ನು ಗೆಲ್ಲಿಸಿದ ಸುರತ್ಕಲ್ ಪ್ರದೇಶದ ಜನಸಾಮಾನ್ಯರಿಗೆ ಈಗ ತೀವ್ರ ನಿರಾಶೆಯಾಗಿದೆ. ಮೊದಿನ್ ಬಾವ ಅವರ ನಿವಾಸದ ಒಂದೆರಡು ಕಿಲೋ ಮೀಟರ್ ಅಂತರದಲ್ಲೇ ಹಲವು ಜೂಜಾಟದ ಅಕ್ರಮ ಕ್ಲಬ್ಗಳು ತಲೆ ಎತ್ತಿವೆ. ಪೆಟ್ರೋಲ್ ಕಲಬೆರಕೆ ದಂಧೆ, ಎಮ್ಆರ್ಪಿಎಲ್ ನಿಂದ ಸಾಗಾಟವಾಗುವ ಡಾಮರು ಕಳವು ದಂಧೆ, ಕಬ್ಬಿಣ ಕಳವು ದಂಧೆಗಳು ಈ ಭಾಗದಲ್ಲಿ ಹಿಂದಿನ ಅವಧಿಗಿಂತಲೂ ಹಲವು ಪಟ್ಟು ಜಾಸ್ತಿಯಾಗಿದೆ. ಶಾಸಕರ ಕುಮ್ಮಕ್ಕು ಇದೆಲ್ಲಕ್ಕೂ ಇದೆ ಎಂಬುದು ಜನಜನಿತ ವಿಷಯ. ಸುರತ್ಕಲ್ ಠಾಣಾ ವ್ಯಾಪ್ತಿಯ ಅಕ್ರಮ ದಂಧೆಯ ಹಿನ್ನಲೆಯಲ್ಲಿ ಹುಟ್ಟಿಕೊಂಡಿರುವ ಕ್ರಿಮಿನಲ್ಗಳ ಗೂಂಡಾಗಿರಿ ಮಿತಿ ಮೀರಿದ್ದರೂ, ನಿಭಾಯಿಸಲಾಗದ ಸುರತ್ಕಲ್ ಠಾಣಾಧಿಕಾರಿಯನ್ನು ಪ್ರತಿಭಟನೆಗಳ ಮಧ್ಯೆಯೂ ಉಳಿಸಿಕೊಂಡಿರುವುದು ಶಾಸಕರ ಸಾಧನೆ. ಕ್ರಿಮಿನಲ್ಗಳಿಗೆ, ಗೂಂಡಾಗಳಿಗೆ ಈ ರೀತಿಯ ಹುಲುಸಾದ ವಾತಾವರಣವನ್ನು ನಿರ್ಮಿಸಿ ಕೊಟ್ಟು ಈಗ ಪರಿಸ್ಥಿತಿ ಕೈ ಮೀರಿದಾಗ ಸಾರ್ವಜನಿಕವಾಗಿ ಅಲವತ್ತು ಕೊಳ್ಳುವುದು ಜನತೆ ಇಟ್ಟಿರುವ ವಿಶ್ವಾಸಕ್ಕೆ ಮಾಡುತ್ತಿರುವ ದ್ರೋಹ ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಒಂದು ವೇಳೆ ಶಾಸಕರ ಕಣ್ಣೀರು ನಿಜವೇ ಆಗಿದ್ದರೆ, ಪ್ರತಿಭಾ ಅವರ ಮೇಲೆ ನಡೆದಿರುವ ಹಿಂಸೆಯ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳದ ಅವರದೇ ಸರಕಾರದ ನೀತಿಯನ್ನು ಪ್ರತಿಭಟಿಸಿ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English