ಉಪ್ಪಿನಂಗಡಿ : ಶನಿವಾರ ರಾತ್ರಿ ಕಳೆಂಜ ಗ್ರಾಮದ ಶಾಲೆತಡ್ಕ ನಿವಾಸಿ ಅಣ್ಣಯ್ಯ ಗೌಡ (48) ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಜಿಲ್ಲಾ ಅಪರಾಧಿ ಪತ್ತೆ ದಳ ಪೊಲೀಸರು, ಮೃತನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.
ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿರುವ ರುದ್ರೇಶ್ (29) ಹಾಗು ಕೊಲೆಗೀಡಾದ ಅಣ್ಣಯ್ಯ ಗೌಡರ ಪತ್ನಿ ಅಮಿತಾ (38) ಬಂಧಿತ ಆರೋಪಿಗಳು.
ಅಣ್ಣಯ್ಯ ಗೌಡರ ಮನೆಗೆ ಶನಿವಾರ ರಾತ್ರಿ ಬಂದಿದ್ದ ರುದ್ರೇಶ್ ತನ್ನ ಕಾಮದಾಟಕ್ಕೆ ತಡೆಯಾಗಿದ್ದ ಗೌಡರನ್ನು ಕಬ್ಬಿಣದ ಸಲಾಕೆಯಿಂದ ತಲೆಗೆ ಬಲವಾಗಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪುವಂತೆ ಮಾಡಿದ್ದಾನೆ. ಪ್ರಕರಣದ ಹಾದಿ ತಪ್ಪಿಸುವ ಸಲುವಾಗಿ ಮೂವರು ಮುಸುಕುಧಾರಿ ಹಂತಕರು ಜೀಪಿನಲ್ಲಿ ಮನೆಗೆ ಬಂದು ತನ್ನ ಗಂಡನ ತಲೆಗೆ ಕಡಿದು ಕೊಲೆಗೈದಿದ್ದಾರೆಂಬ ದೂರನ್ನು ತನ್ನ ಪ್ರಿಯತಮೆಯಲ್ಲಿ ನೀಡಿಸಿದ್ದ. ಮಾತ್ರವಲ್ಲದೆ ಈ ಕಟ್ಟುಕತೆಯನ್ನು ತನ್ನ ನಾಲ್ಕರ ಹರೆಯದ ಮಗನಲ್ಲೂ ಪೊಲೀಸರಿಗೆ ಹೇಳುವಂತೆ ತಿಳಿಸಲಾಗಿತ್ತು.
ಸ್ಥಳೀಯರು ಇದರಲ್ಲಿ ಮೃತ ವ್ಯಕ್ತಿಯ ಪತ್ನಿಯ ಕೈವಾಡವನ್ನು ಶಂಕಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ತೀವ್ರ ವಿಚಾರಣೆಯ ಬಳಿಕ ಆರೋಪಿಗಳಿಬ್ಬರು ಸತ್ಯ ಬಾಯಿಬಿಟ್ಟಿದ್ದಾರೆ.
ಅನಾರೋಗ್ಯಕ್ಕೀಡಾದ ಪತಿಯಿಂದ ದೈಹಿಕ ಸುಖ ದೊರೆಯದೇ ಇದ್ದಾಗ ತನ್ನ ಪ್ರಿಯಕರ, ಉಪ್ಪಿನಂಗಡಿ ಉಪ ವಲಯ ಅರಣ್ಯಾಧಿಕಾರಿಯಾಗಿದ್ದ ರುದ್ರೇಶ ಆಗಾಗ ಮನೆ ಬಂದು ಹೋಗುತ್ತಿದ್ದ. ಈ ವಿಚಾರದಲ್ಲಿ ಪತಿ ಅಣ್ಣಯ್ಯ ಗೌಡರಿಂದ ಆಕ್ಷೇಪವಿತ್ತೆನ್ನಲಾಗಿದೆ.
ಈ ಮಧ್ಯೆ ತನ್ನೊಂದಿಗೆ ಮನೆ ಬಿಟ್ಟು ಬಾ ಎಂಬ ರುದ್ರೇಶನ ಬೇಡಿಕೆಯನ್ನು ಮೂವರು ಮಕ್ಕಳ ಹಿತದೃಷ್ಟಿಯಿಂದ ನಿರಾಕರಿಸಿದ ಅಮಿತಾ, ಪ್ರಿಯಕರನ ಬಂದು ಹೋಗುವಿಕೆಗೆ ತನ್ನ ಗಂಡನ ಒಪ್ಪಿಗೆ ಪಡೆದುಕೊಂಡಿದ್ದಳೆನ್ನಲಾಗಿದೆ.
ಶನಿವಾರವೂ ಮಧ್ಯಾಹ್ನದ ವೇಳೆ ಈಕೆಯ ಮನೆಗೆ ಬಂದಿದ್ದ ರುದ್ರೇಶನಿಗೆ ಪ್ರಿಯತಮೆ ಮನೆಯಲ್ಲಿ ಸಿಕ್ಕಿರಲಿಲ್ಲ. ಆಕೆ ಪಡುಬೆಟ್ಟುವಿನ ತನ್ನ ಸಂಬಂಧಿಕರ ಮನೆಗೆ ಹೋಗಿದ್ದ ವಿಚಾರ ಆಕೆಯ ಗಂಡನಿಂದ ತಿಳಿದು, ಆಕೆಗೆ ಫೋನಾಯಿಸಿ ಮನೆಗೆ ಬರುವಂತೆ ಸೂಚಿಸಿದ್ದಾನೆ. ಇವತ್ತು ಬರುವುದಿಲ್ಲ ಎಂದು ಆಕೆ ತಿಳಿಸಿದ್ದರೂ ಪದೇ ಪದೇ ಫೋನಾಯಿಸಿ ಬರುವಂತೆ ಒತ್ತಾಯಿಸಿದ್ದಾನೆ.
ರಾತ್ರಿ ಮನೆಗೆ ನುಗ್ಗಿದ: ಇತ್ತ ಮನೆಗೆ ಬಂದ ಆಕೆಗೆ ಪೋನಾಯಿಸಿದಾಗ ಮೊಬೈಲ್ ಸಂಪರ್ಕ ಲಭಿಸದೇ ಇರುವುದನ್ನು ಮನಗಂಡು ಆಕೆ ಮನೆಯಲ್ಲಿಯೇ ಇರುವುದನ್ನು ಖಚಿತ ಪಡಿಸಿ ರಾತ್ರಿ ಮನೆಗೆ ಬಂದಿದ್ದಾನೆ.
ಮನೆಯಲ್ಲಿ ಮಲಗಿದ್ದ ಅಮಿತಾಳ ಸೂಚನೆಯಂತೆ ಮನೆಯ ಹಂಚು ತೆಗೆದು ಒಳಕ್ಕೆ ಬಾ ಎಂಬ ಸಲಹೆಯಂತೆ ಮನೆಯ ಹಂಚು ತೆಗೆಯಲು ಹೋಗಿ ಶಬ್ದವಾಗಿ ಅಣ್ಣಯ್ಯ ಗೌಡ ಎಚ್ಚೆತ್ತು ಕತ್ತಿಯೊಂದಿಗೆ ಎದ್ದು ಹೊರ ಬಂದಿದ್ದಾರೆ. ಮಾಡಿನಿಂದ ಇಳಿದ ರುದ್ರೇಶ ಮನೆ ಬಾಗಿಲು ಬಡಿದು ಒಳ ಬಂದಾಗ ಅಣ್ಣಯ ಗೌಡರು ಪರಿಚಯಸ್ಥ ರುದೇಶನನ್ನು ಕಂಡು ಕೈಯಲ್ಲಿದ್ದ ಕತ್ತಿ ಕೆಳಕ್ಕೆ ಹಾಕಿದ್ದಾರೆ. ಆದರೆ ಆ ವೇಳೆ ಮದ್ಯ ಸೇವಿಸಿದ್ದ ರುದ್ರೇಶನಿಗೆ ಅಣ್ಣಯ್ಯ ಗೌಡರು ತನಗೆ ಅಪಾಯ ಉಂಟು ಮಾಡುತ್ತಾರೆಂಬ ಭೀತಿ ನಿವಾರಣೆಯಾಗದೇ ಅಲ್ಲೇ ಇದ್ದ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಕೊಂದಿದ್ದಾನೆ.
ಅಮಿತಾಳ ಮೂರನೇ ಮಗ ನಾಲ್ಕರ ಹರೆಯದ ಅನುಷ್ ತಾಯಿಯೊಂದಿಗೆ ಪೊಲೀಸ್ ಠಾಣೆಯಲ್ಲೇ ದಿನ ಕಳೆಯಬೇಕಾಗಿ ಬಂದಿದ್ದು, ಸಂಬಂಧಿಕರು ಬಾಲಕನನ್ನು ಸ್ವೀಕರಿಸಲು ಮುಂದೆ ಬಾರದಿದ್ದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಾಲಕನನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾಗಲಿದೆ.
ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಅಧಿಕಾರಿಗಳು, ಜಿಲ್ಲಾ ಅಪರಾಧ ಪತ್ತೆದಳದ ಸಂಜೀವ ಪುರುಷ, ತಾರಾನಾಥ , ಪಳನಿವೇಲು, ಮನೋಹರ್, ವನಜ, ರೇಖಾ, ಸುಮಾ ಮೊದಲಾದವರು ಭಾಗವಹಿಸಿದ್ದರು.
Click this button or press Ctrl+G to toggle between Kannada and English