ನ್ಯಾಯಬೆಲೆ ಅಂಗಡಿಗಳ ತಪಾಸಣೆಗೆ ಡಿಸಿ ಸೂಚನೆ

6:30 PM, Wednesday, April 30th, 2014
Share
1 Star2 Stars3 Stars4 Stars5 Stars
(4 rating, 7 votes)
Loading...
Ibrahim

ಮಂಗಳೂರು : ಜಿಲ್ಲೆಯಲ್ಲಿರುವ ನ್ಯಾಯಬೆಲೆ ಅಂಗಡಿಗಳ ತಪಾಸಣೆಯನ್ನು ಆಹಾರ ಇಲಾಖೆಯು ಆಗಿಂದಾಗ್ಗೆ ನಿಗದಿತವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ.

ಅವರು ಬುಧವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಆಹಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು. ನ್ಯಾಯಬೆಲೆ ಅಂಗಡಿಗಳ ತಪಾಸಣೆ ಕುಂಠಿತಗೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ನ್ಯಾಯಬೆಲೆ ಅಂಗಡಿಗಳ ತೂಕದ ತಕ್ಕಡಿಗಳು ಸಮರ್ಪಕವಾಗಿ ಕಾರ್ಯವಾಗುತ್ತಿರುವುದನ್ನು ತೂಕ ಮತ್ತು ಅಳತೆ ಇಲಾಖೆಯು ನೀಡಿರುವ ಪ್ರಮಾಣಪತ್ರಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಜಿಲ್ಲೆಯಲ್ಲಿ 500 ನ್ಯಾಯಬೆಲೆ ಅಂಗಡಿಗಳು ಅಸ್ತಿತ್ವದಲ್ಲಿದೆ. ನೂತನ ನ್ಯಾಯಬೆಲೆ ಅಂಗಡಿ ತೆರೆಯಲು ವೈಯಕ್ತಿಕವಾಗಿ ಅವಕಾಶವಿಲ್ಲ. ಆದರೆ ಗ್ರಾಮಪಂಚಾಯತ್ಗಳೇ ನೇರವಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಮುಂದೆ ಬಂದರೆ ಅವರಿಗೆ ಅವಕಾಶ ನೀಡಲು ಇಲಾಖೆ ಸಿದ್ಧವಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ 391596 ಪಡಿತರ ಚೀಟಿಗಳಿವೆ. ಈ ಪೈಕಿ ಅಂತ್ಯೋದಯ-21446, ಬಿಪಿಎಲ್-183546 ಹಾಗೂ ಎಪಿಎಲ್-186604 ಪಡಿತರ ಚೀಟಿಗಳಾಗಿವೆ. ಜಿಲ್ಲೆಯಲ್ಲಿ ಪ್ರತೀ ಕುಟುಂಬಕ್ಕೂ ಪಡಿತರ ಕಾರ್ಡ್ ಸಿಗುವ ನಿಟ್ಟಿನಲ್ಲಿ ವಿಳಂಭವಿಲ್ಲದೆ ಪಡಿತರ ಚೀಟಿಗಳನ್ನು ನೀಡಬೇಕಾಗಿದೆ. ಜಿಲ್ಲೆಯಲ್ಲಿ ನೂತನ ಬಿಪಿಎಲ್ ಪಡಿತರ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಿದ ಪೈಕಿ 25210 ಅರ್ಜಿಗಳು ಪರಿಶೀಲನೆಗೆ ಬಾಕಿ ಇದ್ದು, ಇವುಗಳನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ಇಬ್ರಾಹಿಂ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಆಹಾರ ಇಲಾಖೆ ಉಪನಿರ್ದೇಶಕ ಶರಣಬಸಪ್ಪ, ಆಹಾರ ಇಲಾಖೆಯ ಅಧಿಕಾರಿಗಳು, ಶಿರಸ್ತೇದಾರರು ಮತ್ತು ನಿರೀಕ್ಷಕರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English