ಜನಸ್ಪಂದನೆಯ ರೈಲ್ವೇ ಬಜೆಟ್ – ಜಿಲ್ಲಾ ಬಿಜೆಪಿ ಸ್ವಾಗತ

7:59 PM, Tuesday, July 8th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Railway budget

ಮಂಗಳೂರು : ದೇಶದ ರೈಲ್ವೇ ಪ್ರಗತಿಗೆ ಪೂರಕವಾಗಿ ಪ್ರಯಾಣಿಕರ ಸೌಲಭ್ಯ- ಸುರಕ್ಷತೆಗಳಿಗೆ ವಿಶೇಷ ಒತ್ತು ನೀಡಿ, ಕರ್ನಾಟಕದ ಜನತೆಯ ಹಿತವನ್ನೂ ಕಾಪಾಡುವುದರ ಜೊತೆಗೆ, ಜಿಲ್ಲೆಯ ಜನತೆಯ ರೈಲ್ವೇ ಬೇಡಿಕೆಗಳಿಗೆ ಸ್ಪಂದನೆಯನ್ನು ನೀಡಿರುವ ಕೇಂದ್ರ ರೈಲ್ವೇ ಬಜೆಟ ನ್ನು ಬಿಜೆಪಿ ದ.ಕ ಜಿಲ್ಲಾ ಸಮಿತಿ ಸಂಭ್ರಮದಿಂದ ಸ್ವಾಗತಿಸಿದೆ.

ಭಾರತೀಯ ರೈಲನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಪೂರಕವಾಗಿ ಮುಂಬೈ ಅಹಮದಬಾದ್ಗೆ ದೇಶದ ಪ್ರಪ್ರಥಮ ಬುಲೆಟ್ ಟ್ರೈನನ್ನು ಘೋಷಿಸುವುದರ ಜತೆಗೆ, ಕರ್ನಾಟಕವೂ ಸೇರಿದಂತೆ ದೇಶದಲ್ಲಿ 9 ಹೈಸ್ಪೀಡ್ ರೈಲು ಮತ್ತು 4 ಸೆಮಿ ಹೈಸ್ಪೀಡ್ ರೈಲುಗಳನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ. 67 ಎಕ್ಸ್ಪ್ರೆಸ್ 27 ಪ್ಯಾಸೆಂಜರ್ ರೈಲುಗಳ ಜತೆಗೆ ಹೊಸ ರೈಲು ಮಾರ್ಗಗಳು ಸೇರಿದಂತೆ 1,57,888 ಕೋಟಿ ರೂ. ವೆಚ್ಚದ ಬಜೆಟ್ ದೇಶದ ಜನತೆಗೆ ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ವಿಶ್ವದಲ್ಲಿಯೇ ಬೃಹತ್ ಸರಕು ಸಾಗಣೆಗೆ ವ್ಯವಸ್ಥೆಯ ಗುರಿ ಹೊಂದಿರುವ ರೈಲ್ವೇ ಬಜೆಟ್ನಲ್ಲಿ ಪ್ರಯಾಣಿಕರ ಸೌಲಭ್ಯಗಳಿಗೆ, ಸುರಕ್ಷತೆಗೆ ಮತ್ತು ಸ್ವಚ್ಛತೆಗೆ ವಿಶೇಷ ಗಮನವನ್ನು ನೀಡಲಾಗಿದೆ. ಪ್ರಯಾಣಿಕರ ಸುರಕ್ಷತೆಯ ಬಗ್ಗೆ 14,000 ಕೋಟಿ ರೂಪಾಯಿ ಮೀಸಲಾಗಿರಿಸಲಾಗಿದ್ದು, ರೈಲ್ವೇ ಹಳಿಗಳ ನವೀಕರಣ, ರೈಲ್ವೇ ಅಂಡರ್ ಮತ್ತು ಓವರ್ ಬ್ರಿಡ್ಜ್ ಬಗ್ಗೆ ರೂ. 1785 ಕೋಟಿ ರೂಪಾಯಿ ಮೀಸಲಿಡಲಾಗಿದೆ. ದೇಶದ 11568 ಮಾನವ ರಹಿತ ರೈಲ್ವೇ ಕ್ರಾಸಿಂಗ್ ಬಗ್ಗೆಯೂ ಗಮನಹರಿಸಲಾಗಿದೆ. ಪ್ರಯಾಣಿಕರ ಸಂರಕ್ಷತಾ ದೃಷ್ಟಿಯಿಂದ 17000 ಆರ್.ಪಿ.ಎಫ್ ಸಿಬ್ಬಂದಿಗಳ ನೇಮಕದ ನಿಧರ್ಾರದೊಂದಿಗೆ ವಿಶೇಷವಾಗಿ ಮಹಿಳಾ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ 4000 ಮಹಿಳಾ ಆರ್.ಪಿ.ಎಫ್ ಸಿಬ್ಬಂದಿಗಳ ನೇಮಕವು ಸುರಕ್ಷತೆಯ ಬಗ್ಗೆ ಜನತೆಗೆ ನೆಮ್ಮದಿಯನ್ನುಂಟು ಮಾಡಿದೆ.

ರೈಲ್ವೇ ನಿಲ್ದಾಣಗಳ ಪ್ರಯಾಣಿಕರಿಗೆ ಸುಸಜ್ಜಿತ ಪ್ಲ್ಯಾಟ್ ಫಾರಂ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ಜತೆಗೆ ಪ್ರಯಾಣಿಕರ ಸಮಯ ಉಳಿಕೆಗಾಗಿ ಆನ್ಲೈನ್ ಮತ್ತು ಮೊಬೈಲ್ನಲ್ಲಿ ಟಿಕೆಟ್ ಬುಕ್ಕಿಂಗ್ಗೆ ಆದ್ಯತೆ, ಅಂಚೆ ಕಚೇರಿ ಮೂಲಕವೂ ಈ ಸೌಲಭ್ಯ ವಿಸ್ತರಣೆ ಮೂಲಕ ಜನತೆಗೆ ವಿಶೇಷ ಸೌಲಭ್ಯಗಳನ್ನು ಈ ಬಜೆಟ್ನಲ್ಲಿ ನೀಡಲಾಗಿದೆ. ಹಿರಿಯ ನಾಗರಿಕರಿಗೆ ರೈಲ್ವೇ ನಿಲ್ದಾಣಗಳಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಲು ಅನುಕೂಲಕ್ಕಾಗಿ ಬ್ಯಾಟರಿಚಾಲಿತ ಕಾರು ವ್ಯವಸ್ಥೆ ಸ್ವಾಗತಾರ್ಹ ಯೋಜನೆ ಎನಿಸಿದೆ.

ರೈಲ್ವೇಯನ್ನು ಪ್ರವಾಸೋದ್ಯಮ ಅಭಿವೃದ್ಧಿಯ ಸಾಧನವಾಗಿ ಹಲವು ರೈಲ್ವೇ ಯೋಜನೆ ರೂಪಿಸಿರುವುದು ಪ್ರಶಂಸನಾರ್ಹ. ರಾಮೇಶ್ವರ-ಬೆಂಗಳೂರು-ವಾರಣಾಸಿ-ಹರಿದ್ವಾರ ರೈಲು ಮತ್ತು ಗದಗ- ಪಂಡರಾಪುರ ರೈಲು ತೀರ್ಥ ಕ್ಷೇತ್ರ ಯಾತ್ರಿಗಳಿಗೆ ವಿಶೇಷ ಪ್ರಯೋಜನಕಾರಿ ಎನಿಸಲಿದೆ. ಅಲ್ಲದೆ ಕ್ರೈಸ್ತ, ಸಿಖ್, ಪಾರ್ಸಿ, ಸೂಫಿ, ಬೌದ್ಧ, ಜೈನ್, ಮಹಮ್ಮದೀಯ ತೀರ್ಥ ಕ್ಷೇತ್ರಗಳ ಪ್ಯಾಕೇಜ್ ಪ್ರಯಾಣಯಾನವನ್ನು ರೂಪಿಸಿರುವುದು ಅಭಿನಂದನಾರ್ಹ.

ಸರಕು ಸಾಗಾಟದ ಮೂಲಕ ವಾಣಿಜ್ಯಿಕ ಆದಾಯ ಏರಿಕೆಯ ಗುರಿಯನ್ನೂ ಈ ಬಜೆಟ್ ಹೊಂದಿದೆ. 1 ಲಕ್ಷ ಬಿಲಿಯನ್ ಟನ್ ಸರಕು ಸಾಗಾಟ ಉದ್ದೇಶಿತ ಬಜೆಟ್ನಲ್ಲಿ ಸರಕು ಸಾಗಾಟ ವಿವಿಧ ವ್ಯವಸ್ಥೆಗೆ ಖಾಸಗಿ ಪ್ರಾಯೋಜಕತ್ವದ ಯೋಜನೆಗೆ ಅನುವು ಕಲ್ಪಿಸಿ ಕೊಡಲಾಗಿದೆ. ಅಲ್ಲದೇ, ಹಾಲು ಸಾಗಾಟದ ಟ್ಯಾಂಕರ್ ರೈಲಿಗೆ ವಿಶೇಷ ಆದ್ಯತೆ ನೀಡಿರುವುದು, ರೈಲ್ವೇ ನಿರ್ವಹಣೆ ಹೊರತುಪಡಿಸಿ ಉಳಿದಂತೆ ಯೋಜನೆಗಳಿಗೆ ವಿದೇಶಿ ನೇರ ಬಂಡವಾಳ ಹೂಡಿಕೆ ಮತ್ತು ಖಾಸಗಿ ಸಹಭಾಗಿತ್ವ ಅವಕಾಶ ನೀಡಿರುವುದು ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.

ಕರಾವಳಿ ಕರ್ನಾಟಕದ ಮತ್ತು ಮಲೆನಾಡಿನ ಜನತೆಯ ಬೇಡಿಕೆಗಳಿಗೆ ಆದ್ಯತೆಯ ಮೇರೆಗೆ ಸ್ಪಂದನೆಯನ್ನು ರೈಲ್ವೇ ಸಚಿವರು ನೀಡಿದ್ದು, ಜಿಲ್ಲೆಯ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ ಮಂಗಳೂರು-ಬೆಂಗಳೂರು ಹೊಸ ರೈಲನ್ನು ಪ್ರಾರಂಭಿಸಲಾಗಿದೆ. ಶಿವಮೊಗ್ಗ-ಶೃಂಗೇರಿ-ಮಂಗಳೂರು ಮತ್ತು ಕಾಂಞಗಾಡ್-ಕಾಣಿಯೂರು ಹೊಸ ರೈಲುಮಾರ್ಗ ಮತ್ತು ಉಳ್ಳಾಲ-ಮಂಗಳೂರು-ಸುರತ್ಕಲ್ ದ್ವಿಪಥ ಹಳಿ ಕಾಮಗಾರಿಗೆ ಆದ್ಯತೆ ನೀಡಲಾಗಿದೆ. ಕಾಸರಗೋಡು-ಬೈಂದೂರು ಪ್ಯಾಸೆಂಜರ್ ರೈಲು ಕೊಲ್ಲೂರು ಪ್ರಯಾಣಿಕರಿಗೆ ಸಹಕಾರಿಯಾಗಲಿದೆ. ಈ ಮೂಲಕ ಜಿಲ್ಲೆಯ ಜನತೆಯ ಹಲವು ಬೇಡಿಕೆಗಳಲ್ಲಿ ಆದ್ಯತೆಯ ಮೇರೆಗೆ ಪ್ರಾಮುಖ್ಯತೆ ನೀಡಲಾಗಿದೆ.

ರೈಲ್ವೇ ಸಿಬ್ಬಂದಿಗಳ ಹಿತರಕ್ಷಣೆಗೂ ಮುಂದಾಗಿರುವ ಸರಕಾರ ನೌಕರರ ಶಿಕ್ಷಣ, ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲು ಮುಂದಾಗಿದೆ. ಸಿಬ್ಬಂದಿಗಳ ರನ್ನಿಂಗ್ ರೂಂಗಳ ಆಧುನೀಕರಣ, ಆರೋಗ್ಯ ಮತ್ತು ಆಸ್ಪತ್ರೆಗಳ ಸೌಲಭ್ಯಗಳ ವಿಸ್ತರಣೆ, ಸಿಬ್ಬಂದಿಗಳ ಸುರಕ್ಷತೆಗೆ ಆದ್ಯತೆ, ಸೌಲಭ್ಯಗಳ ವಿಸ್ತರಣೆ ಸಿಬ್ಬಂದಿವರ್ಗದಲ್ಲೂ ನೆಮ್ಮದಿಯನ್ನು ಮೂಡಿಸಿದೆ.

ಅಟಲ್ಜೀಯವರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯಾದ ‘ಸುವರ್ಣ ಚೌಕಟ್ಟು ಯೋಜನೆ’ಯಂತೆ ಮೋದಿ ಸರಕಾರ ರೈಲ್ವೇ ಅಭಿವೃದ್ಧಿಗಾಗಿ ‘ವಜ್ರ ಚೌಕಟ್ಟು ಜಾಲ ಯೋಜನೆ’ ದೇಶದ ಜನತೆಗೆ ರೈಲ್ವೇ ಅಭಿವೃದ್ಧಿಯ ಬಗ್ಗೆ ಭರವಸೆಯನ್ನು ಮೂಡಿಸಿದೆ. ರೈಲ್ವೇ ವ್ಯವಸ್ಥೆಯನ್ನು ಸಂಪೂರ್ಣ ಗಣಕೀಕರಣಗೊಳಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವಲ್ಲಿ ಭಾರತೀಯ ರೈಲ್ವೇ ಹೆಜ್ಜೆಯನ್ನಿರಿಸಿದ್ದು, ಪ್ರಯಾಣಿಕರ ಹಿತವನ್ನು ಆದ್ಯತೆಯಾಗಿರಿಸಿ, ರೈಲ್ವೇ ವಾಣಿಜ್ಯಿಕ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ಸಮಾನ ದೃಷ್ಟಿಕೋನವಿರಿಸಿ ರೂಪಿಸಿರುವ ದೂರಗಾಮಿ ಚಿಂತನೆಯ ರೈಲ್ವೇ ಬಜೆಟ್ನ್ನು ದ.ಕ ಜಿಲ್ಲಾ ಸಮಿತಿ ಸಂತೋಷದಿಂದ ಸ್ವಾಗತಿಸುತ್ತಾ, ಡಿ.ವಿ.ಜಿ.ಯವರ ಕವನದ ತುಣುಕನ್ನು ಉಲ್ಲೇಖಿಸಿ ‘ತೆರೆದ ಮನದಿಂದ ಸಕಾರಾತ್ಮಕವಾಗಿ ಟೀಕೆ-ಸಲಹೆಗಳನ್ನು ಎದುರು ನೋಡುವ’ ಡಿ.ವಿಯವರ ಸಂದಭೋಚಿತ ಮತ್ತು ಕನ್ನಡ ದುಂಧುಬಿಯನ್ನು ಲೋಕಸಭೆಯಲ್ಲಿ ಮೊಳಗಿಸಿದ ಡಿ.ವಿಯವರನ್ನು ಬಿಜೆಪಿ ಅಭಿನಂದಿಸಿದೆ.

Railway budget

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English