ತುಟ್ಟಿ ಭತ್ಯೆ ನೀಡದಿದ್ದರೆ ಕೆಲಸ ಸ್ಥಗಿತ ಮಾಡುತ್ತೇವೆ :ಎಐಟಿಯುಸಿ ಎಚ್ಚರಿಕೆ

12:13 AM, Wednesday, July 23rd, 2014
Share
1 Star2 Stars3 Stars4 Stars5 Stars
(4 rating, 6 votes)
Loading...

SK beedi

ಮಂಗಳೂರು : ಬೀಡಿ ಕಾರ್ಮಿಕರಿಗೆ 2014 ಎಪ್ರಿಲ್ ಒಂದರಿಂದ ನೀಡಬೇಕಾದ ತುಟ್ಟಿಭತ್ಯೆ ರೂ.21.15 ನ್ನು ಬೀಡಿ ಮಾಲಕರು ಇದುವರೆಗೆ ಕಾರ್ಮಿಕರಿಗೆ ಪಾವತಿಸದೆ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ. ಈ ಬಗ್ಗೆ ಹಲವಾರು ಸಲ ಮಾಲಕರನ್ನು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಪೂರ್ತಿ ಮೊತ್ತ ಕಾರ್ಮಿಕರಿಗೆ ಪಾವತಿಸುವ ಬದಲು ಕಡಿಮೆ ಮಾಡುವ ಬಗ್ಗೆ ಪ್ರಯತ್ನಿಸುತ್ತಿದ್ದಾರೆ. ತಕ್ಷಣ ರೂ. 21.15 ಪಾವತಿಸದಿದ್ದರೆ ಕೆಲಸ ಸ್ಥಗಿತ ಮಾಡುತ್ತೇವೆ ಎಂದು ಎಐಟಿಯುಸಿ ಕಾರ್ಮಿಕರು ಬೀಡಿ ಮಾಲಕರನ್ನು ಎಚ್ಚರಿಸಿದರು.

ತುಟ್ಟಿಭತ್ಯೆ ಪಾವತಿಸದಿರುವ ಎಲ್ಲಾ ಬೀಡಿ ಮಾಲಕರ ವಂಚನಾ ನೀತಿಯನ್ನು ಪ್ರತಿಭಟಿಸಿ ಇಂದು ಎಸ್.ಕೆ. ಬೀಡಿ ವರ್ಕರ್ಸ್ ಫೆಡರೇಶನ್ -ಎಐಟಿಯುಸಿ ನೇತೃತ್ವದಲ್ಲಿ ಕುದ್ರೋಳಿ ಭಾರತ್ ಬೀಡಿ ಸಂಸ್ಥೆಯೆದುರು ನಡೆದ ಹಕ್ಕೊತ್ತಾಯ ಚಳವಳಿಯಲ್ಲಿ ಸೇರಿದ ಬೀಡಿ ಕಾರ್ಮಿಕರು ಈ ರೀತಿ ಮಾಲಕರುಗಳಿಗೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಫೆಡರೇಶನ್ನ ಪ್ರಧಾನ ಕಾರ್ಯದರ್ಶಿ ವಿ. ಸೀತಾರಾಂ ಬೇರಿಂಜ ಬೀಡಿ ಮಾಲಕರು ತನ್ನ ಲಾಭ ಜಾಸ್ತಿ ಮಾಡಲು ಕಾರ್ಮಿಕರ ಮನೆಯನ್ನು ತನ್ನ ಕಾರ್ಖಾನೆ ಯಾಗಿ ಪರಿವರ್ತಿಸಿದ್ದಾರೆ. ಬೀಡಿ ಕೈಗಾರಿಕೆಯು ಗುಡಿ ಕೈಗಾರಿಕೆ ಎಂಬ ನೆಪ ಹೇಳಿ ಕಾರ್ಮಿಕರು ಐತಿಹಾಸಿಕ ಹೋರಾಟಗಳಿಂದ ಗಳಿಸಿದ ಕಾನೂನು-ಸವಲತ್ತುಗಳನ್ನು ವಂಚಿಸುವ ಬಗ್ಗೆ ಚಿಂತಿಸುತ್ತಿರುವುದು ಖಂಡನೀಯ. ಯಾವುದೇ ಬೆಲೆ ತೆತ್ತರೂ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ಕೈಗಾರಿಕೆಗೆ ಸಮಸ್ಯೆ ಉಂಟಾಗಿರುವುದು ಕಾರ್ಮಿಕರಿಂದ ಅಲ್ಲ. ಬದಲಾಗಿ ಸರಕಾರಗಳ ತಪ್ಪು ನೀತಿಗಳಿಂದ, ಆರೋಗ್ಯ ಜಾಗೃತಿ ಹಾಗೂ ಸಾಮಾಜಿಕ ಪರಿವರ್ತನೆಯಿಂದ. ವಾಸ್ತವ ಹೀಗಿರುವುದರಿಂದ ಕಾರ್ಮಿಕರಿಗೆ ಸವಲತ್ತುಗಳನ್ನು ನಿರಾಕರಿಸುವುದು ಸರಿಯಲ್ಲ. ಕೈಗಾರಿಕೆಯ ಪುನಶ್ಚೇತನಕ್ಕಾಗಿ ಸರಕಾರಗಳ ತಪ್ಪು ನೀತಿಗಳ ವಿರುದ್ದ ನಾವೆಲ್ಲಾ ಒಟ್ಟಾಗಿ ಹೋರಾಡುವ. ರೂ. 21.15 ತಕ್ಷಣ ಪಾವತಿಸದಿದ್ದರೆ ಕೆಲಸ ಸ್ಥಗಿತ ಮಾಡಿ ಪ್ರತಿಭಟನೆಗೆ ಮುಂದಾಗುತ್ತೇವೆ. ಎಂದು ತಿಳಿಸಿದರು.

ತಾನೇ ಪ್ರಕಟಿಸಿದ ಮಜೂರಿಯನ್ನು ಮಾಲಕರಿಂದ ಜ್ಯಾರಿ ಮಾಡಿಸುವ ತಾಕತ್ತು ಸರಕಾರಕ್ಕಿಲ್ಲ. ತನ್ನನ್ನು ಗೆಲ್ಲಿಸಿದ ಮತದಾರ ಬೀಡಿ ಕಾರ್ಮಿಕರ ಸಮಸ್ಯೆಯನ್ನು ಆಲಿಸುವ ವ್ಯಯಧಾನ ಜನ ಪ್ರತಿನಿಧಿಗಳಿಗಿಲ್ಲ. ಇಂತವರು ಇದ್ದರೇನು, ಇಲ್ಲದಿದ್ದರೇನು -ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷರಾದ ವಿ. ಕುಕ್ಯಾನ್ ಸರಕಾರ ನಡೆಸುವವರನ್ನು ಛೇಡಿಸಿದರು.

ಫಡರೇಶನ್ ಕೋಶಾಧಿಕಾರಿ ಬಿ. ಶೇಕರ್, ಬೀಡಿ ಎಂಡ್ ಟೊಬಕ್ಕೊ ಲೇಬರ್ ಯೂನಿಯನ್ -ಎಐಟಿಯುಸಿ ಅಧ್ಯಕ್ಷೆ ಸುಲೊಚನ ಕವತ್ತಾರು ಸಾಂದರ್ಭಿಕವಾಗಿ ಮಾತನಾಡಿದರು. ಎಐಟಿಯುಸಿ ನಾಯಕರಾದ ಎಚ್.ವಿ.ರಾವ್, ಹೆನ್ರಿ ಲೋಬೊ, ಸರಸ್ವತಿ ಕೆ, ವಸಂತಿ ಶೆಟ್ಟಿ, ಭುಜಂಗ, ಸಂಜೀವಿ, ಕಲ್ಯಾಣಿ, ಸೀತಾ, ಮುಂತಾದವರು ನೇತೃತ್ವ ನೀಡಿದರು. ಪ್ರಾರಂಭದಲ್ಲಿ ಕಾರ್ ಸ್ಟೀಟ್ ನಿಂದ ಕಾರ್ಮಿಕರು ಘೋಷಣೆಗಳೊಂದಿಗೆ ಮೆರವಣಿಗೆ ನಡೆಸಿದರು. ಸುರೇಶ್ ಕುಮಾರ್ ಸ್ವಾಗತಿಸಿ ಚಿತ್ರಾಕ್ಷಿ ವಂದಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English