ಬಾಲ ಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಪಿಡುಗು

7:40 PM, Friday, July 25th, 2014
Share
1 Star2 Stars3 Stars4 Stars5 Stars
(5 rating, 7 votes)
Loading...
child labor

ಮಂಗಳೂರು : (ಲೇಖನ) ಬಾಲ ಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಪಿಡುಗು. ಸಮಾಜದ ಸೌಸ್ಥ್ಯವನ್ನು ಕದಡುವ ಅನಿಷ್ಠ ಪದ್ಧತಿ. ಮಕ್ಕಳ ಭವಿಷ್ಯವನ್ನು ಎಳೆ ವಯಸ್ಸನಲ್ಲಿಯೇ ಚಿವುಟುವ ಕ್ರೂರ ಪದ್ಧತಿ. ಒಂದು ದೇಶದ ಸಾಮಾಜಿಕ ಹಾಗೂ ಆರ್ಥಿಕತೆ ಮೇಲೆ ಪ್ರತೀಕೂಲ ಪರಣಾಮ ಬೀರಬಲ್ಲ ಶಕ್ತಿಯನ್ನು ತನ್ನ ಆಂತರ್ಯದಲ್ಲಿ ಹುದುಗಿಸಿಕೊಂಡಿರುವ ಪದ್ಧತಿ. ಈ ಸಮಸ್ಯೆ ಕುರಿತು ಅಧ್ಯಯನ ಮಾಡಿದರೆ ಅದರ ಆಳ ಹಾಗೂ ವಿಸ್ತಾರ ಭಯಾನಕವೆನಿಸುತ್ತದೆ.

ಈ ಸಮಸ್ಯೆ ಕೇವಲ ಒಂದು ಪ್ರಾಂತ ಅಥವಾ ದೇಶಕ್ಕೆ ಸೀಮಿತವಾಗಿಲ್ಲ. ಇದು ವಿಶ್ವ ವ್ಯಾಪಿ. ಇಂಥಹ ಭಯಾನಕ ಹಾಗೂ ಅನಿಷ್ಠ ಪದ್ಧತಿಯ ನಿರ್ಮೂಲನೆಗಾಗಿ ಹಲವಾರು ಸಂಘ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು , ಹಲವಾರು ವರ್ಷಗಳಿಂದ ಹೋರಾಟ ಮಾಡಿ , ಸಮಾಜದ ಮತ್ತು ಸರ್ಕಾರದ ಕಣ್ಣು ತೆರೆಸುವಲ್ಲಿ ಶ್ರಮಿಸಿದ್ದಾರೆ.

ಬಾಲ ಕಾರ್ಮಿಕ ಪದ್ಧತಿ ಭಾರತದಲ್ಲಿ ಶತ ಶತಮಾನಗಳ ಹಿಂದೆ ಬೇರು ಬಿಟ್ಟು ಹೆಮ್ಮರವಾಗಿ ಬೆಳೆದಿದೆ. ವಿಶ್ವದಲ್ಲಿ ಸುಮಾರು ಇನ್ನೂರು ಮಿಲಿಯನ್ಗಿಂತಲೂ ಹೆಚ್ಚು ಬಾಲ ಕಾರ್ಮಿಕರು ಅಪಾಯಕಾರಿ ಉದ್ದಿಮೆಗಳೂ ಸೇರಿದಂತೆ , ವಿವಿಧ ವೃತ್ತಿ ಮತ್ತು ಪ್ರಕ್ರಿಯೆಗಳಲ್ಲಿ ನಿರತರಾಗಿರುವುದನ್ನು ಗಮನಿಸಿದರೆ ಈ ಅನಿಷ್ಠ ಪದ್ಧತಿಯ ಕದಂಬ ಬಾಗಹುಗಳ ವಿಸ್ತಾರ ಭಯಹುಟ್ಟಿಸುತ್ತದೆ. ಭಾರತದಲ್ಲಿ ಸುಮಾರು ಹನ್ನೆರಡು ಮಿಲಿಯನ್ಗಳಿಗಿಂತಲೂ ಹೆಚ್ಚು ಬಾಲ ಕಾರ್ಮಿಕರು ಅಂದರೆ 14 ವರ್ಷದೊಳಗಿನ ಮಕ್ಕಳು ಅಪಾಯಕಾರಿ ಉದ್ದಿಮೆಗಳೂ ಸೇರಿದಂತೆ ವಿವಿಧ ವೃತ್ತಿಗಳಲ್ಲಿ ಕೆಲಸ ಮಾಡುತ್ತಿದ್ದಾರೆಂದು ಅಂದಾಜಿಸಲಾಗಿದೆ. ಈ ಪೈಕಿ ಹೆಚ್ಚಿನ ಮಕ್ಕಳು ಕೃಷಿ ಕೆಲಸದಲ್ಲಿ ನಿರತರಾಗಿದ್ದು, ಉಳಿದಂತೆ ಗೃಹ ಕೃತ್ಯಗಳಲ್ಲಿ , ಹೋಟೆಲ್ , ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಗ್ಯಾರೇಜುಗಳು , ರೇಷ್ಮೆ ಉದ್ದಿಮೆ , ಸಿಡಿಮದ್ದು ತಯಾರಿಕೆ , ಅಗರ ಬತ್ತಿ ತಯಾರಿಕೆ , ಮೀನುಗಾರಿಕೆ, ಗಣಿ, ಬೀಡಿ ತಯಾರಿಕೆ, ಕಟ್ಟಡ ಮತ್ತು ಇತರೆ ನಿರ್ಮಾಣ, ಇವೇ ಮುಂತಾದ ಹಲವಾರು ಅಪಾಯಕಾರಿ ವೃತ್ತಿ ಮತ್ತು ಪ್ರಕ್ರಿಯೆಗಳಲ್ಲಿ ತೊಡಗಿದ್ದರೆ , ಇದರ ಇನ್ನೊಂದು ಮುಖ ಇನ್ನೂ ಘೋರವಾಗಿದೆ. ಮಕ್ಕಳಿಂದ ಚಿಂದಿ ಆಯುವ ಕೆಲಸ ಮಾಡಿಸುವುದೇ ಅಲ್ಲದೆ ಅವರಿಂದ ಭಿಕ್ಷಾಟನೆ ಮಾಡಿಸುವುದರ ಜೊತೆಗೆ ಲೈಂಗಿಕ ಕೃತ್ಯಗಳಂಥಹ ಅಮಾನವೀಯ ಮತ್ತು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಮಾಜ ಘಾತುಕ ಶಕ್ತಿಗಳು ನಿರತರರಾಗಿರುವುದು ತಿಳಿದು ಬರುತ್ತದೆ.

ಬಾಲ ಕಾರ್ಮಿಕ ಪದ್ಧತಿ ಮಕ್ಕಳ ಆರೋಗ್ಯ ಮತ್ತು ಭವಿಸ್ಯದ ಮೇಲೆ ಯಾವ ರೀತಿ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ವಿಶ್ಲೇಷಿಸಿದಾಗ ಈ ಪದ್ದತಿಯ ಕರಾಳ ರೂಪ ನಮಗೆ ಅರಿವಾಗುತ್ತದೆ. ಮಕ್ಕಳ ದೈಹಿಕ , ಬೌಧ್ದಿಕ ಬೆಳವಣಿಗೆ ಕುಂಠಿತಗೊಳ್ಳುವುದರ ಜೊತೆಗೆ ಅವರ ಮನೋಶಕ್ತಿ ಕುಂದುತ್ತದೆ. ಶಕ್ತಿ ಮೀರಿ ಕಡಿಮೆ ಕೂಲಿಗೆ ದುಡಿಸುವ ಮಾಲೀಕರ ಮನೋಭಾವದಿಂದ ಮಕ್ಕಳ ಭವಿಷ್ಯ ನಶಿಸುವುದರ ಜೊತೆಗೆ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಪ್ರತೀಕೂಲ ಪರಣಾಮ ಬೀರುತ್ತದೆ. ಕಡಿಮೆ ಹಣಕ್ಕೆ ದುಡಿಸಿ ಹೆಚ್ಚಿನ ಲಾಭ ಮಾಡುವ ಕೆಲವು ಮಾಲೀಕರ ಹುನ್ನಾರಕ್ಕೆ ದೇಶದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಬುಡಮೇಲಾಗುವುದರಿಂದ , ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ನಿಜವಾದ ದುಡಿವ ಕೈಗಳಿಗೆ ದುಡಿಮೆ ಇಲ್ಲದಂತಾಗುತ್ತದೆ. ದುಡಿಯಲು ತವಕಿಸುವ ಯುವ ಜನತೆ ಅತಂತ್ರರಾಗುತ್ತಾರೆ. ಶೋಷಣೆ ಅಡ್ಡಿ ಆತಂಕಗಳಿಲ್ಲದೆ ಮುಂದುವರಿಯುತ್ತದೆ.

ಬಾಲ ಕಾರ್ಮಿಕ ಪದ್ಧತಿಗೆ ಹಲವಾರು ಕಾರಣಗಳಿದ್ದರೂ ಸಹ ಪ್ರಮುಖವಾಗಿ ಗೋಚರಿಸುವುದು ಬಡತನ . ಅನಕ್ಷರತೆ, ಅಜ್ಞಾನ. ಸಾಂಪ್ರದಾಯಿಕವಾಗಿ ಬಂದ ವೃತ್ತಿ ನೈಪುಣ್ಯತೆಯನ್ನು ಮಕ್ಕಳಿಗೆ ವರ್ಗಾಯಿಸುವ ತಂದೆ ತಾಯಿಗಳ ತವಕ ಪ್ರಮುಖ ಕಾರಣಗಳು.

ಹೆಚ್ಚಿನ ಪ್ರಮಾಣದ ಬಾಲ ಕಾರ್ಮಿಕರು ದುರ್ಬಲ ವರ್ಗದ ಕಡುಬಡವರ ಕುಟುಂಬದಿಂದ ಬಂದಿರುವುದು ಸ್ಪಷ್ಟವಾಗುತ್ತದೆ. ಕಡ್ಡಾಯ ಶಿಕ್ಷಣ ಪದ್ಧತಿಯಿಂದ ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟಬಹುದೆಂಬ ಅರಿವು ಇರುವುದರಿಂದ , ಸರ್ಕಾರ ಇತ್ತೀಚೆಗೆ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿದೆ.

ಬಾಲ ಕಾರ್ಮಿಕ ಪದ್ಧತಿಯು ಭಾರತದ ಸಂವಿಧಾನದ ಉಪಬಂಧಗಳ ಮೇರೆಗೆ ಅಪರಾಧವಾಗಿದ್ದರೂ ಸಹ ಇನ್ನೂ ಸಹ ಮುಂದುವರಿದಿರುವುದು , ಸಮಾಜ ಮತ್ತು ಸರ್ಕಾರಕ್ಕೆ ಸವಾಲಾಗಿದೆ. ತಮಿಳುನಾಡಿನ ಶಿವಕಾಶಿಯಲ್ಲಿರುವ ಸಿಡಿಮದ್ದು ಘಟಕದಲ್ಲಿ ಅಪಘಾತವಾಗಿ ಸುಮಾರು 28 ಜನ ಮಕ್ಕಳು ಅಸು ನೀಗಿದ ಹಿನ್ನೆಲೆಯಲ್ಲಿ ಪ್ರಖ್ಯಾತ ವಕೀಲರಾದ ಶ್ರೀ ಎಂ ಸಿ ಮೆಹತಾ , ರವರು ತಮಿಳುನಾಡು ಸರ್ಕಾರ ಮತ್ತು ಇತರರನ್ನು ಪ್ರತಿವಾದಿಗಳನ್ನಾಗಿ ಮಾಡಿ ಘನ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿ , ಬಾಲ ಕಾರ್ಮಿಕ ಪದ್ಧತಿಯ ಕ್ರೂರ ಮುಖವನ್ನು ನ್ಯಾಯಾಲಯದಲ್ಲಿ ಎಳೆ ಎಳೆಯಾಗಿ ಅನಾವರಣಗೊಳಿಸಿದ್ದು , ಇದನ್ನು ಗಂಬೀರವಾಗಿ ಗಮನಿಸಿದ ಸರ್ವೋಚ್ಚ ನ್ಯಾಯಾಲಯ , ಈ ಅನಿಷ್ಠ ಪದ್ಧತಿಯನ್ನು ತೊಲಗಿಸಲು ಹಲವಾರು ಮಾರ್ಗಸೂಚಿಗಳನ್ನು ನೀಡಿದೆ. ಇದನ್ನು ಗಂಬೀರವಾಗಿ ಪರಗಣಿಸುವಂತೆ ತಾಕೀತು ಮಾಡಿದೆ. ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986 ರನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವುದು ಅನಿವಾರ್ಯವಾಗಿದೆ. ಅಲ್ಲದೆ ವಿಶ್ವ ಸಂಸ್ಥೆಯ ಅಂಗವಾದ ಐ ಎಲ್ ಒ ಕೂಡಾ , ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಹಾಗೂ ಈ ಬಗ್ಗೆ ವಿಶ್ವದಾದ್ಯಂತ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಜೂನ್ 12ನೇ ತಾರೀಖನ್ನು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನಾಗಿ ಆಚರಿಸಲು ಘೋಷಿಸಿದೆ.

ಬಾಲ ಕಾರ್ಮಿಕರು ಎಂದರೆ ವಿವಿಧ ಕಾಯ್ದೆಗಳಲ್ಲಿ ವಿವಿಧ ವಯಸ್ಸಿನ ಮಕ್ಕಳು ಎಂದು ಇದ್ಧರೂ ಸಹ , ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986 ರಡಿ ಬಾಲ ಕಾರ್ಮಿಕರು ಎಂದರೆ 14 ವರ್ಷತುಂಬಿರದ ವ್ಯಕ್ತಿ ಎಂದು ಅಥರ್ೈಸಲಾಗಿದ್ದು , ಯಾವುದೇ ವೃತ್ತಿ ಅಥವಾ ಪ್ರಕ್ರಿಯೆಗಳಲ್ಲಿ , ಗೃಹ ಕೃತ್ಯಗಳಲ್ಲಿ , 14 ವರ್ಷದೊಳಗಿನ ಮಕ್ಕಳಿಂದ ದುಡಿಸಿಕೊಳ್ಳುವುದು ಅಪರಾಧವಾಗಿದ್ದು , ಈ ಅಪರಾಧಕ್ಕೆ 3 ತಿಂಗಳಿಂದ 1 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ರೂ.10,000/- ದಿಂದ ರೂ. 20,000/- ಅಥವಾ ಜೈಲು ಶಿಕ್ಷೆ ಅಥವಾ ದಂಡ ಎರಡನ್ನೂ ವಿಧಿಸಬಹುದಾಗಿದೆ. ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ ಅಡಿಯೂ ಸಹ 14 ವರ್ಷದೊಳಗಿನ ಮಕ್ಕಳಿಂದ ದುಡಿಸಿಕೊಳ್ಳುವುದನ್ನು ನಿಷೇಧಿಸಿದ್ದು , ಆಪರಾಧ ಸಾಬೀತಾದಲ್ಲಿ 3 ತಿಂಗಳಿಂದ 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ರೂ.10,000/- ದಿಂದ ರೂ. 20,000/- ಅಥವಾ ಜೈಲು ಶಿಕ್ಷೆ ಅಥವಾ ದಂಡ ಎರಡನ್ನೂ ವಿಧಿಸಬಹುದಾಗಿದೆ. ಈ ಕಾಯ್ದೆಯ ಅನುಷ್ಠಾನಕ್ಕಾಗಿ ಕಾರ್ಮಿಕ ಇಲಾಖೆಯ ನಿರೀಕ್ಷಕರು ಸೇರಿದಂತೆ ವಿವಿಧ ಇಲಾಖೆಗಳ ಅಂದರೆ ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಶಿಕ್ಷಣ ಇಲಾಖೆ, ಕರ್ಖಾನೆ ಮತ್ತು ಬಾಯ್ಲರುಗಳ ಇಲಾಖೆ, ನಗರಾಭಿವೃದ್ಧಿ ಇಲಾಖೆ, ರೇಷ್ಮೆ ಇಲಾಖೆ, ಸಮಾಹ ಕಲ್ಯಾಣ ಇಲಾಖೆ , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಗಳ ವಿವಿಧ ಅಧಿಕಾರಿಗಳನ್ನು ನಿರೀಕ್ಷಕರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಸದರಿ ನಿರೀಕ್ಷಕರು , ಬಾಲ ಕಾರ್ಮಿಕರನ್ನು ನೇಮಿಸಿಕೊಂಡ ಸಂಸ್ಥೆಯ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸುವ ಅಧಿಕಾರವನ್ನು ಹೊಂದಿರುತ್ತಾರೆ.

ಕರ್ನಾಟಕ ರಾಜ್ಯವನ್ನು ಬಾಲ ಕಾರ್ಮಿಕ ಮುಕ್ತ ರಾಜ್ಯವನ್ನಾಗಿ ಘೋಷಿಸಬೇಕೆಂಬ ಮಹದಾಕ್ಷೆಯಿಂದ ಹಲವಾರು ಕ್ರಿಯಾ ಯೋಜನೆಗಳನ್ನು ಸರ್ಕಾರವು ರೂಪಿಸಿದ್ದು , ಪ್ರಮುಖವಾಗಿ 14 ವರ್ಷದೊಳಗಿನ ಮಕ್ಕಳಿಂದ ಯಾವುದೇ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ನಿಷೇಧಿಸುವುದು, ಅಂಥಹ ಮಕ್ಕಳನ್ನು ಗುರುತಿಸಿ, ಕೆಲಸದಿಂದ ಮುಕ್ತಗೊಳಿಸಿ ಪುನರ್ವಸತಿ ಕಲ್ಪಿಸುವುದು , ಮಕ್ಕಳನ್ನು ಶಾಲೆಗೆ ಸೇರಿಸುವುದರ ಜೊತೆಗೆ , ಬಾಲಕಾರ್ಮಿಕರ ಕುಟುಂಬಕ್ಕೆ ಬಡತನ ನಿರ್ಮೂಲನೆ ಯೋಜನೆಯಡಿ ಹಾಗೂ ಸ್ವಂತ ಯೋಜನೆಯಡಿಯಲ್ಲಿ ಪರಿಹಾರ ಕಲ್ಪಿಸುವುದು, ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಇವೇ ಮುಂತಾದ ಕ್ರಿಯಾ ಯೋಜನೆಗಳಾಗಿದ್ದು , ಈ ನಿಟ್ಟಿನಲ್ಲಿ ಈಗಾಗಲೆ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕರಿಯವರ ಅದ್ಯಕ್ಷತೆಯಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘವನ್ನು ಸ್ಥಪಿಸಲಾಗಿದ್ದು , ಸದರಿ ಕ್ರಿಯಾ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ದಿಸೆಯಲ್ಲಿ ಅರಿವು ಮೂಡಿಸುವ ಸಲುವಾಗಿ ಜಾಥಾ ಕಾರ್ಯಕ್ರಮ , ಜಾಗೃತಿ ರಥ ಸಂಚಾರ , ಕಾನೂನು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಸರ್ಕಾರ ಮತ್ತು ಸರಕಾರೇತರ ಸಂಸ್ಥೆಗಳ ವತಿಯಿಂದ ಮತ್ತು ಮಾಧ್ಯಮಗಳ ಮೂಲಕ ಈ ಅನಿಷ್ಠ ಪದ್ಧತಿ ವಿರುದ್ಧ ಜನಜಾಗೃತಿ ಕ್ರಮ ನಿರಂತರವಾಗಿ ನಡೆಯುತ್ತಿದೆ. ಕಾರ್ಮಿಕ ಇಲಾಖೆ ವತಿಯಿಂದ ಕಾಲ ಕಾಲಕ್ಕೆ ವಿವಿಧ ತಂಡಗಳನ್ನು ರಚಿಸಿಕೊಂಡು ಹಠಾತ್ ದಾಳಿ ನಡೆಸಿ , ಕಂಡು ಬಂದ ಬಾಲ ಕಾರ್ಮಿಕರನ್ನು ಕೆಲಸದಿಂದ ಮುಕ್ತಗೊಳಿಸಿ , ಬಾಲಕರ ರಕ್ಷಣಾ ಘಟಕದಲ್ಲಿ ಪುನರ್ವಸತಿ ಕಲ್ಪಿಸುವ ಕೆಲಸ ನಡೆಯುತ್ತಿದೆ. ಆದಾಗ್ಯೂ ಸಹ ಬಾಲ ಕಾರ್ಮಿಕ ಪದ್ಧತಿ ಮುಂದುವರಿದಿರುವುದನ್ನು ಗಮನಿಸಬಹುದಾಗಿದೆ. ಕೇವಲ ಕಾನೂನಿನಿಂದ ಈ ಪದ್ಧತಿಯನ್ನು ತೊಲಗಿಸಬಹುದೆಂದು ನಿರೀಕ್ಷಿಸುವ ಬದಲು , ಮಾಲೀಕವರ್ಗದವರೂ ಸೇರಿದಂತೆ ಸಮಾಜದ ಹಿತ ಕಾಯುವ ಸಂಘ ಸಂಸ್ಥೆಗಳು ಈ ದಿಶೆಯಲ್ಲಿ ಕೈಜೋಡಿಸಿದರೆ , ಈ ಅನಿಷ್ಠ ಪದ್ಧತಿಗೆ ಶೀಘ್ರ ತೆರೆಬೀಳುವುದರಲ್ಲಿ ಯಾವುದೇ ಅನುಮಾನ ಇಲ್ಲ.- ರಾಮಮೂರ್ತಿ ಎಸ್. ಎಸ್. ಕಾರ್ಮಿಕ ನಿರೀಕ್ಷಕ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English