ಸುಬ್ರಹ್ಮಣ್ಯ:ಆಹಾರ ಅರಸುತ್ತಾ ಕೃಷಿಕನೊರ್ವರ ತೋಟಕ್ಕೆ ದಾಳಿಯಿಟ್ಟು ಅಲ್ಲಿಂದ ತೆರಳಿದ ಒಂಟಿ ಸಲಗವೊಂದು ತನ್ನ ಇಷ್ಟದ ಆಹಾರವಾದ ಬೈನೆ ಗಿಡವನ್ನು ತಿನ್ನುವ ಸಂಧರ್ಭ ವಿದ್ಯುತ್ ಸ್ಪರ್ಶಿಸಿ ಸಾವೀಗೀಡಾದ ದುರಂತ ಘಟನೆ ಸುಬ್ರಹ್ಮಣ್ಯ ರೇಂಜ್ನ ದೇವಚಳ್ಳ ಗ್ರಾಮದ ನಾಲ್ಕೂರು ರಕ್ಷಿತಾರಣ್ಯದ ಹೆರಕಜೆ ಎಂಬಲ್ಲಿ ಶುಕ್ರವಾರ ನಡೆದಿದೆ.ದಾರುಣವಾಗಿ ಸಾವಿಗೀಡಾದ ಕಾಡಾನೆ ಸುಮಾರು 25 ವರ್ಷ ತುಂಬಿದೆ ಎಂದು ಅಂದಾಜಿಸಲಾಗಿದ್ದು 2 ದಂತವನ್ನು ಹೊಂದಿದೆ.
ಗುತ್ತಿಗಾರು ಸಮೀಪದ ದೇವಚಳ್ಳ ಗ್ರಾಮದ ನಾಲ್ಕೂರು ರಕ್ಷಿತಾರಣ್ಯದ ಕೊಲ್ಲಮೊಗ್ರು -ಕಂದ್ರಪ್ಪಾಡಿ ಸಂಪರ್ಕ ರಸ್ತೆಯ ಮಧ್ಯೆ ಹೆರಕಜೆ ಎಂಬಲ್ಲಿಯ ಕೃಷಿಕ ಚಿನ್ನಪ್ಪ ಗೌಡ ಎಂಬವರ ತೋಟಕ್ಕೆ ಗುರುವಾರ ರಾತ್ರಿ 10:30 -11ರ ಮಧ್ಯೆ ಕಾಡಾನೆ ದಾಳಿ ನಡೆಸಿದೆ.ತೋಟಕ್ಕೆ ಬಂದ ಕಾಡಾನೆಯನ್ನು ನೋಡಿದ ಮನೆಯ ನಾಯಿ ಬೊಗಳಿದೆ.ಆ ವೇಳೆಗೆ ಎಚ್ಚೆತ್ತ ಮನೆಯವರು ಶಬ್ಧ ಮಾಡಿ ಕಾಡಾನೆಯನ್ನು ಓಡಿಸಿದ್ದಾರೆ.ಎರಡೆರಡು ಬಾರಿ ತೋಟದಲ್ಲಿ ಕಂಡು ಬಂದ ಕಾಡಾನೆ ಬಳಿಕ ಅಲ್ಲಿಂದ ಕಾಲ್ಕಿತ್ತಿದೆ.ತೋಟದ ಸಮೀಪದ ಗುಡ್ಡದಲ್ಲಿ ತನಗೆ ಇಷ್ಟವಾದ ಬೈನೆ ಮರವನ್ನು ಎಳೆದು ತಿಂದು,ಹುಡಿ ಮಾಡಿ ತಿರುಗುವ ವೇಳೆ ಬಾಗಿಕೊಂಡಿದ್ದ ಮಲೆಚಾಕೋಟೆ ಎಂಬ ಜಾತಿಯ ಗಿಡ ಮಾರ್ಗದಲ್ಲಿ ಹಾದು ಹೋದ 11 ಕೆ.ವಿ ವಿದ್ಯುತ್ ಪ್ರವಾಹ ತಂತಿ ಮೇಲೆ ಮುರಿದು ಬಿದ್ದ ಸಂಧರ್ಭ ಶಾಕ್ನಿಂದ ಮಗುಚಿ ರಸ್ತೆಯ ಬದಿಯ ಚರಂಡಿಯಲ್ಲಿ ಬಿದ್ದಿದೆ.ಶಾಕ್ ಗೆ ಆನೆಯ ದೇಹದ ಹಿಂಭಾಗ ಕರಚಿದೆ.
ಬೆಳಗ್ಗೆ ಆನೆ ಬಂದು ತೋಟಕ್ಕೆ ಏನಾದರೂ ಹಾನಿಯಾಗಿದೆಯೇ ಎಂದು ನೋಡಲು ಬಂದ ಚಿನ್ನಪ್ಪ ಗೌಡರಿಗೆ ಆನೆ ಬಿದ್ದಿರುವುದು ಕಂಡು ಬಂದಿದೆ.ತಕ್ಷಣ ಅವರು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ.
ಬೈನೆ ಮರವನ್ನು ಸಿಗಿದು ಹೊಟ್ಟೆ ತುಂಬಾ ತಿಂದ ಆನೆ ತಿರುಗುವ ವೇಳೆ ತನ್ನ ದೇಹದ ಹಿಂಭಾಗಕ್ಕೆ ಮಲೆಚಾಕೋಟೆ ಸಣ್ಣ ಗಿಡವೊಂದು ಗುದ್ದಿದ ರಭಸಕ್ಕೆ ಮುರಿದು ಹೈಟೆನ್ಶನ್ ವಿದ್ಯುತ್ ತಂತಿಯ ಮೇಲೆ ಬಿದ್ದು ತನ್ನ ಪ್ರಾಣವನ್ನು ಕಳೆದುಕೊಂಡಿತು.ಮುಳುಬಾಗಿಲು-ಕಂದ್ರಪ್ಪಾಡಿ ಮಧ್ಯೆ ವಿದ್ಯುತ್ ತಂತಿ ಹಾದು ಹೋಗಿತ್ತು.ಗುಡ್ಡದ ಮೇಲಿನ ಮರ ಬಿದ್ದುದರಿಂದ ನೇರ ವಿದ್ಯುತ್ ತಂತಿಗೆ ಸ್ಪಶರ್ಿಸಿದ ಕಾರಣ ಇದು ಸಹಜ ಸಾವೆಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಸಹಾಯಕ ಅರಣ್ಯಾಧಿಕಾರಿ ಡಾ| ದಿನೇಶ್ರವರು ಸುಳ್ಯ ವಲಯಾರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ,ಪಂಜ ವಲಯಾರಣ್ಯಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ,ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ಬಾಲಕೃಷ್ಣ ಆಚಾರ್ಯ ಮತ್ತು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಆನೆ ಸಾವಿನ ಬಗ್ಗೆ ಪರಿಶೀಲನೆ ನಡೆಸಿದರು.ಜಿಲ್ಲಾ ಉಪ ಅರಣ್ಯಸಂರಕ್ಷಣಾಧಿಕಾರಿ ಓ.ಪಾಲಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಘಟನಾ ಸ್ಥಳದಿಂದ 3 ಕಿ.ಮೀ ದೂರದ ಹೊಸೊಳಿ ರಾಮ್ ಭಟ್ ಎಂಬವರನ್ನು 2013 ಫೆ.12ರಂದು ಕಾಡಾನೆಯೊಂದು ತನ್ನ ತೊಟದಲ್ಲಿ ತುಳಿದು ಕೊಂದ ಘಟನೆ ನಡೆದಿತ್ತು.ರಾತ್ರಿ ಹೊತ್ತು.ತೋಟಕ್ಕೆ ಅಳವಡಿಸಿದ ಸ್ಪಿಂಕ್ಲರ್ ಬದಲಾಯಿಸಲು ಹೋದ ಸಂಧರ್ಭ ಕಾಡಾನೆ ತುಳಿತಕ್ಕೆ ಬಲಿಯಾಗಿದ್ದರು.
ಸುಮಾರು 10 ಗಂಟೆ ಸಮಯ ಆನೆಯೊಂದು ನನ್ನ ತೋಟಕ್ಕೆ ನುಗ್ಗಿದಾಗ ನಮ್ಮ ನಾಯಿಗಳು ಬೊಗಳಿದವು. ಆ ಸಂಧರ್ಭ ಮನೆಯಲ್ಲಿ ವಿದ್ಯುತ್ ಇರಲಿಲ್ಲ. ಬೊಬ್ಬೆ ಹೊಡೆದಾಗ ಆನೆ ಓಡಿ ಹೋಯಿತು.ಬಳಿಕ 10:30 ಗಂಟೆಯ ಸಂಧರ್ಭ ಆನೆಯ ಕೂಗಿಗೆ ನಾಯಿಗಳು ಮನೆಗೆ ಓಡಿ ಬಂದಿದೆ. ಬಳಿಕ 10:45 -11 ಗಂಟೆಯ ವೇಳೆಗೆ 2 ಬಾರಿ ವಿದ್ಯುತ್ ಬಂದು ಹೋಗಿತ್ತು. ಮರುದಿನ ಬೆಳಗ್ಗೆ ಆನೆ ತೋಟಕ್ಕೆ ಬಂದು ಏನಾದರೂ ಕೃಷಿ ನಾಶ ಮಾಡಿದೆಯೇ ಎಂದು ಪರಿಶೀಲಿಸಿದಾಗ ಕೃಷಿ ನಾಶವಾಗಿರಲಿಲ್ಲ.ಆದರೆ ತೋಟದ ಸಮೀಪದ ಬೈನೆ ಮರ ಹುಡಿಯಾಗಿತ್ತು.ಮರವೊಂದು ವಿದ್ಯುತ್ ತಂತಿಗೆ ವಿದ್ಯುತ್ ಮಾರ್ಗದ ಬದಿಯಲ್ಲಿ ಆನೆಯು ಸತ್ತು ಬಿದ್ದಿತ್ತು. ಇಲಾಖೆಗೆ ತಿಳಿಸಿದ್ದೇನೆ ಎಂದು ಆನೆ ಸತ್ತ ಪಕ್ಕದ ತೋಟದ ಹೆರಕ್ಕಜೆ ನಿವಾಸಿ – ಚಿನ್ನಪ್ಪ ಗೌಡ ತಿಳಿಸಿದರು.
ಕಾಡನೆ ಸತ್ತ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಓ. ಪಾಲಯ್ಯ ಮಾತನಾಡಿ ಸ್ಥಳ ಪರಿಶೀಲನೆ ಮಾಡಿದ್ದೇವೆ.ಪಶು ವೈಧ್ಯಾಧಿಕಾರಿಯನ್ನು ಸ್ಥಳಕ್ಕೆ ಕರೆಸಿ ಶವ ಮಹಜರು ನಡೆಸಿದ್ದೇವೆ.ಆನೆಯು ದಂತ ಹೊಂದಿರುವುದರಿಂದ ವನ್ಯ ಜೀವಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಅವರ ಸಲಹೆಯಂತೆ ಆನೆಯನ್ನು ದಹನ ಮಾಡಲಾಗಿದೆ ಎಂದು ತಿಳಿಸಿದರು.
ಘಟನೆಗೆ ಸಂಬಂದಪಟ್ಟಂತೆ ಆನೆಯ ಸಾವಿಗೀಡಾದ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು ವಿದ್ಯುತ್ ತಂತಿ ಹಾದು ಹೋದ ರೀತಿ ಬಗ್ಗೆ ಮತ್ತು ಆನೆ ಬಿದ್ದ ಸ್ಥಳ ಮರ ಮುರಿದ ಬುಡ ಇತ್ಯಾದಿಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿದ್ದೇವೆ ಎಂದು ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ| ದಿನೇಶ್ ತಿಳಿಸಿದ್ದಾರೆ.
ವಿದ್ಯುತ್ ತಂತಿ ಮೇಲೆ ಮರ ಬಿದ್ದಾಗ ಆನೆಗೆ ಶಾಕ್ ಹೊಡೆದು ಮೃತ ಪಟ್ಟಿದೆ.ವಿದ್ಯುತ್ ತಂತಿ ನಿಧರ್ಿಷ್ಟ ಎತ್ತರದಲ್ಲಿತ್ತು ತಂತಿಗೆ ಮರ ತಾಗಿ ಆನೆ ಸ್ಪರ್ಶಿಸಿ ದ್ದರಿಂದ ಆನೆ ಸಾವಿಗೀಡಾಗಿದೆ ಎಂದು ಸುಳ್ಯ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರದೀಪ್ ಮತ್ತು ಗುತ್ತಿಗಾರು ಶಾಖಾಧಿಕಾರಿ ಬೋರಯ್ಯ ತಿಳಿಸಿದರು.
ರಾತ್ರಿಯ ವೇಳೆ ಒಂಟಿ ಸಲಗವೊಂದು ಈ ಪರಿಸರದಲ್ಲಿ ಕೃಷಿಕರ ತೋಟಕ್ಕೆ ಹಾನಿ ಮಾಡುತ್ತಿರುವುದು ಸಾಮಾನ್ಯ ವಾಗಿದೆ.ಕೃಷಿ ನಾಶದ ಸಂಧರ್ಬ ಕೃಷಿಕರು ಸದ್ದು ಮಾಡಿ ಓಡಿಸುತ್ತಿದ್ದರು.ಇದೀಗ ತೋಟಕ್ಕೆಂದು ಬಂದ ಒಂಟಿ ಆನೆ ತನ್ನ ಸಾವಿಗೆ ತಾನೆ ಕಾರಣವಾಗಿದೆ ಎಂದು ಸ್ಥಳಿಯರಾದ ಕೃಷಿಕ ದೇವಿದಾಸ್ ಕಜ್ಜೋಡಿ ಅಭಿಪ್ರಾಯ.
ಘಟನಾ ಸ್ಥಳಕ್ಕೆ ಆನೆ ಸತ್ತ ವಿಷಯ ತಿಳಿದು ಸುತ್ತಮುತ್ತಲಿನ ಗ್ರಾಮದ ಜನತೆ ಮಳೆಯನ್ನು ಲೆಕ್ಕಿಸದೆ ತೀವ್ರ ಹದೆಗೆಟ್ಟ ಮಣ್ಣಿನ ರಸ್ತೆಯಲ್ಲಿ ಧಾವಿಸಿ ಬಂದಿದ್ದರು.ಆನೆಯ ಶವ ಮಹಜರು ಬಳಿಕ ದಹನ ಮಾಡಲು ಗ್ರಾಮಸ್ಥರು ಕಾಡಿನಿಂದ ಕಟ್ಟಿಗೆ ತಂದು ಸಹಕರಿಸಿದರು.ಸುಬ್ರಹ್ಮಣ್ಯ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮೆಸ್ಕಾಂನ ಸಿಬ್ಬಂದಿಗಳು ಸ್ಥಳದಲ್ಲಿ ಉಪಸ್ಥಿತರಿದ್ದರು.
ಸ್ಥಳೀಯರಾದ ಜಯಪ್ರಕಾಶ್ ಕಜ್ಜೋಡಿ,ಪಧ್ಮನಾಭ ಕರಂಗಲ್ಲು, ಮೋಹನ ದಾಸ ,ಕಿರಣ,ಪುರುಷೊತ್ತಮ,ಉಮೇಶ್,ಗಿರೀಶ್ ಹೆರಕಜೆ ರಾಘವ ಭಟ್ಟೋಡಿ,ಜನಾರ್ಧನ ಕುಂಟಿಕಾನ,ಗಂಗಾಧರ, ಚಿನ್ನಪ್ಪ ಕುಂಟಿಕಾನ,ಭುವನೇಶ್ ಭಟ್ಟೋಡಿ,ಮಾದವ ಮಾಡಬಾಕಿಲು.ಕಿಶೋರ್,ಪ್ರಕಾಶ್,ವಿನಯ ಮಾಡಬಾಕಿಲು,ಮೋಹನ ಮಾಡಬಾಕಿಲು,ಪುರುಷೋತ್ತಮ ಮಾಡಬಾಕಿಲು,ಶರತ್ ಕರಂಗಲ್ಲು,ಸುರೇಶ್ ಕಟ್ಟ,ಶಿವಪ್ರಕಾಶ್ ಕಟ್ಟ ಸೇರಿ ಹಲವು ಮಂದಿ ಕಟ್ಟಿಗೆ ಸಂಗ್ರಹಿಸುವಲ್ಲಿ ಸಹಕರಿಸಿದರು.
Click this button or press Ctrl+G to toggle between Kannada and English