ಮಂಗಳೂರು: ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿರುವ ಸ್ಮಶಾನದಲ್ಲಿ ಹಸುಗೂಸೊಂದರ ಅಂತ್ಯಸಂಸ್ಕಾರವನ್ನು ಮಾಡಲು ತಯಾರು ನಡೆಸಲಾಗುತ್ತಿತ್ತು. ಅಂತ್ಯಸಂಸ್ಕಾರ ವಿಧಿವಿಧಾನಗಳನ್ನು ನಡೆಸಿ ದಫನ ಮಾಡಲು ಮುಂದಾಗ ಮಗು ಆಳಲು ಆರಂಭಿಸಿದ ವಿಸ್ಮಯಕಾರಿ ಘಟನೆ ಉಳ್ಳಾಲದಲ್ಲಿ ಶನಿವಾರ ನಡೆದಿದೆ.
ದೇರಳಕಟ್ಟೆಯಲ್ಲಿರುವ ಆಸ್ಪತ್ರೆಯೊಂದರಲ್ಲಿ ಹೆರಿಗೆಗೆಂದು ಕುಮುಟದ ಗೌರಿ ಎಂಬವರು ಕಳೆದ 15 ದಿನಗಳ ಹಿಂದೆ ದಾಖಲಾಗಿದ್ದರು. ಇವರಿಗೆ ಸೀಸೆರಿಯನ್ ಮಾಡಿದ ವೈದ್ಯರು ಮಗುವನ್ನು ಹೊರ ತೆಗೆದಿದ್ದರಲ್ಲದೆ ಹಸುಗೂಸಿನ ಚೇತರಿಕೆಗಾಗಿ ವಿಷೇಶ ಕೋಣೆಯಲ್ಲಿ ಇರಿಸಲಾಗಿತ್ತು.
ಶನಿವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಗೌರಿಯ ಗಂಡ ಪುಷ್ಪರಾಜ್‌ಗೆ ಕರೆ ಮಾಡಿದ ಆಸ್ಪತ್ರೆಯ ವೈದ್ಯರು ನಿಮ್ಮ ಮಗುವಿನ ಆರೋಗ್ಯ ಹದಗೆಟ್ಟಿದೆ. ನಾವು ವೆಂಟಿಲೇಶನ್ ತೆಗೆದರೆ ಮಗು ಸಾವನ್ನಪ್ಪುತ್ತದೆ. ನೀವು ಈ ಕೂಡಲೇ ಬನ್ನಿ’ ಎಂದು ಹೇಳಿದ್ದಾರೆ. ಕೂಡಲೇ ಆಸ್ಪತ್ರೆಗೆ ಧಾವಿಸಿ ಬಂದ ಪುಷ್ಪರಾಜ್ ಅವರ ಕೈಯಲ್ಲಿ ಹಸುಗೂಸನ್ನು ಕೊಟ್ಟು ಮಗು ಮೃತಪಟ್ಟಿದೆ ಎಂದು ಹೇಳಿದ್ದಾರೆ.
ಬೇರೆ ವಿಧಿ ಇಲ್ಲದೆ ಮಗುವಿನ ಅಂತ್ಯಸಂಸ್ಕಾರವನ್ನು ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿರುವ ಸ್ಮಶಾನದಲ್ಲಿ ಹಿಂದೂ ಸಂಪ್ರದಾಯದಂತೆ ಸಕಲ ಕ್ರಿಯೆಗಳನ್ನು ನಡೆಸುತ್ತಿದ್ದರು. ಮಗುವಿನ ಬಾಯಿಗೆ ತುಳಸಿಯಲ್ಲಿ ಹಾಲನ್ನು ಎರೆಯುತ್ತಿದ್ದ ಸಂದರ್ಭದಲ್ಲಿ ಹಸುಗೂಸು ಕಣ್ಣರಳಿಸಿ ತನ್ನ ದೇಹವನ್ನು ಅಲ್ಲಾಡಿಸಿದೆ. ಇದನ್ನು ಕಂಡು ಹರ್ಷ ತುಂದಿಲರಾದ ಮನೆಮಂದಿ ಕೂಡಲೇ ಮಗುವನ್ನು ಕರೆತಂದು ಮಂಗಳೂರಿನ ಎಸ್‌ಸಿಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗು ಇದೀಗ ಚೇತರಿಸಿಕೊಳ್ಳುತ್ತಿದೆ.
ಮಗು ಸಾವನ್ನಪ್ಪಿದೆ ಎಂದು ಘೋಷಣೆ ಮಾಡಿದ ದೇರಳಕಟ್ಟೆಯ ಆಸ್ಪತ್ರೆಯ ವೈದ್ಯರ ಬೇಜವಾಬ್ದಾರಿಗೆ ಪುಷ್ಪರಾಜ್ ಇದೀಗ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ .
Click this button or press Ctrl+G to toggle between Kannada and English