ಮಂಗಳೂರು: ವಿಶ್ವ ಹೃದಯ ದಿನದ ಅಂಗವಾಗಿ ಕೆಎಂಸಿ ಆಸ್ಪತ್ರೆ ಹಮ್ಮಿಕೊಂಡಿದ್ದ ‘ವಿಶ್ವ ಹೃದಯ ದಿನದ ಓಟ’ದಲ್ಲಿ ಸುಮಾರು 3 ಸಾವಿರ ಮಂದಿ ಭಾಗವಹಿಸಿದರು. ಕೈಗಳನ್ನು ತೊಡೆಗೆ ಬಡಿಯುತ್ತಾ ಹೃದಯ ಮಾಡುವ ಸದ್ದಿನ ಪ್ರತಿಧ್ವನಿಯನ್ನು 5 ನಿಮಿಷಗಳ ಕಾಲ ಬಾಯಲ್ಲಿ ಮೂಡಿಸಿ ಏಕಕಾಲದಲ್ಲಿ ಇಷ್ಟು ಸಂಖ್ಯೆಯ ಜನ 5 ನಿಮಿಷ ನಿರಂತರವಾಗಿ ಸದ್ದು ಮಾಡಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದರು. ಒಟ್ಟು 2500 ಮಂದಿ ನೋಂದಣಿ ಮಾಡಿಸಿ ಕೊಂಡಿದ್ದರು
ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನ ಪ್ರತಿನಿಧಿಯಾಗಿ ಆಗಮಿಸಿದ ಡಾ.ಸುನೀತಾ ಧೋಟೆ ಅವರು 5 ನಿಮಿಷ ನಡೆದ ಕಾರ್ಯಕ್ರಮವನ್ನು ಪರಿಶೀಲಿಸಿ ‘ಕೆಎಂಸಿಯ ಈ ಪ್ರಯತ್ನ ಸಫಲವಾಗಿದ್ದು, ದಾಖಲೆ ನಿರ್ಮಾಣವಾಗಿದೆ’ ಎಂದು ಘೋಷಿಸಿದಾಗ ‘ಏಷ್ಯಾದ ಅತಿ ದೊಡ್ಡ ಹ್ಯೂಮನ್ ಹಾರ್ಟ್ ಬೀಟ್ ಸಿಮ್ಯುಲೇಷನ್’ ಪ್ರಮಾಣ ಪತ್ರ ಪಡೆದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಕೆಎಂಸಿ ಪಾತ್ರವಾಯಿತು. ಸಹ ಉಪಕುಲಪತಿ ಡಾ.ವಿ.ಸುರೇಂದ್ರ ಶೆಟ್ಟಿ, ಡೀನ್ ವೆಂಕಟರಾಯ ಪ್ರಭು ಅವರಿಗೆ ಸುನೀತಾ ಅವರು ಪ್ರಮಾಣಪತ್ರ ನೀಡಿದರು.
ಚಿತ್ರ ನಟಿ ಶರ್ಮಿಳಾ ಮಾಂಡ್ರೆ ಅವರು ಹೃದಯ ದಿನ ಓಟಕ್ಕೆ ಚಾಲನೆ ನೀಡಿ, ಎಲ್ಲರಲ್ಲೂ ಹೃದಯ ಬಗ್ಗೆ ಕಾಳಜಿ ಮತ್ತು ಹೃದಯ ರೋಗಗಳ ಬಗ್ಗೆ ಜಾಗೃತಿ ಮೂಡಬೇಕು ಎಂದರು. ಅಂತರರಾಷ್ಟ್ರೀಯ ಅಥ್ಲೀಟ್ ಕ್ಲಿಫರ್ಡ್ ಜೋಶುವ ಅವರು ಓಟದ ಜ್ಯೋತಿ ಹಿಡಿದು ಎಂ.ಜಿ.ರಸ್ತೆ ಮೂಲಕ ಪಿ.ವಿ.ಎಸ್.ವೃತ್ತ, ಬಂಟ್ಸ್ ಹಾಸ್ಟೆಲ್ ವೃತ್ತದ ಮೂಲಕ ಕೆಎಂಸಿ ಆಸ್ಪತ್ರೆ ಆವರಣದ ವರೆಗೆ ಓಟವನ್ನು ಮುನ್ನಡೆಸಿದರು. ವಿದ್ಯಾರ್ಥಿಗಳು, ವಿವಿಧ ಸಂಸ್ಥೆಗಳು, ಸಂಘಟನೆಗಳ ಪ್ರತಿನಿಧಿಗಳು ಓಟದಲ್ಲಿ ಭಾಗವಹಿಸಿದ್ದರು. ವಿವಿಧ ಭಿತ್ತಿಪತ್ರಗಳನ್ನು, ಬ್ಯಾನರ್ಗಳನ್ನು ಪ್ರದರ್ಶಿಸುತ್ತಾ ಹೃದಯದ ಮತ್ತು ಹೃದಯ ರೋಗಗಳ ಬಗ್ಗೆ ಮಾಹಿತಿ ನೀಡುತ್ತಾ ಘೋಷಣೆಗಳನ್ನೂ ಕೂಗುತ್ತಾ ಸಾಗಿದರು.
ನಗರದ ಜ್ಯೋತಿಯಲ್ಲಿರುವ ಕೆಎಂಸಿ ಆಸ್ಪತ್ರೆ ಆವರಣದಲ್ಲಿ ನಡೆದ ಓಟದ ಸಮಾರೋಪದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಆನಂದ ವೇಣುಗೋಪಾಲ್, ಆನಂದ್ ಕಿಣಿ, ಆರ್.ಎಲ್.ಕಾಮತ್, ದಿಲೀಪ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English