ಮಂಗಳೂರು : ರಾಜಸ್ಥಾನ ಮೂಲದ ಕೆಲವೊಂದು ವ್ಯಕ್ತಿಗಳು ಅಲ್ಲಿ ಯಥೇಚ್ಛವಾಗಿ ಸಿಗುವ ನವಿಲುಗಳ ಆಹಾರದಲ್ಲಿ ಅಮಲು ಪದಾರ್ಥಗಳನ್ನು ಬೆರೆಸಿ ಅವುಗಳನ್ನು ಹಿಡಿದು ಕೊಂದು ತಿಂದು ಅವುಗಳ ಗರಿಗಳನ್ನು ದೇಶಾದ್ಯಂತ ಮುಕ್ತವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಪರಿಸರ ಸಂರಕ್ಷಣಾ ಒಕ್ಕೂಟ ತಿಳಿಸಿದೆ.
ಮಂಗಳೂರು ನಗರದಲ್ಲಿ ಈಗ ಜಾತ್ರಾ ಸಮಯ ಆದುದರಿಂದ ಈ ರಾಜಸ್ಥಾನದ ಜನರು ಹೊರೆಗಟ್ಟಲೆ ನವಿಲು ಗರಿಗಳನ್ನು ತಂದು ಸಾರ್ವಜನಿಕವಾಗಿ ಮಾರಾಟ ಮಾಡುತ್ತಿದ್ದಾರೆ. ಅವರನ್ನು ವಿಚಾರಿಸಿದರೆ ತಾವುಗಳು ಬಿದ್ದ ಗರಿಗಳನ್ನು ತಂದು ಮಾರಾಟ ಮಾಡುತ್ತಿರುವುದಾಗಿ ತಿಳಿಸುತ್ತಾರೆ. ಇದು ಶುದ್ಧ ಸುಳ್ಳು. ಯಾಕೆಂದರೆ ಇದೀಗ ಮಳೆಗಾಲ ಮುಗಿಯುತ್ತಿರುವ ಸಮಯ ಈ ಸಮಯದಲ್ಲಿ ನವಿಲು ಹೊಸ ಗರಿಗಳಿಂದ ಕಂಗೊಳಿಸುತ್ತಿರುತ್ತದೆ. ಹಾಗೂ ಇವುಗಳ ತಲೆಗಳಲ್ಲಿರುವ ಜುಟ್ಟು ಜೀವಮಾನದಲ್ಲಿ ಒಮ್ಮೆ ಮಾತ್ರ ಬರುವಂತದು. ಈ ಮಾರಾಟಗಾರರು ನವಿಲಿನ ಜುಟ್ಟುನಿಂದ ಕೂಡ ಸಹಸ್ರ ಸಂಖ್ಯೆಗಳಲ್ಲಿ ಬೀಸಣಿಕೆಗಳನ್ನು ಮಾಡಿ ಮಾರಾಟ ಮಾಡುತಿದ್ದಾರೆ ಎಂದು ಒಕ್ಕೂಟ ಆರೋಪಿಸಿದೆ.
ಇವರಲ್ಲಿರುವ ಎಲ್ಲಾ ಉದ್ದನೆಯ ಗರಿಗಳು ಏಕ ಸ್ವಾಮ್ಯವಾಗಿದ್ದು ಹೊಸ ಗರಿಗಳಾಗಿರುತ್ತದೆ. ಮತ್ತು ನವಿಲು ನಮ್ಮ ರಾಷ್ಟ್ರೀಯ ಪಕ್ಷಿ. ವನ್ಯ ಜೀವಿ ಕಾಯ್ದೆಯ ಪ್ರಕಾರ ಯಾವುದೇ ವನ್ಯ ಜೀವಿಗಳ ಹತ್ಯೆ, ಮಾಂಸ,ಚರ್ಮ, ಗರಿ ಇವುಗಳ ದಾಸ್ತಾನು ಅಥವಾ ಮಾರಾಟ ಕಾನೂನಿನ ಪ್ರಕಾರ ಅಕ್ಷಮ್ಯ ಅಪರಾಧ. ಇಂತಹ ದ್ರೋಹಿಗಳ ವಿರುದ್ಧ ಕ್ರಮ ಕೈ ಗೊಳ್ಳಬೇಕಾದ ಮಂಗಳೂರು ಅರಣ್ಯ ಇಲಾಖೆ ಈ ಬಗ್ಗೆ ಮಾಹಿತಿಯನ್ನು ನೀಡಿದರೆ ಅಸಡ್ಡೆ ತೋರುತ್ತಿದ್ದಾರೆ. ಅರಣ್ಯ ಸಚಿವರ ನಾಡಾದ ಮಂಗಳೂರಿನಲ್ಲಿಯೇ ಈ ರೀತಿ ಅಕ್ರಮಗಳು ನಡೆಯುತ್ತಿದ್ದರೆ ನಮ್ಮ ಅರಣ್ಯ ಜೀವಿಗಳ ಪಾಡೇನು ಇದನ್ನು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಖಂಡಿಸುತ್ತದೆ. ಹಾಗೂ ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
Click this button or press Ctrl+G to toggle between Kannada and English