ರವೂಫ್ ನತ್ತ ಪೊಲೀಸ್ ಇಲಾಖೆ ಗಮನಹರಿಸಲಿ…

12:09 AM, Saturday, January 3rd, 2015
Share
1 Star2 Stars3 Stars4 Stars5 Stars
(4 rating, 6 votes)
Loading...

Traffic Rauf

ಮಂಗಳೂರು : ಯಾರಿಗೆ ಏನು ಆಗಬೇಕು ಎಂದು ಮನಸ್ಸಿರತ್ತೋ ಅದೇ ಆಗುತ್ತಾ ಹೋದರೆ ದೇಶದಲ್ಲಿ ಬಡವ, ಶ್ರೀಮಂತ ಅಥವಾ ವಿದ್ಯಾವಂತ, ಅವಿದ್ಯಾವಂತ, ನಿರುದ್ಯೋಗಿ, ಉದ್ಯೋಗಿ ಎನ್ನುವ ವಿಂಗಡನೆನೆ ಇರುತ್ತಿರಲಿಲ್ಲ. ಆದರೆ ಭಗವಂತನ ಮನಸ್ಸಿನಲ್ಲಿ ಹೇಗೆ ಇದೆಯೋ ಪ್ರಪಂಚ ಹಾಗೇ ನಡೆಯುತ್ತದೆ. ನಾಸ್ತಿಕರು ಇದನ್ನು ಒಪ್ಪುತ್ತಾರೋ ಬಿಡ್ತಾರೋ ಅದು ಬೇರೆ ವಿಷಯ. ಆದರೆ ಜೆ. ಅಬ್ದುಲ್ ರವೂಫ್ ಎಂಬ 42 ವರ್ಷದ ವ್ಯಕ್ತಿಯನ್ನು ನೀವು ಸರಿಯಾಗಿ ಗಮನಿಸಿದರೆ ಭಗವಂತ ಇವರ ವಿಷಯದಲ್ಲಿ ಸ್ವಲ್ಪ ಹೆಚ್ಚೇ ಕರುಣೆ ತೋರಬೇಕು ಎಂದು ಅನಿಸುತ್ತದೆ. ರವೂಫ್ ಬಂಟ್ವಾಳ ತಾಲೂಕಿನ ಫಜೀರ್ ಗ್ರಾಮದ ಮೊಹಿಯುದ್ದೀನ್ ಜುಮಾ ಮಸೀದಿಯ ಹಿಂಬದಿಯಲ್ಲಿ ಒಂದು ಪುಟ್ಟ ಮನೆಯಲ್ಲಿ ಕಳೆದ 4 ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಅದರ ಮೊದಲು ಅವರು ಮಂಗಳೂರಿನ ಜೆಪ್ಪು ಮಹಾಕಾಳಿಪಡ್ಪುವಿನಲ್ಲಿ ವಾಸ್ತವ್ಯವಿದ್ದರು. ರವೂಫ್ ಕಲಿತದ್ದು 8 ನೇ ತರಗತಿಯಾದರೂ ಶಾಲೆಯಲ್ಲಿ ಡಿಗ್ರಿ ಕಲಿತವರಿಗಿಂತ ಹೆಚ್ಚಿನ ಸಾಮಾನ್ಯ ಜ್ಞಾನ ಅವರಿಗಿದೆ. ಅಂತಹ ರವೂಫ್ ಅವರಿಗೆ ಟ್ರಾಫಿಕ್ ಜಾಮ್ ಕಂಡರೆ ಆಗುವುದಿಲ್ಲ. ಹಾಗಂತ ಅವರು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡ ಬೇರೆ ಚಾಲಕರಂತೆ ಸಿಡಿಮಿಡಿಗೊಳ್ಳುವುದಿಲ್ಲ. ಬೊಬ್ಬೆ ಹಾಕುವುದಿಲ್ಲ, ಒಬ್ಬರಿಗೊಬ್ಬರು ಅವಾಚ್ಯ ಶಬ್ದಗಳಿಂದ ಬೈಯುವುದಿಲ್ಲ. ಏಕೆಂದರೆ ರವೂಫ್ ಇತರರಂತೆ ಅಲ್ಲವೇ ಅಲ್ಲ. ಅಷ್ಟಕ್ಕೂ ರವೂಫ್ ಅವರ ಬಳಿ ಯಾವುದೇ ವಾಹನ ಇಲ್ಲ. ಅವರು ಟ್ರಾಫಿಕ್ ಜಾಮ್ನಲ್ಲಿ ಸಿಕ್ಕಿ ಹಾಕಿಕೊಳ್ಳುವ ಪ್ರಮೇಯವೇ ಬರುವುದಿಲ್ಲ. ರವೂಫ್ ಅವರ ಬಳಿ ಇರುವುದು ಬರೀ ಸೈಕಲ್ ಮಾತ್ರ. ಅದನ್ನು ಹೇಗೊ ನುಗ್ಗಿಸಿ ಅವರು ಟ್ರಾಫಿಕ್ ಜಾಮ್ನಿಂದ ಪಾರಾಗಿ ಮನೆಗೆ ಅಥವಾ ಉದ್ಯೋಗದ ಸ್ಥಳಕ್ಕೆ ಹೋಗಬಹುದು. ಆದರೆ ರವೂಫ್ ಅವರು ಹಾಗೇ ಮಾಡುವುದಿಲ್ಲ. ಅವರು ಟ್ರಾಫಿಕ್ ಜಾಮ್ ಆದ ಕಡೆ ಒಂದು ಕ್ಷಣ ನಿಲ್ಲುತ್ತಾರೆ. ತಕ್ಷಣ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ಕೂಡಲೇ ಕಾರ್ಯಪ್ರವರ್ತರಾಗುತ್ತಾರೆ. ಕೆಲವೇ ನಿಮಿಷಗಳಲ್ಲಿ ಒಬ್ಬ ನುರಿತ ಟ್ರಾಫಿಕ್ ಪೊಲೀಸ್ ತರಹ ಆ ರಸ್ತೆಯನ್ನು ಟ್ರಾಫಿಕ್ ಮುಕ್ತವಾಗಿ ಮಾಡುತ್ತಾರೆ.

ಇವರ ಈ ಸಾಧನೆಯನ್ನು ನೋಡಿ ಖುಷಿಗೊಂಡ ವಾಹನ ಚಾಲಕರು ಇವರಿಗೆ ಮನಸ್ಸಿನಲ್ಲಿಯೇ ವಿಶ್ ಮಾಡಿ ಹೋಗುತ್ತಾರೆ. ಕಳೆದ ಕೆಲವಾರು ವರ್ಷಗಳಿಂದ ರವೂಫ್ ಅವರು ತನ್ನ ಬಿಡುವಿನ ವೇಳೆಯನ್ನು ಕಳೆಯುವುದೇ ಈ ಟ್ರಾಫಿಕ್ ಜಾಮ್ ಇರುವ ಸ್ಥಳಗಳಲ್ಲಿ. ಈ ಹವ್ಯಾಸ ಈಗ ರವೂಫ್ ಅವರ ಪಾಲಿಗೆ ಅವಿಭಾಜ್ಯ ಅಂಗವಾಗಿ ಹೋಗಿದೆ. ಮಂಗಳೂರಿನ ಪೊಲೀಸ್ ಲೇನ್, ಬೋಳಾರ, ಶಾದಿ ಮಹಾಲ್, ಹಂಪನಕಟ್ಟೆಯ ಮಿಲಾಗ್ರಿಸ್ ಹಾಲ್, ಬಂದರ್ನ ಯತೀಮ್ ಖಾನ ಹಾಲ್, ಮುಡಿಪು, ಫರಂಗಿಪೇಟೆ, ಬೊಳಿಯಾರ್, ರಂತಡ್ಕ, ಮಂಗಳೂರಿನ ಯೂನಿಟಿ ಹೆಲ್ತ್ ಕಾಂಪ್ಲೆಕ್ಸ್, ಕಂಕನಾಡಿ ಜಂಕ್ಷನ್ ಬಳಿ, ಬಂದರ್ನ ಮಿಶನ್ ಸ್ಟ್ರೀಟ್, ಹಂಪನಕಟ್ಟೆ ಸಿಗ್ನಲ್ ಬಳಿ, ಪಂಪವೆಲ್ ಸರ್ಕಲ್ ಇತ್ಯಾದಿ ಪ್ರದೇಶಗಳಲ್ಲಿ ಇವರು ಟ್ರಾಫಿಕ್ ಸಹಾಯಕನಾಗಿ ಕಾರ್ಯ ನಿರ್ವಹಿಸಿ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾಗಿದ್ದಾರೆ. ಇವರಿಗೆ ಕೆಲಸ ನಿರ್ವಹಣೆ ಕಾಲದಲ್ಲಿ ಕೆಲವು ಜನರಿಂದ ಆಕ್ಷೇಪಣೆ ಹಾಗೂ ಬೆದರಿಕೆಗಳು ಬರುವುದಲ್ಲದೇ, ಬಿಸಿಲು ಮಳೆಗೆ ಯಾವುದೇ ರಕ್ಷಣೆ ಇಲ್ಲದೆ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಎಲ್ಲರೂ ಬರೀ ಬಾಯಿ ಮಾತಿನಿಂದ ಹೊಗಳುವುದು ಮತ್ತು ಹೆಚ್ಚೆಂದರೆ ಯಾವುದಾದರೂ ಸಂಘ ಸಂಸ್ಥೆಗಳು ಶಾಲು, ಹೂ ಗುಚ್ಚ ಬಿಟ್ಟು ಏನೂ ಕೊಟ್ಟಿಲ್ಲ. ಆಥರ್ಿಕವಾಗಿ ಅಷ್ಟೇನೂ ಅನುಕೂಲರಲ್ಲದ ರವೂಫ್ ಅವರಿಗೆ ಇನ್ನಾದರೂ ಅವರ ಸೇವೆ ಮನಗಂಡು ನಮ್ಮ ಪೊಲೀಸ್ ಇಲಾಖೆ ಟ್ರಾಫಿಕ್ ಸಹಾಯಕರಾಗಿ ನೇಮಿಸಿಕೊಳ್ಳಲಿ ಎನ್ನುವುದು ನಮ್ಮ ಹಾರೈಕೆ.

ಕೃಪೆ, ಮೆಗಾ ಮೀಡಿಯಾ ಪತ್ರಿಕೆ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English