ಮಂಗಳೂರು : ಕಾಯಕದ ಮೂಲಕ ಧಾರ್ಮಿಕ ಜಾಗೃತಿಯನ್ನು ಸಮಾಜದಲ್ಲಿ ತಮ್ಮ ಸರಳ ಸುಲಭ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ 11ನೇ ಶತಮಾನದ ದೇವರ ದಾಸಿಮಯ್ಯರ ಜೀವನ ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಿಳಿಸಿದ್ದಾರೆ.
ಅವರು ಇಂದು ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ದ.ಕ. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ದ.ಕ.ಜಿಲ್ಲೆ ಇವರ ಸಹಕಾರದೊಂದಿಗೆ ಏರ್ಪಡಿಸಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷರಾದ ಕುಂಬಳೆ ಸುಂದರ ರಾವ್ ಮಾತನಾಡಿ, ದೇವರದಾಸಿಮಯ್ಯ ಒಬ್ಬ ನೇಕಾರ ವೃತ್ತಿ ಅವಲಂಬಿಯಾಗಿ ಅಂದಿನ ಸಮಾಜದ ಅಂಕುಡೊಂಕುಗಳನ್ನು ತನ್ನ ವಚನಗಳ ಮೂಲಕ ತಿಳಿಸಿದ ಆದ್ಯ ವಚನಕಾರರಾದರು. ದಾಸಿಮಯ್ಯ ಸಮಾಜದಲ್ಲಿ ಮೇಲು ಕೀಳು ಎಂಬ ಭೇದಗಳನ್ನು ಬಿಟ್ಟು ಎಲ್ಲರೂ ತಮ್ಮ ಕಾಯಕ ಮಾಡುವ ಮೂಲಕ ಸಮಾಜಕ್ಕೆ ಒಳಿತನ್ನು ಮಾಡುವ ಪರಿಯನ್ನು ತಿಳಿಸಿಕೊಟ್ಟಿದ್ದಾರೆ ಎಂದರು.
ಜಯಂತಿಯ ಸಂದೇಶ ಸಾರಿದ ಬೆಸೆಂಟ್ ಮಹಿಳಾ ಕಾಲೇಜು,ಮಂಗಳೂರು ಇಲ್ಲಿಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ||ಮಿನಾಕ್ಷಿ ಮಾತನಾಡಿ, ದೇವರ ದಾಸಿಮಯ್ಯನವರು ೧೦-೧೧ನೇ ಶತಮಾನದಲ್ಲೇ ಸ್ತ್ರೀಯರ ಬಗ್ಗೆ ಉತ್ತಮ ಅಭಿಪ್ರಾಯವನ್ನು ಹೊಂದಿದವರಾಗಿದ್ದು, ತಮ್ಮ ವಚನಗಳಿಂದ ಸಮಾಜಕ್ಕೆ ಉತ್ತಮ ಪಾಠ ಕಲಿಸಿದರು. ದೇವರದಾಸಿಮಯ್ಯ ೧೨ನೇ ಶತಮಾನದ ವಚನಕಾರರ ಗುರು ಎಂದರೆ ತಪ್ಪಾಗಲಾರದು ಎಂದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕರಾದ ಶರಣಬಸಪ್ಪ ದೇವರ ದಾಸಿಮಯ್ಯನವರ ಕುರಿತು ಪ್ರಸ್ಥಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಕರ್ನಾಟಕ ದೇವಾಂಗ ಅಸೋಶಿಯೇಶನ್ ಮಂಗಳೂರು ಇದರ ಅಧ್ಯಕ್ಷರಾದ ಆರ್.ವೆಂಕಟೇಶ್, ಶ್ರೀಧರ್, ಪುರಂದರ ಡಿ. ಶೆಟ್ಟಿಗಾರ್ ಪ್ರೊ||ವೇದಾವತಿ,ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ಆರ್.ಉಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಚಂದ್ರಹಾಸ ರೈ ಮುಂತಾದವರು ಹಾಜರಿದ್ದರು.
Click this button or press Ctrl+G to toggle between Kannada and English