ಪತ್ರಕರ್ತರು ಮನುಷ್ಯ ಪಂಥಿಯನಾಗಿರಬೇಕು : ವಿ.ಗ. ನಾಯಕ್

7:47 PM, Tuesday, April 7th, 2015
Share
1 Star2 Stars3 Stars4 Stars5 Stars
(4 rating, 6 votes)
Loading...
Pago15

ಮಂಗಳೂರು : ಕಳೆದ (2015 ನೇ) ಸಾಲಿನ ಪ.ಗೋ. (ಪದ್ಯಾಣ ಗೋಪಾಲಕೃಷ್ಣ ಸಂಸ್ಮರಣಾ ಗ್ರಾಮೀಣ ವರದಿಗಾರಿಕೆಗಾಗಿ ) ಪ್ರಶಸ್ತಿಯನ್ನು ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸಮಾರಂಭದಲ್ಲಿ ವಿಜಯಕರ್ನಾಟಕ ದ ಉಡುಪಿ ವರದಿಗಾರ ಬಾಲಕೃಷ್ಣ ಶಿಬಾರ್ಲ ಅವರಿಗೆ ಪ್ರದಾನ ಮಾಡಲಾಯಿತು.

ಪ್ರಶಸ್ತಿ ನೀಡಿ ಮಾತನಾಡಿದ ಕನ್ನಡದ ಹಿರಿಯ ಸಾಹಿತಿ, ವಿ.ಗ. ನಾಯಕ್, ಪತ್ರಕರ್ತರು ಎಲ್ಲವೂ ಸುಧಾರಣೆಯಾಗಬೇಕು ಎನ್ನುವ ಕಾಳಜಿ ಇರುವವರು. ಸಾಹಿತಿಗಳಂತೆ ಪತ್ರಕರ್ತರು ಧಿಮಾಕು ಹೊಂದಿದವರಲ್ಲ. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮೂಲಕ ಯಾವುದೇ ತತ್ವ ಸಿದ್ಧಾಂತಗಳಿಗೆ ಸೀಮಿತಗೊಳ್ಳದೇ ಮನುಷ್ಯಪಂಥೀಯನಾಗಿರಬೇಕು. ಯುವ ಪತ್ರಕರ್ತರು ಸಾಹಿತ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಪದ್ಯಾಣ ಗೋಪಾಲಕೃಷ್ಣರು ಛಲ, ಸ್ವಾಭಿಮಾನ ಹೊಂದಿದ ಪತ್ರಕರ್ತರಾಗಿದ್ದರು. ಯುವ ಪತ್ರಕರ್ತರಿಗೆ ಮಾದರಿಯಾಗಿದ್ದರು ಎಂದು ನುಡಿದರು.

ಪ್ರಶಸ್ತಿಯ ತೀರ್ಪುಗಾರರಾಗಿದ್ದ ಮುಖ್ಯ ಅತಿಥಿ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ಪದ್ಯಾಣ ಗೋಪಾಲಕೃಷ್ಣರು ಅಪಾರ ಅನುಭವಿ ಹಾಗೂ ಕ್ರಿಯಾತ್ಮಕ ಪತ್ರಕರ್ತರಾಗಿದ್ದರು. ಅವರ ಹೆಸರಿನ ಪ್ರಶಸ್ತಿಯು ಯುವ ಪತ್ರಕರ್ತರಿಗೆ ಪ್ರೋತ್ಸಾಹದಾಯಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಶಸ್ತಿ ಸ್ವೀಕರಿಸಿದ ಬಾಲಕೃಷ್ಣ ಶಿಬಾರ್ಲ, ಪ.ಗೋ.ರಂತಹ ಮೇರು ವ್ಯಕ್ತಿತ್ವದ ಹೆಸರಿನಲ್ಲಿ ನೀಡುವ ಪ್ರಶಸ್ತಿ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಪ್ರಶಸ್ತಿಯೇ ದೊಡ್ಡ ಗೌರವ, ಪ್ರಶಸ್ತಿಯೊಂದಿಗೆ ನೀಡುವ ಮೊತ್ತವನ್ನು ಅರ್ಥಪೂರ್ಣ ಕೆಲಸಗಳಿಗೆ ವಿನಿಯೋಗಿಸುವಂತೆ ವಿನಂತಿಸಿದರು.

ಪದ್ಯಾಣ ಗೋಪಾಲಕೃಷ್ಣ ಅವರ ಧರ್ಮಪತ್ನಿ ಸಾವಿತ್ರಿ ಗೋಪಾಲಕೃಷ್ಣ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ಆರ್., ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಪಿ. ಬಿ. ಹರೀಶ್ ರೈ, ಖಜಾಂಚಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳಾ ಸ್ವಾಗತಿಸಿ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ರವೀಂದ್ರ ಶೆಟ್ಟಿ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ ವಂದಿಸಿದರು.

ಪ್ರಶಸ್ತಿಯು 10 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English