ಪಿಲಿಕುಳದ ‘ರಾಜ’ ಹುಲಿ ಹೃದಯಾಘಾತದಿಂದ ಸಾವು

9:10 PM, Saturday, May 23rd, 2015
Share
1 Star2 Stars3 Stars4 Stars5 Stars
(No Ratings Yet)
Loading...
Tiger Raja

ಮಂಗಳೂರು: ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿನ 21 ವರ್ಷ ಪ್ರಾಯದ ಹಿರಿಯ ‘ರಾಜ’ ಎಂಬ ಹುಲಿ ಶುಕ್ರವಾರ ಮುಂಜಾನೆ 5 ಗಂಟೆಗೆ ಹೃದಯಾಘಾತದಿಂದ ಸಹಜವಾಗಿ ಮೃತಪಟ್ಟಿದೆ.

2003ರಲ್ಲಿ ಶಿವಮೊಗ್ಗದ ಪ್ರಾಣಿ ಸಂಗ್ರಹಾಲಯದಿಂದ ಕರೆತರಲಾಗಿರುವ ರಾಜ ಹುಲಿಗೆ ವಯಸ್ಸಾದ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಬಳಲಿದ್ದು, ನಾಲ್ಕು ತಿಂಗಳಿಂದ ಆಹಾರ ಸೇವನೆಯ ಪ್ರಮಾಣ ಮಾತ್ರವಲ್ಲದೆ ಚಲನವಲನವನ್ನು ತುಸು ಕಡಿಮೆ ಮಾಡಿದ್ದ.

ಪಿಲಿಕುಳಕ್ಕೆ ಆಗಮಿಸಿದ್ದ ಸಂದರ್ಭ ಸುಮಾರು 280 ಕೆ.ಜಿ. ತೂಕವಿದ್ದ ರಾಜ ದಿನಕ್ಕೆ 10 ಕೆಜಿ ಮಾಂಸ ಮತ್ತು ಎರಡು ಕೆ.ಜಿ. ಕೋಳಿಯನ್ನು ತಿನ್ನುತ್ತಿದ್ದ ಹಿನ್ನೆಲೆಯಲ್ಲಿ ತುಸು ದಪ್ಪಗಾಗಿದ್ದ. 2012ರಲ್ಲಿ ಅಸ್ವಸ್ಥಗೊಂಡಿದ್ದ ರಾಜನನ್ನು ಆರೈಕೆ ಮಾಡಲೆಂದು ತೆರಳಿದ್ದ ಕಾರ್ಮಿಕ ಕುಶಾಲಪ್ಪ ಗೌಡ ಎಂಬಾತನನ್ನು ರಾಜನು ತನ್ನ ಪಂಜದಲ್ಲಿ ಹೊಡೆದು ಸಾಯಿಸಿದ್ದ.

ಮೃತಪಟ್ಟ ಹುಲಿ ರಾಜನ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಹೃದಯಾಘಾತದಿಂದ ಮೃತಪಟ್ಟಿದೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಬಳಿಕ ಪಿಲಿಕುಳದಲ್ಲಿರುವ ಪ್ರಾಣಿಗಳ ಸ್ಮಶಾನದಲ್ಲಿ ಮೃತ ದೇಹವನ್ನು ಸುಡಲಾಗಿದೆ ಎಂದು ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.

ಸ್ವಚ್ಛಂದವಾಗಿ ಬದುಕುವ ಹುಲಿಗಳು ಸರಾಸರಿ 12ರಿಂದ 18 ವರ್ಷ ಪ್ರಾಯದ ವರೆಗೆ ಬದುಕುತ್ತವೆ. ಪ್ರಾಣಿ ಸಂಗ್ರಹಾಲಯದಲ್ಲಿ 18 ವರ್ಷ ಬದುಕುವ ನಿದರ್ಶನವಿದೆ. ರಾಜ ಹುಲಿ 21 ವರ್ಷ ಬದುಕಿದೆ ಎಂದು ಅವರು ತಿಳಿಸಿದ್ದಾರೆ.

ಇತರ ಸಮಸ್ಯೆಗಳು ಹುಲಿಗೆ ಇತ್ತೇ ಎಂಬುದನ್ನು ತಿಳಿಯುವ ಉದ್ದೇಶದಿಂದ ಹುಲಿಯ ದೇಹದ ಇತರೆ ಅಂಗಾಂಗಗಳನ್ನು ಬೆಂಗಳೂರಿನ ಪಶು ವೈದ್ಯಕೀಯ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಪಿಲಿಕುಳದಲ್ಲಿ ಪ್ರಸ್ತುತ ಆರು ಗಂಡು ಹಾಗೂ ಒಂದು ಹೆಣ್ಣು ಹುಲಿಗಳಿವೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English