ಜಾತಿ/ಆದಾಯ ಪ್ರಮಾಣಪತ್ರ: ತ್ವರಿತಗತಿಯಲ್ಲಿ ನೀಡಲು ಡಿಸಿ ಸೂಚನೆ

12:18 PM, Thursday, July 9th, 2015
Share
1 Star2 Stars3 Stars4 Stars5 Stars
(5 rating, 4 votes)
Loading...
DC

ಮಂಗಳೂರು : ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿಗೊಳಿಸಿ, ಪ್ರಮಾಣಪತ್ರಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ತಹಶೀಲ್ದಾರ್‌ಗಳಿಗೆ ಸೂಚಿಸಿದ್ದಾರೆ.

ಅವರು ಬುಧವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಶಾಲಾ-ಕಾಲೇಜು ಆರಂಭವಾಗಿರುವುದರಿಂದ ಶೈಕ್ಷಣಿಕ ಉದ್ದೇಶಗಳಿಗಾಗಿ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳಿಗಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ನಾಡಕಚೇರಿಗಳ ಮುಂದೆ ಸಾರ್ವಜನಿಕರು ಜಮಾಯಿಸುತ್ತಿದ್ದು, ಪ್ರತೀನಿತ್ಯವೂ ಜನಜಂಗುಳಿಯಿಂದ ಕೂಡಿರುತ್ತವೆ. ಜನಸಾಮಾನ್ಯರೂ ಕೂಡಾ ಇದಕ್ಕಾಗಿ ತಮ್ಮ ಕೆಲಸ ಕಾರ್ಯ ಬಿಟ್ಟು ಕಾಯುವಂತಹ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಸಲ್ಲಿಕೆಯಾಗಿರುವ ಎಲ್ಲಾ ಅರ್ಜಿಗಳನ್ನು ಮುಂದಿನ 7 ದಿನಗಳೊಳಗೆ ವಿಲೇವಾರಿಗೊಳಿಸಬೇಕು. ಇದಕ್ಕಾಗಿ ಪ್ರತಿನಿತ್ಯ ಹೆಚ್ಚುವರಿ ಸಮಯ ಹಾಗೂ ರಜಾ ದಿನಗಳಲ್ಲೂ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು. ಅಲ್ಲದೇ, ಈ ಬಗ್ಗೆ ತನಗೆ ಪ್ರತಿನಿತ್ಯ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಮಂಗಳೂರು ಮತ್ತು ಪುತ್ತೂರು ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ಕಚೇರಿ ಮತ್ತು ನಾಡಕಚೇರಿಗಳಲ್ಲಿ ಸಾರ್ವಜನಿಕರ ಅರ್ಜಿ ಸ್ವೀಕಾರಕ್ಕೆ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು. ಜಾತಿ ಮತ್ತು ಆದಾಯ ಪ್ರಮಾಣಪತ್ರಗಳಿಗೆ 5 ವರ್ಷ ಸಿಂಧುತ್ವ ಇರುವುದರಿಂದ ಈ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ವಿದ್ಯಾರ್ಥಿವೇತನಕ್ಕಾಗಿ ಆಧಾರ್ ಕಡ್ಡಾಯ ಎಂಬ ಮಾಹಿತಿಗಳಿಂದ ಆಧಾರ್ ಕೇಂದ್ರಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಧಾರ್ ನೋಂದಣಿಗೆ ಆಗಮಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ 4 ಲಕ್ಷ ಜನರು ಆಧಾರ್‌ಗೆ ನೋಂದಣಿಯಾಗಬೇಕಿದೆ. ಈ ನಿಟ್ಟಿನಲ್ಲಿ ಸರಕಾರಕ್ಕೆ ಪತ್ರ ಬರೆದು ವಾಸ್ತವ ಪರಿಸ್ಥಿತಿ ತಿಳಿಸುವಂತೆ ಎ.ಬಿ. ಇಬ್ರಾಹಿಂ ಅವರು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಸಿಸಿಟಿವಿ, ಹೊರಾಂಗಣ ಬೆಳಕು ವ್ಯವಸ್ಥೆ, ಭದ್ರತಾ ಕೊಠಡಿ, ಸೆಕ್ಯುರಿಟಿ ವ್ಯವಸ್ಥೆಗಳನ್ನು ಕಲ್ಪಿಸಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ಮತ್ತು ಈ ಬಗ್ಗೆ ಸಂಬಂಧಪಟ್ಟವರಿಗೆ ಸೂಚನೆ ನೀಡುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು. ದೇವಸ್ಥಾನಗಳಲ್ಲಿರುವ ಚಿನ್ನಾಭರಣಗಳನ್ನು ಪಟ್ಟಿ ಮಾಡಿಡುವಂತೆ ಅವರು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮಂಗಳೂರು ಉಪವಿಭಾಗಾಧಿಕಾರಿ ಡಾ.ಅಶೋಕ್, ಪುತ್ತೂರು ಉಪವಿಭಾಗಾಧಿಕಾರಿ ಬಸವರಾಜು, ಜಿಲ್ಲೆಯ ಎಲ್ಲ ತಹಶೀಲ್ದಾರ್‌ಗಳು, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English