ಮಂಗಳೂರು : ಬಂಟರ ಯಾನೆ ನಾಡವರ ಮಾತೃಸಂಘ ದ.ಕ. ವತಿಯಿಂದ ದ.ಕನ್ನಡ ಹಾಗೂ ಉಡುಪಿ ಜಿಲ್ಲೆಯ ಗ್ರಾಮಪಂಚಾಯತ್‌ಗಳಿಗೆ ಇತ್ತೀಚೆಗೆ ಜರಗಿದ ಚುನಾವಣೆಯಲ್ಲಿ ಆಯ್ಕೆಯಾದ ಬಂಟ ಸಮಾಜದ ಸದಸ್ಯರಿಗೆ ಅಭಿನಂದನಾ ಸಮಾರಂಭ ರವಿವಾರ ಬಂಟ್ಸ್ ಹಾಸ್ಟೆಲ್‌ನ ಎ.ಬಿ. ಶೆಟ್ಟಿ ಸಭಾಂಗಣದಲ್ಲಿ ಜರಗಿತು.
ಕರ್ನಾಟಕದ ಮಾಜಿ ಸಚಿವ ಹಾಗೂ ಮಾಜಿ ಲೋಕಸಭಾ ಸದಸ್ಯ ಶ್ರೀ ಜಯಪ್ರಕಾಶ ಹೆಗ್ಡೆ ಅವರು ದೀಪ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ತಮ್ಮ ಮೇಲಿರುವ ಹೊಣೆಗಾರಿಕೆ ಅರಿತುಕೊಂಡು ಜನರ ನಿರೀಕ್ಷೆಗಳಿಗೆ ಪೂರಕ ಸ್ಪಂದಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಪ್ರಾಮಾಣಿಕ ಸೇವೆಯಿಂದ ಜನಮನ್ನಣೆ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ರಾಜಕಾರಣದಲ್ಲಿ ಪ್ರಾಮಾಣಿಕರಾಗಿರುವುದೇ ದೊಡ್ಡ ಸಾಧನೆ. ಜನಪ್ರತಿನಿಧಿಯಿಂದ ಕ್ಷೇತ್ರದ ಅಭಿವೃದ್ಧಿ ಬಯಸುವುದು ಜನರ ಹಕ್ಕು. ಅದಕ್ಕೆ ಸ್ಪಂದಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಇದನ್ನು ಪ್ರಾಮಾಣಿಕವಾಗಿ ಮಾಡಿದರೆ ಜನ ಗುರುತಿಸುತ್ತಾರೆ. ಚುನಾವಣೆಯಲ್ಲಿ ಸೋಲು ಗೆಲುವು ಇದ್ದದ್ದೆ. ಆದರೆ ಜೀವನದಲ್ಲಿ ಎಂದೂ ಸೋಲಬಾರದು ಎಂದರು.
ಗ್ರಾಮಪಂಚಾಯತ್ ಸದಸ್ಯರು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರ ವಹಿಸಬೇಕು. ಪ್ರಸ್ತುತ ಸರಕಾರದಿಂದ ಗ್ರಾಮಪಂಚಾಯತ್‌ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನಗಳು ಬರುತ್ತಿವೆ. ಕೇವಲ ಪಂಚಾಯತ್ ಸಭೆಗೆ ಹಾಜರಾಗುವುದು ಮಾತ್ರ ಅವರ ಕೆಲಸವಾಗಿರಬಾರದು. ವಾರ್ಡ್‌ಮಟ್ಟದ ಸಭೆಗಳನ್ನು ಆಯೋಜಿಸಿ ಕ್ಷೇತ್ರದ ಜನರ ಅಭಿಪ್ರಾಯ ಆಲಿಸಿ, ಆವಶ್ಯಕತೆ ಗಮನಿಸಿ ಅದಕ್ಕೆ ಪೂರಕವಾಗಿ ಸ್ಪಂದಿಸುವ ಕಾರ್ಯದಲ್ಲಿ ನಿರತರಾಗಬೇಕು. ಗ್ರಾಮಸಭೆಗಳು ಪರಿಣಾಮಕಾರಿಯಾಗುವಂತೆ ನೋಡಿಕೊಳ್ಳಬೇಕು. ಗ್ರಾಮಪಂಚಾಯತ್‌ಗಳಿಗೆ ಆಯ್ಕೆಯಾಗುವುದು ಒಂದು ಉತ್ತಮ ಅವಕಾಶ. ಇದನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ರಾಜಕಾರಣದಲ್ಲಿ ಉತ್ತಮ ಭವಿಷ್ಯ ಕಂಡುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ದ.ಕ. ಹಾಗೂ ಉಡುಪಿ ಜಿಲ್ಲೆಯ ಗ್ರಾಮಪಂಚಾಯತ್‌ಗಳಿಗೆ ಆಯ್ಕೆಯಾದ ಬಂಟ ಸಮಾಜದ ಸದಸ್ಯರನ್ನು ಅಭಿನಂದಿಸಿದರು. ಬಂಟ ಸಮಾಜದ ಸ್ಥಿತಿಗತಿ ಸಮೀಕ್ಷೆ ಆರಂಭವಾಗಿದ್ದು, 3 ಗ್ರಾಮಗಳಲ್ಲಿ ಈಗಾಗಲೇ ಮಾದರಿ ಸಮೀಕ್ಷೆ ನಡೆದಿದೆ. ಬಂಟ ಸಮಾಜದಲ್ಲೂ ಶೇ. 40 ಮಂದಿ ಅರ್ಥಿಕವಾಗಿ ಅಶಕ್ತರಿದ್ದಾರೆ. ಸಮುದಾಯವನ್ನು ಹಿಂದುಳಿದ ವರ್ಗದಡಿ ಸೇರಿಸಬೇಕು ಎಂಬುದಾಗಿ ಹಿಂದುಳಿದ ವರ್ಗಗಳ ಆಯೋಗದ ಮುಂದೆ ಮಂಡಿಸಿರುವ ಅಹವಾಲುಗೆ ಇನ್ನೂ ಪೂರಕ ಸ್ಪಂದನೆ ದೊರಕಿಲ್ಲ ಎಂದರು.
ಡಿ. 25ರಿಂದ 27ರ ವರೆಗೆ ಜಾಗತಿಕ ಬಂಟರ ಸಮಾವೇಶ ಜರಗಲಿದೆ. ಪ್ರಸ್ತುತ ಇರುವ ಜಾಗದಲ್ಲಿ 180ರಿಂದ 200 ಕೋ. ರೂ. ವೆಚ್ಚದಲ್ಲಿ ನೂತನ ಸಭಾಭವನ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಳ್ಳಲಿದೆ. ಎ.ಬಿ. ಶೆಟ್ಟಿ ಸಭಾಭವನ ಇಂದಿನಿಂದ ಮುಚ್ಚಲಿದೆ ಎಂದು ಅವರು ಹೇಳಿದರು.
ಬಂಟ ಸಮುದಾಯದ ಗ್ರಾಮಪಂಚಾಯತ್ ಸದಸ್ಯರಿಗೆ ಶಾಲು ಹೊದಿಸಿ, ಹಾರಾರ್ಪಣೆ, ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು.
ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮೇಘನಾಥ ಶೆಟ್ಟಿ, ಕೋಶಾಧಿಕಾರಿ ಮನಮೋಹನ ಶೆಟ್ಟಿ ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಹೇಮನಾಥ ಶೆಟ್ಟಿ ಕಾವು ವಂದಿಸಿದರು.
ಅಧಿಕಾರ ವಿಕೇಂದ್ರೀಕರಣದ ಪರಿಕಲ್ಪನೆ ಗ್ರಾಮ ಪಂಚಾಯತ್ ಆಡಳಿತದಲ್ಲಿ ಶಾಸಕರು ಸೇರಿದಂತೆ ಇತರ ಜನಪ್ರತಿನಿಧಿಗಳ ಹಸ್ತಕ್ಷೇಪ ಸಲ್ಲದು. ಗ್ರಾಮ ಪಂಚಾಯತ್ ಸದಸ್ಯರೇ ಚರ್ಚೆ ನಡೆಸಿ ತಮ್ಮ ಗ್ರಾಮದ ಅಭಿವೃದ್ಧಿ ಬಗ್ಗೆ ಮುಕ್ತ ನಿರ್ಧಾರ, ಯೋಜನೆ ಕೈಗೊಳ್ಳಲು ಅವಕಾಶವಿರಬೇಕು. ಹಿಂದೆ ತಾನು ಶಾಸಕನಾಗಿದ್ದ ವೇಳೆ ವಿಧಾನಸಭೆಯಲ್ಲಿ ಚರ್ಚೆಯೊಂದರ ಸಂದರ್ಭ ಗ್ರಾಮ ಪಂಚಾಯತ್ ಸಭೆಯಲ್ಲಿ ಶಾಸಕರಿಗೆ ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆಯೇ ಎಂದು ಪ್ರಶ್ನಿಸಿದಾಗ ಅವಕಾಶವಿಲ್ಲ ಎಂಬುದಾಗಿ ಉತ್ತರಿಸಿದ್ದರು ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು.
Click this button or press Ctrl+G to toggle between Kannada and English