ಮಂಗಳೂರು: ’ಚಾಲಿಪೋಲಿಲು’ ಉತ್ತಮ ಸಂದೇಶ ಸಾರುವ ಚಿತ್ರವಾಗಿದ್ದು ಮನೋರಂಜನೆಯ ಜೊತೆಗೆ ಸಾಕಷ್ಟು ಕುತೂಹಲ ಮೂಡಿಸುತ್ತದೆ. ಉತ್ತಮ ಕಥಾ ಹಂದರವನ್ನೊಳಗೊಂಡ ಈ ಚಿತ್ರ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕವಾದ ಅಂಶಗಳನ್ನು ಒಳಗೊಂಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಿಸಿದ್ದಾರೆ.
ಅವರು ನಗರದ ಪಾಂಡೇಶ್ವರದ ಫಾರಂ ಫಿಜ್ಜಾ ಮಾಲ್‌ನಲ್ಲಿರುವ ಪಿವಿಆರ್ ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರದಲ್ಲಿ ಚಾಲಿಪೋಲಿಲು ತುಳು ಚಿತ್ರವನ್ನು ತನ್ನ ಕುಟುಂಬಿಕರ ಜೊತೆಯಲ್ಲಿ ವೀಕ್ಷಿಸಿ ತನ್ನ ಅಭಿಪ್ರಾಯವನ್ನು ಮಾಧ್ಯಮದ ಮುಂದೆ ಹಂಚಿಕೊಂಡರು.
ಸಾಮಾನ್ಯವಾಗಿ ಬಹುತೇಕ ಸಿನಿಮಾಗಳಲ್ಲಿ ಮೇಲ್ದರ್ಜೆಯ ವ್ಯಕ್ತಿಗಳ ಸುತ್ತ ಸಿನಿಮಾದ ಕಥೆಯನ್ನು ಹೆಣೆಯಲಾಗುತ್ತದೆ. ಆದರೆ ಚಾಲಿಪೋಲಿಲು ಚಿತ್ರದಲ್ಲಿ ಸಾಮಾನ್ಯ ಜನರ ಸುತ್ತ ನಡೆಯುವಂಥಾ ಘಟನೆಯನ್ನಾಧರಿಸಿ ಚಿತ್ರ ನಿರ್ಮಿಸಲಾಗಿದೆ. ಬೆಟ್ಟಿಂಗ್, ಜೂಜು, ಮಾದಕ ದ್ರವ್ಯಗಳಂಥಹಾ ಸಾಮಾಜಿಕ ಪಿಡುಗುಗಳು ಯಾವರೀತಿ ಯುವಜನತೆಯ ಭವಿಷ್ಯವನ್ನು ಸರ್ವನಾಶ ಮಾಡುತ್ತದೆ ಎಂಬುವುದನ್ನು ಈ ಚಿತ್ರ ವಿವರಿಸಿದ್ದು, ಇವುಗಳನ್ನೆಲ್ಲಾ ತ್ಯಜಿಸಿ ಉತ್ತಮ ನಾಗರಿಕರಾಗಬೇಕು ಎನ್ನುವ ಸಂದೇಶವನ್ನು ಸಾರಿದೆ. ತುಳು ಚಿತ್ರ ರಂಗದ ಇತಿಹಾಸದಲ್ಲಿ ಬಹುದಿನಗಳ ಪ್ರದರ್ಶನ ಕಂಡ ಈ ಚಿತ್ರ ತುಳು ಸಿನಿಮಾ ರಂಗದಲ್ಲೇ ದೊಡ್ಡ ಸಾಧನೆಯನ್ನು ಮಾಡಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಚಿತ್ರವನ್ನು ವೀಕ್ಷಿಸಬೇಕು ಎಂದು ಅವರು ತಿಳಿಸಿದರು.
ಚಿತ್ರದ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ನಿರ್ದೇಶಕರಾದ ವೀರೇಂದ್ರ ಶೆಟ್ಟಿ ಕಾವೂರು, ಸಹನಿರ್ಮಾಪಕ ಜಗನ್ನಾಥ ಶೆಟ್ಟಿ ಬಾಳ, ನಟರಾದ ದೇವದಾಸ ಕಾಪಿಕಾಡ್, ಭೋಜರಾಜ್ ವಾಮಂಜೂರು, ಸುರೇಂದ್ರ ಬಂಟ್ವಾಳ, ರತ್ನಾಕರ್ ಜೈನ್, ರಹೀಂ ಉಚ್ಚಿಲ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English