ಸೆಟ್ ಬ್ಯಾಕ್ ಇಲ್ಲದೆ ಕದ್ರಿ ಮೈದಾನದಲ್ಲಿ ನಿರ್ಮಾಣಗೊಂಡ ರಂಗ ವೇದಿಕೆ

12:47 AM, Thursday, October 15th, 2015
Share
1 Star2 Stars3 Stars4 Stars5 Stars
(5 rating, 8 votes)
Loading...

dk ashokaಮಂಗಳೂರು: ಕದ್ರಿ ಮೈದಾನದಲ್ಲಿ ಸುಮಾರು 28ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ರಂಗಮಂದಿರದ ಕಟ್ಟಡಕ್ಕೆ  ಸೆಟ್ ಬ್ಯಾಕ್ ಇಲ್ಲ. ಅದು ಪಕ್ಕದ ಕೊರ‍್ದಬ್ಬು ದೈವದ ಆವರಣ ಗೋಡೆಗೆ ತಾಗಿಕೊಂಡೇ ನಿರ್ಮಾಣ ಗೊಂಡಿದೆ. ಅದರ ಹಿಂದೆ ಒಂದು ರೋಚಕ ಸ್ಫ್ಟೋರಿ ಇದೆ, ಮುಂದೆ ಓದಿ… ನನಗೆ ಕೊರ‍್ದಬ್ಬು ದೈವ ಏನೂ ಓಟು ಕೊಡುವುದಿಲ್ಲ. ಆದ್ದರಿಂದ ನಾನು ಅದನ್ನು ಕ್ಯಾರ್ ಮಾಡುವುದಿಲ್ಲ-ಹೀಗೆ ಹೇಳಿ ಮಂಗಳೂರಿನ ಮಹಾನಗರ ಪಾಲಿಕೆಯ ಸದಸ್ಯನೊಬ್ಬ ಅಹಂಕಾರ ಪ್ರದರ್ಶಿಸುತ್ತಾನೆ ಎಂದರೆ ಅದು ಡಿ.ಕೆ.ಅಶೋಕ್ ಅಲ್ಲದೆ ಬೇರೆ ಯಾರೂ ಇರಲಿಕ್ಕಿಲ್ಲ ಎನ್ನುವುದು ಮನಪಾದ ಎಲ್ಲರಿಗೂ ಗೊತ್ತು. ಅಷ್ಟಕ್ಕೂ ಡಿ.ಕೆ.ಅಶೋಕ ಹೇಳಿದ್ದು ತನ್ನ ಕದ್ರಿ ವಾರ್ಡಿನ ಮೈದಾನದಲ್ಲಿ ನಿರ್ಮಾಣವಾಗಲು ಸಜ್ಜಾಗುತ್ತಿದ್ದ ರಂಗ ವೇದಿಕೆಯ ಕಟ್ಟಡ ಕಟ್ಟುವಾಗ. ಯಾವುದೇ ಕಟ್ಟಡ ನಿರ್ಮಾಣವಾಗುವಾಗ ಅದಕ್ಕೆ ಇಂತಿಷ್ಟು ಅಂತ ಸೆಟ್ ಬ್ಯಾಕ್ ಜಾಗವನ್ನು ಬಿಡಲೇಬೇಕು. ಆದರೆ ಡಿ.ಕೆ.ಅಶೋಕನಿಗೆ ಈ ಬಗ್ಗೆ ನಿರ್ಮಾಣಕಾರರು ಹೇಳಿದಾಗಲೂ ಉಡಾಫೆಯಿಂದ ವರ್ತಿಸಿ ಸೆಟ್ ಬ್ಯಾಕ್ ಜಾಗ ಬಿಡಲೇ ಇಲ್ಲ. ಇದರ ಪರಿಣಾಮವಾಗಿ ರಂಗ ವೇದಿಕೆ ಸ್ಥಾಪನೆಯಾಗುವ ಸಂದರ್ಭದಲ್ಲಿ ದೈವಸ್ಥಾನದ ತಡೆಗೋಡೆ ಕುಸಿದು ಬಿದ್ದಿದೆ. ಅಷ್ಟೇ ಅಲ್ಲ, ಅದಕ್ಕೆ ತಾಗಿಕೊಂಡೇ ಇರುವ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆಯೂ ಕುಸಿದು ಬಿದ್ದಿದೆ. ಆದರೆ ಡಿ.ಕೆ.ಅಶೋಕನಿಗೆ ಇದ್ಯಾವುದರ ಚಿಂತೆನೆ ಇಲ್ಲ. ಆತನಿಗೆ ರಂಗ ವೇದಿಕೆಯದ್ದೇ ಚಿಂತೆ. ಆ 28 ಲಕ್ಷ ವೆಚ್ಚದ ರಂಗ ವೇದಿಕೆಯ ನಿರ್ಮಾಣದಿಂದ ತನಗೆ ಬರಬಹುದಾದ ಕಮೀಷನ್ ಹಣದ್ದೇ ಚಿಂತೆಯಂತೆ. ಅಧಿಕಾರಕ್ಕೆ ಬಂದಾಗಲೇ ಸಿಕ್ಕಿದಷ್ಟು ದೋಚಿ ಬಿಡೋಣ ಎನ್ನುವ ನಿರ್ಧಾರಕ್ಕೆ ಬಂದಿರುವ ಡಿ.ಕೆ. ಅಶೋಕ್ ಪಕ್ಕಾ ರಾಜ್ಯದ ವಿದ್ಯುತ್ ಸಚಿವ ಡಿ.ಕೆ.ಶಿವಕುಮಾರ್ ನಷ್ಟೇ ಗರ್ವಿಷ್ಟ ಮತ್ತು ದುರಂಹಕಾರಿ. ಪಾಲಿಕೆಯ ಸದಸ್ಯನಾಗಿರುವುದೇ ಫುಲ್ ಟೈಮ್ ಉದ್ಯೋಗ ಎಂದುಕೊಂಡಿರುವ ಡಿ.ಕೆ ಇಡೀ ದಿನ ಪಾಲಿಕೆಯ ಯಾವುದಾದರೂ ಸ್ಥಾಯಿ ಸಮಿತಿ ಅಧ್ಯಕ್ಷರ ಕೋಣೆಯಲ್ಲಿ ಜಂಡಾ ಊರಿ ಕುಳಿತು ಬಿಡುತ್ತಾನೆ. ಮನಪಾದ ಕೆಲವು ಸದಸ್ಯರು ಬಿಲ್ಡರ‍್ಸ್‌ಗಳಿಗೆ ಎಲ್ಲಾ ರೀತಿಯಲ್ಲಿ ‘ಮಾರ್ಗ’ದರ್ಶಕರಾಗಿ ಇರುವುದರಿಂದ ಇಂತಹ ಸದಸ್ಯರು ಬೇರೆ ಕೆಲಸವಿಲ್ಲದಿದ್ದರೂ ಆರಾಮವಾಗಿ ಮನಪಾದಲ್ಲಿ ಅಧಿಕಾರದಲ್ಲಿ ಇದ್ದಷ್ಟು ಸಮಯ ಕಾಸುಗೀಸು ಮಾಡಿ ತಾವು ಸೋತರೂ ಬೇಕಾದಷ್ಟು ಮೊದಲೇ ಮಾಡಿಟ್ಟು ಕೊಂಡಿರುವುದರಿಂದ ಜೀವನಕ್ಕೆ ಯಾವುದೇ ತೊಂದರೆ ಇಲ್ಲದೆ ಕಾಲಕಳೆಯುತ್ತಿರುತ್ತಾರೆ. ಅಂತಹ ಸದಸ್ಯರ ವಾರ್ಡಿಗೆ ಏಕಾಏಕಿ ಹಣದ ಹೊಳೆಯೇ ಹರಿದು ಬಂದರೆ ಅವರ ನಸೀಬು ಏನಾಗಬೇಡಾ. ಅಂತಹ ಖುಷಿಯಲ್ಲಿ ಡಿಕೆ ಈಗ ತೇಲಾಡುತ್ತಿದ್ದಾನೆ. ಈತನ ಕದ್ರಿ ವಾರ್ಡಿಗೆ 2.30 ಕೋಟಿ ರೂಪಾಯಿಯಷ್ಟು ವಿಶೇಷ ಅನುದಾನ ಒಲಿದು ಬಂದಿದೆ. ಈ ಹಣವನ್ನು ಪಾರದರ್ಶಕವಾಗಿ ಬಳಸಿ ವಾರ್ಡಿನ ಅಭಿವೃದ್ಧಿ ಮಾಡುವ ಬದಲು ಡಿಕೆ ಆ ಹಣದಲ್ಲಿ ತಾನೆಷ್ಟು ಕಮಿಷನ್ ಹೊಡೆಯಬಹುದು ಎಂದು ಲೆಕ್ಕ ಹಾಕುತ್ತಿರುವುದರಿಂದ ವಾರ್ಡಿನ ಜನರಿಗೆ ತಮ್ಮ ಏರಿಯಾ ಅಭಿವೃದ್ಧಿ ಹೊಂದುತ್ತದೆ ಎನ್ನುವ ಯಾವ ನಿರೀಕ್ಷೆ ಕೂಡ ಇಲ್ಲ ಎಂದು ಹೇಳುತ್ತಾರೆ. ಮನಪಾ ಸದಸ್ಯರಿಗೆ ಪ್ರತಿಯೊಂದು ಕಾಮಗಾರಿಯಲ್ಲಿಯೂ ಇಂತಿಷ್ಟೇ ಕಮಿಷನ್ ಎಂದು ಗುತ್ತಿಗೆದಾರರು ನಿಗದಿಪಡಿಸಿರುತ್ತಾರೆ. ಯಾವುದೇ ಕಾಮಗಾರಿಯಲ್ಲಿಯೂ ಒಂದು ರೂಪಾಯಿ ಕೂಡ ಕಮಿಷನ್ ತೆಗೆದುಕೊಳ್ಳದೆ ಇರುವ ಕಾರ್ಪೋರೇಟರ್‌ಗಳು ಬಹಳಷ್ಟು ಜನ ಇದ್ದಾರೆ. ಆದರೆ ಡಿಕೆದು ಒಂದು ವಿಭಿನ್ನ ಸ್ವಭಾವ. ಈತ ಕಾಮಗಾರಿಯಲ್ಲಿ ಎಷ್ಟು ಹೆಚ್ಚು ಕಮಿಷನ್ ಹೊಡೆಯಬಹುದು ಎಂದು ತೀರ್ಮಾನಿಸಿ ಅಂತಹ ಕಾಮಗಾರಿಗೆ ಕೈ ಹಾಕುತ್ತಾನೆ ಎನ್ನುತ್ತಾರೆ ಕದ್ರಿ ವಾರ್ಡಿನ ಜನರು. ಅಂತಹ ‘ದೂರ’ದೃಷ್ಟಿಯಿಂದ ಅವನು ಕೈ ಹಾಕಿದ್ದು ಕದ್ರಿ ಮೈದಾನದ ಬಯಲು ರಂಗ ವೇದಿಕೆಗೆ.

ಕದ್ರಿಯಲ್ಲಿ ಪ್ರತಿವರ್ಷ ಮೊಸರುಕುಡಿಕೆ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಒಂದು ವೇದಿಕೆಯನ್ನು ಹಾಕಲಾಗುತ್ತದೆ. ವರ್ಷದಲ್ಲಿ ಒಂದು ದಿನ ಮಾತ್ರ ಇಲ್ಲಿ ಕಾರ್ಯಕ್ರಮ ನಡೆಯುತ್ತದೆ.

ಎಂಟು ವರ್ಷಗಳ ಹಿಂದೆ ಕದ್ರಿ ಮೊಸರು ಕುಡಿಕೆ ಮೈದಾನವೆಂದೆ ಪ್ರಖ್ಯಾತಗೊಂಡಿರುವ ಗ್ರೌಂಡಿನಲ್ಲಿ ಮೊಸರು ಕುಡಿಕೆಯ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರಾರಂಭಿಸಿದವರು ಯುವ ಉದ್ಯಮಿ ಮನೋಹರ್ ಶೆಟ್ಟಿಯವರು. ಸಜ್ಜನ ವ್ಯಕ್ತಿ ಮನೋಹರ ಶೆಟ್ಟಿ ತನ್ನ ವೃತ್ತಿಯಲ್ಲಿ ದೊರೆತ ಲಾಭವನ್ನು ಸಮಾಜಕ್ಕೆ ಕಿಂಚಿತ್ತಾದರೂ ಹಿಂತಿರುಗಿಸಬೇಕು ಎನ್ನುವ ಗುಣಸ್ವಭಾವದವರು. ಪ್ರತಿವರ್ಷ ಐನೂರು ಜನರಿಗೆ ತಲಾ ಐದು ಕೆಜಿಯಂತೆ ಅಕ್ಕಿಯನ್ನು ದಾನ ಮಾಡುತ್ತಾರೆ. ಇಂತಹ ಮನೋಹರ ಶೆಟ್ಟಿಯವರು ಎಂಟು ವರ್ಷಗಳ ಹಿಂದೆ ಕದ್ರಿ ಕ್ರಿಕೆಟರ‍್ಸ್ ಎನ್ನುವ ಸಂಘಟನೆಯನ್ನು ಕಟ್ಟಿದರು. ಅದನ್ನು ರಿಜಿಸ್ಟಡ್ ಕೂಡ ಮಾಡಿಸಿಕೊಂಡರು. ಸಂಘಟನೆ ಎಂದ ಬಳಿಕ ಅದು ಏನಾದರೂ ಮಾಡಬೇಕಲ್ಲ. ಅಂತಹ ಉಮೇದಿನಲ್ಲಿ ಕದ್ರಿ ಮೈದಾನದಲ್ಲಿ ಮೊಸರು ಕುಡಿಕೆ ಸಂದರ್ಭ ಸ್ಟಾರ್ ನೈಟ್ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ರಾಜ್ಯ, ರಾಷ್ಟ್ರಮಟ್ಟದ ಪ್ರಖ್ಯಾತ ಕಲಾವಿದರು ಇಲ್ಲಿ ತಮ್ಮ ಹಾಡು, ನೃತ್ಯದ ಮೂಲಕ ಈ ಕಾರ್ಯಕ್ರಮವನ್ನು ಪ್ರಖ್ಯಾತಿಗೆ ತಂದರು. ಇವತ್ತಿಗೂ ಕದ್ರಿ ಸ್ಟಾರ್ ನೈಟ್ ಎಂದರೆ ಅದಕ್ಕೊಂದು ವಿಶೇಷ ಇಮೇಜ್ ಇದೆ. ಪ್ರಾರಂಭಿಸಿದ ಮೊದಲ ವರ್ಷ ಎಲ್ಲ ಸ್ಥಳೀಯ ಯುವಕರು ಒಟ್ಟಿಗೆ ನಿಂತು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಯುವಕರ ಒಗ್ಗಟನ್ನು ನೋಡಿ ಹಿರಿಯರೇ ಮೂಗಿನ ಮೇಲೆ ಬೆರಳಿಟ್ಟಿದ್ದರು. ಯಾಕೋ ಸಂಘಟನೆಗೆ ವಕೃ ದೃಷ್ಟಿ ಬಿತ್ತು ಎಂದು ಅನಿಸುತ್ತದೆ.

ಎರಡನೆ ವರ್ಷ ಎನ್ನುವಾಗ ಕದ್ರಿ ಕ್ರಿಕೆಟರ‍್ಸ್ (ರಿ) ಸ್ಥಾಪಕ ಮನೋಹರ ಶೆಟ್ಟಿಯವರು ತನ್ನ ಗೆಳೆಯ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗೆ ಪಾಲಿಗೆಯ ಚುನವಣೆಯಲ್ಲಿ ಪ್ರಚಾರಕ್ಕಿಳಿದರು. ಅವರು ಬಿಜೆಪಿಯನ್ನು ಹೊಗಳಿ ಮಾತನಾಡಿದರು ಎನ್ನುವ ಒಂದೇ ಕಾರಣಕ್ಕೆ ಡಿ.ಕೆ.ಅಶೋಕನಿಗೆ ಮೈಯೆಲ್ಲ ಉರಿಯಲು ಶುರುವಾಯಿತು. ತನ್ನ ಪ್ರಭಾವ ಬಳಸಿ ಕದ್ರಿ ಕ್ರಿಕೆಟರ‍್ಸ್ (ರಿ) ನಲ್ಲಿದ್ದ ಯುವಕರನ್ನು ಒಡೆಯಲು ಪ್ರಾರಂಭಿಸುತ್ತಾನೆ. ಆ ಸಂಘಟನೆಯಿಂದ ಒಂದಿಷ್ಟು ಹುಡುಗರನ್ನು ಹೊರಗೆ ಸೆಳೆಯುವಲ್ಲಿ ಯಶಸ್ವಿಯೂ ಆಗುತ್ತಾನೆ. ಹಾಗೆ ಕದ್ರಿ ಕ್ರಿಕೆಟರ‍್ಸ್‌ನಿಂದ ಹೊರಗೆ ಬಂದ ಯುವಕರು ಕಟ್ಟಿದ್ದೇ ಕದ್ರಿ ಕ್ರಿಕೆಟರ‍್ಸ್ ಕ್ಲಬ್. ಅದಕ್ಕೆ ಗಾಢ್ ಫಾದರ್ ಇದೇ ಡಿ.ಕೆ.ಅಶೋಕ. ಈ ಹೊಸ ಸಂಘಟನೆಯನ್ನು ಕೂಡ ನೋಂದಾವಣೆ ಮಾಡಿಸಿಕೊಂಡ ಡಿ.ಕೆ.ಅಶೋಕನಿಗೆ ಮೊದಲು ಕಣ್ಣು ಬಿದ್ದಿದ್ದೇ ಈ ಮೊಸರು ಕುಡಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲೆ. ತನ್ನ ಸಂಘಟನೆ ಕ್ಲಿಕ್ ಆಗಬೇಕಾದರೆ ಆ ಸ್ಟಾರ್ ನೈಟ್ ತಾನೇ ಮಾಡಿಸಬೇಕು ಎನ್ನುವ ನಿರ್ಧಾರಕ್ಕೆ ಬಂದ ಡಿ.ಕೆ.ಅಶೋಕ ನೇರವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವ ಜವಾಬ್ದಾರಿಯನ್ನು ತನ್ನ ಸುರ್ಪದಿಗೆ ತೆಗೆದುಕೊಂಡ. ತಾನೇ ಇಲ್ಲಿ ರಾಜ, ತನ್ನನ್ನು ಮೀರಿ ಯಾರೂ ಏನೂ ಮಾಡುವಂತಿಲ್ಲ ಎಂದು ಫತ್ವಾ ಹೊರಡಿಸುವವನಂತೆ ವರ್ತಿಸಿದ. ಮನೋಹರ ಶೆಟ್ಟಿಯವರು ನ್ಯಾಯಾಲಯದ ಮೊರೆ ಹೋದರು. ಪ್ರತಿ ವರ್ಷ ಮೊಸರು ಕುಡಿಕೆಯ ದಿನ ಹತ್ತಿರ ಬರುವ ತನಕ ಇಲ್ಲಿ ಈ ಬಾರಿ ಕದ್ರಿ ಕ್ರಿಕೆಟರ‍್ಸ್ ಅಥವಾ ಕದ್ರಿ ಕ್ರಿಕೆಟರ‍್ಸ್ ಕ್ಲಬ್ ಯಾರೂ ಸ್ಟಾರ್ ನೈಟ್ ಮಾಡುತ್ತಾರೆ ಎನ್ನುವ ಬಗ್ಗೆ ಗೊಂದಲ ನಿರ್ಮಾಣವಾಗುತ್ತಿತ್ತು. ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆಯುವ ವಿಷಯದಲ್ಲಿ ರಮಾನಾಥ ರೈ ಹಾಗೂ ವಿನಯ ಕುಮಾರ್ ಸೊರಕೆಯವರು ಮಧ್ಯಸ್ಥಿಕೆ ಮಾಡುವ ತನಕ ಗೊಂದಲ ಮುಂದುವರೆಯುತ್ತಿತ್ತು. ಎರಡು ವರ್ಷದ ಹಿಂದೆ ತನ್ನ ಬೆಂಬಲಿರರ ಕಾರ್ಯಕ್ರಮ ಮಾಡಲು ರೈಯವರನ್ನು ಮಂಗಮಾಡಿ ಮನಪಾದಲ್ಲಿ ಕಾನೂನನ್ನು ತನಗೆ ಅನುಕೂಲವಾಗುವಂತೆ ತಿರುಗಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದ. ಸೊರಕೆಯವರು ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವುದು ರೈಗಳಿಗೆ ಇಷ್ಟವಿರಲಿಲ್ಲ. ಆದರೆ ನಗರಾಭಿವೃದ್ಧಿ ಸಚಿವರಾಗಿರುವ ಸೊರಕೆಯವರ ಇಲಾಖೆಯ ವ್ಯಾಪ್ತಿಯೊಳಗೆ ಈ ಜಾಗದ ಅನುಮತಿ ಕೊಡುವ ವಿಷಯ ಬರುವುದರಿಂದ ಆ ದಿನ ಮನೋಹರ್ ಶೆಟ್ಟಿಯವರ ಕದ್ರಿ ಕ್ರಿಕೆಟರ‍್ಸ್‌ಗೆ ಪರ್ಮಿಷನ್ ಕೊಟ್ಟು ಬಿಡುತ್ತಾರೆ.

ಅದೇ ವರ್ಷ ಮಂಗಳೂರು ಮಹಾನಗರ ಪಾಲಿಕೆಯ ಕೌನ್ಸಿಲ್‌ನಲ್ಲಿ ಒಂದು ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಮೂರು ವರ್ಷ ನಿರಂತರವಾಗಿ ಕಾರ್ಯಕ್ರಮ ಮಾಡುತ್ತಿದ್ದವರಿಗೆ ಮೈದಾನದ ಅನುಮತಿ ಪತ್ರ ಕೊಡುವುದು ಸೂಕ್ತ ಎಂದು. ಇದನ್ನು ಸಹಿಸದ ಡಿ.ಕೆ ತಾನು ಆ ವಾರ್ಡಿನ ಪಾಲಿಕೆಯ ಸದಸ್ಯನಾಗಿರುವುದರಿಂದ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡು ಆ ನಿರ್ಣಯ ಜಾರಿಗೆ ಬರದಂತೆ ನೋಡಿಕೊಂಡ.

ಪ್ರಾರಂಭದ ಐದು ವರ್ಷ ಮನೋಹರ್ ಶೆಟ್ಟಿಯವರ ಕದ್ರಿ ಕ್ರಿಕೆಟರ‍್ಸ್ (ರಿ) ಇಲ್ಲಿ ಸ್ಟಾರ್ ನೈಟ್ ಮಾಡಿಕೊಂಡು ಬರುತ್ತಿದ್ದರು. ಅದನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಡಿ.ಕೆ.ಅಶೋಕ ಬೆಂಬಲ ಹೊಂದಿರುವ ಕದ್ರಿ ಕ್ರಿಕೆಟರ‍್ಸ್ ಕ್ಲಬ್ ನ್ಯಾಯಾಲಯದಲ್ಲಿ ದಾವೆ ಹೂಡಿತಲ್ಲ. ಈ ಬಗ್ಗೆ ಸಾಕಷ್ಟು ವಾದ-ಪ್ರತಿವಾದ ಆಲಿಸಿದ ಕರ್ನಾಟಕದ ಉಚ್ಚ ನ್ಯಾಯಾಲಯ ತನ್ನ ಮಹತ್ವದ ಆದೇಶವನ್ನು ನೀಡಿತ್ತು “ಎರಡೂ ಸಂಘಟನೆಯವರು ಒಟ್ಟಿಗೆ ಸೇರಿ ಕಾರ್ಯಕ್ರಮ ಆಯೋಜನೆ ಮಾಡಿ. ಖರ್ಚನ್ನು ಮಾತುಕತೆ ಮೂಲಕ ಸಮಪ್ರಮಾಣದಲ್ಲಿ ಹಂಚಿಕೊಳ್ಳಿ”. ನ್ಯಾಯಾಲಯದ ಆದೇಶವನ್ನು ಪಾಲಿಸಿಕೊಂಡು ಹೋಗಿದ್ದಿದ್ರೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಮನೋಹರ ಶೆಟ್ಟಿಯವರು ಕೂಡ ನ್ಯಾಯಾಲಯದ ತೀರ್ಪಿಗೆ ತಲೆಬಾಗಿದ್ದರು. ಆದರೆ ಮನೋಹರ್ ಶೆಟ್ಟಿಯವರೊಂದಿಗೆ ಸೇರಿ ಕಾರ್ಯಕ್ರಮ ಮಾಡುವುದು, ಸಾಧ್ಯವೇ ಇಲ್ಲ ಎನ್ನುವ ತೀರ್ಮಾನಕ್ಕೆ ಡಿ.ಕೆ.ಅಶೋಕ ತನ್ನ ಬೆಂಬಲಿಗರಿಗೆ ಹೇಳುತ್ತಾನೆ. ಮತ್ತೇ ಈ ವಿವಾದ ನ್ಯಾಯಾಲಯದ ಬಾಗಿಲು ಬಡಿಯಿತು. ಕೊನೆಗೂ ಒಂದು ತೀರ್ಮಾನಕ್ಕೆ ಬಂದ ರಾಜ್ಯ ಉಚ್ಚ ನ್ಯಾಯಾಲಯ ೫೦:೫೦ ಅನುಪಾತದಲ್ಲಿ ಬೇಡವಾದರೆ ಇನ್ನೊಂದು ರೀತಿಯಲ್ಲಿ ಮಾಡಿ ಎಂದು ಒಂದು ಸರಳ ಸೂತ್ರವನ್ನು ಕಳೆದ ವರ್ಷ ನೀಡಿತ್ತು. ಹೇಗೂ ಮೊಸರು ಕುಡಿಕೆಯ ಕಾರ್ಯಕ್ರಮ ಮೂರು ದಿನ ನಡೆಯುತ್ತೆ. ಮೊದಲ ದಿನ ಡಿ.ಕೆ.ಅಶೋಕ ಬೆಂಬಲಿಗರ ಸಂಘಟನೆ ಕಾರ್ಯಕ್ರಮ ಮಾಡಲಿ. ಮೂರನೇಯ ದಿನ ಮನೋಹರ ಶೆಟ್ಟಿಯವರ ಸಂಘಟನೆ ಮಾಡಲಿ. ನಡುವಿನ ಒಂದು ದಿನ ಕದ್ರಿ ದೇವಸ್ಥಾನದವರೇ ಮಾಡಲಿ ಎಂದು ಸಮಾನ ಸರಳ ತೀರ್ಪನ್ನು ನೀಡಿತು. ಆದರೆ ಇಲ್ಲೊಂದು ಸಂದಿಗ್ನತೆ ಇದೆ. ಕಾರ್ಯಕ್ರಮ ಮೂರು ದಿನ ಇದ್ದರೂ ಮೊದಲ ದಿನ ಮತ್ತು ಎರಡನೇ ದಿನ ಜನಜಂಗುಳಿ ಇದ್ದಷ್ಟು ಮೂರನೇ ದಿನ ಇರುವುದಿಲ್ಲ. ಆದ್ದರಿಂದ ಅದರಿಂದ ಬೇಸರಗೊಂಡ ಮನೋಹರ ಶೆಟ್ಟಿಯವರು ತಾನು ಮೂರನೆ ದಿನ ಕಾರ್ಯಕ್ರಮ ಮಾಡುವ ಇಚ್ಚೆ ಹೊಂದಿಲ್ಲವೆಂದು ತಿಳಿಸಿದರು. ಅದರ ಬಳಿಕ ಎರಡು ವರ್ಷಗಳ ಹಿಂದೆ ಮನೋಹರ ಶೆಟ್ಟಿಯವರು ಮನಪಾಗೆ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅನುಮತಿಗಾಗಿ ಅರ್ಜಿ ಹಾಕಿದ್ದರು. ಆಗಲೂ ಡಿ.ಕೆ.ಅಶೋಕ ಅಡ್ಡಗಾಲು ಹಾಕಿದ್ದ. ಅದರ ಬಳಿಕ ಮತ್ತೊಂದು ನಿರ್ಣಯಕ್ಕೆ ಬಂದ ಮನಪಾ ಒಂದು ವರ್ಷ ಮನೋಹರ ಶೆಟ್ಟಿಯವರಿಗೆ, ಒಂದು ವರ್ಷ ಡಿ.ಕೆ.ಅಶೋಕನ ಬೆಂಬಲಿಗರಿಗೆ ಅನುಮತಿ ಕೊಡುವುದು ಎಂದು ನಿರ್ಧರಿಸಿತ್ತು. ಆದರೆ ಆ ನಿರ್ಣಯವನ್ನು ಕೂಡ ಡಿ.ಕೆ.ಅಶೋಕ ಜಾರಿಯಾಗದಂತೆ ನೋಡಿಕೊಳ್ಳವಲ್ಲಿ ಸಫಲವಾಗಿದ್ದಾನೆ. ಈ ಮೂಲಕ ಕಳೆದ ಎರಡು ವರ್ಷಗಳಿಂದ ಡಿ.ಕೆ.ಅಶೋಕನ ಬೆಂಬಲಿಗರು ಅಲ್ಲಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ.

ಇನ್ನೂ ವರ್ಷಕ್ಕೆ ಒಮ್ಮೆ ನಡೆಯುವ ಕಾರ್ಯಕ್ರಮಕ್ಕೆ 28ಲಕ್ಷ ವೆಚ್ಚದ ರಂಗ ವೇದಿಕೆ ಬೇಕಿತ್ತಾ ಎನ್ನುವ ಪ್ರಶ್ನೆ ನಾಗರಿಕರದು. ಅದರ ಬದಲಿಗೆ ಆ ಅನುದಾನವನ್ನು ಗುಂಡಿಗಳಿಂದ ತುಂಬಿ ಹೋಗಿರುವ ಕದ್ರಿಯ ಈ ರಸ್ತೆಗೆ ಹಾಕಬಹುದಿತ್ತು ಎನ್ನುವುದು ಪ್ರಜ್ಞಾವಂತ ಮತದಾರರ ಆಶಯವಿತ್ತು. ಆದರೆ ಡಿ.ಕೆ.ಅಶೋಕ ಅದಕ್ಕೆ ತಯಾರಿಲ್ಲ. ರಂಗ ವೇದಿಕೆ ನಿರ್ಮಿಸಲೇ ಬೇಕು ಎನ್ನುವ ಹಟ. ಆ ಭರದಲ್ಲಿ ಆ ಸ್ಥಳದಲ್ಲಿ ಇದ್ದ ಬೆಲೆ ಬಾಳುವ ಬೀಟೆ ಮರವನ್ನು ಕತ್ತರಿಸಿ ಹಾಕಿದ್ದಾನೆ. ಯಾವುದೇ ಮರವನ್ನು ಧರೆಗುರುಳಿಸುವ ಮೊದಲು ಅದಕ್ಕೆ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು. ಆದರೆ ಡಿ.ಕೆಗೆ ಅದರ ಅಗತ್ಯವೇ ಕಾಣಿಸುವುದಿಲ್ಲ. ಯಾಕೆಂದರೆ ಆತ ಬಹಳ ಪ್ರಭಾವೀ ವ್ಯಕ್ತಿ. ಮನೆಮನೆಗೆ ಟ್ಯಾಂಕರಿನಲ್ಲಿ ನೀರು ಹಾಕುತ್ತಿದ್ದ ಡಿ.ಕೆ.ಅಶೋಕನಿಗೆ ಜಾತಿ ಪ್ರೇಮದಿಂದ ವೀರಪ್ಪ ಮೊಯಿಲಿಯವರ ಪತ್ನಿ ಮಾಲತಿ ಮೊಯಿಲಿಯವರು ಕಾರ್ಪೋರೇಟರ್ ಆಗಲು ಸಲಹೆ ನೀಡಿದರು. ಅದರ ಬಳಿಕ ಡಿ.ಕೆ.ಅಶೋಕ ವೀರಪ್ಪ ಮೊಯಿಲಿಯವರಿಗೆ ಗಂಟು ಬಿದ್ದ. ಮೊಯಿಲಿಯವರು ರಾಜಕೀಯವಾಗಿ ಇವನನ್ನು ಪ್ರೋತ್ಸಾಹಿಸಿದರು. ಅಲ್ಲಿಂದ ರಾಜಕೀಯವಾಗಿ ಬೆಳೆದ ಡಿ.ಕೆ.ಅಶೋಕನಿಗೆ ಅದರೊಂದಿಗೆ ಅಹಂಕಾರವೂ ಮೈಗೂಡಿಸಿಕೊಂಡು ಬಂದಿತು. ತಾನು ಬಂದ ದಾರಿಯನ್ನು ಮರೆತಿರುವ ಡಿ.ಕೆ.ಅಶೋಕ ಸುಖ ಬರುತ್ತಿದ್ದಂತೆ ಬೇರೆಯವರನ್ನು ಉಢಾಪೆಯಿಂದ ಮಾತನಾಡುವ ಮೂಲಕ ಮನಪಾದಲ್ಲಿ ತಿರುಗಾಡುತ್ತಾ ಇರುತ್ತಾನೆ.

ಕೃಪೆ : ಮೆಗಾ ಮೀಡಿಯಾ ಪತ್ರಿಕೆ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English