ಮಂಗಳೂರು : ಇದು ವಿದ್ಯುತ್ ಕಾಮಗಾರಿ ತೆಗೆದುಕೊಳ್ಳುವ ವ್ಯಕ್ತಿಗಳು ಸರಕಾರಕ್ಕೆ ಕೊಟ್ಟ ಶಾಕ್‌ನ ಕಥೆ. ಕರ್ನಾಟಕ ರಾಜ್ಯ ಪರವಾನಿಗೆ ಹೊಂದಿದ ವಿದ್ಯುತ್ ಗುತ್ತಿಗೆದಾರರ ಸಂಘ ಎಂದು ಒಂದಿದೆ ಎಂದು ನಿಮಗೆಲ್ಲ ಗೊತ್ತಿರಬಹುದು. ಅವರ ವ್ಯವಹಾರವೇನು ಎನ್ನುವುದನ್ನು ನಿಮಗೆ ಹೇಳುವ ಮೊದಲು ಆ ಸಂಘದವರ 420 ಕೆಲಸದ ಬಗ್ಗೆ ನಿಮಗೆ ಗೊತ್ತಾಗಲೇಬೇಕು. ನಿಮ್ಮ ಮನೆಗೆ ಹೊಸದಾಗಿ ವಿದ್ಯುತ್ ಸಂಪರ್ಕ ಬೇಕು ಎಂದು ಅಂದುಕೊಳ್ಳಿ. ನೀವು ಮಂಗಳೂರಿನವರಾದರೆ ಮೆಸ್ಕಾಂ ಕಚೇರಿಗೆ ಹೋಗುತ್ತೀರಿ. ಅಲ್ಲಿ ಅರ್ಜಿ ಕೇಳುತ್ತೀರಿ. ಆದರೆ ಅಲ್ಲಿ ಮೆಸ್ಕಾಂ ಸಿಬ್ಬಂದಿಗಳು ಇಲ್ಲಿ ಅರ್ಜಿ ಇಲ್ಲ ಎಂದೇ ಹೇಳುತ್ತಾರೆ. ಎಲ್ಲಿ ಸಿಗುತ್ತೆ ಎಂದು ಕೇಳಿದರೆ ಕರ್ನಾಟಕ ರಾಜ್ಯ ಪರವಾನಿಗೆ ಹೊಂದಿದ ವಿದ್ಯುತ್ ಗುತ್ತಿಗೆದಾರರ ಸಂಘದವರ ಕಚೇರಿ ಇದೆ, ಅಲ್ಲಿ ಸಿಗುತ್ತದೆ, ಅಲ್ಲಿ ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ನೀವು ಆ ಕಚೇರಿಯನ್ನು ಹುಡುಕಿಕೊಂಡು ಹೋಗುತ್ತಿರಿ. ಅಲ್ಲಿ ಹೋದ ಕೂಡಲೇ ನಿಮಗೆ ಅರ್ಜಿಗೆ 250 ರೂಪಾಯಿ ಕೊಡಿ ಎನ್ನುತ್ತಾರೆ. ನೀವು ಅರ್ಜಿಯ ಮೇಲೆ ನಮೂದಿಸಿದ ಬೆಲೆ ಗಮನಿಸುತ್ತಿರಿ. ಅದರಲ್ಲಿ 214 ರೂಪಾಯಿ ಎಂದು ಬರೆದಿರುತ್ತದೆ. ನಿಮಗೆ ಕೇಳೋಣ ಎಂದು ಅನಿಸುತ್ತದೆ. ಆದರೆ ಇದು ಬಿಟ್ಟರೆ ಬೇರೆಲ್ಲಿಯೂ ಸಿಗುವುದಿಲ್ಲ ಎಂದು ಗೊತ್ತಾದ ತಕ್ಷಣ ನೀವು ಬಾಯಿ ಮುಚ್ಚಿ ಹಣ ಕೊಟ್ಟು ಬರುತ್ತೀರಿ. ಕೆಲವು ಸಮಯದ ಬಳಿಕ ನಿಮಗೆ ವಿದ್ಯುತ್ ಕನೆಕ್ಷನ್‌ನಲ್ಲಿ ಹೆಸರು ಬದಲಾಯಿಸುವ ಅಗತ್ಯ ಬರುತ್ತದೆ. ಆಗ ನೀವು ಮತ್ತೆ ಮೆಸ್ಕಾಂಗೆ ಹೋಗಿ ಹೆಸರು ಬದಲಾಯಿಸಬೇಕು ಎಂದು ಅಂಗಲಾಚುತ್ತಿರಿ. ಅಲ್ಲಿ ಸಿದ್ಧ ಉತ್ತರ ತಯಾರಾಗಿರುತ್ತದೆ. ಅರ್ಜಿ ತುಂಬಿಸಿ, ಆದರೆ ಇಲ್ಲಿ ಅರ್ಜಿ ಇಲ್ಲ, ಮತ್ತೇ ಅದೇ ಕರ್ನಾಟಕ ರಾಜ್ಯ ಪರವಾನಿಗೆ ಹೊಂದಿದ ವಿದ್ಯುತ್ ಗುತ್ತಿಗೆದಾರರ ಸಂಘದ ಕಚೇರಿಗೆ ಹೋಗಿ ಅರ್ಜಿ ತರಬೇಕು. ಆದರೆ ಈ ಬಾರಿ ನಿಮಗೆ ಇನ್ನೂ ದೊಡ್ಡ ಶಾಕ್ ವಿದ್ಯುತ್ ಗುತ್ತಿಗೆದಾರರಿಂದ ಸಿಕ್ಕಿರುತ್ತದೆ.
550 ರೂಪಾಯಿ ಕೊಡಿ. ನೀವು ಮತ್ತೇ ಅರ್ಜಿಯ ಮುಖಬೆಲೆ ನೋಡುತ್ತಿರಿ. ಅದರಲ್ಲಿ ಮುನ್ನೂರು ರೂಪಾಯಿ ಎಂದು ಬರೆದಿರುತ್ತದೆ. ಈ ಬಾರಿ ನೀವು ಕೇಳಲೇಬೇಕು ಎಂದು ಧೈರ್ಯ ತೋರಿಸುತ್ತೀರಿ. ಯಾಕ್ರೀ ಮುನ್ನೂರು ರೂಪಾಯಿ ಬೆಲೆಯ ಅರ್ಜಿಗೆ550 ರೂಪಾಯಿ ತೆಗೆದುಕೊಳ್ಳುತ್ತಿರಿ ಎಂದೇ ಕೇಳಿಯೇ ಕೇಳುತ್ತಿರಿ. ಅದಕ್ಕೆ ಅವರು ಮುನ್ನೂರು ಅರ್ಜಿ ಬೆಲೆ. ಅದರ ಮೇಲೆ ಇನ್ನೂರ ಐವತ್ತು ಇದೆಯಲ್ಲ ಅದು ಸದಸ್ಯರ ಕಲ್ಯಾಣ ನಿಧಿ ಎಂದು ಹೇಳುತ್ತಾರೆ. ನೀವು ತುಂಬಾ ಹೊತ್ತು ಚರ್ಚೆಗೆ ನಿಂತರೆ ನಿಮಗೆ ಬೇಕಾದ್ರೆ ತೆಗೆದುಕೊಳ್ಳಿ, ಇಲ್ಲದಿದ್ದರೆ ರೈಟ್ ಹೇಳಿ ಎನ್ನುವ ಉಢಾಪೆ ಉತ್ತರ ಸಿಗುತ್ತದೆ. ಅಷ್ಟಕ್ಕೂ ನೀವು ಕನೆಕ್ಷನ್‌ನಲ್ಲಿ ಹೆಸರು ಬದಲಾಯಿಸುವುದಕ್ಕೂ ಈ ಸಂಘದವರು ತಮ್ಮ ಸದಸ್ಯರ ಕಲ್ಯಾಣಕ್ಕೆ ನಿಧಿಯನ್ನು ನಿಮ್ಮಿಂದ ಸಂಗ್ರಹಿಸಿಕೊಳ್ಳುವುದಕ್ಕೂ ಏನು ಸಂಬಂಧ ಎಂದು ನಿಮಗೆ ಅನಿಸದೇ ಇರುವುದಿಲ್ಲ. ನಿಮಗೆ ಮಾತ್ರವಲ್ಲ. ಕರ್ನಾಟಕದ ಅಷ್ಟೂ ನಾಗರಿಕರಿಗೆ ಅನಿಸಿದೆ. ಆದರೆ ಯಾರೂ ಕೂಡ ಪ್ರಶ್ನೆ ಮಾಡಲು ಹೋಗಿಲ್ಲ. ಆ ಕಾರಣದಿಂದಲೇ ಇವತ್ತು ಕರ್ನಾಟಕ ರಾಜ್ಯ ಪರವಾನಿಗೆ ಹೊಂದಿದ ವಿದ್ಯುತ್ ಗುತ್ತಿಗೆದಾರರ ಸಂಘದ ವಾರ್ಷಿಕ ವಹಿವಾಟು ಲೆಕ್ಕಕ್ಕೆ ಸಿಗದಷ್ಟು ಕೋಟಿಯನ್ನು ದಾಟಿದೆ ಎಂದು ಅಂದಾಜಿಸಲಾಗಿದೆ. ಹಾಗಂತ ನೀವು ತೆಗೆದುಕೊಳ್ಳುವ 550 ರೂಪಾಯಿ ಕಾನೂನುಬಾಹಿರವಲ್ಲವೇ ಎಂದು ಕೇಳಿದರೆ ನಾವು ಬಿಲ್ ಕೊಡುತ್ತೇವೆ ಎಂದು ಅಲ್ಲಿನ ಸಿಬ್ಬಂದಿಗಳು ಧೈರ್ಯದಿಂದ ಹೇಳುತ್ತಾರೆ. ಹಾಗಾದರೆ ಅಲ್ಲಿ ಏನಿದೆ ಗೋಲ್‌ಮಾಲ್.
ಸರಿಯಾಗಿ ಮತ್ತೊಮ್ಮೆ ಓದಿ. ಒಂದು ವಿದ್ಯುತ್ ಕನೆಕ್ಷನ್‌ನಲ್ಲಿ ಹೆಸರು ಬದಲಾಯಿಸುವ ಪ್ರಸಂಗ ಬಂದಾಗ ಅಗ್ರಿಮೆಂಟ್ ನಡೆಯುವುದು ನಿಮ್ಮ ಮತ್ತು ಮೆಸ್ಕಾಂ ನಡುವೆ, ಹೌದು ತಾನೆ. ಅಷ್ಟಕ್ಕೂ ಇವರ‍್ಯಾರು ದೊಣ್ಣೆ ನಾಯಕರು, ಇವರೊಂದಿಗೆ ಅಗ್ರಿಮೆಂಟ್ ಮಾಡಿಕೊಳ್ಳೊದಿಕ್ಕೆ. ಆದರೆ ಇದನ್ನು ಮೆಸ್ಕಾಂ ಮಾತನಾಡುವುದಿಲ್ಲ. ಅಲ್ಲಿಗೆ ನಿಮಗೆ ಅರ್ಥವಾಗಿರಬಹುದು. ಅವರು ಯಾಕೆ ಮಾತನಾಡುವುದಿಲ್ಲ ಎಂದು. ಇದರಿಂದ ಒಂದು ವರ್ಷದಲ್ಲಿ ಆಗುವ ಕಲ್ಯಾಣ ನಿಧಿಯ ಸಂಗ್ರಹದ ಅಂದಾಜು ಯಾವ ಸರಕಾರಕ್ಕೂ ಇಲ್ಲ. ಇನ್ನೂ ಒಂದು ವಿಷಯ ಕೇಳಿದರೆ ನಿಮಗೆ ಆಶ್ಚರ‍್ಯ ದುಪ್ಪಟ್ಟು ಆಗಬಹುದು. ಈ ಕರ್ನಾಟಕ ರಾಜ್ಯ ಪರವಾನಿಗೆ ಹೊಂದಿದ ವಿದ್ಯುತ್ ಗುತ್ತಿಗೆದಾರರ ಸಂಘ ಅದು ರಿಜಿಸ್ಟಡ್ ಅಲ್ಲವೇ ಅಲ್ಲ. ಲೆಕ್ಕಪ್ರಕಾರ ಅದು ರಿಜಿಸ್ಟಡ್ ಆಗಿರಬೇಕಾದದ್ದು ಕಡ್ಡಾಯ. ಅಲ್ಲದೇ ಇವರು ನಡೆಸುವ ವ್ಯವಹಾರ ವಾಣಿಜ್ಯ ಅಥವಾ ಕಮರ್ಷಿಯಲ್ ಆಗಿದೆ. ಆದರೆ ಅದನ್ನು ಇವರು ಎಲ್ಲಿಯೂ ಬಹಿರಂಗ ಪಡಿಸುವುದಿಲ್ಲ. ಇವರು ಸಂಗ್ರಹಿಸುವ ಕೋಟ್ಯಾಂತರ ಮೊತ್ತಕ್ಕೆ ಸೂಕ್ತ ದಾಖಲೆಗಳು ಬೇಕು. ಒಂದು ವೇಳೆ ಹಣ ಕಲ್ಯಾಣ ನಿಧಿಗೆ ಸಂಗ್ರಹಿಸುವುದೇ ಆಗಿದ್ದಲ್ಲಿ ಅದು ವೆಲ್‌ಫೇರ್ ಅಸೋಸಿಯೇಶನ್ ಅಡಿಯಲ್ಲಿ ಬರಬೇಕು. ಇದ್ಯಾವುದೂ ನಡೆದೇ ಇಲ್ಲ. ಅದಲ್ಲದೆ ಈ ಸಂಘದವರು ನಡೆಸುವ ಜಿಲ್ಲಾ ಕಮಿಟಿಗಳು ಕೂಡ ರಿಜಿಸ್ಟಡ್ ಆಗಿರಬೇಕು. ಆದರೆ ಯಾವುದೂ ಕೂಡ ರಿಜಿಸ್ಟಡ್ ಆಗಿಲ್ಲ. ಎಲ್ಲಾ ಜಿಲ್ಲಾ ಕಮಿಟಿಗಳ ಒಟ್ಟಾದ ಹಣ ಬರುವುದು ಪರವಾನಿಗೆ ಹೊಂದಿದ ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ಆದರೂ ಅದೇ ರಿಜಿಸ್ಟಡ್ ಆಗಿಲ್ಲ ಎಂದಾದರೆ ಇದೆಂತಹ ಮಹಾ ಡೋಂಗಿ ಬಿಜಿನೆಸ್ ಎಂದು ನಿಮಗೆ ಅನಿಸದೇ ಇರುವುದಿಲ್ಲ.
ಇವರು ಎಂತಹ ಪಕ್ಕಾ ಕ್ರಿಮಿನಲ್‌ಗಳು ಎಂದರೆ ಇಷ್ಟೊಂದು ಪ್ರಮಾಣದಲ್ಲಿ ಹಣ ಬೇನಾಮಿಯಾಗಿ ಒಟ್ಟಾಯಿತಲ್ಲ. ಇನ್ನೆನೂ ಮಾಡುವುದು, ಒಂದು ಬ್ಯಾಂಕ್ ಒಪನ್ ಮಾಡೋಣ ಎಂದು ನಿರ್ಧರಿಸಿಬಿಟ್ಟಿದ್ದಾರೆ. ಅದು ಕರ್ನಾಟಕ ರಾಜ್ಯಾದ್ಯಂತ ಸ್ಥಾಪನೆಯೂ ಆಗಿದೆ. ಮಂಗಳೂರಿನ ಸಾನು ಪ್ಯಾಲೇಸ್‌ನಲ್ಲಿ ಬ್ಯಾಂಕಿನ ಶಾಖೆಯೊಂದು ಕಾರ್ಯ ನಿರ್ವಹಿಸುತ್ತಿದೆ. ಇವರು ವ್ಯವಹರಿಸುವ ಯಾವ ಹಣಕ್ಕೂ ಸರಿಯಾದ ಲೆಕ್ಕ ಎಂಬುದೇ ಇಲ್ಲ. ಅಸೋಸಿಯೇಶನ್‌ನವರು ಬೆಂಗಳೂರಿನಲ್ಲಿ ವಾರ್ಷಿಕ ಸಭೆ ಎಂದು ಮಾಡುತ್ತಾರೆ. ಅಲ್ಲಿ ಎಲ್ಲಾ ಜಿಲ್ಲಾ ಮತ್ತು ರಾಜ್ಯ ಕಮಿಟಿಯ ಲೆಕ್ಕಾಚಾರದ ಮಂಡನೆ ಆಗಬೇಕು. ಆದರೆ ಅಲ್ಲಿ ಯಾವುದೂ ನಡೆಯುವುದೂ ಕೂಡ ಇಲ್ಲ. ಅಲ್ಲಿ ಏನಿದ್ದರೂ ಬರಿ ಕುಡಿಯುವುದು, ಮಜಾ ಉಡಾಯಿಸುವುದು ಮಾತ್ರ ನಡೆಯುತ್ತದೆ ಎಂದು ಅದರಲ್ಲಿ ಭಾಗವಹಿಸಿದವರೇ ಹೇಳುತ್ತಾರೆ. ಅಂತಹ ಒಂದೊಂದು ವಾರ್ಷಿಕ ಸಭೆಗಳಿಗೆಂದೇ ಇಂತಿಷ್ಟು ಕಲ್ಯಾಣ ನಿಧಿಯನ್ನು ಇವರು ತೆಗೆದಿಟ್ಟುಕೊಳ್ಳುತ್ತಾರೆ. ವರ್ಷದ ಸಭೆಗಳ ಖರ್ಚೆ ಲಕ್ಷಗಳಲ್ಲಿ ಇರುತ್ತದೆ. ಕರ್ನಾಟಕ ರಾಜ್ಯ ಪರವಾನಿಗೆ ಹೊಂದಿದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಅಡಿಟ್ ರಿಪೋರ್ಟ್ ಕೇಳಿ ನೋಡಿದರೆ. ಹಾಗೆಂದರೆ ಏನು ಎಂದೇ ಅವರಿಗೆ ಗೊತ್ತಿಲ್ಲದಷ್ಟು ಅಮಾಯಕರು!
ನಿಮಗೆ ಕೇಳಿದರೆ ತುಂಬಾ ಆಶ್ಚರ್ಯವಾಗಬಹುದು. ಒಂದು ಕಾಲದಲ್ಲಿ ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘ ಎಂದರೆ ಅದಕ್ಕೆ ಇದ್ದ ಗೌರವ, ಮರ್ಯಾದೆಯೇ ಬೇರೆ. ಅದರಲ್ಲಿ ಸದಸ್ಯರಾಗಬೇಕಿದ್ದರೆ ಆ ವ್ಯಕ್ತಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಓದಿರಬೇಕಿತ್ತು ಅಥವಾ ಅದಕ್ಕೆ ಸಮಾನವಾದ ತತ್ಸಂಬಂಧಿ ಕೋರ್ಸ್‌ಗಳಲ್ಲಿ ಆಳವಾದ ಅಧ್ಯಯನ ಮಾಡಬೇಕಿತ್ತು. ಆದರೆ ಕಾಲ ಕಳೆದಂತೆ ಈಗ ಈ ಸಂಸ್ಥೆಯಲ್ಲಿ ನಾಯಿ, ಬೆಕ್ಕುಗಳೆಲ್ಲ ಸದಸ್ಯರಾಗುವ ಅವಕಾಶ ಇದೆ. ಕಾರಣ ಈಗ ಇವರಿಗೆ ಗೌರವ ಮುಖ್ಯ ಅಲ್ಲ. ಹಣ ಮುಖ್ಯ. ಯಾವುದೇ ವ್ಯಕ್ತಿ ಒಂದಿಷ್ಟು ದಿನ ಯಾರಾದರೂ ವಿದ್ಯುತ್ ಗುತ್ತಿಗೆದಾರನ ಕೈ ಕೆಳಗೆ ಕೆಲಸಕ್ಕೆ ನಿಂತರೆ ಸಾಕು. ಆತ ಕೂಡ ನಾಳೆ ಈ ಸಂಘಕ್ಕೆ ತನ್ನ ಹೆಸರು ನೊಂದಾಯಿಸಬಹುದು. ಈಗಾಗಿ ಎಲ್ಲಿ ನೋಡಿದರೂ ಈಗ ಪರವಾನಿಗೆ ಹೊಂದಿದ ವಿದ್ಯುತ್ ಗುತ್ತಿಗೆದಾರರೇ ಎಲ್ಲ ತುಂಬಿ ಹೋಗಿದ್ದಾರೆ, ಎಷ್ಟು ಜನರಿಗೆ ಸರಿಯಾಗಿ ಕೆಲಸ ಗೊತ್ತಿದೆ; ಅದು ಬೇರೆ ವಿಷಯ.
ಈ ಸಂಸ್ಥಗೆ ಮೂರು ವರ್ಷಗಳಿಗೊಮ್ಮೆ ಚುನಾವಣೆಯಾಗುತ್ತದೆ. ಉರ್ಬಾನ್ ಪಿಂಟೋ ಸತತವಾಗಿ ಮೂರನೇ ಅವಧಿಗೆ ಈ ಸಂಸ್ಥೆಯ ಸಧ್ಯಕ್ಷ. ಪ್ರಸ್ತುತ ಕೆಇಸಿಎ ಇದರಲ್ಲಿ ಸುಮಾರು ಹನ್ನೆರಡು ಸಾವಿರ ವಿದ್ಯುತ್ ಗುತ್ತಿಗೆದಾರರಿದ್ದಾರೆ. ಈ ರಾಜ್ಯ ಮಟ್ಟದ ಅಸೋಸಿಯೇಶನ್‌ಗೆ ಯಾವುದೇ ರೀತಿಯಲ್ಲಿಯೂ ದಕ್ಷಿಣ ಕನ್ನಡದಲ್ಲಿ ಜಿಲ್ಲಾ ಸಮಿತಿ ಎಂದು ಇಲ್ಲ. ಆದರೆ ಮಂಗಳೂರಿನಲ್ಲಿ ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಅಸೋಸಿಯೇಶನ್‌ಗೆ ಇರುವ ಜಿಲ್ಲಾ ಸಮಿತಿಯೂ ತಾನು ರಾಜ್ಯ ಮಟ್ಟದಲ್ಲಿ ಅಸೋಸಿಯೇಶನ್‌ನ ಜಿಲ್ಲಾ ಘಟಕ ಎಂದು ಹೇಳಿಕೊಂಡಿದೆ. ಇವರು ಮೆಸ್ಕಾಂನೊಂದಿಗೆ ಮಾಡಿರುವ ಅಪವಿತ್ರ ಮೈತ್ರಿಯ ಕಾರಣ ಯಾವುದೇ ಹೊಸ ವಿದ್ಯುತ್ ಸಂಪರ್ಕದ ಅರ್ಜಿ ಅಥವಾ ಹೆಸರು ಬದಲಾವಣೆಯ ಅರ್ಜಿ ಇಲ್ಲಿ ಸಿಗುತ್ತದೆ ವಿನ: ಇವರು ಅಂತಹ ಅರ್ಜಿಗಳನ್ನು ಮಾರುವುದಕ್ಕೆ ಹಕ್ಕು ಭಾದ್ಯರಾಗಿದ್ದಾರೋ ಎನ್ನುವ ಪ್ರಶ್ನೆ ಬಂದಾಗ ಕಾನೂನು ಪ್ರಕಾರದಲ್ಲಿ ಇಲ್ಲ. ಯಾಕೆ ಗೊತ್ತಾ? ರಾಜ್ಯದ ಅಸೋಸಿಯೇಶನ್‌ನವರು ಹೇಳಿಕೊಂಡಂತೆ ಇವರು ಇಂತಹ ಅರ್ಜಿಗಳನ್ನು ಕೇವಲ ತಮ್ಮ ಸದಸ್ಯರಿಗೆ ಮಾತ್ರ ಮಾರಬಹುದು ಮತ್ತು ಸದಸ್ಯರು ಮಾತ್ರ ಅದನ್ನು ವಿಲೇವಾರಿ ಮಾಡಲು ಹಕ್ಕನ್ನು ಹೊಂದಿರುತ್ತಾರೆ. ಆದರೆ ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾದ ಸದಸ್ಯರು ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿರುತ್ತದೆ. ಇದರ ಸದಸ್ಯರು ಈ ಫಾರಂ ವ್ಯವಹಾರದಲ್ಲಿ ನಡೆಯುವ ಢೊಂಗಿಯನ್ನು ಸ್ಪಷ್ಟವಾಗಿ ಗುರುತಿಸಿ ನ್ಯಾಯಾಲಯದ ಮುಂದೆ ತಮ್ಮ ವಾದವನ್ನು ಮಂಡಿಸಿದ್ದಾರೆ. ಅವರ ಪ್ರಕಾರ ಯಾವಾಗ ರಾಜ್ಯ ವಿದ್ಯುತ್ ಗುತ್ತಿಗೆದಾರರ ಅಸೊಸಿಯೇಶನ್ ಈ ಫಾರಂಗಳನ್ನು ಕೇವಲ ಸದಸ್ಯರಿಗೆ ಮಾತ್ರ ಹಂಚಬಹುದು ಎನ್ನುವ ನಿಯಮ ಇದ್ದ ಬಳಿಕವೂ ದಾಖಲೆಗಳಲ್ಲಿ ಯಾಕೆ ಜಿಲ್ಲಾ, ತಾಲೂಕು ಮಟ್ಟದ ಸಮಿತಿಗಳಿಗೆ ಅದನ್ನು ವಿಕ್ರಯಿಸಿರುವುದರ ಬಗ್ಗೆ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಆ ವರದಿಯಲ್ಲಿ ಫಾರಂಗಳನ್ನು ಸುಳ್ಯ, ಕಡಬ, ಪುತ್ತೂರು ಹೀಗೆ ಹಲವು ತಾಲೂಕು ಮಟ್ಟದ ಸಮಿತಿಗಳಿಗೆ ಹಂಚಿದೆ. ಈ ಸಮಿತಿಗಳು ಅದೇಗೆ ಸದಸ್ಯರಾಗಲು ಸಾಧ್ಯ? ಸಮಿತಿಗಳೇ ಇಲ್ಲ ಎಂದ ಮೇಲೆ ಅವರಿಗೆ ಫಾರಂ ಹಂಚುವ ಅಗತ್ಯ ಇಲ್ಲ. ಸದಸ್ಯರಿಗೆ ಮಾತ್ರ ನಾವು ಫಾರಂ ನೀಡುವುದು ಎಂದ ಮೇಲೆ ಸಮಿತಿಗಳಿಗೆ ಹೇಗೆ ಕೊಟ್ಟಿರಿ. ಈ ಪ್ರಶ್ನೆಯನ್ನು ಹ್ಯೂಮನ್ ರೈಟ್ಸ್‌ನವರು ನ್ಯಾಯಾಲಯದಲ್ಲಿ ಕೇಳಿದ್ದಾರೆ. ತಮಗೆ ಯಾವುದೇ ಸಮಿತಿ ಇಲ್ಲ ಎಂದು ಹೇಳುವ ರಾಜ್ಯ ಮಟ್ಟದ ಅಸೋಸಿಯೇಶನ್ ದಕ್ಷಿಣ ಕನ್ನಡ ಸಮಿತಿಯ ಬಗ್ಗೆ ಯಾಕೆ ಇಷ್ಟು ವರ್ಷ ಮೌನ ವಹಿಸಿದೆ. ಎಲ್ಲಿಯ ತನಕ ಗೋಲ್‌ಮಾಲ್ ಎಂದರೆ ಇಲ್ಲಿ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಜಿಲ್ಲಾ ಸಮಿತಿಯವರು ತಮ್ಮ ಸ್ವಂತ ಕಟ್ಟಡದಲ್ಲಿ ಕಚೇರಿಯನ್ನು ಹೊಂದಿದ್ದಾರೆ. ಅಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳೂ ಕೂಡ ಇದೆ.
ಇಲ್ಲಿ ನಾವು ಈ ವರದಿಯ ಪ್ರಾರಂಭದಲ್ಲಿಯೇ ಹೇಳಿರುವಂತೆ ಈ ಒಟ್ಟು ಪ್ರಕರಣ ತೆಲಗಿಯ ನಕಲಿ ಸ್ಟಾಂಪ್ ವ್ಯವಹಾರದಷ್ಟೇ ಘೋರ ಅಕ್ರಮಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿದೆ. ಇಲ್ಲಿ ನೀವು ಖರೀದಿಸಿರುವ ಫಾರಂಗಳನ್ನು ಸರಿಯಾಗಿ ಗಮನಿಸಿದರೆ ಅದು ಒರಿಜಿನಲ್ ಫಾರಂ ಹೌದೊ, ಅಲ್ಲವೊ ಎನ್ನುವ ಅನುಮಾನ ಬರುತ್ತದೆ. ಯಾಕೆಂದರೆ ಈ ಜಿಲ್ಲಾ ಸಮಿತಿಯವರಿಗೆ ನಿಯಮಗಳ ಪ್ರಕಾರ ಫಾರಂಗಳನ್ನು ನೀಡುವಂತಿಲ್ಲ. ಅದರಲ್ಲೂ ಇವರ ವ್ಯವಹಾರ ಗಮನಿಸಿದರೆ ಇವರಿಗೆ ಫಾರಂಗಳು ದೊಡ್ಡ ಪ್ರಮಾಣದಲ್ಲಿ ಬೇಕಾಗಬಹುದು. ಆದ್ದರಿಂದ ಇವರೇ ತಮಗೆ ಅಗತ್ಯಕ್ಕೆ ಬೇಕಾದಷ್ಟು ಫಾರಂಗಳನ್ನು ಪ್ರಿಂಟ್ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನುವ ಬಗ್ಗೆನೂ ದಟ್ಟ ಅನುಮಾನಗಳಿವೆ. ಅದು ನಿಜವೆಂದಾದಲ್ಲಿ ನಮ್ಮ ರಾಜ್ಯದಲ್ಲಿ ಅಕ್ರಮ, ಅವ್ಯವಹಾರಗಳ ವೈಟ್ ಕಾಲರ್ ಕ್ರೈಂನಲ್ಲಿ ಇದು ತೆಲಗಿಯನ್ನು ಮೀರಿಸಲಿದೆ. ನೀವೆ ಯೋಚಿಸಿ, ಪ್ರತಿಯೊಂದು ಸಮಿತಿಯೂ ಪ್ರಿಂಟರ್ ಅದಕ್ಕೆ ಬೇಕಾದ ಸಲಕರಣೆಗಳನ್ನು ತನ್ನಲ್ಲಿ ದಾಸ್ತಾನು ಮಾಡಿಕೊಂಡಿರುತ್ತದೆ. ಇತ್ತೀಚೆಗೆ ಅದನ್ನು ನ್ಯಾಯಾಲಯದ ಸೂಚನೆ ಮೇರೆಗೆ ಜಪ್ತಿ ಮಾಡಲಾಗಿದೆ. ಆದರೆ ಇಲ್ಲಿಯ ತನಕ ಇವರು ಪ್ರಿಂಟ್ ಮಾಡಿ ಜನರಿಗೆ ಹಂಚಿಕೆ ಮಾಡಿದ ಫಾರಂಗಳು ನಕಲಿಯೇ ಆಗಿದ್ದಲ್ಲಿ ಆ ವ್ಯವಹಾರ ಎಷ್ಟು ಕೋಟಿಗಳಲ್ಲಿ ನಡೆದಿರಬಹುದು ಎಂದು ಊಹಿಸಲು ಕೂಡ ಆಗುವುದಿಲ್ಲ. ಇನ್ನೂ ಸುಳ್ಯದಲ್ಲಿ ಈ ಸಮಿತಿಯವರು ಸರಕಾರಕ್ಕೆನೆ ಮಂಗ ಮಾಡಿದ್ದಾರೆ. ಸರಕಾರದಿಂದಲೇ ಜಮೀನು ಪಡೆದುಕೊಂಡು ಅಲ್ಲಿ ಒಂದು ಸ್ವಂತ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ತಮ್ಮ ವ್ಯವಹಾರಕ್ಕಾಗಿ ಚಿಕ್ಕ ಕೋಣೆಯನ್ನು ಉಳಿಸಿಕೊಂಡು ಉಳಿದದ್ದನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಆ ಮೂಲಕ ಅದರಲ್ಲಿಯೂ ಹಣ ಸಂಪಾದಿಸುತ್ತಿದ್ದಾರೆ. ಯಾಕೆಂದರೆ ಸರಕಾರಕ್ಕೆ ಸರಕಾರವೇ ಇವರದ್ದು ಸಾಚಾ ವ್ಯವಹಾರ ಎಂದು ನಂಬಿ ಬಿಟ್ಟಿದೆ.
ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಇವರ ಅವ್ಯವಹಾರದ ಪ್ರಕರಣ ಬಂದಾಗ ತಮ್ಮದು 1922 ರಿಂದಲೇ ಇರುವ ಬ್ರಿಟಿಷರ ಕಾಲದಿಂದಲೇ ಚಾಲ್ತಿಯಲ್ಲಿರುವ ಸಂಸ್ಥೆ ಎಂದು ಇವರು ಹೇಳಿಕೊಳ್ಳುತ್ತಾರೆ. 1930 ರಲ್ಲಿ ಇದನ್ನು ನೋಂದಾವಣೆ ಮಾಡಿಕೊಳ್ಳಲಾಗಿದೆ ಎಂದು ಅಫಿದಾವಿತ್‌ನಲ್ಲಿ ತಿಳಿಸಿದ್ದಾರೆ. ಇವರು ನೊಂದಾವಣೆ ಮಾಡಿಕೊಂಡದ್ದು ಕರ್ನಾಟಕ ರಾಜ್ಯ ನೋಂದಾವಣೆ ಕಾಯಿದೆಯ ಅಧಿನಿಯಮದ ಅಡಿಯಲ್ಲಿ. ಇವರ ನೋಂದಾವಣೆ ಸಂಖ್ಯೆ 103 ಎಂದು ಕೆಇಸಿಎಲ್ ತನ್ನ ದಾಖಲೆಗಳಲ್ಲಿ ತೋರಿಸುತ್ತದೆ. ಆದರೆ ಅದೇ ವರದಿಯಲ್ಲಿ ಲೈಸೆನ್ಸ್‌ಡ್ ಕಂಟ್ರಾಕ್ಟರ‍್ಸ್ ಸಂಘ (ದಕ್ಷಿಣ ಕನ್ನಡ) ಇದಕ್ಕೂ ನೋಂದಾವಣೆ ಸಂಖ್ಯೆ 103 ಎಂದೇ ಬರೆಯಲಾಗಿದೆ. ಒಟ್ಟಿನಲ್ಲಿ ಈ ಬಗ್ಗೆ ಸಮಗ್ರ ತನಿಖೆ ನಡೆಯಲೇಬೇಕು. ನಕಲಿ ಸ್ಟ್ಯಾಂಪ್ ವ್ಯವಹಾರದಷ್ಟೇ ಗಂಭೀರವಾಗಿ ಸರಕಾರ ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಒಂದು ವೇಳೆ ಸಿಬಿಐಗೆ ಕೊಟ್ಟರೆ ಇದರಲ್ಲಿ ಅಡಗಿರುವ ಬೃಹತ್ ತಿಮಿಂಗಿಲಗಗಳು ಹೊರಗೆ ಬರಬಹುದು. ಒಟ್ಟಿನಲ್ಲಿ ಸರಕಾರದ ಬೊಕ್ಕಸಕ್ಕೆ ಆಗುತ್ತಿರುವ ಅನ್ಯಾಯ ಕೊನೆಗಾಣಬೇಕು. ಸರಕಾರದ ಖಜಾನೆ ಸೇರಬೇಕಾದ ಹಣ ಯಾರದ್ದೋ ಬೊಕ್ಕಸ ಸೇರುವುದು ನಿಲ್ಲಲಿ ಎನ್ನುವುದೇ ನಮ್ಮ ಕಾಳಜಿ.
ಕೃಪೆ : ಮೆಗಾ ಮೀಡಿಯಾ ಪತ್ರಿಕೆ
Click this button or press Ctrl+G to toggle between Kannada and English