ಮಣ್ಣಗುಡ್ಡೆ 64ನೇಯ ಗುರ್ಜಿ ದೀಪೋತ್ಸವ

4:55 PM, Wednesday, December 9th, 2015
Share
1 Star2 Stars3 Stars4 Stars5 Stars
(5 rating, 6 votes)
Loading...
mannagudda-gurji

ಮಂಗಳೂರು : ಕನಿಕರಿಸುವ ಹೃದಯಕ್ಕಿಂತ ಕಣ್ಣೀರಿಡುವ ನಯನಗಳಿಗಿಂತ ಸಹಾಯ ನೀಡುವ ಕೈಗಳೇ ಮೇಲು ಎಂಬುದನ್ನು ಫ್ರೆಂಡ್ಸ್ ಬಲ್ಲಾಳ್‌ಬಾಗ್-ಬಿರುವೆರ್ ಕುಡ್ಲ ಸಂಘಟನೆ ತೋರಿಸಿಕೊಟ್ಟಿದೆ.64ನೇಯ ಗುರ್ಜಿ ದೀಪೋತ್ಸವದಲ್ಲಿ ನರರೋಗದಿಂದ ಬಳಲುತ್ತಿರುವ ಧನುಷ್ ಎಂಬ 2 ವರ್ಷದ ಮಗುವಿಗೆ ರೂಪಾಯಿ 50,000/-ಹಾಗೂ ಪಾರ್ಶ್ವವಾಯುವಿನಿಂದ ಬಳಲುತ್ತಿರುವ ರಾಜೇಶ್ ಬಂಗೇರರಿಗೆ ರೂಪಾಯಿ 25,000/- ಧನ ಸಹಾಯ ನೀಡುವ ಮೂಲಕ ಮಾನವೀಯ ಮೌಲ್ಯವನ್ನು ಫ್ರೆಂಡ್ಸ್ ಬಳ್ಳಾಲ್‌ಬಾಗ್ ಎತ್ತಿಹಿಡಿಯಿತು.

ಮಂಗಳವಾರ ನಡೆದ ಮಣ್ಣಗುಡ್ಡೆ ಗುರ್ಜಿ ದೀಪೋತ್ಸವದಲ್ಲಿ ಫ್ರೆಂಡ್ಸ್ ಬಳ್ಳಾಲ್‌ಬಾಗ್-ಬಿರುವೆರ್ ಕುಡ್ಲ ಸಂಘಟನೆ ಮಾದರಿ ಕಾರ್ಯಕ್ರಮವೊಂದನ್ನು ಮಾಡಿ ಸರ್ವರ ಶ್ಲಾಘನೆಗೆ ಪಾತ್ರವಾಯಿತು. ಕಾಸರಗೋಡು ಜಿಲ್ಲೆಯ ಉಪ್ಪಳ-ಬಾಯಾರಿನ ಭಾರತಿ ಮತ್ತು ಚಂದ್ರಶೇಖರ ದಂಪತಿಗಳ ಮಗು 2 ವರ್ಷದ ಧನುಷ್ ಹಾಗೂ ಕುಂಜತ್ತಬೈಲ್ ನಿವಾಸಿ ರಾಜೇಶ್ ಬಂಗೇರರ ಸಂಕಷ್ಟಕ್ಕೆ ಮಿಡಿದು ಆರ್ಥಿಕ ಸಹಾಯವನ್ನು ನೀಡಿ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯಿತು.

ಧನುಷ್ ಹುಟ್ಟಿದ 5 ತಿಂಗಳಿನಲ್ಲೇ ನರರೋಗಕ್ಕೆ ತುತ್ತಾಗಿ ಕೊರಳನ್ನು ಒಂದು ಕಡೆಗೆ ವಾಲಿಸಿಕೊಂಡೇ ಇರಬೇಕಾದ ದುಃಸ್ಥಿತಿಯಲ್ಲಿದ್ದಾನೆ. ಈ ಮಧ್ಯೆ ಅಪಸ್ಮಾರ ಕಾಯಿಲೆ ಕೂಡಾ ಆ ಮಗುವನ್ನು ಬಾಧಿಸುತ್ತಿದೆ. ಹಲವಾರು ವೈದ್ಯರ ಬಳಿಯಲ್ಲಿ ಪರೀಕ್ಷೆ ಮಾಡಿಸಿದರೂ ರೋಗ ಗುಣಮುಖವಾಗಲಿಲ್ಲ. ಈ ರೋಗವನ್ನು ಗುಣಪಡಿಸುವ ಯಾವ ಭರವಸೆಯನ್ನೂ ವೈದ್ಯರು ನೀಡುತ್ತಿಲ್ಲ. ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿರುವ ಬಡಪಾಯಿ ತಂದೆ ಚಂದ್ರಶೇಖರ್‌ಗೆ ಕುಟುಂಬ ನಿರ್ವಹಣೆಯು ಕಷ್ಟವಾಗಿರುವಾಗ ಈ ಮಗುವಿನ ಚಿಕಿತ್ಸೆಗೆ ಹಣ ಹೊಂದಿಸುವುದು ತುಂಬಾನೇ ಕಷ್ಟವಾಗಿತ್ತು. ಈ ಮಗುವಿನ ಬಗ್ಗೆ ತಿಳಿದ ಬಿರುವೆರ್ ಕುಡ್ಲ ಸಂಘಟನೆ ರೂ.50,ooo/-ವನ್ನು ಧನುಷ್ ಕುಟುಂಬಕ್ಕೆ ನೀಡಿ ಸಾಂತ್ವನವನ್ನು ಹೇಳಿದೆ. ಮಾತ್ರವಲ್ಲದೆ ಕಳೆದೆರಡು ವರ್ಷಗಳಿಂದ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿರುವ ಕುಂಜತ್ತಬೈಲ್ ನಿವಾಸಿ ರಾಜೇಶ್ ಬಂಗೇರ ಅವರ ಕುಟುಂಬಕ್ಕೂ ಸ್ಥೈರ್ಯ ತುಂಬಿ ರೂಪಾಯಿ 25,000/- ಆರ್ಥಿಕ ನೆರವನ್ನು ಫ್ರೆಂಡ್ಸ್ ಬಲ್ಲಾಳ್‌ಬಾಗ್ ಸಂಘಟನೆ ನೀಡಿತು.

ನೆರವಿನ ಚೆಕ್‌ಗಳನ್ನು ಇಂಟಕ್‌ನ ರಾಜ್ಯಾಧ್ಯಕ್ಷ ಹಾಗೂ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ, ಹೆಚ್.ಎಮ್.ಎಸ್.ನ ಅಧ್ಯಕ್ಷ ಸುರೇಶ್ಚಂದ್ರ ಶೆಟಿ, ಫ್ರೆಂಡ್ಸ್ ಬಲ್ಲಾಳ್‌ಬಾಗ್‌ನ ಗೌರವಾಧ್ಯಕ್ಷ ಪ್ರಮೋದ್ ಬಲ್ಲಾಳ್‌ಬಾಗ್ ವಿತರಿಸಿದರು. ಫ್ರೆಂಡ್ಸ್ ಬಲ್ಲಾಳ್‌ಬಾಗ್‌ನ ಅಧ್ಯಕ್ಷ ರಾಕೇಶ್ ಪೂಜಾರಿ, ಕಾರ್ಯದರ್ಶಿ ಪ್ರಸಾದ್, ಉದಯ್ ಪೂಜಾರಿ, ಯತೀಶ್ ಬಲ್ಲಾಳ್‌ಬಾಗ್, ಚರಣ್ ಶೆಟ್ಟಿ, ರಣ್‌ದೀಪ್ ಮತ್ತು ಬಿರುವೆರ್ ಕುಡ್ಲದ ಸದಸ್ಯರು ವೇದಿಕೆಯಲ್ಲಿದ್ದರು. ಬಳಿಕ ಚರಣ್ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ರಸಮಂಜರಿ ಕಾರ್ಯಕ್ರಮ ಜರಗಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English