ಬದಿಯಡ್ಕ: ಕಾಸರಗೋಡು ಜಿಲ್ಲೆಯಲ್ಲಿ ಅತೀ ಪುರಾತನ ಹಾಗೂ ಕೇರಳ ಪ್ರವಾಸ್ಯೋದ್ಯಮ ಇಲಾಖೆಯಲ್ಲಿ ನೊಂದವಣೆಗೊಂಡ ಬೇಳ ಶೋಕಮಾತ ಪುಣ್ಯಕ್ಷೇತ್ರದಲ್ಲಿ ಕ್ರಿಸ್‌ಮಸ್ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಸಂಭ್ರಮದ ಬಲಿಪೂಜೆಯಲ್ಲಿ ವಂದನೀಯ ಸ್ವಾಮಿ ಡೆನಿಯಲ್ ಪ್ರಕಾಶ್ ಡಿ’ಸೋಜಾ ನೇತೃತ್ವ ನೀಡಿದರು. ಬಲಿಪೂಜೆಯಲ್ಲಿ ಕಾಸರಗೋಡು ವಲಯದ ಪ್ರಧಾನ ಧರ್ಮಗುರು ಹಾಗೂ ಬೇಳ ಶೋಕಮಾತ ಪುಣ್ಯಕ್ಷೇತ್ರದ ಪ್ರಧಾನ ಧರ್ಮಗುರುಗಾದ ಅತೀ ವಂದನೀಯ ಸ್ವಾಮಿ ವಿನ್ಸೆಂಟ್ ಡಿ’ಸೋಜಾ ಮಂದಾಳುತ್ವ ನೀಡಿದರು. ಶೋಕಮಾತ ಪುಣ್ಯಕ್ಷೇತ್ರದ ಸಹಾಯಕ ಧರ್ಮಗುರುಗಳಾದ ವಂದನೀಯ ಸ್ವಾಮಿ ಡೆನ್ಸಿಲ್ ಲೋಬೊ, ವಂದನೀಯ ಸ್ವಾಮಿ ತೋಮಸ್ ಡಿ’ಸೋಜಾ, ವಂದನೀಯ ಸ್ವಾಮಿ ಜೊನ್ಸನ್ ಮ್ಯಾಥ್ಯು ಉಪಸ್ಥಿತರಿದರು. ಬಲಿಪೂಜೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮವು ಜರಗಿತು. ಪುಟಾಣಿ ಮಕ್ಕಳ ವಿವಿಧ ನೃತ್ಯಗಳನ್ನು ಸಾದರಪಡಿಸಿದರು. ಎಲ್ಲಾ ಭಕ್ತಾದಿಗಳಿಗೆ ಕೇಕ್ ಮತ್ತು ಪಾನೀಯವನ್ನು ವಿತರಣೆ ಮಾಡಲಾಯಿತು.
ಮದರ್ ಚರ್ಚ್ ಎಂದೇ ಪ್ರಸಿದ್ಧಿ ಪಡೆದ ಬೇಳ ಚರ್ಚ್ ನಲ್ಲಿ ಕಳೆದ ಕ್ರಿಸ್‌ಮಸ್‌ಗೆ ಇತಿಹಾಸದಲ್ಲೇ ಬೃಹತ್ ಕ್ರಿಸ್‌ಮಸ್ ಕ್ರಿಬ್(ಗೋದಲಿಯನ್ನು)ನಿರ್ಮಿಸಿ ಗಮನ ಸೆಳೆದಿದ್ದರು. ಆದರೆ ಈ ವರ್ಷದ ವಿಶೇಷತೆಯಾಗಿ ಸುಮಾರು 10 ಮೀಟರಿಗಿಂತಲೂ ಉದ್ದವಿರುವ ದೋಣಿಯಲ್ಲಿ ಕ್ರಿಸ್‌ಮಸ್ ಕ್ರಿಬ್‌ನ್ನು ತಯಾರಿಸಲಾಗಿದೆ. 15ಕ್ಕಿಂತಲೂ ಹೆಚ್ಚು ಮಂದಿ ಇದರ ನಿರ್ಮಾಣಕ್ಕಾಗಿ ಎರಡು ತಿಂಗಳುಗಳ ಕಾಲ ಶ್ರಮಿಸಿದ್ದು ಇದೀಗ ಆಕರ್ಷಣೆಯನ್ನುಂಟು ಮಾಡಿದೆ. ಪ್ರಪಂಚದಲ್ಲಿರುವ ಮರುಭೂಮಿ, ಕಾಡು, ಕೃಷಿ ಭೂಮಿ, ನೀರು, ಮನೆಗಳು, ಪ್ರಾಣಿ ಪಕ್ಷಗಳ ಸಹಿತ ಎಲ್ಲವನ್ನೂ ಒಳಗೊಂಡಿರುವ ಈ ಕ್ರಿಬ್‌ನಲ್ಲಿ ಏಸುವಿನ ಜನ್ಮಸ್ಥಳ ಬೆತ್ಲೆಹೆಂನ ಚಿತ್ರಣವನ್ನೂ ಒಳಗೊಂಡಿದೆ. ಏಸುವಿನ ತಂದೆ ಜೋಸೆಫ್ ಹಾಗೂ ಮೇರಿ ಮಾತೆಯೊಂದಿಗೆ ಬಾಲ ಏಸುವಿನ ಜನನವಾದ ಹಟ್ಟಿಯ ಚಿತ್ರಣ ಮನ ಮುಟ್ಟುವಂತಿದೆ.
ಗೋದಲಿಯ ಬಳಿಯಲ್ಲೇ ಇರುವ ಕ್ರಿಸ್ಮಸ್ ಟ್ರೀ(ಮರ) ವಿವಿಧ ಅಲಂಕಾರಿಕ ವಸ್ತುಗಳಿಂದ, ಅಲಂಕೃತವಾದ ದೀಪಗಳಿಂದ ಕಂಗೊಳಿಸುವಂತೆ ಮಾಡಲಾಗಿದೆ.
Click this button or press Ctrl+G to toggle between Kannada and English