ಉಪ್ಪಳ: ಮುಖ್ಯಮಂತ್ರಿಯವರ ಸಹಾಯದ ನಿರೀಕ್ಷೆಯಲ್ಲೇ ಬಹುಕಾಲ ಶರಶಯ್ಯೆಯಲ್ಲಿದ್ದ ವ್ಯಕ್ತಿಯೋರ್ವರು ಕೊನೆಗೂ ಹುಸಿ ನಿರೀಕ್ಷೆಯೊಂದಿಗೆ ಇಹ ತ್ಯಜಿಸಿದ ಘಟನೆ ಬಾಯಾರು ದಳಿಕುಕ್ಕು ಕೊಲೋನಿಯಲ್ಲಿ ನಡೆದಿದೆ.
ಪೈವಳಿಕೆ ಬಾಯಾರು ಸಮೀಪದ ದಳಿಕುಕ್ಕು ಕೊರಗ ಕೊಲೋನಿಯ ಐತ ಕೊರಗ ಸುಧೀರ್ಘ ಕಾಲಗಳಿಂದ ಪಾರ್ಶ್ವವಾಯು ಪೀಡಿತರಾಗಿ ಸೂಕ್ತ ಚಿಕಿತ್ಸೆಗೆ ಅನುಕೂಲವಿಲ್ಲದೆ ಸಂಕಷ್ಟದಲ್ಲಿದ್ದರು. ಇವರೀಗ ಕಳೆದ ಜ.28ರಂದು ರೋಗ ಉಲ್ಬಣಗೊಂಡು ಅಸುನೀಗಿದರು.
ಐತರ ಪತ್ನಿ ಗಿರಿಜಾ ಆಸ್ಮ ರೋಗಿಯಾಗಿ ದೃಷ್ಟಿ ದೋಷವೂ ಬಾಧಿಸಿ ನಿತ್ರಾಣರಾಗಿದ್ದಾರೆ. ಇವರ ಒಂದು ಕಣ್ಣಿಗೆ ಇತ್ತೀಚೆಗೆ ಶಸ್ತ್ರ ಚಿಕಿತ್ಸೆಯನ್ನೂ ನಡೆಸಲಾಗಿತ್ತು. ಪತಿ ಹಾಗೂ ಪತ್ನಿ ತಮ್ಮ ಸಂಕಷ್ಟದ ಪರಿಹಾರಕ್ಕೆ ಸಹಾಯ ಧನಕ್ಕಾಗಿ ಸಾಕಷ್ಟು ಅಂಗಲಾಚಿದ್ದರು. ಹಲವು ಸರಕಾರಿ ಇಲಾಖೆಗಳ ಕದ ತಟ್ಟಿದ್ದರು. ಈ ನಡುವೆ ಸಹಕಾರದ ಭರವಸೆ ನೀಡಿ ರಾಜ್ಯದ ಮುಖ್ಯಮಂತ್ರಿಯವರಿಂದಲೇ ಮೂರು ಬಾರಿ ಪತ್ರ ಬಂದಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮ ಕಚೇರಿಯಿಂದ ಜಾತಿ, ಆದಾಯಗಳ ಪ್ರಮಾಣ ಪತ್ರಗಳನ್ನು ಪಡೆದು ಬ್ಯಾಂಕ್ ನಲ್ಲಿ ಖಾತೆ ತೆರೆದು ಸಂಬಂಧಪಟ್ಟವರಿಗೆ ಈ ಬಗ್ಗೆ ಸಮಗ್ರ ದಾಖಲೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಮಂಜೇಶ್ವರ ತಾಲೂಕು ಕಚೇರಿ, ಜಿಲ್ಲಾಧಿಕಾರಿಗಳ ಕಾರ್ಯಾಲಯಗಳಲ್ಲಿ ಈ ಬಗ್ಗೆ ವಿಚಾರಿಸಿದಾಗ ಗ್ರಾಮ ಕಚೇರಿಯಿಂದ ಯಾವುದೇ ವರದಿಗಳು ತಮಗೆ ಲಭಿಸಿಲ್ಲವೆಂಬ ಉತ್ತರಗಳು ಗಿರಿಜಾರವರಿಗೆ ಲಭಿಸಿದೆ.ಸಾಲ ಮಾಡಿ ತಮ್ಮ ಓರ್ವಳೇ ಪುತ್ರಿಗೆ ವಿವಾಹ ಮಾಡಿರುವ ಗಿರಿಜಾ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಬಿದ್ದಿರುವುದು ಮಾನಸಿಕವಾಗಿ ಗಾಬರಿಗೊಳ್ಳುವಂತೆ ಮಾಡಿದೆ. ಸಂಬಂಧಪಟ್ಟವರು, ಸಂಬಂಧಿತ ಇಲಾಖೆಗೆ ಇಂತಹವರ ಕಣ್ಣೀರು ಕಾಣದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.ಇನ್ನಾದರೂ ಸೂಕ್ತ ಸಹಾಯ ನಿರೀಕ್ಷಿಸುತ್ತಿರುವ ಗಿರಿಜಾ ತನ್ನ ಕೊನೆಗಾಲಕ್ಕಾದರೂ ಮಾಡುವ ಕರ್ಮಗಳಿಗೆ ಸಾಲ ಮಾಡಬೇಕಾದಿತೇ ಎಂದು ಪರಿತಪಿಸುತ್ತಿದ್ದಾರೆ.
Click this button or press Ctrl+G to toggle between Kannada and English