ಕುಂಬಳೆ: ಖಾಸಗಿ ಬಸ್ ಮತ್ತು ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರರಾದ ಯುವಕ ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಪೆರ್ಲ ಸಮೀಪದ ಶೇಣಿ ನಡುಬೈಲು ನಿವಾಸಿ ದಿ.ಅಮ್ಮು ರೈ ಮತ್ತು ಧೂಮಕ್ಕ ದಂಪತಿಯ ಪುತ್ರ ಸಂಪತ್ (28) ಸಾವನ್ನಪ್ಪಿದ ಯುವಕ.
ಅಂಗಡಿಮೊಗರು ಬಳಿಯ ನಾಟೆಕಲ್ಲು ಕೋರೆ ಪರಿಸರದ ರಸ್ತೆಯಲ್ಲಿ ಗುರುವಾರ ಪೂರ್ವಾಹ್ನ ಈ ದುರ್ಘಟನೆ ಸಂಭವಿಸಿದೆ. ಸಂಪತ್ ಬೈಕ್ನಲ್ಲಿ ಸೀತಾಂಗೋಳಿ ಬರುತ್ತಿದ್ದರು. ಈ ವೇಳೆ ಕುಂಬಳೆಯಿಂದ ಪೆರ್ಲಕ್ಕೆ ಹೋಗುತ್ತಿದ್ದ ಮಹಾಲಕ್ಷ್ಮಿ ಖಾಸಗಿ ಬಸ್ ಮತ್ತು ಬೈಕ್ ಪರಸ್ಪರ ಡಿಕ್ಕಿ ಹೊಡೆದಿದೆ.
ಗಂಭೀರವಾಗಿ ಗಾಯಗೊಂಡ ಸಂಪತ್ರನ್ನು ಊರವರು ತಕ್ಷಣ ಕುಂಬಳೆ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಎರ್ನಾಕುಲಂನಲ್ಲಿ ವೆಲ್ಡರ್ ಆಗಿ ದುಡಿಯುತ್ತಿದ್ದ ಸಂಪತ್ ಊರಿನಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಮನೆ ಕೆಲಸ ನೋಡಿಕೊಳ್ಳುವ ಸಲುವಾಗಿ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಆಗಮಿಸಿದ್ದರು.
ಮೃತರು ತಾಯಿ, ಸಹೋದರರಾದ ಜಯಪ್ರಸಾದ್, ಸತೀಶ್, ಪ್ರಕಾಶ್, ಶರತ್, ಸಹೋದರಿಯರಾದ ಪುಷ್ಪಾವತಿ, ಚಂದ್ರಾವತಿ, ಸರಿತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Click this button or press Ctrl+G to toggle between Kannada and English