ಕಾಸರಗೋಡು: ಕಾಂಗ್ರೆಸ್ ಕಾರ್ಯಕರ್ತನ ಮೃತದೇಹ ಮನೆಯೊಳಗೆ ಮೃತಪಟ್ಟಿ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿನಲ್ಲಿ ನಿಗೂಢತೆ ಉಂಟಾದ ಹಿನ್ನೆಲೆಯಲ್ಲಿ ಮೃತದೇಹವನ್ನು ಹೆಚ್ಚಿನ ಮರಣೋತ್ತರ ಪರೀಕ್ಷೆಗಾಗಿ ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಉದುಮ ಮಾಂಗಾಡ್ ಮೇಲ್ಬಾರ ಕಾಲನಿ ನಿವಾಸಿ ಬಾಲಕೃಷ್ಣನ್ ಅವರ ಪುತ್ರ ಚಂದ್ರನ್(40) ಮೃತಪಟ್ಟವರು. ಚಂದ್ರನ್ ಶನಿವಾರ ರಾತ್ರಿ ತೃಕ್ಕನ್ನಾಡ್ ಕ್ಷೇತ್ರ ಆರಾಟು ಮಹೋತ್ಸವಕ್ಕೆ ತೆರಳಿದ್ದರು. ಮನೆಯ ಇತರರು ಬೇರೆಡೆಗೆ ಕಾರ್ಯಕ್ರಮ ನಿಮಿತ್ತ ತೆರಳಿದ್ದರು. ಆದಿತ್ಯವಾರ ಬೆಳಗ್ಗೆ ಅವರು ಮನೆಗೆ ಮರಳಿದಾಗ ಚಂದ್ರನ್ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿರುವುದಾಗಿ ಹೇಳಲಾಗುತ್ತಿದೆ. ಇದೇ ವೇಳೆ ಚಂದ್ರನ್‌ರ ದೇಹ ಹಾಗೂ ಬಟ್ಟೆಬರೆಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿರುವುದಾಗಿಯೂ ವೃಷಣ ಬಾತುಕೊಂಡಿರುವುದು ಕಂಡು ಬಂದಿದೆ ಎನ್ನಲಾಗುತ್ತಿದೆ. ಇದರಿಂದ ಇದೊಂದು ಕೊಲೆ ಕೃತ್ಯವಾಗಿರಬಹುದೆಂದು ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತದೇಹವನ್ನು ಹೆಚ್ಚಿನ ಮರಣೋತ್ತರ ಪರೀಕ್ಷೆಗಾಗಿ ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಇದೇ ವೇಳೆ ಚಂದ್ರನ್‌ರ ಮನೆಯ ಸ್ವಲ್ಪ ದೂರದ ಆಡಿಯಂ ಎಂಬಲ್ಲಿ ಸೇತುವೆ ಸಮೀಪ ಚಂದ್ರನ್ ಕ್ಷೇತ್ರದಿಂದ ತಂದ ಪ್ರಸಾದ ಹಾಗೂ ಮಿಠಾಯಿ ಚೆಲ್ಲಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಅಲ್ಲದೆ ಅಂಗಿಯ ಕಾಲರ್ ತುಂಡಾಗಿ ಬಿದ್ದಿರುವುದು ಕಂಡು ಬಂದಿದೆ. ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿ ಲಭಿಸಿದ ಬಳಿಕವಷ್ಠೆ ಸಾವಿಗೆ ಕಾರಣ ಸ್ಪಷ್ಟಗೊಳ್ಳಬಹುದಾಗಿದೆ.
Click this button or press Ctrl+G to toggle between Kannada and English