ಎಲ್ಲಾ ಧರ್ಮಗಳ ಸಾರ ಒಂದೇ-ಗಣೇಶ್ ಉಳ್ಳೋಡಿ

7:36 PM, Tuesday, March 22nd, 2016
Share
1 Star2 Stars3 Stars4 Stars5 Stars
(5 rating, 5 votes)
Loading...
Janapadasiri

ಕುಂಬಳೆ: ವಿವಿಧ ಕಾರಣಗಳಿಂದ ನಮ್ಮ ನೆಲವನ್ನು ಬಿಟ್ಟು ಬೇರೆಡೆ ವಾಸಿಸುತ್ತಿದ್ದರೂ ಮೂಲವನ್ನು ಮರೆಯಬಾರದು. ವೈವಿಧ್ಯಮಯ ಜೀವನ ಶೈಲಿ,ಸಂಸ್ಕೃತಿಗಳು ಪ್ರಾಚೀನ ಕಾಲದಿಂದಲೇ ಒಗ್ಗಟ್ಟಾಗಿ ಬದುಕುತ್ತಿರುವ ಜಗತ್ತಿನ ಏಕೈಕ ರಾಷ್ಟ್ರವಾದ ನಮ್ಮಲ್ಲಿ ತಲಾಂತರದಿಂದಲೂ ಸಾಂಸ್ಕೃತಿಕ ಸಮಾನತೆಗಳು ಒಗ್ಗಟ್ಟಾಗಿ ನಿಲ್ಲಿಸಿವೆ.ಇದರ ಹಿಂದೆ ಎಲ್ಲಾ ಧರ್ಮಗಳ ಸಾರ ಒಂದೆನ್ನುವುದು ವೇದ್ಯವಾಗುತ್ತದೆಯೆಂದು ಬದಿಯಡ್ಕ ಸಮೀಪದ ಮಾನ್ಯ ಕೊರಗು ತನಿಯ ಸನ್ನಿಧಿಯ ಧರ್ಮದರ್ಶಿ ಗಣೇಶ ಉಳ್ಳೋಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ಮತ್ತು ಕೇರಳ ಕಾಸರಗೋಡು ಘಟಕ ಮತ್ತು ಮುಲುಂಡ್ ಫ್ರೆಂಡ್ಸ್ ಗಳ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಮುಂಬಯಿಯ ಮಾಟುಂಗದ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ನಡೆದ ಸೌಹಾರ್ಧೋತ್ಸವ ಮತ್ತು ಜಾನಪದ ಸಿರಿ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಏಕ ರೂಪದ ಧರ್ಮ,ಆಚಾರಗಳಿಂದ ಕೂಡಿದೆಡೆ ಶಾಂತಿ ಸೌಹಾರ್ಧತೆಗಳು ಕಳವಳಕಾರಿಯಾಗಿ ಸಮಸ್ಯೆ ಸೃಷ್ಟಿಸುತ್ತಿರುವುದು ಕಂಡುಬರುತ್ತಿದೆ.ಆದರೆ ವೈವಿಧ್ಯಮಯ ಸಂಸ್ಕೃತಿಗಳಿರುವ ನಮ್ಮಲ್ಲಿ ಇತರೆಡೆಗಳಿಗಿಂತ ಆಂತರಿಕ ಸಮಸ್ಯೆಗಳಿಲ್ಲ.ಇದು ಈ ಮಣ್ಣಿನ ಸತ್ವದ ಪ್ರತೀಕವೆಂದು ಅವರು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿ ಮಾತನಾಡಿ,ಧರ್ಮ,ಆಚಾರಗಳಲ್ಲಿ ಭಿನ್ನತೆಗಳಿದ್ದರೂ ನಮ್ಮಲ್ಲರ ಚಿಂತನೆಗಳು ಒಂದೇ.ಸಕಾರಾತ್ಮಕ ಚಿಂತನೆಗಳಿಂದ ಸಮಾಜವನ್ನು ಸಮವಾಗಿಸುವ ಕೆಲಸಗಳು ನಡೆಯಲೆಂದು ಹಾರೈಸಿದರು.

ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್.ವೈ.ಎಂ.ಮಸೂದ್ ಫೌಝ್‌ದಾರ್,ಫಾ.ಸಿರಿಲ್ ಡಿಸೋಜಾ ಹಾಗೂ ಲೋಕಸಭಾ ಸದಸ್ಯ ರಾಹುಲ್ ಶೆವಾಳೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ಮಲಬಾರ್ ಹಿಲ್ ಶಾಸಕ ಮಂಗಳ್ ಪ್ರಭಾತ್ ಲೋಧಾ,ಎಂ.ಪಿ.ಪಿ.ಸಿ ಪ್ರಧಾನ ಕಾರ್ಯದರ್ಶಿ ರಾಜನ್ ಬೋಸ್ಲೆ,ಜಾಸ್‌ಮಿನ್ ಗ್ರೂಫ್ ಓಫ್ ಕಂಪೆನಿಯ ಕಾರ್ಯನಿರ್ವಹಣಾಧಿಕಾರಿ ಡಾ.ಸುರೇಂದ್ರ ವಿ.ಶೆಟ್ಟಿ,ಶಾಫಿ ವೆಲ್ಪೇರ್ ಅಸೋಸಿಯೇಶನ್ ಅಧ್ಯಕ್ಷ ಅಡ್ವ.ಮೊಯಿದ್ದೀನ್ ಮುಂಡ್ಕೂರ್,ಜಾನಪದ ಪರಿಷತ್ತು ರಾಮನಗರ ಕೇಂದ್ರ ಕಚೇರಿಯ ಆಡಳಿತಾಧಿಕಾರಿ ಡಾ.ಕುರುವೆ ಬಸವರಾಜ್,ಸಮಾಜ ಸೇವಕ ಡಾ.ಶಿವ ಎಂ.ಮೂಡಿಗೆರೆ,ಉದ್ಯಮಿ ಪ್ರವೀಣ್ ಕರ್ಕೇರ ಅಡ್ವೆ,ಡಾ.ಮುನೀರ್ ಬಾವಾ ಹಾಜಿ,ಎಂ.ನಾರಾಯಣ ಮಾಟೆ,ಫೌಜಿಯಾ ಕಡಬ, ಪ್ರೊ.ಎ.ಶ್ರೀನಾಥ್, ಕೇಳು ಮಾಸ್ಟರ್ ಅಗಲ್ಪಾಡಿ,ಲಕ್ಷ್ಮಣ ಪ್ರಭು ಕುಂಬಳೆ.ರಾಜು ಸ್ಟೀಪನ್ ಕ್ರಾಸ್ತಾ ಮೊದಲಾದವರು ಉಪಸ್ಥಿತರಿದ್ದರು.

ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕಾಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು ಪ್ರಾಸ್ತಾವಿಕವಾಗಿ ಮಾತನಾಡಿದರು.ಮಹಾರಾಷ್ಟ್ರ ಘಟಕಾಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಾಡಿ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕರ್ನಾಟಕ ಸಹಿತ ರಾಷ್ಟ್ರದ ವಿವಿಧೆಡೆಗಳ ವೈವಿಧ್ಯಮಯ ಜಾನಪದ ಕಲಾ ಪ್ರಕಾರಗಳ ಪ್ರದರ್ಶನ ಪ್ರಾತ್ಯಕ್ಷಿಕೆಗಳು ನಡೆದವು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English