ಮಂಗಳೂರು : ‘ನಮ್ಮ ಕುಡ್ಲ’ ತುಳು ಚಲನಚಿತ್ರ ಕರಾವಳಿಯಾದ್ಯಂತ ಚಾಂದ್ರಮಾನ ಯುಗಾದಿಯ ಶುಭದಿನ ಎಪ್ರಿಲ್ 8 ಶುಕ್ರವಾರ ಮಂಗಳೂರು, ಉಡುಪಿ ಸೇರಿದಂತೆ ಒಟ್ಟು 13 ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿತು.
ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಚಿತ್ರದ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಅದಕ್ಕೂ ಮೊದಲು ಶರವು ಶ್ರೀ ಮಹಾಗಣಪತಿ ದೇವಸ್ಥಾನದಿಂದ ಚಿತ್ರ ತಂಡದ ನಾಯಕ, ನಾಯಕಿ ಹಾಗೂ ಇನ್ನಿತರ ನಟರು ವಾಹನ ಜಾಥ ನಡೆಸಿದರು.
ಆಸರೆ ಪೌಂಡೇಶನ್ ಮಂಗಳೂರು ಇದರ ಮುಖ್ಯಸ್ಥೆ, ಡಾ. ಆಶಾ ಜ್ಯೋತಿ ರೈ ದೀಪ ಬೆಳಗಿಸುವುದರ ಮೂಲಕ ಚಲನಚಿತ್ರವನ್ನು ಜ್ಯೋತಿ ಚಿತ್ರಮಂದಿರದಲ್ಲಿ ಉದ್ಘಾಟಿಸಿದರು.
ಯುಗಾದಿಯ ಈ ಶುಭದಿನ ತುಳುನಾಡಿನ ಮಹಿಳಾ ನಿರ್ದೇಶಕಿಯೊಬ್ಬರು ನಿರ್ಮಿಸಿದ ತುಳು ಚಿತ್ರ ‘ನಮ್ಮ ಕುಡ್ಲ’ ಬಿಡುಗಡೆಯಾಗುತ್ತಿರುವುದು ತುಳು ನಾಡಿನ ಜನತೆಗೆ ಸಂತೋಷದ ವಿಷಯ. ಯುಗಾದಿ ಹಬ್ಬವು ಹೇಗೆ ಹೊಸತನವನ್ನು ತರುತ್ತದೋ ಹಾಗೇ ಈ ಚಿತ್ರವು ತುಳುವರಿಗೆ ಹೊಸ ಸಂದೇಶವನ್ನು ಕೊಟ್ಟು ಯಶಸ್ವಿಯಾಗಲಿ ಎಂದು ಆಶಾ ಜ್ಯೋತಿ ರೈ ಹೇಳಿದರು.
ತುಳು ಸಂಸ್ಕೃತಿ, ಇಲ್ಲಿನ ವಿಶೇಷತೆಗಳನ್ನು ತೋರಿಸುವ ‘ನಮ್ಮ ಕುಡ್ಲ’ ಚಿತ್ರ ತಂಡದ ಪ್ರಯತ್ನ ಯಶಸ್ವಿಯಾಗಲಿ. ಚಿತ್ರದಲ್ಲಿ ಅಭಿನಯಿಸಿದ ಎಲ್ಲಾ ಕಲಾವಿದರಿಗೂ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಶುಭ ಹಾರೈಸಿದರು.
ಚಿತ್ರ ನಿರ್ಮಾಪಕ ಲೊಕೇಶ್ ಶೆಟ್ಟಿ ಮುಚ್ಚೂರು, ಚಂಡಿಕೋರಿ ಚಿತ್ರದ ನಿರ್ಮಾಪಕ ಸಚಿನ್ ಉಪ್ಪಿನಂಗಡಿ, ದೊಂಬರಾಟ ಚಿತ್ರದ ನಿರ್ಮಾಪಕ ರಾಜೇಶ್ ಬ್ರಹ್ಮಾವರ, ‘ನಮ್ಮ ಕುಡ್ಲ’ ಚಿತ್ರದ ನಟರಾದ ಗೋಪಿನಾಥ ಭಟ್, ಸಂತೋಷ್ ಶೆಟ್ಟಿ, ಲಕ್ಷ್ಮಣ್ ಮಲ್ಲೂರು, ಕ್ಯಾಮರಾ ಮೆನ್ ಬಸವರಾಜ್ ಹಾಸನ, ನಾಯಕ ನಟ ಪ್ರಕಾಶ್ ಶೆಟ್ಟಿ ಧರ್ಮನಗರ, ನಿರ್ಮಾಪಕಿ, ನಾಯಕಿ ಅಶ್ವಿನಿ ಹರೀಶ್ ನಾಯಕ್ ಚಿತ್ರದ ಬಿಡುಗಡೆ ಸಮಾರಂಭದಲ್ಲಿ ಉಪಸ್ಥತರಿದ್ದರು.
‘ನಮ್ಮ ಕುಡ್ಲ’ ಚಿತ್ರದ ಬಗ್ಗೆ
ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಪ್ರಕಾಶ್ ಶೆಟ್ಟಿ ಧರ್ಮನಗರ ಅವರದ್ದು, ಚಿತ್ರವು “ವಾರ್ ಫಾರ್ ಪೀಸ್”ಎಂಬ ಧ್ಯೇಯದಿಂದ ಸಾಮಾಜಿಕ ಕಳಕಳಿಯ ಸಂದೇಶ, ವಿಭಿನ್ನ ಶೈಲಿಯ ಕಥಾ ಹಂದರವನ್ನು ಹೊಂದಿದ್ದು, ಮನೆಮಂದಿ, ಯವಕರು ಹಾಗೂ ಎಲ್ಲಾ ವರ್ಗದವರಿಗೂ ಮನರಂಜಿಸುವ ವಿಶೇಷ ಸಂದೇಶದೊಂದಿಗೆ ಹಾಸ್ಯವನ್ನೂ ಒಳಗೊಂಡಿದೆ.
ತುಳು ಚಲನಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳಾ ನಿರ್ದೇಶಕಿ ಅಶ್ವಿನಿ ಹರೀಶ್ ನಾಯಕ್ ಅವರಿಂದ ಈ ಚಿತ್ರವು ನಿರ್ದೇಶನಗೊಂಡಿದೆ.
ಚಿತ್ರದಲ್ಲಿ 108 ಕಲಾವಿದರ ತಂಡ ಭಾಗಿಯಾಗಿದ್ದಾರೆ. ಇವರಲ್ಲಿ 95ರಷ್ಟು ಕಲಾವಿದರು ಹೊಸಬರಾಗಿರುವುದು ಇನ್ನೊಂದು ವಿಶೇಷತೆಯಾಗಿದೆ. 45 ದಿನಗಳಲ್ಲಿ ನಿರಂತರವಾಗಿ ಚಿತ್ರೀಕರಿಸಲಾಗಿದೆ. ಈಗಾಗಲೇ ಸಿನೆಮಾ ಟ್ರೈಲರ್ ಮೂಲಕ ಯೂಟ್ಯೂಬ್‌ನಲ್ಲಿ ಸಿನೆಮಾ ಪ್ರಿಯರ ಮೆಚ್ಚುಗೆ ಪಡೆದಿದೆ.
ಚಿತ್ರವು ಮೊದಲ ಹಂತದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮಲ್ಟಿಫ್ಲೆಕ್ಸ್‌ಗಳೂ ಸೇರಿದಂತೆ 13 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ. ಮಂಗಳೂರಿನಲ್ಲಿ ಜ್ಯೋತಿ, ಪಿವಿಆರ್, ಸಿನೆಪೊಲಿಸ್ ಮತ್ತು ಬಿಗ್ ಸಿನೆಮಾಸ್. ಉಳಿದಂತೆ ಉಡುಪಿಯಲ್ಲಿ ಕಲ್ಪನ, ಮಣಿಪಾಲದಲ್ಲಿ ಐಯೋನೆಕ್ಸ್, ಕಾರ್ಕಳದಲ್ಲಿ ರಾಧಿಕ, ಮೂಡಬಿದ್ರೆಯಲ್ಲಿ ಅಮರಶ್ರೀ, ಸುರತ್ಕಲ್‌ನಲ್ಲಿ ನಟರಾಜ್, ಬಿಸಿ ರೋಡಿನಲ್ಲಿ ನಕ್ಷತ್ರ, ಬೆಳ್ತಂಗಡಿಯಲ್ಲಿ ಭಾರತ್, ಪುತ್ತೂರಿನಲ್ಲಿ ಅರುಣಾ, ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ.
ಖುಷಿ ಫಿಲಂಸ್ ಲಾಂಛನದಲ್ಲಿ ಅಮಾನ್ ಪ್ರೊಡಕ್ಷನ್‌ನಲ್ಲಿ ‘ನಮ್ಮ ಕುಡ್ಲ’ ಚಲನಚಿತ್ರವನ್ನು ನಿರ್ಮಿಸಲಾಗಿದೆ, ಅಸ್ಲಂ ಪಾಶಾ ಸಹನಿರ್ಮಾಪಕರಾಗಿದ್ದಾರೆ. ಗುರುರಾಜ್ ಎಂ.ಬಿ. ಸಂಗೀತ ನಿರ್ದೇಶಿರುವ ಈ ಚಲನಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು ಅವುಗಳಲ್ಲಿ ಒಂದು ವಾದ್ಯ ಸಂಗೀತ(ಇನ್‌ಸ್ಟ್ರುಮೆಂಟಲ್) ಆಗಿದೆ. ಎಲ್ಲಾ ಹಾಡುಗಳೂ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಂಗೀತ ಪ್ರಿಯರ ಮನಸೆಳೆದಿದೆ. ಈ ಚಿತ್ರಕ್ಕೆ ಚೆನ್ನೈನ ಅನ್ಬುಸೆಲ್ವಂ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ‘ನಮ್ಮ ಕುಡ್ಲ’ ದ ಛಾಯಾಗ್ರಹಣವನ್ನು ಬಸವರಾಜ್ ಹಾಸನ್ ನಿರ್ವಹಿಸಿದ್ದು, ಇವರೊಂದಿಗೆ ಕುಮಾರ್ ಗೌಡ ಸಹಕರಿಸಿದ್ದಾರೆ. ಚಿತ್ರದ ಸಂಕಲನ ಹರೀಶ್ ನಾಯಕ್ ಅವರ ಕೈ ಚಳಕ ದಲ್ಲಿ ಅದ್ಬುತವಾಗಿ ಮೂಡಿ ಬಂದಿದೆ. ಕರಾವಳಿಯ ವಿವಿಧ ಪ್ರಕೃತಿ ರಮಣೀಯ ತಾಣಗಳಲ್ಲಿ ಚಿತ್ರೀಕರಿಸಲಾದ ‘ನಮ್ಮ ಕುಡ’ದಲ್ಲಿ ಮಂಗಳೂರು ನಗರವನ್ನು ವಿಶೇಷ ಶೈಲಿಯಲ್ಲಿ ಚಿತ್ರಿಸಲಾಗಿದೆ. ಚಿತ್ರದಲ್ಲಿ ನವೀನ್ ಶೆಟ್ಟಿ ಸಿರಿಬಾಗಿಲು ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ. ಸಾಹಸ ಅಲ್ಟಿಮೇಟ್ ಶಿವ್ ಅವರದು. ಚಿತ್ರದ ಹಾಡುಗಳನ್ನು ಮಂಗಳೂರು, ಮಡಿಕೇರಿ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ.
ಚಿತ್ರದ ತಾರಾಗಣದಲ್ಲಿ ನಾಯಕ ನಟರಾಗಿ ಪ್ರಕಾಶ್ ಶೆಟ್ಟಿ ಧರ್ಮನಗರ, ನಾಯಕಿಯಾಗಿ ಛಾಯಾ ಹರ್ಷ, ಹೆಸರಾಂತ ಕಲಾವಿದರಾದ ಲಕ್ಷ್ಮಣ್ ಮಲ್ಲೂರು, ಗೋಪಿನಾಥ್ ಭಟ್, ಸಂತೋಷ್ ಶೆಟ್ಟಿ, ಸತೀಶ್ ಬಂದಲೆ, ದಿನೇಶ್ ಅತ್ತಾವರ, ಅಸ್ಲಂ ಪಾಶಾ, ರಮೇಶ್ ರೈ ಕುಕ್ಕುವಳ್ಳಿ, ಸುನಿಲ್ ನೆಲ್ಲ್ಲಿಗುಡ್ಡೆ, ಪ್ರಸನ್ನ ಬೈಲೂರು, ಬಾಚು ಅದ್ಯಪಾಡಿ, ಸುಕೇಶ್ ಶೆಟ್ಟಿ, ಚೇತನ್ ಪಿಲಾರ್, ಜೆ.ಪಿ. ತೂಮಿನಾಡು, ಸ್ಕೈಲಾರ್ಕ್ ರಾಜ್, ದಯಾನಂದ್ ಬುಡ್ರಿಯಾ, ಸುಜಾತಾ, ವಿನ್ನಿ ಫೆರ್ನಾಂಡಿಸ್ ಮೊದಲಾದವರಿದ್ದಾರೆ.
Click this button or press Ctrl+G to toggle between Kannada and English