ಏ.29-30: ನೀರೊಳಿಕೆ ಸೇವಾಶ್ರಮ ಪ್ರವೇಶೋತ್ಸವ

7:15 PM, Monday, April 18th, 2016
Share
1 Star2 Stars3 Stars4 Stars5 Stars
(5 rating, 5 votes)
Loading...
Sri Matha

ಮಂಜೇಶ್ವರ: ವರ್ಕಾಡಿ ಗ್ರಾಮದ ದೇವಂದಪಡ್ಪು ನೀರೊಳಿಕೆ ಶ್ರೀ ಮಾತಾ ಸೇವಾಶ್ರಮ ಟ್ರಸ್ಟ್‌ನ ಪ್ರವೇಶೋತ್ಸವ ಸಮಾರಂಭವು ಏ.೨೯ ಮತ್ತು ೩೦ರಂದು ವಿವಿಧ ಕಾರ್ಯಕ್ರಮಗೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಶ್ರೀ ಮಾತಾ ಸೇವಾಶ್ರಮ ಟ್ರಸ್ಟ್ ಬಗ್ಗೆ….
ಕೇರಳ ರಾಜ್ಯದ ಉತ್ತರ ಭಾಗದ ತಲಪ್ಪಾಡಿ ಗಡಿ ಪ್ರದೇಶದ ಸನಿಹದಲ್ಲಿ ಇತಿಹಾಸ ಪ್ರಸಿದ್ಧ ದೇವಂದಪಡ್ಪು ಎಂಬಲ್ಲಿ ಪುರಾತನ ದೇವಿ ಕ್ಷೇತ್ರವೊಂದು ಇತ್ತೆಂದು ಹಾಗೂ ಮಧ್ವಾಚಾರ್ಯರು ತೀರ್ಥಯಾತ್ರೆ ಮಾಡುತ್ತಾ ಈ ದೇವಾಲಯದ ಪರಿಸರದಲ್ಲಿ ಧ್ಯಾನಾಸಕ್ತರಾದರೆಂದು ಅಲ್ಲದೆ ಮುಂದೆ ಇಲ್ಲಿ ಶ್ರೀ ಮಹಾವಿಷ್ಣು ದೇವಸ್ಥಾನವನ್ನು ನಿರ್ಮಿಸಲಾಯಿತೆಂದು ಐತಿಹ್ಯವಿದೆ.

ಇದೇ ಪ್ರದೇಶದ ಸಮೀಪ ನೀರೊಳಿಕೆ ಎಂಬ ಪ್ರಶಾಂತ ಸುಂದರ ಜಾಗವೊಂದು ಭಗವಂತನ ಪ್ರೇರಣೆ ಎಂಬಂತೆ ತಲೆಂಗಳ ನಾರಾಯಣ ಭಟ್ (ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ) ಅವರಿಗೆ ಲಭಿಸಿತು. ಈ ನಿವೇಶನವನ್ನು ಸೇವಾ ಕಾರ್ಯಕ್ಕೆ ವಿನಿಯೋಗಿಸುತ್ತೇವೆ ಎಂದು ಅವರು ಸಂಕಲ್ಪ ತೊಟ್ಟು ಆ ಆಶಯವನ್ನು ಹತ್ತಾರು ಜನರಲ್ಲಿ ಪ್ರಸ್ತಾಪಿಸಿದರು.

ಭಾರತ ಪರಿಕ್ರಮ ಯಾತ್ರಾ ನಿರತರಾದ ಮಾನನೀಯ ಸೀತಾರಾಮ ಕೆದಿಲಾಯರ ಪ್ರೇರಣೆಯಿಂದ ಕುಂಬಳೆ ಸೀಮೆಯ 21 ಕ್ಷೇತ್ರಗಳಿಗೆ 148 ದಿವಸಗಳ ಕಾಲ ಪರಿಕ್ರಮ ಯಾತ್ರೆ ಕೈಗೊಂಡ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರಲ್ಲಿ ತಮ್ಮ ಇಂಗಿತವನ್ನು ತಲೆಂಗಳ ನಾರಾಯಣ ಭಟ್ ತಿಳಿಸಿದರು.
ಈ ಸೇವಾ ಯೋಜನೆಗೆ ಅವರು ಸಹಮತ ವ್ಯಕ್ತಪಡಿಸಿ ಬಳಿಕ ಆಸಕ್ತ ಸಹೃದಯರೊಂದಿಗೆ ಚರ್ಚಿಸಿ ಅನಾಥ ಮಕ್ಕಳಿಗಾಗಿ ಕುಮಾರಾಶ್ರಮ, ವೃದ್ಧರಿಗಾಗಿ ವಾನಪ್ರಸ್ಥಾಶ್ರಮ, ಮಾನಸಿಕ ಸಮಸ್ಯೆಗಳ ಪರಿಹಾರಕ್ಕಾಗಿ ಆಪ್ತ ಸಲಹಾ ಕೇಂದ್ರ, ಗೋಮಾತೆಯ ಸಂರಕ್ಷಣೆಗಾಗಿ ಗೋ ದೇವಾಲಯ, ಅನಾರೋಗ್ಯ ಹಾಗೂ ಮಾನಸಿಕ ಒತ್ತಡ ನಿವಾರಣೆಗಾಗಿ ಯೋಗ ಪ್ರಕೃತಿ ಚಿಕಿತ್ಸಾ ಕೇಂದ್ರ ಹೀಗೆ ಐದು ಚಟುವಟಿಕೆಗಳನ್ನು ನಡೆಸುವುದಾಗಿ ನಿರ್ಣಯಿಸಲಾಯಿತು.

ಅದಕ್ಕಾಗಿ ೯ ಮಂದಿಯನ್ನೊಳಗೊಂಡ ಶ್ರೀ ಮಾತಾ ಸೇವಾ ಟ್ರಸ್ಟ್ ಒಂದನ್ನು ರಚಿಸಿ ಸರಕಾರದ ನೋಂದಾವಣೆಯನ್ನು ಮಾಡಲಾಯಿತು. ಇದರ ನೇತೃತ್ವದಲ್ಲಿ ಪ್ರಥಮ ಹಂತದ ಕಟ್ಟಡವನ್ನು ವೇದಮೂರ್ತಿ ಕಟೀಲು ಹರಿನಾರಾಯಣ ದಾಸ ಆಸ್ರಣ್ಣರ ದಿವ್ಯಹಸ್ತದಿಂದ ಶಿಲಾನ್ಯಾಸವು ನೆರವೇರಿ ಇದೀಗ ಕಟ್ಟಡದ ಪ್ರವೇಶೋತ್ಸವದ ಶುಭ ಸಂದಭ ಕೂಡಿ ಬಂದಿದೆ.

ಕಾರ್ಯಕ್ರಮಗಳ ವಿವರ
ಏ.29ರಂದು ಸಂಜೆ 4.30ಕ್ಕೆ ದೇವಂದಪಡ್ಪು ಶ್ರೀ ಮಹಾವಿಷ್ಣು ಕ್ಷೇತ್ರದ ಪರಿಸರದಿಂದ ಆಶ್ರಮಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, 6ರಿಂದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರ ಆಚಾರ್ಯತ್ವದಲ್ಲಿ ವಾಸ್ತುಪೂಜೆ, ವಾಸ್ತುಹೋಮ, ದಿಗ್ಬಂಧನ, ರಕ್ಷೋಘ್ನ ಹೋಮ ಮುಂತಾದ ಕಾರ್ಯಕ್ರಮ ನಡೆಯಲಿದೆ.

ಏ.30ರಂದು ಪೂರ್ವಾಹ್ನ 6ಗಂಟೆಗೆ ಗಣಪತಿ ಹೋಮ, 9.04 ಶುಭ ಮುಹೂರ್ತದಲ್ಲಿ ಆಶ್ರಮದ ಪ್ರಥಮ ಕಟ್ಟಡದ ಪ್ರವೇಶೋತ್ಸವ, ಬ್ರಹ್ಮಶ್ರೀ ದಿನೇಶ ಕೃಷ್ಣ ತಂತ್ರಿ ವರ್ಕಾಡಿ ಇವರಿಂದ ಶ್ರೀ ಸತ್ಯನಾರಾಯಣ ಪೂಜೆ, 11ಗಂಟೆಗೆ ಕಾರ್ಯಕ್ರಮಗಳ ಔಪಚಾರಿಕ ಉದ್ಘಾಟನೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ.ಕಲ್ಲಡ್ಕ ಪ್ರಭಾಕರ ಭಟ್ ನೆರವೇರಿಸುವರು.

ಸಮಾರಂಭದಲ್ಲಿ ವೆಂಕಟ್ರಮಣ ಹೊಳ್ಳ ಮರಿಕಾಪು ಬೀಡು ಅಧ್ಯಕ್ಷತೆ ವಹಿಸುವರು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಒಡಿಯೂರು ಶ್ರೀ ಕ್ಷೇತ್ರದ ಸಾದ್ವಿ ಶ್ರೀ ಮಾತಾನಂದಮಯಿ ಆಶೀರ್ವಚನ ನೀಡುವರು. ಕೈರಂಗಳ ಪುಣ್ಯಕೋಟಿ ನಗರದ ಶ್ರೀ ಶಾರದಾ ವಿದ್ಯಾ ಗಣಪತಿ ಶಿಕ್ಷಣ ಸಂಸ್ಥೆಯ ಸಂಚಾಲಕ ಟಿ.ಜಿ.ರಾಜಾರಾಮ ಭಟ್, ಉದ್ಯಮಿ ಸಂತೋಷ್‌ಕುಮಾರ್ ರೈ ಬೋಳಿಯಾರು, ಉದ್ಯಮಿ ಚಂದ್ರಶೇಖರ ಉಚ್ಚಿಲ್ ಶುಭಹಾರೈಸುವರು. ಮಧ್ಯಾಹ್ನ 1ಗಂಟೆಗೆ ಶಾಂತಿಮಂತ್ರ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English