ಯಕ್ಷಗಾನ ಕಲಾವಿದರು ನಿವೃತ್ತರಾದ ಬಳಿಕ ಗಂಭೀರವಾಗಿ ಚಿಂತಿಸಬೇಕಿದೆ : ಪಟ್ಲ ಸತೀಶ ಶೆಟ್ಟಿ

7:24 PM, Monday, April 18th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
Patla Satish

ಕುಂಬಳೆ: ವೃತ್ತಿ ಕಲಾವಿದರಾಗಿ ದುಡಿಯುತ್ತಿರುವ ಅಸಂಖ್ಯಾತ ಯಕ್ಷಗಾನ ಕಲಾವಿದರು ವೃತ್ತಿಯಿಂದ ನಿವೃತ್ತರಾದ ಬಳಿಕ ಅವರ ಬದುಕಿಗೆ ಏನಿದೆಯೆಂಬುದನ್ನು ಗಂಭೀರವಾಗಿ ಚಿಂತಿಸಬೇಕಿದೆ. ಯಕ್ಷಗಾನ ಕಲಾರಂಗದಲ್ಲಿ ಅಪ್ರತಿಮ ಸಾಧನೆ ಮೆರೆದು ವೈಶಿಷ್ಟ್ಯಪೂರ್ಣ ಕೊಡುಗೆ ನೀಡಿದ ಕಲಾವಿದರಿಗೆ ರಂಗದಿಂದ ಹೊರತುಪಡಿಸಿ ಅಗತ್ಯ ಸ್ಪಂಧನೆಗಳು ಲಭಿಸದಿರುವುದು ದುರಂತ ಎಂದು ಖ್ಯಾತ ಭಾಗವತ,ಯಕ್ಷಧ್ರುವ ಪಟ್ಲ ಪೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಂಬಳೆ ಸಮೀಪದ ಶೇಡಿಕಾವು ಪಾರ್ತಿಸುಬ್ಬ ಯಕ್ಷಗಾನ ಸಂಘದ 20ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಅಪರಾಹ್ನ ಶೇಡಿಕಾವು ಪಾರ್ತಿಸುಬ್ಬ ಸಭಾ ಭವನದಲ್ಲಿ ನಡೆದ ಕುಂಬಳೆ ಶೇಷಪ್ಪ ಸಂಸ್ಮರಣೆ,ಸನ್ಮಾನ ಹಾಗೂ ಯಕ್ಷಗಾನ ಪ್ರದರ್ಶನದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.

ಜಾತಿ,ಮತ ಬೇಧವಿಲ್ಲದೆ ಬೆಳೆಯುತ್ತಿರುವ ಯಕ್ಷಗಾನ ಕ್ಷೇತ್ರದ ಕಲಶಪ್ರಾಯರಾದ ಅಶಕ್ತ ಸಾಧನಾಶೀಲ ಕಲಾವಿದರನ್ನು ಗುರುತಿಸಿ ಸಹಾಯ ಹಸ್ತ ಚಾಚುವ ಅಗತ್ಯವಿದೆ.ಈ ಹಿನ್ನೆಲೆಯಲ್ಲಿ ರಚಿಸಲಾದ ಪಟ್ಲ ಪೌಂಡೇಶನ್ ವಿವಿಧ ಕಲಾವಿದರ ಪರವಾದ ಯೋಜನೆಯ ಮೂಲಕ ಒಂದಷ್ಟು ಪರಿವರ್ತನೆಗೆ ಮುಂದಾಗುತ್ತಿದೆಯೆಂದು ತಿಳಿಸಿದರು.

ಕುಂಬಳೆ ಶೆಷಪ್ಪ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಹಿರಿಯ ಯಕ್ಷಗಾನ ಭಾಗವತ,ಪ್ರಸಂಗಕರ್ತ ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ ಮಾತನಾಡಿ ಕಲಾವಿದನಾದವನು ಎಲ್ಲಾ ವಸ್ತು ವಿಷಯಗಳನ್ನೂ ಕರಗತಮಾಡಿಕೊಂಡು ಸಂದರ್ಭಕ್ಕನುಸರಿಸಿ ಬಳಸುವ ಚಾಕಚಕ್ಯತೆಯುಳ್ಳವನಾಗಿರಬೇಕೆಂದು ತಿಳಿಸಿದರು.ಇತರ ನೃತ್ಯ ಕಗಳಿಗಿಂತ ಭಿನ್ನವಾಗಿರುವ ಯಕ್ಷಗಾನ ಅದರದ್ದೇ ಆದ ವೈಶಿಷ್ಟ್ಯಗಳಿಂದ ಗಂಡುಕಲೆಯೆನಿಸಿದೆ.ಕುಂಬಳೆ ಕೇಂದ್ರೀಕರಿಸಿ ಮಹಾನ್ ಸಾಧಕನಾಗಿ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದ ಪಾರ್ತಿಸುಬ್ಬನ ಪುಣ್ಯ ನೆಲದಲ್ಲಿ ಗೌರವ ಸ್ವೀಕರಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್,ಪುರೋಹಿತ ದಿನೇಶ್ ಎ.ಭಟ್,ಕುಂಬಳೆ ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಭಟ್,ಕೆ.ವಿ.ಶಿವರಾಮ್,ಶೇಡಿಕಾವು ಶ್ರೀಶಂಕರನಾರಾಯಣ ಕ್ಷೇತ್ರದ ಮೊಕ್ತೇಸರ ವಿಶ್ವನಾಥ ನಾಯಕ್ ಉಪಸ್ಥಿತರಿದ್ದು ಶುಭಹಾರೈಸಿದರು.ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್ ಕುಂಬಳೆ ಶೇಷಪ್ಪ ಸಂಸ್ಮರಣಾ ಭಾಷಣ ಮಾಡಿ ಅಭಿನಂದನಾ ಭಾಷಣಗೈದರು.ಅಶೋಕ ಕೆ.ಸ್ವಾಗತಿಸಿ,ಸುರೇಶ್ ಶಾಂತಿಪಳ್ಳ ವಂದಿಸಿದರು.ಖುಷಿ ಪ್ರಾರ್ಥಿಸಿದರು.

ಕಾರ್ಯಕ್ರಮದಂಗವಾಗಿ ಬೆಳಿಗ್ಗೆ ಕ್ಷೇತ್ರದ ಅರ್ಚಕ ನಾರಾಯಣ ಅಡಿಗ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಬಳಿಕ ಪಾರ್ತಿಸುಬ್ಬ ಯಕ್ಷಗಾನ ನಾಟ್ಯತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ದಯಾನಂದ ಪಿಲಿಕ್ಕೂರ್ ನಿರ್ದೇಶನದಲ್ಲಿ ಶ್ರೀದೇವಿ ಮಹಾತ್ಮ್ಯೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.ಸಭಾ ಕಾರ್ಯಕ್ರಮದ ಬಳಿಕ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಕುಡಿಯನ ಕಣ್ಣ್ ಪ್ರಸಂಗದ ಬಯಲಾಟ ಹಿರಿಯ ಕಲಾವಿದರ ಕೂಡುವಿಕೆಯಲ್ಲಿ ಪ್ರದರ್ಶನಗೊಂಡಿತು.

ಬೊಟ್ಟಿಕೆರೆ ಪುರುಷೋತ್ತಮ ಪೂಂಂಜಾರು ಅಭಿನಂದನೆ ಸ್ವೀಕರಿಸಿ ಮಾತನಾಡಿ,ಪ್ರಸ್ತುತ ವರ್ಷದ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿಯ ನೆನಪುಗಳನ್ನು ಹಂಚಿಕೊಂಡು ಅಕಾಡೆಮಿಯು ಪಾರ್ತಿಸುಬ್ಬ ಪ್ರಶಸ್ತಿಯನ್ನು ಘಟ್ಟದ ಮೇಲಿನ ಬೇರೊಂದು ಕಲಾ ಪ್ರಕಾರದ ಕಲಾವಿದನಿಗೆ ನೀಡಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದರು.ಪಾರ್ತಿಸುಬ್ಬ ಕರಾವಳಿಯ ಯಕ್ಷಗಾನಕ್ಕೆ ಸಂಬಂಧಿಸಿ ಪ್ರಖ್ಯಾತಿಪಡೆದವನಾಗಿದ್ದರೂ,ಅದಕ್ಕೆ ಹೊರತಾಗಿ ಯಕ್ಷಗಾನ,ಪಾರ್ತಿಸುಬ್ಬನ ಬಗ್ಗೆ ಅರಿವಿಲ್ಲದವರಿಗೆ ನೀಡಿರುವುದು ಉತ್ತಮ ಬೆಳವಣಿಗೆಯಲ್ಲವೆಂದು ತಿಳಿಸಿದರು.ಯಕ್ಷಗಾನ ಕಲಾವಿದನಿಗೆ ಪಾರ್ತಿಸುಬ್ಬ ಪ್ರಶಸ್ತಿ ನೀಡುತ್ತಿದ್ದರೆ ವಿಶೇಷ ಅನುಭೂತಿಯ ಪುಳಕಗಳೇಳುತ್ತಿದ್ದವೆಂದು ತಿಳಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English