ಮಂಗಳೂರು: ಸುರತ್ಕಲ್ ಪ್ರದೇಶದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ವಿವಿಧ ಕಾಮಗಾರಿಗಳಿಗೆ ಗುರುವಾರ ಸುರತ್ಕಲ್ ಕೇಂದ್ರ ಮೈದಾನಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಶಿಲಾನ್ಯಾಸ ನೆರವೇರಿಸಿದರು.
ಎಸ್.ಎಫ್.ಸಿ. 3 ಕೋಟಿ ರೂ. ವಿಶೇಷ ಅನುದಾನದಡಿ 1.70 ಕೋಟಿ ರೂ. ವೆಚ್ಚದಲ್ಲಿ ಸುರತ್ಕಲ್ ಆಧುನಿಕ ಕೇಂದ್ರ ಮಾರುಕಟ್ಟೆ ನಿರ್ಮಾಣದ ಪೂರ್ವದಲ್ಲಿ ಹಾಲಿ ಮಾರುಕಟ್ಟೆಯ ಸ್ಥಳಾಂತರದ ಕಾಮಗಾರಿ, ಮುಖ್ಯಮಂತ್ರಿಗಳ ನಗರೋತ್ಥಾನ 3ನೇ ಹಂತದ 100 ಕೋಟಿ ರೂ. ಯೋಜನೆಯಡಿ 2.25 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮೊದಲ ಹಂತದ ಸುರತ್ಕಲ್ ವಲಯ ಕಚೇರಿಯ ನೂತನ ಕಟ್ಟಡ ನಿರ್ಮಾಣ ಹಾಗೂ 2.75 ಕೋಟಿ ರೂ. ವೆಚ್ಚದಲ್ಲಿ ಸುರತ್ಕಲ್ ಜಂಕ್ಷನ್‌ನಿಂದ ಎಂಆರ್‌ಪಿಎಲ್ ರಸ್ತೆಯ ರೈಲ್ವೇ ಸೇತುವೆವರೆಗೆ 6 ಪಥದ ರಸ್ತೆ ನಿರ್ಮಾಣ ಕಾಮಗಾರಿಗಳು ಇವುಗಳಲ್ಲಿ ಸೇರಿವೆ.
ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ನೈಜ ಫಲ ಯಾರ್ಯಾರಿಗೆ ಎಷ್ಟೆಷ್ಟು ದಕ್ಕಿದೆ ಎಂದು ತಿಳಿಯುವ ನಿಟ್ಟಿನಲ್ಲಿ ಕಾಂಗ್ರೆಸ್ ಸರಕಾರ ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಜನಗಣತಿ ಮಾಡಲಾಗಿದೆ. ಮೇ ತಿಂಗಳಲ್ಲಿ ವರದಿ ಪ್ರಕಟವಾಗುತ್ತದೆ.
ನಿಖರವಾದ ಅಂಕಿ ಅಂಶಗಳಿದ್ದರೆ ಮಾತ್ರ ಅಭಿವೃದ್ಧಿಗಾಗಿ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ 3 ವರ್ಷಗಳ ಅವಧಿಯನ್ನು ಮುಗಿಸಿದ್ದು, ಈ ಅವಧಿಯಲ್ಲಿ ನುಡಿದಂತೆ ನಡೆದಿದ್ದೇವೆ ಎನ್ನಲು ಹೆಮ್ಮೆಯಾಗುತ್ತಿದೆ. 2013ರಲ್ಲಿ ಪಕ್ಷದ ಪ್ರಣಾಳಿಕೆಗಳನ್ನು ಜನರ ಮುಂದಿಟ್ಟು ಅಧಿಕಾರಕ್ಕೆ ಬಂದರೆ ನೆರವೇರಿಸಲು 165 ಭರವಸೆಗಳನ್ನು ನೀಡಿದ್ದೇವು. ಅದರಂತೆ 3 ವರ್ಷದಲ್ಲಿ 100ಕ್ಕಿಂತಲೂ ಹೆಚ್ಚು ಭರವಸೆಗಳನ್ನು ಪೂರೈಸಿದ್ದೇವೆ. ಇನ್ನು2 ವರ್ಷಗಳಲ್ಲಿ ಉಳಿದ ಭರವಸೆಗಳನ್ನು ಕೂಡ ನೆರವೇರಿಸುತ್ತೇವೆ ಎಂದರು.
ಸಚಿವರಾದ ರಮಾನಾಥ ರೈ, ಅಭಯಚಂದ್ರ, ಖಾದರ್, ಶಾಸಕ ಲೋಬೊ, ವಿಧಾನ ಪರಿಷತ್ ಸದಸ್ಯ ಐವನ್, ಮೇಯರ್ ಹರಿನಾಥ್, ಉಪಮೇಯರ್ ಸುಮಿತ್ರಾ, ಪಾಲಿಕೆ ಸಚೇತಕ ಶಶಿಧರ ಹೆಗ್ಡೆ, ಎಂಆರ್‌ಪಿಎಲ್ ಎಂಡಿ ಕುಮಾರ್, ಡಿಜಿಎಂ ಲಕ್ಷ್ಮಿ ಕುಮಾರನ್, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರೋಯ್ ಕ್ಯಾಸ್ತಲಿನೊ, ಕಾರ್ಪೋರೇಟರ್‌ಗಳಾದ ಲ್ಯಾನ್ಸ್ ಲಾಟ್ ಪಿಂಟೋ, ಗುಣಕರ ಶೆಟ್ಟಿ, ಅಪ್ಪಿ, ಮೀರಾ, ಪ್ರತಿಭಾ ಕುಳಾಯಿ, ಅಶೋಕ್ ಶೆಟ್ಟಿ ಹಾಗೂ ಜಿ.ಎ. ಬಾವಾ, ಫಾರೂಕ್ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English