ಬ್ರಿಟಿಷರಿಗೆ ಧನ್ಯವಾದದ ಪ್ಲೆಕ್ಸ್ ಪ್ರತ್ಯಕ್ಷ

3:06 PM, Monday, May 16th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
Kerala Flex

ಬದಿಯಡ್ಕ: ವ್ಯವಸ್ಥೆಗೆ ಬೇಸತ್ತು ಹಲವರು ಕೆಲವೊಮ್ಮೆ ರಾಷ್ಟ್ರಕ್ಕೆ ಸ್ವಾತಂತ್ರ್ಯ ಲಭಿಸುವ ಬದಲು ಈಗಲೂ ಬ್ರಿಟೀಷರೇ ದೇಶವನ್ನು ಆಳ ಬೇಕಿತ್ತೆಂಬ ಮಾತುಗಳು ಹಲವೊಮ್ಮೆ ನಮ್ಮಲ್ಲಿ ಕಂಡುಬರುವುದಿದೆ. ಅದಕ್ಕೆ ಪುಷ್ಠಿ ನೀಡಲೋ ಎಂಬಂತೆ ಬ್ರಿಟಿಷರಿಗೆ ಧನ್ಯವಾದ ತಿಳಿಸಿ ಬದಿಯಡ್ಕದಲ್ಲಿ ಪ್ಲೆಕ್ಸ್ ಬೋರ್ಡ್ ಕಂಡುಬಂದಿದ್ದು, ಆಶ್ಚರ್ಯಕ್ಕೆ ಕಾರಣವಾಗಿದೆ.

ಬದಿಯಡ್ಕ-ವಿದ್ಯಾಗಿರಿ ರಸ್ತೆಯ ಕುಂಡಡ್ಕ ಸೇತುವೆಯ ಬಳಿ ಭಾನುವಾರ ಬೆಳಿಗ್ಗೆ ನೀವು ಈ ಸೇತುವೆ ನಿರ್ಮಿಸದೇ ಇದ್ದಲ್ಲಿ ನಮ್ಮ ಯಾತ್ರೆ ಇದಕ್ಕಿಂತಲೂ ಭಯಾನಕವಾಗುತ್ತಿತ್ತು. ಈ ರಸ್ತೆ ಹಾಗೂ ಸೇತುವೆ ಕುಸಿದು ಹಲವು ವರ್ಷಗಳಾದರೂ ,ಮರಳಿ ನಿರ್ಮಿಸಲೋ,ದುರಸ್ಥಿಗೊಳಿಸಲೋ ಮುಂದಾಗದ ಆಡಳಿತ ವರ್ಗವನ್ನು ನೆನೆದು ನಾವು ನಾಚಿಕೆ ಪಡುತ್ತಿದ್ದೇವೆ ಎಂದು ಬರೆದ ಪ್ಲೆಕ್ಸ್ ಬೋರ್ಡ್ ಪ್ರಜಾಪ್ರಭುತ್ವವನ್ನು ಅಣಕವಾಡಲಾಗಿದೆ.

ಸ್ವಾತಂತ್ರ್ಯ ಲಭಿಸುವುದಕ್ಕಿಂತಲೂ ಮೊದಲು ನಿರ್ಮಿಸಲಾಗಿರುವ ಕುಂಡಡ್ಕ ಸೇತುವೆ ಹಾಗೂ ರಸ್ತೆ ಸಂಪೂರ್ಣ ಪ್ರಯಾಣಿಸಲಾರದಷ್ಟು ಕುಸಿದಿದೆ. ಇದನ್ನು ಮರಳಿ ನಿರ್ಮಿಸಬೇಕೆಂದು ಹಲವು ಹೋರಾಟಗಳು ನಡೆದರೂ ಅಧಿಕೃತರು ನಿರ್ಲಕ್ಷ್ಯಿಸಿದ್ದರು.ಏತಡ್ಕ,ಕುಂಬ್ಡಾಜೆ,ಬೆಳಿಂಜ,ಕಿನ್ನಿಂಗಾರು ಪ್ರದೇಶಗಳಿಗೆ ಪ್ರಯಾಣಿಸುವವರಿಗೆ ಅತ್ಯಂತ ಸುಗಮ,ಅತೀ ಹತ್ತಿರದ ರಸ್ತೆಯಾಗಿ ಈ ರಸ್ತೆ ಅನುಕೂಲಕರವಾಗಿತ್ತು.ಎರಡು ಖಾಸಗೀ ಬಸ್ ಗಳೂ ಈ ರಸ್ತೆಯಲ್ಲಿ ಸಂಚಾರ ನಡೆಸುತ್ತಿವೆ.ಆದರೆ ಶಿಥಿಲಾವಸ್ಥೆಯಲ್ಲಿರುವ ಕುಂಡಡ್ಕ ಸೇತುವೆ ಮತ್ತು ರಸ್ತೆಯ ದುರವಸ್ಥೆಯ ಪರಿಣಾಮ ಬಸ್ ಹಾಗೂ ಇತರ ಖಾಸಗೀ ವಾಹನಗಳು ಈ ರಸ್ತೆ ಸಂಚಾರವನ್ನು ಮೊಟಕುಗೊಳಿಸುವತ್ತ ಮನ ಮಾಡುತ್ತಿವೆ.ಸೇತುವೆ ಮತ್ತು ರಸ್ತೆಯ ದುರಸ್ಥಿಗೆ ಲೋಕೋಪಯೋಗಿ ಇಲಾಖೆ ಕಳೆದ ಮೂರು ವರ್ಷಗಳಿಂದ ಟೆಂಡರು ಪೂರ್ತಿಯಾಗಿದೆಯೆಂದು ಹೇಳುತ್ತಿದ್ದರೂ ಯಾವುದೇ ಕಾಮಗಾರಿಗೆ ಈ ವರೆಗೆ ಚಾಲನೆ ನೀಡದಿರುವುದರಿಂದ ಜನರನ್ನು ವಂಚಿಸಲು ಅಧಿಕೃತರು ಸುಳ್ಳು ಹೇಳುತ್ತಿರುವರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ನಡುವೆ ರಾಜ್ಯ ವಿಧಾನ ಸಭಾ ಚುನಾವಣೆಯ ಮುನ್ನಾದಿನ ಪ್ರಜಾಪ್ರಭುತ್ವಕ್ಕೆ ಬೇಸತ್ತು ಈ ಹಿಂದಿನ ಅನ್ಯ ದೇಶೀಯರಾದ ಬ್ರಿಟೀಶರ ಆಡಳಿತವೇ ಚೆನ್ನಾಗಿತ್ತೆಂದು ಬರೆದಿರುವ ಪ್ಲೆಕ್ಸ್ ಕಾಣಿಸಿಕೊಂಡಿರುವುದು ಸಾರ್ವಜನಿಕರ ಕ್ರಾಂತಿಕಾರಿ ಮನೋಭಾವ ಕೆರಳುತ್ತಿರುವುದರ ಸೂಚನೆಯೋ ಎಂಬ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English