ಪತ್ರಕರ್ತರು ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು : ಗಣೇಶ್ ಕಾಸರಗೋಡು

8:41 PM, Sunday, July 3rd, 2016
Share
1 Star2 Stars3 Stars4 Stars5 Stars
(No Ratings Yet)
Loading...

Ganesh Kasaragodಕಾಸರಗೋಡು : ವಸ್ತುನಿಷ್ಠ ವರದಿಯನ್ನು ನೀಡುತ್ತಾ ಪತ್ರಿಕಾರಂಗಕ್ಕೆ ಶೋಭೆ ತರುವ ಜೊತೆಗೆ ವ್ಯಕ್ತಿತ್ವವನ್ನು ಯುವ ಪತ್ರಕರ್ತರು ರೂಪಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಿನಿಮಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅಭಿಪ್ರಾಯ ವ್ಯಕ್ತಪಡಿಸಿದರು.

ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಮತ್ತು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ ಕನ್ನಡ ಪತ್ರಿಕಾ ದಿನಾಚರಣೆಯನ್ನು ದೀಪ ಬೆಳಗಿಸಿ ಅವರು ಮಾತನಾಡುತ್ತಿದ್ದರು.

ಗಡಿನಾಡಿನಲ್ಲಿ ಕನ್ನಡ ಉಳಿಸಿ ಬೆಳೆಸುವಲ್ಲಿ ಪತ್ರಿಕೆಗಳ ಜವಾಬ್ದಾರಿ ಮಹತ್ವದ್ದು. ಕನ್ನಡ ಪತ್ರಿಕೆಗಳ ಓದುವ ಹವ್ಯಾಸವನ್ನು ಬೆಳೆಸಬೇಕೆಂದು ಹೇಳಿದ ಅವರು ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಹಿಂದಿನಿಂದಲೂ ಕನ್ನಡ ಪತ್ರಕರ್ತರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಈ ಪರಂಪರೆ ಇಂದೂ ಮುಂದುವರಿಯುತ್ತಿರುವುದು ಸಂತೋಷದ ವಿಚಾರ. ಹಿಂದೆಲ್ಲ ಸಿನಿಮಾ ಸಾಹಿತ್ಯ ಬಗ್ಗೆ ಅಷ್ಟೇನು ಸಾರಸ್ವತ ಲೋಕದಲ್ಲಿ ಅಂಗೀಕಾರವಿರಲಿಲ್ಲ. ಆದರೆ ಇಂದು ಸಿನಿಮಾ ಸಾಹಿತ್ಯವನ್ನು ಸಾಹಿತ್ಯಲೋಕ ಅಂಗೀಕರಿಸಿದೆ. ಸರಕಾರವೂ ಮನ್ನಣೆ ನೀಡುತ್ತಿದೆ ಎಂದರು.

ಕಾಸರಗೋಡಿನ ಕನ್ನಡಿಗರಿಗೆ ಬೆಂಗಳೂರಿನಿಂದ ಸಾಧ್ಯವಾಗುವ ನೆರವನ್ನು ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ ಅವರು ಹೆಸರೇ ವಿಳಾಸ ಆಗಬೇಕು. ಈ ಸಾಧನೆ ಮಾಡಬೇಕಾದರೆ ಸಾಕಷ್ಟು ದುಡಿಯಬೇಕಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿ ಕಾಸರಗೋಡಿನಲ್ಲಿ ಕನ್ನಡ ಪತ್ರಿಕೆ ಬೆಳೆದು ಬಂದ ದಾರಿ ಮತ್ತು ಪ್ರಸ್ತುತ ಪತ್ರಿಕಾ ರಂಗದ ಸ್ಥಿತಿಗತಿಯನ್ನು ವಿವರಿಸಿದರು.ಆಧುನಿಕ ಮಾಧ್ಯಮ ಭರಾಟೆಗಳಲ್ಲಿ ಮುದ್ರಣಾ ಮಾಧ್ಯಮಕ್ಕೆ ಅಳಿವಿದೆಯೆಂಬ ಕೂಗಿಗೆ ಅರ್ಥವಿಲ್ಲವೆಂದು ತಿಳಿಸಿದ ಅವರು ಜನರು,ಓದುವಿಕೆ ಇರುವಷ್ಟರವರೆಗೆ ಪತ್ರಿಕಾ ಮಾಧ್ಯಮಗಳೂ ಇರುತ್ತವೆಯೆಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾಸರಗೋಡು ನಗರಸಭಾ ಸದಸ್ಯೆ ಶ್ರೀಲತಾ, ಕವಿ, ಲೇಖಕ ಕಾಸರಗೋಡು ಅಶೋಕ್ ಕುಮಾರ್ ಅವರು ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಸಹಾಯಕ ಜಿಲ್ಲಾಧಿಕಾರಿ, ಹಿರಿಯ ಪತ್ರಿಕಾ ಅಭಿಮಾನಿ ಬಿ.ಬಾಲಕೃಷ್ಣ ಅಗ್ಗಿತ್ತಾಯ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗಣೇಶ್ ಕಾಸರಗೋಡು ಗೌರವಿಸಿದರು. ವಿವಿಧ ಪತ್ರಿಕೆಯ ಪತ್ರಕರ್ತರಾದ ಪುರುಷೋತ್ತಮ ಪೆರ್ಲ ಮತ್ತು ಕೆ.ಗಂಗಾಧರ ತೆಕ್ಕೆಮೂಲೆಯವರನ್ನು ಅಭಿನಂದಿಸಲಾಯಿತು.

ಪುಸ್ತಕ ಬಿಡುಗಡೆ : ಗಣೇಶ್ ಕಾಸರಗೋಡು ಅವರ ನೆನಪಿನಂಗಳದಲ್ಲಿ ಶಂಕರ್‌ನಾಗ್ ಎನ್ನುವ ಕೃತಿಯ 11ನೇ ಆವೃತ್ತಿಯನ್ನು ಖ್ಯಾತ ಕಲಾವಿದ ಎಂ.ಜಿ.ಕೆ. ಆಚಾರ್ಯ ಅವರಿಗೆ ನೀಡುವ ಮೂಲಕ ಬಿ.ಬಾಲಕೃಷ್ಣ ಅಗ್ಗಿತ್ತಾಯ ಬಿಡುಗಡೆಗೊಳಿಸಿದರು.

ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಪ್ರಾಸ್ತಾವಿಕ ಮಾತನಾಡಿದರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಕಾವ್ಯ ಕುಶಲ ರವರು ಗಣೇಶ್ ಕಾಸರಗೋಡು ಅವರ ಪರಿಚಯ ನೀಡಿದರು. ಲತಾ ಪ್ರಕಾಶ್ ವಂದಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English