ಮಂಗಳೂರು: ತಮ್ಮ ವರ್ಗಾವಣೆ ಕುರಿತು ಹಬ್ಬಿದ್ದ ಸುದ್ದಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸ್ಪಷ್ಟನೆ ನೀಡಿದ್ದಾರೆ. ಎ.ಬಿ.ಇಬ್ರಾಹಿಂ ಅವರ ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಡೆ ನೀಡಿದ್ದಾರೆ ಎಂಬ ಸುದ್ದಿಗಳನ್ನು ಅವರು ತಳ್ಳಿ ಹಾಕಿದ್ದಾರೆ.
ಸೋಮವಾರ ಬೆಳಗ್ಗೆಯಿಂದ ಎ.ಬಿ.ಇಬ್ರಾಹಿಂ ಅವರ ವರ್ಗಾವಣೆಗೆ ತಡೆ ನೀಡಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಒನ್ ಇಂಡಿಯಾಗೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ‘ವರ್ಗಾವಣೆಗೆ ತಡೆ ನೀಡಿಲ್ಲ. ಡಾ.ಕೆ.ಜಿ.ಜಗದೀಶ್ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ’ ಎಂದು ಹೇಳಿದ್ದಾರೆ.
ಕಳೆದ ವಾರ ಸರ್ಕಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಡಾ.ಕೆ.ಜಿ.ಜಗದೀಶ್ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿತ್ತು. ಜಗದೀಶ್ ಅವರು ಇನ್ನೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿಲ್ಲ.
2016ರ ಮಾರ್ಚ್ನಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರ ಬಗ್ಗೆ ದೊಡ್ಡ ಸುದ್ದಿಯಾಗಿತ್ತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಎ.ಬಿ.ಇಬ್ರಾಹಿಂ ಹೆಸರು ಹಾಕಲಾಗಿತ್ತು. ಹಿಂದೂಯೇತರರಾದ ಜಿಲ್ಲಾಧಿಕಾರಿಯನ್ನು ಜಾತ್ರೆಗೆ ಕರೆಯುವುದು ಸರಿಯಲ್ಲ. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ ಎಂಬ ವಿವಾದ ಎದ್ದಿತ್ತು.
Click this button or press Ctrl+G to toggle between Kannada and English