ಮಂಗಳೂರು: ಆಡಳಿತದ ಲಾಭ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂಬ ಆಶಯದೊಂದಿಗೆ ಜಿಲ್ಲಾಧಿಕಾರಿಯಾಗಿ ಆತ್ಮಸಾಕ್ಷಿಗನುಗುಣವಾಗಿ ಕೆಲಸ ಮಾಡುವ ಪ್ರಯತ್ನ ಮಾಡಿದ್ದೇನೆ ಎಂದು ನಿರ್ಗಮನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದರು.
ದ.ಕ. ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಈಗ ಕರ್ನಾಟಕ ಸರಕಾರದ ಸಾರಿಗೆ ಆಯುಕ್ತರಾಗಿ ಭಡ್ತಿ ಪಡೆದು ವರ್ಗಾವಣೆಗೊಂಡಿರುವ ಎ.ಬಿ. ಇಬ್ರಾಹಿಂ ಅವರು ಶನಿವಾರ ಜಿ.ಪಂ.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಅಧಿಕಾರ ಹಸ್ತಾಂತರಿಸಿದ ಬಳಿಕ ದ.ಕ. ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾದ ಬೀಳ್ಕೊಡುಗೆ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.
ಆಡಳಿತದ ಅನುಷ್ಠಾನದ ಸಂದರ್ಭಗಳಲ್ಲಿ ಕೆಲವು ಕಠಿನ ನಿರ್ಧಾರಗಳನ್ನು ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಕಾನೂನುಗಳ ಆಶಯಗಳನ್ನು ಮನನ ಮಾಡಿಕೊಂಡು ಜನಪರವಾಗಿ ಅನುಷ್ಠಾನಗೊಳಿಸಿದಾಗ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಜನರ ನಡುವೆ ಉತ್ತಮ ಬಾಂಧವ್ಯ ಬೆಳೆಯುತ್ತದೆ ಎಂದವರು ಹೇಳಿದರು.
ತನ್ನ ಅಧಿಕಾರವಾಧಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಅಪರ ಜಿಲ್ಲಾಧಿಕಾರಿ ಕುಮಾರ್ ಮಾತನಾಡಿ, ಇಬ್ರಾಹಿಂ ಅವರ ಕಾರ್ಯಶೈಲಿ, ಕ್ರಿಯಾಶೀಲತೆ, ಜನಪರ ಕಾಳಜಿ ಎಲ್ಲರಿಗೂ ಪ್ರೇರಣೆದಾಯಕ ಎಂದರು.
ಶಾಸಕ, ಮಾಜಿ ಸಚಿವ ಅಭಯಚಂದ್ರ, ಜಿ.ಪಂ. ಸಿಇಒ ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್‌ರಾವ್ ಬೊರಸೆ, ಪತ್ರಕರ್ತ ಆತ್ಮಭೂಷಣ್ ಅವರು ಜಿಲ್ಲಾಧಿಕಾರಿಯಾಗಿ ಎ.ಬಿ. ಇಬ್ರಾಹಿಂ ಅವರು ಸಲ್ಲಿಸಿರುವ ಸೇವೆಯನ್ನು ಸ್ಮರಿಸಿ ಶುಭ ಹಾರೈಸಿದರು. ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಡಿಸಿಪಿ ಶಾಂತರಾಜು, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ ಉಪಸ್ಥಿತರಿದ್ದರು. ಡಾ| ಆಶೋಕ್ ಸ್ವಾಗತಿಸಿದರು. ಡಾ| ರಾಜೇಂದ್ರ ಅವಧಿರು ವಂದಿಸಿದರು.
Click this button or press Ctrl+G to toggle between Kannada and English