ಬೆಂಗಳೂರು : ರವಿಚಂದ್ರನ್ ಪ್ರಥಮ ಬಾರಿಗೆ ಅಪ್ಪ ಮತ್ತು ಮಗನ ದ್ವಿಪಾತ್ರಗಳಲ್ಲಿ ನಟಿಸಿರುವ ‘ಮಲ್ಲಿಕಾರ್ಜುನ’ ಹತ್ತು ವರ್ಷಗಳ ಹಿಂದೆ ತಮಿಳಿನಲ್ಲಿ ಬಂದಿದ್ದ ‘ತವಸಿ’ ಚಿತ್ರದ ರಿಮೇಕ್. ಸಂಭಾಷಣೆಯಿಂದ ಹಿಡಿದು ಎಲ್ಲವನ್ನೂ ಆ ಚಿತ್ರದಿಂದಲೇ ಯಥಾವತ್ತಾಗಿ ತೆಗೆಯಲಾಗಿದೆ. ನಿರ್ದೇಶಕ ಮುರಳಿ ಮೋಹನ್ ಕೂಡ ಮಾಡಿರುವುದು ಅದೇ ನಕಲು.
ಹಳ್ಳಿಯ ಪಾಳೇಗಾರರ ವೈಷಮ್ಯದ ಕಥೆ ಹೊಂದಿರುವ ‘ಮಲ್ಲಿಕಾರ್ಜುನ’ದಲ್ಲಿ ರವಿಚಂದ್ರನ್ ಪ್ರಥಮ ಬಾರಿಗೆ ಅಪ್ಪ ಮತ್ತು ಮಗನ ದ್ವಿಪಾತ್ರಗಳಲ್ಲಿ ನಟಿಸಿದ್ದಾರೆ.
ರವಿಚಂದ್ರನ್ ಚಿತ್ರಗಳಲ್ಲಿ ಕಂಡುಬರುವ ಮೆರುಗು ಇಲ್ಲಿ ಕಿಂಚಿತ್ತೂ ಇಲ್ಲ. ಹಳೆಯ ಸೂತ್ರದ ಜಾಡಿನಲ್ಲೇ ಸಾಗುವ ಈ ಚಿತ್ರದ ಹಾದಿಯಲ್ಲಿ ಹೊಸತನದ ಲವಲೇಶ ಎಲ್ಲಿಯೂ ಇಲ್ಲ. ಖಳನ ಚಪ್ಪಲಿ ತೊಳೆಯುವಂಥ ತಾಳ್ಮೆಯನ್ನು ನಾಯಕ ರವಿಚಂದ್ರನ್ ತೋರಿದರೂ ಅದು ಪ್ರೇಕ್ಷಕನಿಗೆ ಒಗ್ಗುವುದಿಲ್ಲ.
ರವಿಚಂದ್ರನ್ ಅಪ್ಪನ, ಮಗನ ಪಾತ್ರದಲ್ಲಿ ಯಾವುದೇ ವ್ಯತ್ಯಾಸ ಕಾಣುವುದಿಲ್ಲ, ಛದ್ಮವೇಷ ಸ್ಪರ್ಧೆಯಲ್ಲಿ ಬಾಗವಹಿಸುವವರಂತೆ ಕಾಣುವ ರವಿಚಂದ್ರನ್ ಅವರ ದಿರಿಸು ಮೇಲಾಗಿ ಮಾತು ಅನೇಕ ದೃಶ್ಯಗಳಲ್ಲಿ ಅಪಹಾಸ್ಯಕ್ಕೆ ಗುರಿಯಾಗಿ ನಗು ಹುಟ್ಟಿಸುತ್ತವೆ. ನಾಯಕಿಯರಾದ ಸೀತಾ ಮತ್ತು ಸದಾ ಎಂಥಾ ಸಂಕಷ್ಟ ಪರಿಸ್ಥಿತಿಯಲ್ಲೂ ಗರಿ ಗರಿ ಉಡುಗೆ ತೊಟ್ಟು ಆಕರ್ಷಕವಾಗಿ ಕಾಣುತ್ತಾರಾದರೂ ಸದಾಗೆ ಚಿತ್ರದ ಉತ್ತರಾರ್ಧದಲ್ಲಿ ಅವಕಾಶಗಳೇ ಕಡಿಮೆ.
ಉತ್ತಮ ತಂತ್ರಜ್ಞರೆಂದೇ ಹೆಸರುಮಾಡಿರುವ ರವಿಚಂದ್ರನ್ ಅವರನ್ನು ಇಂಥ ಪಾತ್ರಗಳಲ್ಲಿ ಕಾಣುವ ಗ್ರಹಚಾರ ಪ್ರೇಕ್ಷಕನಿಗೇಕೆ ಎಂಬುದು ಕೊನೆಗೂ ಯಕ್ಷಪ್ರಶ್ನೆಯಾಗಿಯೇ ಉಳಿಯುತ್ತದೆ. ಎಸ್.ಎ. ರಾಜ್ ಕುಮಾರ್ ಸಂಗೀತದಲ್ಲಿ ಮೂಡಿಬಂದಿರುವ ಕವಿರಾಜ್ ಅವರ ಎರಡು ಹಾಡುಗಳು ಮೆಲುಕು ಹಾಕುವಂತಿವೆ. kwd
Click this button or press Ctrl+G to toggle between Kannada and English