ಬದಿಯಡ್ಕ: ಮಾನವೀಯತೆಗಿಂತ ಜೀವನ ದರ್ಶನ ಬೇರೊಂದಿಲ್ಲ.ಲಭ್ಯ ಸಂಪತ್ತನ್ನು ಸ್ವಂತಕ್ಕೆ ಸೀಮಿತವಾಗಿ ಬಳಸಿ,ಪರೋಪಕಾರವಾಗುವಂತೆ ಉಳಿದವುಗಳನ್ನು ಮೀಸಲಿಡುವ ಮನೋಭಾವ ದೈವತ್ವಕ್ಕೇರಿಸುತ್ತದೆಯೆಂದು ಕರ್ನಾಟಕ ಜವಳಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಅಭಿಪ್ರಾಯ ವ್ಯಕ್ತಪಡಿಸಿದರು.
ಹಿರಿಯ ಗಾಂಧೀವಾದಿ,ದೀನಬಂಧು ಸಾಯಿರಾಂ ಗೋಪಾಲಕೃಷ್ಣ ಭಟ್ ರವರಿಗೆ ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಕೊಡಮಾಡಿದ ಜೀವಮಾನ ಸಾಧನಾ ಪ್ರಶಸ್ತಿಯನ್ನು ಶನಿವಾರ ಸಂಜೆ ಕಿಳಿಂಗಾರಿನಲ್ಲಿ ವಿತರಿಸಿ ಅವರು ಮಾತನಾಡುತ್ತಿದ್ದರು.
ಸಾಯಿರಾಂ ಗೋಪಾಲಕೃಷ್ಣ ಭಟ್ಟರ ಒಟ್ಟು ಜೀವನ ಮಾದರಿ ವ್ಯಕ್ತಿತ್ವದ ರೂಪಕವಾಗಿದ್ದು ಅಳಿದು ಹೋಗುತ್ತಿರುವ ಮೌಲ್ಯಗಳ ಪುನರುತ್ಥಾನದಲ್ಲಿ ನಕ್ಷತ್ರದಂತೆ ಹೊಳೆಯುತ್ತದೆ.ಸ್ವಾರ್ಥ ಲಾಲಸೆಗಳಿಂದ ಮತಿಗೆಟ್ಟಿರುವ ಇಂದಿನ ಲೋಕ ಪ್ರಜ್ಞೆಗೆ ಸಾಯಿರಾಂ ಭಟ್ ರವರ ಜೀವನಾದರ್ಶದ ಪರಿಚಯ,ಪ್ರೇರಣೆಯಾದಲ್ಲಿ ಅವರ ಸೇವೆಗೆ ನೈಜ ಅರ್ಥದ ಬೆಲೆಯನ್ನು ನಾವು ಕಲ್ಪಿಸಿದಂತಾಗುತ್ತದೆಯೆಂದು ಅವರು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು ಅಧ್ಯಕ್ಷತೆ ವಹಿಸಿದ್ದರು.ಪ್ರದೀಪ್ ಕುಮಾರ್ ಕಲ್ಕೂರ,ಬದಿಯಡ್ಕ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ ಮಾನ್ಯ,ಶೀಲಾ ಕೆ.ಎನ್.ಭಟ್,ವೇಣುಗೋಪಾಲ ಕಿಳಿಂಗಾರು.ಮಧುರಾ ವೇಣುಗೋಪಾಲ,ಶಾಂತಿ,ಸಂದೇಶ್, ಸಹಿತ ಸಾಯಿರಾಂ ಭಟ್ ಕುಟುಂಬದವರು ಉಪಸ್ಥಿತರಿದ್ದರು. ಸಾಯಿರಾಂ ಗೋಪಾಲಕೃಷ್ಣ ಭಟ್-ಶಾರದಾ ದಂಪತಿಗಳಿಗೆ ಕಲ್ಕೂರ ಜೀವಮಾನ ಸಾಧನಾ ಪ್ರಶಸ್ತಿ ಪ್ರಧಾನಗೈಯ್ಯಲಾಯಿತು.
ಕೆ.ಎನ್ ಕೃಷ್ಣ ಭಟ್ ಸ್ವಾಗತಿಸಿ,ವೇಣುಗೋಪಾಲಕೃಷ್ಣ ವಂದಿಸಿದರು.ಎಂ.ಎಚ್ ಜನಾರ್ಧನ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English