ಕಾಸರಗೋಡು: ಶ್ರೀಕೃಷ್ಣನ ತತ್ವಗಳು ಸಾರ್ವಕಾಲಿಕ ಸತ್ಯಗಳಾಗಿದ್ದು ಇಂದಿನ ಜೀವನಕ್ಕೆ ಅಳವಡಿಸಿಕೊಳ್ಳುವ ಅಗತ್ಯವಿದೆಯೆಂದು ಅರುಣ್ ಇಂಜಿನಿಯರ್ ಕಾಸರಗೋಡು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಗರದ ಕೋಟೆಕಣಿ ರಾಮನಾಥ ಸಾಂಸ್ಕೃತಿಕ ಪ್ರತಿಷ್ಠಾನದ ವಠಾರದಲ್ಲಿ ಬುಧವಾರ ಮಂಗಳೂರಿನ ಕಲ್ಕೂರ ಪ್ರತಿಷ್ಠಾನ,ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆದ ೬ನೇ ವರ್ಷದ ಜಿಲ್ಲಾ ಮಟ್ಟದ ಶ್ರೀಕೃಷ್ಣ ವೇಷ ಸ್ಪರ್ಧೆ ಮತ್ತು ಮೊಸರುಕುಡಿಕೆ ಉತ್ಸವದಂಗವಾದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.
ದುಷ್ಕೃತ್ಯ,ಸಾಮಾಜಿಕ ಅಸಮಾನತೆಗಳ ನಿಯಂತ್ರಣಕ್ಕೆ ಶ್ರೀಕೃಷ್ಣ ಹಾಕಿಕೊಟ್ಟ ಮೇಲ್ಪಂಕ್ತಿ ಸಾರ್ವಕಾಲಿಕವಾಗಿದ್ದು ಲೌಕಿಕದಾಚೆಗಿನ ಸುಖ ನೆಮ್ಮದಿಯು ಪರಮ ಧ್ಯೇಯವೆಂದು ಸಾರಿದ ತತ್ವಗಳು ಜಗತ್ತಿನ ಗಮನ ಸೆಳೆದವು.ಆಧುನಿಕತೆಯ ಗುಂಗಿನಲ್ಲಿ ಭಗವಂತನ ಸ್ಮರಣೆಗೆ ಜನ್ಮಾಷ್ಟಮಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸಮಾಜವನ್ನು ಭದ್ರಗೊಳಿಸುವಲ್ಲಿ ಪ್ರಮುಖ ಸ್ಥಾನ ಪಡೆದಿವೆಯೆಂದು ಅವರು ತಿಳಿಸಿದರು.
ಭಗವದ್ಗೀತೆ ಮತ್ತು ಭಾಗವತಗಳ ಮೂಲಕ ಇಂದಿಗೂ ಶ್ರೀಕೃಷ್ಣ ಪರಮಾತ್ಮ ನಮ್ಮೊಳಗೆ ನಿತ್ಯ ಸತ್ಯ ಸಾಕ್ಷಾತ್ಕಾರಕ್ಕೆ ಅವಕಾಶ ಕಲ್ಪಿಸಿರುವನೆಂದು ಅವರು ನೆನಪಿಸಿದರು.
ಪುರುಷೋತ್ತಮ ನಾಕ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಗಣಪತಿ ಕೋಟೆಕಣಿ ಉದ್ಘಾಟಿಸಿ,ಮಾತನಾಡಿ ಸತ್ಯ,ಧರ್ಮ,ನಿಷ್ಠೆಗಳು ಇಂದಿನ ಜೀವನ ಶೈಲಿಯಲ್ಲಿ ಮರೆಯಾಗುತ್ತಿರುವ ಹೊತ್ತಿನಲ್ಲಿ ಶ್ರೀಕೃಷ್ಣನ ಸ್ಮರಣೆ ಮಾತ್ರದಿಂದ ಬದುಕನ್ನು ಪಾವನಗೊಳಿಸಬೇಕಾದ ಅನಿವಾರ್ಯತೆಗಳಿವೆ.ಜಂಜಡದ ಬದುಕಿಗೆ ಮುಕ್ತಿ ನೀಡುವಲ್ಲಿ ಭಗವಾನ್ ಕೃಷ್ಣನ ಸ್ಮರಣೆ ನಿತ್ಯ ಅನುರಣಗೊಳ್ಳಲೆಂದು ಅವರು ತಿಳಿಸಿದರು.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಶಿವರಾಮ ಕಾಸರಗೋಡು,ಹಿರಿಯ ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ,ಶಿಕ್ಷಕಿ ಪ್ರಭಾವತಿ ಕೆದಿಲಾಯ ಪುಂಡೂರು ಮೊದಲಾದವರು ಉಪಸ್ಥಿತರಿದ್ದರು.
ಕೃಷ್ಣ ವೇಷ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಮಕ್ಕಳಿಗೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಬಹುಮಾನ ವಿತರಿಸಿ ಮಾತನಾಡಿ,ಸಮಗ್ರ ಜಗತ್ತಿಗೇ ಆದರ್ಶ ಪ್ರಾಯವಾದ ಸಂಸ್ಕೃತಿಯನ್ನಿತ್ತಿರುವ ಭಾರತೀಯ ಸಂಸ್ಕೃತಿಯ ಉಳಿಯುವಿಕೆಯಲ್ಲಿ ಉತ್ಸವಾಚರಣೆಗಳು ಪ್ರಮುಖ ಸ್ಥಾನ ಪಡೆದಿದ್ದು ಬಾಲಗೋಕುಲಗಳ ಮೂಲಕ ಬೆಳೆದು ಬಂದಿರುವ ಜನ್ಮಾಷ್ಟಮಿ ಹಬ್ಬ ಸತ್ಪ್ರಜೆಗಳ ನಿರ್ಮಾಣದಲ್ಲಿ ಯಶಸ್ವಿಯಾಗಲೆಂದು ತಿಳಿಸಿದರು.
ಪರಕೀಯರ ದಾಸ್ಯಗಳಿಂದ ಹೊರಬಂದಿದ್ದರೂ ಮತ್ತೆ ದಾಸ್ಯ ಸಂಸ್ಕೃತಿಯ ಶೈಲಿಗೆ ಮಾರುಹೋಗದೆ ನಮ್ಮತನವನ್ನು ಗಟ್ಟಿಗೊಳಿಸುವಲ್ಲಿ ಶ್ರೀಕೃಷ್ಣನ ಸಾರ್ವಕಾಲಿಕ ಸಂದೇಶಗಳೊಡನೆ ಮುಂದಡಿಯಿಡೋಣವೆಂದು ಹಾರೈಸಿದರು.
ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿ,ವಂದಿಸಿದರು.ಕಾವ್ಯಕುಶಲ ಕಾರ್ಯಕ್ರಮ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ಅಂಗವಾಗಿ ನಡೆದ ವಿವಿಧ ವಯೋಮಾನಗಳ ಪ್ರತ್ಯೇಕ ಕೃಷ್ಣ ವೇಶ ಸ್ಪರ್ಧೆಯಲ್ಲಿ 20 ಕ್ಕಿಂತಲೂ ಹೆಚ್ಚು ಬಾಲಕ ಬಾಲಕಿಯರು ಸಡಗರದಿಂದ ಪಾಲ್ಗೊಂಡರು.
ಕೆಲವು ಮುದ್ದು ಕೃಷ್ಣರು ವೇದಿಕೆಗೆ ಸಂಭ್ರಮದಿಂದ ತಮ್ಮ ಮಾತೆಯರ ಸಹಕಾರದೊಂದಿಗೆ ಏರಿದರೂ ತಾಯಿ ವೇದಿಕೆ ಕೆಳಗಿಳಿಯುತ್ತಿರುವಂತೆ ಅಳುವುದು,ತಾಯಿಯೊಡನೇ ಹಿಂದೋಡಿ ಬಂದಿರುವುದು ನೆರೆದವರನ್ನು ನಗೆಗಡಲಲ್ಲಿ ತೇಲಿಸಿತು.
ಭಾರತದ ಸಂಸ್ಕ್ರತಿಯಲ್ಲಿ ತನ್ನ ವಿಶಿಷ್ಟ ಸಂದೇಶ,ಜೀವನಕ್ರಮ ಮತ್ತು ರಾಜನೀತಿಯ ಕಾರಣದಿಂದ ಆಕರ್ಷಿಸಿ ವಿಶ್ವವಂದ್ಯತೆಯೆಡೆಗೆ ಕೊಂಡೊಯ್ದ ಶ್ರೀಕೃಷ್ಣ ಪರಮಾತ್ಮನ ಹುಟ್ಟುಹಬ್ಬವನ್ನು ಶ್ರೀಕೃಷ್ಣ ಜನ್ಮಾಷ್ಟಮಿಯಾಗಿ ಎಲ್ಲೆಡೆಗಳಂತೆ ಬುಧವಾರ ಜಿಲ್ಲೆಯಾದ್ಯಂತ ಸಡಗರ,ಭಕ್ತಿ,ಶ್ರದ್ದೆಗಳಿಂದ ಆಚರಿಸಲಾಯಿತು.
ಕಾರ್ಯಕ್ರಮದಂಗವಾಗಿ ಜಿಲ್ಲೆಯ ವಿವಿಧೆಡೆ ಕ್ಷೇತ್ರ ಮಂದಿರಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆದು ಉತ್ಸವವನ್ನು ಮೆರುಗುಗೊಳಿಸಿದವು.ಜನ್ಮಾಷ್ಟಮಿಯ ಪ್ರಯುಕ್ತ ಹಲವೆಡೆ ಮುದ್ದುಕೃಷ್ಣರ ಬೃಹತ್ ವೇಷ ಗಳು ನಡೆದವು.
Click this button or press Ctrl+G to toggle between Kannada and English