ಕಾನ್ಪುರ: “ಪತ್ನಿಯ ಶವ ಸಾಗಿಸಲು ಆ್ಯಂಬುಲೆನ್ಸ್ ಕೊಡಿ’ ಎಂದು ಬೇಡಿದರೂ ಆಸ್ಪತ್ರೆ ಅಧಿಕಾರಿಗಳು ನಿರಾಕರಿಸಿದ್ದರಿಂದ 10 ಕಿಲೋ ಮೀಟರ್‌ವರೆಗೆ ಪತ್ನಿಯ ಶವವನ್ನು ಮಾಂಜಿ ಎಂಬಾತ ಹೊತ್ತು ಸಾಗಿದ ಘಟನೆ ಒಡಿಶಾದಲ್ಲಿ ಇತ್ತೀಚೆಗೆ ನಡೆದಿತ್ತು. ಈಗ ಇಂಥದ್ದೇ ಒಂದು ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಇದು ಬಾಲಕನೊಬ್ಬನ ಪ್ರಾಣಕ್ಕೇ ಎರವಾಗಿದೆ.
ಕಾನ್ಪುರದಲ್ಲಿ ಸರಕಾರಿ ಆಸ್ಪತ್ರೆ ವೈದ್ಯರು, ದೂರದಲ್ಲಿದ್ದ ಇನ್ನೊಂದು ವಾರ್ಡ್‌ಗೆ ತೆರಳಲು ಸ್ಟ್ರೆಚರ್ ನೀಡಲು ನಿರಾಕರಿಸಿದ ಪರಿಣಾಮ ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನ ಚಿಕಿತ್ಸೆ ವಿಳಂಬವಾಗಿದೆ. ಕೊನೆಗೆ ಪುತ್ರನನ್ನು ತಂದೆಯೇ ಹೆಗಲ ಮೇಲೆ ಹೊತ್ತು ಚಿಕಿತ್ಸೆ ಕೊಡಿಸಲು ಸಾಗುತ್ತಿದ್ದಾಗ 12 ವರ್ಷದ ಅಸ್ವಸ್ಥ ಮಗನ ಪ್ರಾಣಪಕ್ಷಿ ಹಾರಿಹೋಗಿದೆ. ವೈದ್ಯರ ಈ ಕರ್ತವ್ಯ ಲೋಪಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಆದರೆ, ಬಾಲಕನನ್ನು ಆತನ ತಂದೆ ಕರೆದು ಕೊಂಡು ಬಂದಾಗಲೇ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಆದಾಗ್ಯೂ ಈ ಬಗ್ಗೆ ತನಿಖೆ ನಡೆಸಲು ತ್ರಿಸದಸ್ಯ ಸಮಿತಿ ರಚಿಸಲಾಗಿದೆ ಎಂದು ಆಸ್ಪತ್ರೆ ಕಂ ಮೆಡಿಕಲ್ ಕಾಲೇಜು ಮುಖ್ಯಸ್ಥರು ಹೇಳಿದ್ದಾರೆ.
10 ನಿಮಿಷ ಮೊದಲಾಗಿದ್ದರೆ ಬದುಕುತ್ತಿದ್ದ: “ಲಾಲಾ ಲಜಪತ್ ರಾಯ… ಆಸ್ಪತ್ರೆಗೆ ಕರೆತಂದು ಮಗನನ್ನು ಎಮರ್ಜೆನ್ಸಿ ಘಟಕದಲ್ಲಿ ಸೇರಿಸಿಕೊಳ್ಳಿ ಎಂದು ಪರಿ, ಪರಿಯಾಗಿ ಬೇಡಿಕೊಂಡೆ. ಆಗ ವೈದ್ಯರು ಏನೂ ಏನೂ ಹೇಳಲಿಲ್ಲ. ಸುಮಾರು 30 ನಿಮಿ ಷದ ನಂತರ ನಿಮ್ಮ ಮಗನನ್ನು ಮಕ್ಕಳ ವಾರ್ಡ್‌ಗೆ ಕರೆದೊಯ್ಯಿರಿ ಎಂದು ಹೇಳಿದರು. ಕೊನೆಗೆ ತನಗೆ ಮಗನನ್ನು ಕರೆದೊಯ್ಯಲು ಸ್ಟ್ರೆಚರ್ ಕೊಡಿ ಎಂದು ವಿನಂತಿಸಿಕೊಂಡೆ. ಆದರೆ ವೈದ್ಯರು ಅದಕ್ಕೂ ನಿರಾಕರಿಸಿದರು.
ನನ್ನ ಹೆಗಲ ಮೇಲೆ ಮಗನನ್ನು ಹೊತ್ತುಕೊಂಡು ಬರುವಾಗಲೇ ಮಗನ ಪ್ರಾಣ ಹೋಗಿತ್ತು. ಇನ್ನು 10 ನಿಮಿಷ ಮೊದಲು ಬಂದಿದ್ದರೆ ಅನ್ಸ್ ಉಳಿಯುತ್ತಿದ್ದ ಎಂದು ಮಕ್ಕಳ ವಿಭಾಗದ ವೈದ್ಯರು ಹೇಳಿದರು’ ಎಂದು ತಂದೆ ಸುನೀಲ… ಕುಮಾರ… ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಸುನೀಲ್ ಕುಮಾರ್ ಎಂಬವರ ಮಗ ಅನ್ಸ್ ಗೆ ರವಿವಾರ ರಾತ್ರಿಯಿಂದ ತೀವ್ರ ಜ್ವರ ಬಂದಿತ್ತು. ಕುಮಾರ್ ಮೊದಲಿಗೆ ತನ್ನ ಮನೆಯ ಸಮೀಪದ ಫಜಲ್‌ಗಂಜ್‌ನಲ್ಲಿರುವ ವೈದ್ಯರ ಬಳಿ ಕರೆದೊಯ್ದಿದ್ದರು. ಆದರೆ ಆ ವೈದ್ಯರು, “ನೀವು ಲಾಲಾ ಲಜಪತ್ ರಾಯ… ಆಸ್ಪತ್ರೆಗೆ ಕರೆ ದೊಯ್ಯಿರಿ’ ಎಂದು ಸಲಹೆ ಕೊಟ್ಟಿದ್ದರು.
ತೀವ್ರ ಜ್ವರದಿಂದ ಬಳಲುತ್ತಿದ್ದ ಅನ್ಸ್ ನನ್ನು ಲಾಲಾ ಲಜಪತ್ ರಾಯ… ಸರಕಾರಿ ಆಸ್ಪತ್ರೆಗೆ ಸುನೀಲ್ ಕರೆತಂದರು. ಆದರೆ ಆಸ್ಪತ್ರೆಯ ತುರ್ತು ವಿಭಾಗದ ವೈದ್ಯರು ಅನ್ಸ್ ನನ್ನು ದಾಖಲಿಸಿಕೊಳ್ಳಲು ನಿರಾಕರಿಸಿ ದ್ದರು. “ನಿಮ್ಮ ಮಗನನ್ನು ಮಕ್ಕಳ ವಾರ್ಡ್‌ಗೆ ಕರೆ ದೊಯ್ಯಿರಿ’ ಎಂದು ಸಲಹೆ ನೀಡಿದ್ದರು. ಆದರೆ ಮಗನ ಜ್ವರ ಮಿತಿಮೀರಿ ಹೋಗಿತ್ತು.
ಆಸ್ಪತ್ರೆಯ ಸಿಬಂದಿ ಮಾನವೀಯತೆ ಇಲ್ಲದವರಂತೆ ವರ್ತಿಸಿ, ಆತನಿಗೆ ಯಾವುದೇ ಸೌಲಭ್ಯ ನೀಡಿಲ್ಲ. ಆಗ ಕನಿಷ್ಠ ಪಕ್ಷ, ಮಕ್ಕಳ ವಾರ್ಡ್‌ಗೆ ಕರೆದೊಯ್ಯಲು ಸ್ಟ್ರೆಚರ್ ಕೊಡಿ ಎಂದು ತಂದೆ ಅಂಗಲಾಚಿದ್ದ. ಆದರೆ ಸ್ಟ್ರೆಚರ್ ನೀಡಲು ಆಸ್ಪತ್ರೆ ಸಿಬಂದಿ ನಿರಾಕರಿಸಿಬಿಟ್ಟಿದ್ದರು ಎನ್ನಲಾಗಿದೆ.
ಕೊನೆಗೆ ಮಗನನ್ನು ಹೆಗಲ ಮೇಲೆ ಹೊತ್ತುಕೊಂಡೇ ಸುಮಾರು 250 ಮೀಟರ್ ದೂರದಲ್ಲಿರುವ ಮಕ್ಕಳ ಆಸ್ಪತ್ರೆಗೆ ತಂದೆ ಕರೆದೊಯ್ಯುತ್ತಿದ್ದ. ಆಗ ಚಿಕಿತ್ಸೆ ವಿಳಂಬವಾಗಿ ಹೆಗಲ ಮೇಲೆಯೇ ಬಾಲಕ ಪ್ರಾಣಬಿಟ್ಟಿದ್ದಾನೆ ಎಂದು ಹೇಳಲಾಗಿದೆ.
Click this button or press Ctrl+G to toggle between Kannada and English